ಜಯಂತ್ ಕಾಯ್ಕಿಣಿ ಅವರ ಅದ್ಭುತ ಕಥಾಶೈಲಿ

ಜಯಂತ್ ಕಾಯ್ಕಿಣಿ ಅವರ ಅದ್ಭುತ ಕಥಾಶೈಲಿ

ನೀವು ಜಯಂತ್ ಕಾಯ್ಕಿಣಿ ಅವರ ಕಥೆ/ಲೇಖನಗಳನ್ನು ಓದಿದ್ದೀರಾ ? ಇಲ್ಲದ್ದಲ್ಲಿ 'ತೂಫಾನ್ ಮೇಲ್ '(ಕಥಾ ಸಂಕಲನ- ರೂ. ೬೦) , 'ಜಯಂತ್ ಕಾಯ್ಕಿಣಿ ಅವರ ಕಥೆಗಳು' ( ೩ ಕಥಾಸಂಕಲನಗಳ ಸಂಗ್ರಹ- ರೂ. ೧೭೦)' , 'ಬೊಗಸೆಯಲ್ಲಿ ಮಳೆ' ( ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣದ ಲೇಖನಗಳ ಸಂಕಲನ) ಇವನ್ನು ಓದಿ.

'ಅವರ ಬರಹವನ್ನು ಓದುವದಕ್ಕಿಂತ ಹೆಚ್ಚಿನ ಸುಖ ಬೇರಿಲ್ಲ'; 'ಅವರು ಚಿತ್ರಿಸುವ ದೃಶ್ಯಗಳು ದರ್ಶನವಾಗಿ ಬೆಳಕು ಚೆಲ್ಲುತ್ತವೆ';'ಅವರ ಬರಹಗಳನ್ನು ಮತ್ತೆ ಮತ್ತೆ ಓದಬೇಕೆನಿಸುತ್ತದೆ' ಇವು ಓದುಗರ ಅಭಿಪ್ರಾಯಗಳು. ಬಹುಶ: ನೀವೂ ಅದನ್ನು ಒಪ್ಪುತ್ತೀರಿ. ಅವರ ಕಥೆಗಳ ಇಂಗ್ಲೀಷ್ ಅನುವಾದ 'Dots and Lines' ಕುರಿತು HINDU ಪತ್ರಿಕೆಯಲ್ಲಿ ವಿಮರ್ಶಕರು ಹೀಗೆ ಬರೆದರು- "Dots and Lines is a `fine' book, one of the finest books I read this year and in all the years that I've been reading books."

ಸಾಮಾನ್ಯ ಜನರಲ್ಲಿರುವ silent heroism ಅನ್ನು ಅವರ ಕಥೆಗಳಲ್ಲಿ ಕಾಣಬಹುದು.

ಅವರ ಶೈಲಿಯನ್ನು ಪರಿಚಯಿಸುವ ಕೆಲವು ಸಾಲುಗಳು ಇಲ್ಲಿವೆ;

- ಅವನು ಮರಳಿ ಬಂದಾಗ ಮನೆಯಲ್ಲಿ ವಿಶ್ವಶಾಂತಿ ನೆಲೆಸಿತ್ತು.

- ನಮ್ಮ ಅಪೇಕ್ಷೆಗಳನ್ನು ಸುಳ್ಳಾಗಿಸಲಿಲ್ಲ. ಇನ್ನು ಬದುಕಿನ ಕುರಿತಾದ ನಿನ್ನ ಅಪೇಕ್ಷೆಗಳನ್ನು ಸರಿಯಾಗಿ ಇಟ್ಟುಕೋ.

-ಈಗ ಮುಂಬೈಯಲ್ಲಿ ನೌಕರಿಯ ಹೆಸರಿನಲ್ಲಿ ಎಡವಟ್ಟು ದಿನಚರಿಯನ್ನು ಹೊತ್ತುಕೊಂಡ ಮೇಲೆ ...

-ಎದ್ದರೆ ಹೊಸ ಹಗಲು ಬೆಲ್ಲೊತ್ತುತ್ತಿತ್ತು .

-ಕಾಲಡಿಯಲ್ಲಿ ನೀಲಿ ಕುಸಿಯುತ್ತಿತ್ತು.

