ಠಕ್ಕ,ಠಿಕ್ಕ ಮತ್ತು ಸಾಧು...
ಆವತ್ತು ಇತಿಹಾಸದ ಮೇಷ್ಟ್ರು ಶಾನೇ ಜೋರಾಗಿ ಪಾಠ ವದರುತ್ತಿದ್ದರು. ಅದು ಠಕ್ಕ,ಠಿಕ್ಕ ಮತ್ತು ಸಾಧು ಎಂಬ ಮೂವರು ದೇಶಭಕ್ತರ ಕಥೆಯುಳ್ಳ ಪಾಠ. ಹಾಗಾಗಿಯೇ ಅದನ್ನು ಇತಿಹಾಸದ ಪಠ್ಯದಲ್ಲಿ ಸೇರಿಸಲಾಗಿತ್ತು! ಮೇಷ್ಟ್ರು ಪಾಠ ವದರಲು ಶುರುವಿಟ್ಟರು.
ಠಕ್ಕ,ಠಿಕ್ಕ ಮತ್ತು ಸಾಧು ಮೂವರು ಒಂದು ಕಾಲದಲ್ಲಿ ಆಪ್ತಮಿತ್ರರಾಗಿದ್ದವರು. ದೇಶದ ಕುರಿತಾಗಿಯೇ ಸದಾ ಚಿಂತಿಸುತ್ತಿದ್ದವರು. ಒಟ್ಟಿಗೆ ನಾಲ್ಕಾರು ವರ್ಷ ಕಳೆದರು. ಒಂದಾನೊಂದು ದಿನ ಅವರ ಮೂವರಲ್ಲಿ ಬಿನ್ನಾಭಿಪ್ರಾಯ ಬಂತು. ಇವರು ಮೂವರಿಗೂ ದೇಶಭಕ್ತಿ ಉತ್ಕಟವಾಗಿ ಮೂವರು ಸೇರಿ ಒಂದು ಪತ್ರಿಕೆ ಆರಂಭಿಸಿದರು. ಅದು ದೇಶಕೋಸ್ಕರವೇ. ಅಲ್ಲಿ ಮೂವರಿಗೂ ಮನಸ್ತಾಪ ಬಂದು ಮೂವರು ಬೇರೆ ಬೇರೆಯಾಗುವ ಕಾಲ ಬಂತು. "ಸ್ವದೇಶಿ ಸ್ವಾಭಿಮಾನ’ ಅಂತಾ ಆ ಪತ್ರಿಕೆ ಹೆಸರು. ರಾಷ್ಟ್ರದ ಕುರಿತಾಗಿ ಜಾಗ್ರತಿ ಮೂಡಿಸಲು ಪತ್ರಿಕೆಗಿಂತ ಒಳ್ಳೆ ಮಾಧ್ಯಮ ಬೇರೊಂದಿಲ್ಲ ಅಂತಾ ಆಲೋಚಿಸಿ ಆ ಮೂವರು ಗೆಳೆಯರು ಸ್ಥಾಪಿಸಿದ ಪತ್ರಿಕೆಯದು.
ಪತ್ರಿಕೆಗೆ ಹಣಹೊಂದಿಸೋ ಜವಬ್ದಾರಿ ಸಾಧು ಮೇಲಿತ್ತು.ಪುಟ ತುಂಬಿಸೋದು ಠಿಕ್ಕನ ಕೆಲಸವಾಗಿತ್ತು. ಇನ್ನೂ ಠಕ್ಕ ಮೊದಲೇ ಬೇರೆ ಪತ್ರಿಕೆಯಲ್ಲಿ ಕೆಲಸ ಮಾಡುತಿದ್ದವನಾದ್ದರಿಂದ ಅವ ಲಕ್ಷಾಂತರ ಜನ ಅಭಿಮಾನಿಗಳನ್ನು ಹೊಂದಿದ್ದನಾದ್ದರಿಂದ ಈ ಪುಟುಗೋಸಿ ಪತ್ರಿಕೆಗೆ ಗೆಳೆಯರ ಒತ್ತಾಸೆಗೆ ಆಗೊಮ್ಮೆ ಈಗೊಮ್ಮೆ ಸಲಹೆಕೊಡುತ್ತಿದ್ದ.
