ಛೇ, ನಮಗೂ ಬಾಲವಿದ್ದಿದ್ದರೆ...

ಛೇ, ನಮಗೂ ಬಾಲವಿದ್ದಿದ್ದರೆ...

ಬರಹ

ವಿ.ಸೂ.:ಗಂಭೀರವಾಗಿ ಪರಿಗಣಿಸತಕ್ಕದ್ದಲ್ಲ.

ಡಾರ್ವಿನ್ನನ ನಿಯಮದಂತೆ ನಮ್ಮ ಬಾಲ ನಶಿಸಿಹೋಗಿ ಎಸ್ಟೋ ವರ್ಷಗಳಾದವಲ್ಲ. ನನಗೆ ನನ್ನ ಪೂರ್ವಜರ ಮೇಲೆ ಈದಿನ ಸಿಟ್ಟು ಬರುತ್ತಿದೆ. ದೇವರು ಕೊಟ್ಟಿದ್ದನ್ನು ಅವರು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಹಾಗಾಗೇ ನಾವೀಗ ಬಾಲವಿಲ್ಲದೆ ಜನಿಸುವಂತಾಗಿದೆ. ಎಂತಹ ದುರ್ಗತಿಯಲ್ಲವೇ? ನಮಗೂ ಬಾಲವಿದ್ದಿದ್ದರೆ! ಎಷ್ಟು ಸೊಗಸಾಗಿರುತ್ತಿತ್ತು?
ನಾಡಿದ್ದು ಬರುವ ಒಲಂಪಿಕ್ಸ್ ನಲ್ಲಿ ಅದೆಂತದೋ ಇಬ್ಬರು ಕತ್ತಿ ಹಿಡಿದುಕೊಂಡು ಆಟವಾಡುತ್ತಾರಲ್ಲ, ಅದಕ್ಕೆ ಕೃತಕ ಬಾಲವನ್ನಳವಡಿಸುವ ತೊಂದರೆಯೇ ಇರುತ್ತಿರಲಿಲ್ಲ. ನಮ್ಮ ಬಾಲವನ್ನೇ ಹಿಡಿ ಹಿಡಿದು ಜಗ್ಗಬಹುದಿತ್ತು. ಎಲ್ಲ ಪ್ರಾಣಿಗಳ ಹಾಗೆಯೇ ನಾವೂ ನಮಗೆ ಬಾಲವಿದೆಯೆಂದು
ಹೇಳಿಕೊಳ್ಳಬಹುದಿತ್ತು. ಬುದ್ಧಿ ಚಾತುರ್ಯ, ನಗು ಮುಂತಾದವುಗಳೊಡನೆ ಬಾಲವೂ ಇದ್ದಿದ್ದರೆ, ನಾವೂ ಯಾವ ಪ್ರಾಣಿಗಳಿಗೂ ಕಡಿಮೆಯಲ್ಲವೆಂದು ಬೀಗಬಹುದಿತ್ತು. ಮೊನ್ನೆ ನನ್ನ ಸ್ನೇಹಿತನ ಹತ್ತಿರ ಈ ದು:ಖವನ್ನೇ ತೊಡಿಕೊಳ್ಳುತ್ತಿದ್ದೆ. ಯಾವ ಯಾವ ತರಹದ ಗತ್ತು
ಗಾಂಭೀರ್ಯವನ್ನು ನಾವು ಪ್ರದರ್ಶಿಸಬಹುದಿತ್ತು! ಒಬ್ಬೊಬ್ಬರಿಗೆ ಒಂದೊಂದಳತೆಯ ಬಾಲಗಳು. ಮಕ್ಕಳು ಕಾಲರ್ ಪಟ್ಟಿಯನ್ನು ಹಿಡಿದು ಹೊಡೆದಾಡುವುದರ ಬದಲು ಬಾಲವನ್ನು ಹಿಡಿದು ತಿರುಗಾಡಿಸಿ ಬಿಸಾಡಬಹುದಿತ್ತು ಇನ್ನೊಬ್ಬರನ್ನು. ಯುವಕರು ತಮ್ಮ ಬಾಲವನ್ನೇ ತಮ್ಮ ಸೌಂದರ್ಯ ಪ್ರದರ್ಶನಕ್ಕೊಸ್ಕರ ಬಳಸಬಹುದಿತ್ತು. ಒಬ್ಬೊಬ್ಬಾರು ಒಂದೊಂದು ರೀತಿಯ ಸ್ಟೈಲ್ ಮಾಡಬಹುದಿತ್ತು. ಈಗಿನ ಜಿಮ್ಗಳಲ್ಲಿ ಬಾಲದ ಸೌಂದರ್ಯ ವೃದ್ಧಿಗೋಸ್ಕರ ಹೊಸ ಹೊಸ ಉಪಕರಣಗಳನ್ನು ಕಂಡುಹಿಡಿಯುತ್ತಿದ್ದರೇನೋ? ಬಾಲದ ಸೌಂದರ್ಯವನ್ನು ಗಮನದಲ್ಲಿಟ್ಟುಕೊಂಡು ಹೊಸ ಹೊಸ ಮಾತ್ರೆಗಳು, ಸಾಬೂನುಗಳು, ಶಾಂಪೂಗಳು ಹೇರಳವಾಗಿ ಸಿಗುತ್ತಿದ್ದುದರಲ್ಲಿ ಆಶ್ಚರ್ಯವಿರಲಿಲ್ಲ. ಹುಡುಗಿಯರು ತಮ್ಮ ತಮ್ಮ ಸೌಂದರ್ಯವನ್ನು ಅಳೆಯಲು ಬಾಲವನ್ನು ಹೊಸ ಕ್ರೈಟೀರಿಯಾವಾಗಿ ಸೇರಿಸಿಕೊಳ್ಳುತ್ತಿದ್ದರು. ವಿಶ್ವಸುಂದರಿ ಸ್ಪರ್ಧೆಯಲ್ಲಿ ಬಾಲವು ಸೌಂದರ್ಯವತಿಯನ್ನು ಆರಿಸುವಲ್ಲಿ ಖಂಡಿತವಾಗಿ ಪ್ರಮುಖ ಪಾತ್ರವನ್ನು ವಹಿಸುತ್ತಿತ್ತು. ಸಿನಿಮಾ ತಾರೆಯರ
ಪೋಸ್ಟರುಗಳಲ್ಲಿ ಬಾಲವು ಪ್ರಮುಖ ಸ್ಥಾನವನ್ನಲಂಕರಿಸುತ್ತಿತ್ತು.