-ರುಚಿಗಟ್ಟಾಗಿ ಆಡಿಕೊಂಡೆ.

-ಸಕಲ ಮಾನವ ಕುಲವೂ ಟಿ.ವಿ. ಎಂಬ ಪೂತನಿಯ ಹಾಲು ಕುಡಿಯುತ್ತಿತ್ತು.

-ರೈಲುಗಳು ದಿಕ್ಕೆಟ್ಟು ಓಡುತ್ತಿದ್ದವು. ಇಕ್ಕೆಲಗಳಲ್ಲೂ ಪೊದೆಗಳಂತೆ ದಟ್ಟವಾಗಿ ಗುಡಿಸಲುಗಳು ಹಬ್ಬಿದ್ದವು.

-ಏನೇ ಇರಲಿ . ಈ ಎಲ್ಲ ಗಡಿಬಿಡಿಯಲ್ಲಿ ನೀನು ಬದುಕಲಿಕ್ಕೆ ಮರೆಯಬೇಡ.

-ಏನಾದರೇನು ಈ ಉಚ್ಚೆ ಹೊಯ್ಯುವ ಕಸಬು ತಪ್ಪಿದ್ದಲ್ಲ.

-(ಮುಂಬೈಯ ಕಿಕ್ಕಿರಿದ ರೈಲುಗಳಲ್ಲಿ) ಹೆಂಗಸರು ಬೆವರುತ್ತ ಬಾಡುತ್ತಿದ್ದರು . ಗಂಡಸರು ನನ್ನ ಹೆಂಡತಿ , ನನ್ನ ಹೆಂಡತಿ ಎಂಬ ಅಟ್ಟಹಾಸದಲ್ಲಿ ಎರಡೂ ಕೈಗಳನ್ನು ಕೋರ್‍ಟಿನ ಕಟಕಟೆಯಂತೆ ಮಾಡಿ ಹೆಂಗಳೆಯರನ್ನು ತೋಳಿನಲ್ಲಿ ರಕ್ಷಿಸುತ್ತಿದ್ದರು .

-ನನ್ನ ಪಾಲಿಗೆ ಬಂದಿರುವ ನನ್ನ ಬದುಕಿಗೆ ನನ್ನನ್ನು ಬಿಟ್ಟರೆ ಇನ್ಯಾರು ನ್ಯಾಯ ಒದಗಿಸಬೇಕು?

-ಬದುಕನ್ನು ಒಂದು ನನ್ನದೇ ಸ್ವಂತ ಗುಟ್ಟನ್ನಾಗಿ ಮಾರ್ಪಡಿಸಿಕೊಳ್ಳಲು ಅಖಂಡ ಸ್ವತಂತ್ರ ಸುಖದಿಂದ ...

-ಅವರಿಬ್ಬರೂ ಓಡಿ ಹೋಗಲಿರುವ ಯೋಜನೆ ಕಣ್ತೆರೆಯಲಿರುವ ಮೊಗ್ಗಿನ ಗುಟ್ಟಿನಂತೆ ಈ ರಾತ್ರಿಯಲ್ಲಿ ಭದ್ರವಾಗಿತ್ತು .

-(ಸಿನಿಮಾದಲ್ಲಿ) ನಾಯಕರು ಬಟ್ಟೆ ಬದಲಿಸುತ್ತಿದ್ದರು . ಕುದುರೆಗಳನ್ನು ಬದಲಿಸುತ್ತಿದ್ದರು. ಹಾಡುಗಳು ಅವರ ಕೈಗೆ ಬರುತ್ತಿದ್ದವು. ನಾಯಕಿಯರು ತೋಳ್ತೆರೆದು ಓಡೋಡುತ್ತ ಗುಡ್ಡದ ತುದಿಗೆ ಬಂದು ಅಪ್ಪಿಕೊಳ್ಳುತ್ತಿದ್ದರು. ಬದುಕಿನಲ್ಲಿ ಸಾವಿನಲ್ಲಿ ಸುಖದಲ್ಲಿ ದು:ಖದಲ್ಲಿ ಜತೆಗಿರುವ ವಾಗ್ದಾನ ಮಾಡುತ್ತಿದ್ದರು .(ಸಿನಿಮಾ ನೋಡುತ್ತಿದ್ದ) ಮಂಜರಿ ರಾತ್ರಿ ಎದ್ದು ನೀರು ತುಂಬುವಳು. (ಅವಳ ಪ್ರಿಯತಮ , ಅಲ್ಲಿಯ ಗೇಟ್ ಕೀಪರ್ ) ನಂದು ಹೊಸ ದಿನಕ್ಕೆ ಕಾಯುವ.