ಇವರು ಅಂದುಕೊಂಡಂತೆ ಪತ್ರಿಕೆ ಕ್ಲಿಕ್ ಆಗಲಿಲ್ಲ. ಸಾಧು ಹಣ ಹೊಂದಿಸಿ ಹೊಂದಿಸಿ ಸುಸ್ತಾದ. ಕೊನೆಗೊಂದು ದಿನ ತನಗೆ ಈ ಪತ್ರಿಕೆ ಸಹವಾಸವೇ ಸಾಕು ಅಂತಾ ಅಲ್ಲಿಂದ ಹಿಂದೆ ಸರಿದುಬಿಟ್ಟ. ಆವಾಗಲೇ ಆ ಮೂವರು ಬೇರೆ ಬೇರೆಯಾಗಿದ್ದು. ಠಕ್ಕ,ಠಿಕ್ಕ ತಮ್ಮ ಅಸ್ಥಿತ್ವಕ್ಕಾಗಿ ದೇಶ ಭಕ್ತಿಯ ಲೇಪ ಹಚ್ಚಿಕೊಂಡವರು ಅಂತಾ ಆಮೇಲೆ ನಿಧಾನವಾಗಿ ತಿಳಿಯಲು ಶುರುವಾಯಿತು. ಆದರೆ ಸಾಧು ದೇಶಕ್ಕಾಗಿಯೇ ತನ್ನ ಬದುಕನ್ನು ಮುಡುಪಾಗಿಟ್ಟವ. ಠಕ್ಕ,ಠಿಕ್ಕ ಸಾಧು ಕುರಿತಾಗಿ ಇಲ್ಲ ಸಲ್ಲದ ಅಪಪ್ರಚಾರ ಮಾಡಿದರು. ಸಾಧು ತುಳಿಯಲು ಬೇಕಾದ ಹುನ್ನಾರವನ್ನೆಲ್ಲ ಮಾಡಿದರು. ಠಕ್ಕ ತನ್ನ ಆತ್ಮಾಲಾಪದಲ್ಲಿ ತನ್ನ ದುಸ್ಥಿತಿಗೆ ಪತ್ರಿಕೆಯೇ ಕಾರಣ ಅಂತಾನು ಬರೆದುಕೊಂಡ. ಠಕ್ಕ ಠಿಕ್ಕ ಇಬ್ಬರು ಸಾಧು ಕಾಲೆಳೆಯಲು ಶತಪತ ಪ್ರಯತ್ನ ಮಾಡಿದರು. ಸಾಧು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ತನ್ನ ಕರ್ತವ್ಯಮಾಡುತ್ತಾ ಹೋದ ತಾನು ಹೋದಲೆಲ್ಲಾ ತನ್ನ ಆ ಇಬ್ಬರು ಗೆಳೆಯರನ್ನು ಹೊಗಳಿದನೇ ಹೊರತು ತೆಗಳಲಿಲ್ಲ. ಹೀಗೆ ಬದುಕು ಸವೆಸಿದ ಸಾಧು ಕೊನೆಗೊಂದು ದಿನ ಅವರೆಲ್ಲರನ್ನು ಮೀರಿ ಬೆಳೆದ. ಇತಿಹಾಸದ ಪುಟ ಸೇರಿದ ಅಂತಾ ಪಾಠವನ್ನು ಪಟಪಟನೇ ವದರಿದ ಮೇಷ್ಟ್ರು ಮಕ್ಕಳೆ ರಾಷ್ಟ್ರನಾಯಕರ ಬದುಕು ಅಂದ್ರೆ ಹೀಗೆ. ಅವರು ಬೇರೆ ಯಾರಿಗೂ ಉಪದ್ರ ಮಾಡಲ್ಲ. ತಮಗೆ ಉಪದ್ರ ಕೊಟ್ಟವರಿಗೂ ಉಪಕಾರವನ್ನೇ ಮಾಡುತ್ತಾರೆ. ಈ ಪಾಠದಿಂದ ನಿಮಗೇನು ಗೊತ್ತಾಯಿತು ಅಂತಾ ಮಕ್ಕಳನ್ನು ಪ್ರಶ್ನಿಸಿದರು.
ತಲೆಹರಟೆ ಹುಡುಗನೊಬ್ಬ ಎದ್ದುನಿಂತು ಠಕ್ಕ,ಠಿಕ್ಕನಂತೆ ಬದುಕಿದರೂ ಇತಿಹಾಸದ ಪುಟ ಸೇರಬಹುದು ಅನ್ನೋದು ಇವತ್ತು ಗೊತ್ತಾಯಿತು ಸಾರ್ ಅಂದ. ಮೇಷ್ಟ್ರು ಏನನ್ನೋ ಹೇಳಲು ಬಾಯಿ ತೆರೆದರು ಅಷ್ಟೊತ್ತಿಗೆ ಗಂಟೆ ಬಾರಿಸಿತು. ಕೊನೆ ಅವಧಿಯಾದ್ದರಿಂದ ಮೇಷ್ಟ್ರು ಹೇಳಬೇಕಾದನ್ನು ಅಲ್ಲಿಗೆ ನಿಲ್ಲಿಸಿ ಮನೆಯತ್ತ ದುಡು ದುಡು ಓಡಿದರು.