ಬಾಲವಿದ್ದಿದ್ದರೆ ನಮಗೆ ಇನ್ನೊಬ್ಬರ ಮನಸ್ಸನ್ನರಿಯಲು ಬಹಳವಾಗಿ ಅನುಕೂಲವಾಗುತ್ತಿತ್ತೆಂದು ನಾನು ಹೇಳಬಲ್ಲೆ. ಯಾಕೆಂದ್ರೆ ಸಂತೋಷವಾದಾಗ ನಮ್ಮ ಬಾಲ ಖಂಡಿತವಾಗಿ ಆಡಲು ಪ್ರಾರಂಭಿಸುತ್ತಿತ್ತು. ಹಾಗೆಯೇ ಇನ್ನೊಬ್ಬರನ್ನು ಕಂಡು ಭಯವಾದಾಗ ಅದು ಮುದುರಿಕೊಳ್ಳುವುದರಲ್ಲಿ ಅನುಮಾನವಿರಲಿಲ್ಲ. ಗರ್ವಿಷ್ಟರ ಬಾಲವು ಗರ್ವವನ್ನು ಸೂಚಿಸಲೆಂಬಂತೆ ಮೇಲಕ್ಕೆತ್ತಿರುತ್ತಿತ್ತು. ಇನ್ನೊಬ್ಬರನ್ನು ಹಾಳುಗೆಡವಲು ಹೊಂಚು ಹಾಕುತ್ತಿರುವವನದ್ದು ಬೆಕ್ಕು ಬೇಟೆಯಾಡುವಾಗ ನಿಧಾನವಾಗಿ ಅಲ್ಲಡಿಸುವುದಿಲ್ಲವೇ? ಹಾಗೆ ಅಲ್ಲಾಡಲು
ಶುರುಮಾಡುತ್ತಿತ್ತು. ಹಾಗಾಗಿ ನಾವು ನಮ್ಮ ಮನಸ್ಸಿನಲ್ಲಿರುವುದನ್ನು ಗುಟ್ಟುಮಾಡಲು ಸಾಧ್ಯವಿರದೇ ಸಂತೋಷವಾಗಿರಬಹುದಿತ್ತು.

ಈಗಿನ ನಾನಾ ವಿಧದ ಡಾಕ್ಟರುಗಳಂತೆ ಬಾಲದ ಸ್ಪೆಷಲಿಸ್ಟ್ ಒಬ್ಬೊರು ಖಂಡಿತ ಇರುತ್ತಿದ್ದರು. ಸಾಫ್ಟ್ ವೇರ್ ಇಂಜಿನಿಯರುಗಳು ತಮ್ಮೆರಡು ಕೈಗಳ ಜೊತೆ ಟೈಪ್ ಮಾಡಲು ಬಾಲದ ನೆರವನ್ನೂ ಪಡೆದುಕೊಳ್ಳುತ್ತಿದ್ದುದರಲ್ಲಿ ಅನುಮಾನವಿರಲಿಲ್ಲ. ತರುಣಿಯರ ಬಾಲದ ಸೌಂದರ್ಯ ವೃದ್ಧಿಗಾಗಿ ನಾನಾ ತರದ ಹಾರಗಳೂ, ಡ್ರೆಸ್ ಮೆಟೀರಿಯಲ್ಲುಗಳೂ ಬಂದು ಇನ್ನಷ್ಟು ವ್ಯಾಪರ ವೃದ್ಧಿಯಾಗುತ್ತಿತ್ತು. ತರುಣರು ಬಾಲಕ್ಕೆ ಟ್ಯಾಟೂಗಳನ್ನೂ, ರಿಂಗಳನ್ನೂ ಅಳವಡಿಸಿಕೊಳ್ಳುತ್ತಿದ್ದರು. ಈನ್ನೂ ಕೆಲವರು ಬಾಲವನ್ನು ಎಷ್ಟು ಬೇಕೋ ಅಷ್ಟನ್ನು ತುಂಡರಿಸಿಕೊಳ್ಳುತ್ತಿದ್ದರೇನೋ?

ಛೇ, ಎಷ್ಟು ತರದ ಉಪಯೋಗಗಳಿದ್ದರೂ ಇಂದು ನಮಗೆ ಬಾಲವಿಲ್ಲವಲ್ಲ ಅನ್ನೋ ಕೊರಗುವ ಮನಸ್ಥಿತಿ ಬಂದಿದೆ. ಇದಕ್ಕೆ ಯಾರನ್ನು ದೂಷಿಸಬೇಕೋ ತಿಳಿಯುತ್ತಿಲ್ಲ.

-ಬಾಲವಿಲ್ಲದ ಮಾಧವ.