-ಆಯಿ ಆಗಾಗ ಕಪಾಟು ತೆರೆದು ಸರ್ವಸ್ವವನ್ನು ನೋಡುತ್ತ ನಿಲ್ಲುತ್ತಾಳೆ.

-ಇಬ್ಬರೂ ಮತ್ತೆ ಕನಸು ನೇಯತೊಡಗಿದರು.

-ಟ್ರಕ್ಕಿನ ಹೆಡ್‍ಲೈಟನ್ನು ಮಕ್ಕಳ ಕಣ್ಣಿನ ಪಿಸುರು ತೆಗೆಯುವಂತೆ ಸಾಬೂನು ಹಾಕಿ ತೊಳೆಯುತ್ತಾನೆ.

-ಕ್ಯಾಬಿನ್ನಿನ ಕನಕನ ಕಿಂಡಿಯಲ್ಲಿ..

-ಮನೆಯೆದುರು ಟ್ರಕ್ಕಿಲ್ಲದೆ ಅದರ ಜಾಗದಲ್ಲಿ ನಿರ್ವಾತವೊಂದು ನಿಂತಂತೆ ಭಾಸವಾಯಿತು.

-ಟ್ರಕ್ಕು ರಸ್ತೆಗಳಿಗೆ ಒಡ್ಡೋಲಗದ ಘನತೆಯನ್ನು ತಂದು ಕೊಡುತ್ತಿತ್ತು.

-ಟ್ರಕ್ಕು ಬಾಗಿಲನ್ನು ತೆಗೆದು ನಿಂತರೆ ರೆಕ್ಕೆ ತೆರೆದ ಪಕ್ಷಿಯಂತೆ , ಮಳೆಗೆ ಟಾರ್ಪಾಲಿನ್ ಹೊದ್ದರೆ ಕಾವಲುಗಾರನಂತೆ, ತೊಳೆಯಲು ನಿಂತರೆ ಬೆತ್ತಲೆ ಮಗುವಿನಂತೆ ಅವನ ವಶವಾಗುತ್ತಿತ್ತು.ಅದರ ನಂಬರ್ ಪ್ಲೇಟು ಕಿತ್ತು ಹೋಗಿ ಹಲ್ಲು ಬಿದ್ದ ಮಗುವಿನಂತೆ ಕಾಣುತ್ತಿತ್ತು.

- ಅದು (ಮಕ್ಕಳ) ಬೆಳಗುವ ಅಸಂಖ್ಯ ಪುಟ್ಟ ಕಣ್ಣುಗಳ ಜ್ಯೋತಿ ತುಂಬಿದ ಜಾನಿ(ಹೆಸರಿನ ಟ್ರಕ್ಕು) ದೀಪಾರಾಧನೆಯ ದೇವಸ್ಥಾನದಂತೆ ಕಂಗೊಳಿಸುತ್ತ ಕಾಡಿನ ನಡುವೆ ಓಡಿತು.

- ಇಬ್ಬರು ಮಿಂಚಿನಂತೆ ಬಂದು ಡಬ್ಬಿಯಿಂದ ಜಾನಿಯ ಮೇಲೆ ಧಾರ್ಮಿಕ ವಿಧಿಯೆಂಬಂತೆ ಏನನ್ನೋ ಚಿಮುಕಿಸಲಾರಂಭಿಸಿದರು.

-ಟ್ರಕ್ಕೊಂದು ಹಿಂಗಾಲಲ್ಲಿ ಬಂದು ಬಾಗಿಲು ತೆರೆದು ನಿಂತಿತು .

-ಅದರ ಹೃದಯ ಒಡೆದಂತೆ ಪೆಟ್ರೋಲುಟ್ಯಾಂಕು ಸಿಡಿಯಿತು . ಅದರ ಒಂದು ಟೈರು ಢಬ್ ಎಂದು ತಲೆಬುರುಡೆಯಂತೆ ಒಡೆದು ಬೆಂಕಿಯ ಚೂರುಗಳು ಮೇಲಕ್ಕೆ ಸಿಡಿದವು.

-ಮುಂಬೈ ಎಂದರೆ ಊರೇ , ಮನೆಯೇ ? ಅದೊಂದು ಸಹಸ್ರ ಡಬ್ಬಿಗಳ ರೈಲು. ಧಾರವಾಡದಲ್ಲೋ ದೊಡ್ಡ ಮನೆ , ವ್ಯಕ್ತಿಗೊಂದು ಕೋಣೆ, ದೇವರಿಗೂ ಒಂದು ಕೋಣೆ. ಅಲ್ಲಿ ಇಲ್ಲಿ ಅಡ್ಡಾಡುವರ ಮುಖದ ಮೇಲಿನ ಮಂದಹಾಸವನ್ನು ಅವಳು ಮುಂಬೈಯಲ್ಲಿ ಕಂಡವಳೇ ಅಲ್ಲ.

-ಮುಂಬೈಯಲ್ಲಿ ಜಡೆಗೆಲ್ಲಿ ವೇಳೆ ಎಂದು ಮೊಟಕಾದ ಜಡೆ ಅವಳದು.

-ತುಂತುರು ಮಳೆಯ ಜತೆ ಬಿಸಿಲೂ ಉದುರುತ್ತಿತ್ತು.

--ಹೂ ಹೊತ್ತ ದಟ್ಟ ಮರಗಳು . ಬಣ್ಣದ ಚಿತ್ರ ನೀರಿನಲ್ಲಿ ಕಲಸುವಂತೆ ಇಡೀ ದೃಶ್ಯದ ಎಲ್ಲ ಬಣ್ಣಗಳನ್ನೂ ಕರಗಿಸಿ ಒಂದಾಗಿಸುತ್ತಿರುವ ಮಳೆ.

-(ಮುಂಬೈಯಲ್ಲಿ) ಎಲ್ಲರೂ ಹೆದರಿದವರಂತೆ ಕಾಣುತ್ತಿದ್ದರು. ಯಾರಿಂದಲೋ ಅಟ್ಟಿಸಿಕೊಂಡು ಬಂದವರಂತೆ ಓಡುತ್ತಿದ್ದರು. ಕಣ್ಣಲ್ಲಿ ಕಣ್ಣೀಟ್ಟು ಯಾರೂ ನೋಡುತ್ತಿರಲಿಲ್ಲ .

-ಎಂಟು ರೂಪಾಯಿ ಕೊಟ್ಟು ಸಲೂನಿನ ಕುರ್ಚಿಯಿಂದ ವಿಮಾನದಿಂದ ಇಳಿಯುವವರಂತೆ ಇಳಿದ.

-ಮನಸ್ಸಿಗಿಂತ ಮಿಗಿಲಾದ ಭದ್ರ ಬೆಚ್ಚಗಿನ ಜಾಗ ಬೇರೆ ಯಾವದಿದೆ?

-ನಮ್ಮ ನೋವು ನಲಿವಿನ ಸ್ವಿಚ್ಚು ನನ್ನೊಳಗೆ ಇರುವಾಗ ಹೊರಗಿನ ಭೂಗೋಲಕ್ಕಾಗಿ ಯಾಕಿಷ್ಟು ತಲೆ ಚಚ್ಚಿಕೊಳ್ಳಬೇಕು?

-ದೂರದ ಶಹರ ರಂಗೋಲಿಗೆಂದು ಹಾಕಿಟ್ಟ ಬೆಳಕಿನ ಬಿಂದುಗಳಂತೆ ತೋರುತ್ತಿತ್ತು.

- ಈ ಅಪರಿಚಿತ ಊರಿನ ಗುಟ್ಟೆಲ್ಲವನ್ನೂ ತಿಳಿದುಕೊಂಡಂಥ ಖುಷಿ ಅಭಿಮಾನ ಅವಳಿಗಾಯಿತು.

-ಒಂದು ಟೊಪ್ಪಿಗೆ ಮಾರಿದರೆ ಒಂದು ತುತ್ತು. ಎಷ್ಟು ಮಾರುತ್ತೀಯೋ ಅಷ್ಟು ತುತ್ತು.

-ಆ ಮುದುಕ ಪ್ರತಿದಿನವನ್ನು ಹೊಸ ಜನ್ಮದಷ್ಟು ಆಸೆಯಿಂದ ಎದುರು ನೋಡುತ್ತಾನೆ. ಅಡಚಣೆ ಇಲ್ಲದೆ ನಗುತ್ತಾನೆ. ಪ್ರತಿ ಅನಾನಸ್ಸನ್ನೂ ಅಷ್ಟೇ ನಾಜೂಕಿನಿಂದ ಹಿಡಿಯುತ್ತಾನೆ.

-ತನ್ನ ಹೊಸ ಜನ್ಮವೊಂದು ಈಗಾಗಲೇ ಆರಂಭವಾಗಿದೆ ಎಂದವನಿಗೆ ಅನಿಸಿತು . ಪುನರ್ಜನ್ಮಕ್ಕಾಗಿ ಸಾಯಲೇಬೇಕೆಂದಿಲ್ಲ.

-ಎಲ್ಲ ಜೀವದ ಒಳಗೂ ತನ್ನ ಆತ್ಮದ ಚೂರು ಹಂಚಿಹೋಗಿದೆ.

-ಎಷ್ಟೊಂದು ಹಾಡುಗಳು ಆಕಾಶದಿಂದ ಹಾರಿಬಂದು ಈ ರೇಡಿಯೋದ ರೆಂಬೆಯಲ್ಲಿ ಕೂತು ಹಾರಿ ಹೋಗುತ್ತವೆ.

- ನಮ್ಮ ಸ್ವರ್ಗದ ಏಣಿಗಳು ಅತ್ಯಂತ ಸರಳವಾಗಿದೆ , ಸಣ್ಣದಾಗಿದೆ.

-'ನಿಮ್ಮ ಮಗಳು ಹೇಗಿದ್ದಾಳೆ ' ಎಂದು ಚೌಕಶಿ ಮಾಡಿದಳು. ಖುಶಿಯಿಂದ 'ಚೆನ್ನಾಗಿದ್ದಾಳೆ' ಅಂದ. ಮರುಕ್ಷಣ ಅವರಿಗೆ ಮಕ್ಕಳಿಲ್ಲ ಎಂಬುದು ನೆನಪಾಗಿ ತೀರ ಉತ್ತೇಜಿತನಾಗಿ ಮಗಳ ವರ್ಣನೆ ಪ್ರಾರಂಭಿಸಿದ.

ಇವು ಕೆಲವು ಸಾಲುಗಳು ಮಾತ್ರ .

ಅವರ ಲೇಖನ ಶೈಲಿ ಬಹಳ ಸುಂದರವಾಗಿದ್ದು ಮತ್ತೆ ಮತ್ತೆ ಓದಲು ಓದುಗರನ್ನು ಪ್ರೇರೇಪಿಸುತ್ತದೆ . ಅಲ್ಲವೇ ?

ಅಮೃತ ಬಳ್ಳಿಯ ಕಷಾಯ ಕಥಾ ಸಂಕಲನ ಹಿಂದಿಗೂ ಅನುವಾದವಾಗಿದ್ದು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿಕೊಂಡಿದೆ.

ಪರಭಾಷೆಯ ಮಿತ್ರರಿಗಾಗಿ ಅಂತರ್ಜಾಲದಲ್ಲಿ ಹುಡುಕಿದರೆ ಇನ್ನಷ್ಟು ವಿಷಯಗಳು ತಿಳಿದು ಬಂದವು. ಅಂತರ್ರಾಷ್ಟ್ರೀಯ ಕಾವ್ಯದ ಒಂದು ತಾಣದ ಅಂಗವಾಗಿ ಬಾರತೀಯ ಕಾವ್ಯದ ಕುರಿತಾದ ಮಾಹಿತಿ ಪುಟದಲ್ಲಿ ನಮ್ಮ ಜಯಂತ ಕಾಯ್ಕಿಣಿಯವರೂ ಕಾಣಿಸಿಕೊಂಡಿದ್ದಾರೆ.

Rating
No votes yet

Comments