ಹಂಚಿಕೊಳ್ಳದ ಲೋಕ
ನನ್ನ ಲೋಕದ ಏನೇನು ಇಲ್ಲಿ ಬರೆದುಕೊಳ್ಳುತ್ತೇನೋ ಅದರಲ್ಲಿ ಎಷ್ಟೋ ತಲುಪುತ್ತದೆ, ಮತ್ತೆಷ್ಟೋ ತಲುಪುವುದೇ ಇಲ್ಲ. ಹಂಚಿಕೊಳ್ಳುವುದು ತಲುಪಲಿಕ್ಕೇ. ಆದರೂ ಬರೆಯುವುದು ತಲುಪಲಷ್ಟೇ ಅಲ್ಲ. ಅದು ಒಂದು ಮಾತು. ಯಾವುದು ತಲುಪುತ್ತದೆ ಯಾವುದು ತಲುಪುವುದಿಲ್ಲ ಅನ್ನುವುದು ಬರೇ ಕುತೂಹಲವಷ್ಟೇ ಅಲ್ಲ. ತುಂಬಾ ಮುಖ್ಯ ಕೂಡ.
ಕನ್ನಡ ನೆಲದಿಂದ ದೂರದಲ್ಲಿ ವಾಸವಾಗಿರುವ ನನ್ನಂತವರು ಯಾವುದೇ ಲೋಕವನ್ನು ನೋಡಿದರೂ, ಅದನ್ನಿಲ್ಲಿ ಹೇಳಿದರೂ ಅದರ ಹಿಂದೆ ಒಂದು ಕನ್ನಡ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಕೆಲವೊಮ್ಮೆ ಅದೊಂದು ಮಿತಿ ಅನಿಸಿದ್ದೂ ಇದೆ. ಆದರೆ ತಪ್ಪಿಸಿಕೊಳ್ಳಲಾಗದ ವಾಸ್ತವವೆನ್ನುವುದು ಮಾತ್ರ ದಿಟ.
ನಾನು ನೋಡಿದ ಲೋಕವನ್ನು, ಅನುಭವಿಸಿದ ಲೋಕವನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳಲು ಆಗದಿರುವುದು ನನ್ನಂತವರ ದೊಡ್ಡ ಕುಂದು. ಅದನ್ನು ಸದಾ ಎಚ್ಚರದಿಂದ ನೋಡಿಕೊಂಡು ಸರಿ ಪಡಿಸಿಕೊಳ್ಳಬೇಕು, ತಿದ್ದಿಕೊಳ್ಳುತ್ತಿರಬೇಕು. ಇದು ಎಲ್ಲ ಬರಹಗಾರರ ಪಾಡಾದ್ದರಿಂದ ಅದರಲ್ಲಿ ಏನೂ ವಿಶೇಷವಿಲ್ಲ.
ಬ್ಲಾಗಿನಲ್ಲಿ ಮಾತ್ರ ಸಾಧ್ಯವಾಗುವ, ತಟ್ಟನೆ ಹಂಚಿಕೊಂಡು, ಅದಕ್ಕೊಂದಿಷ್ಟು ಪ್ರತಿಕ್ರಿಯೆ ತಟ್ಟನೆ ಬರುವ ಪ್ರಕ್ರಿಯೆ ನಾನು ಕಂಡಂತೆ ಕನ್ನಡ ಲೋಕಕ್ಕೆ ಹೊಸತು ಮತ್ತು ವಿಶಿಷ್ಟ. ಆದರೆ ಇನ್ನೊಂದು ಬಗೆಯಲ್ಲಿ ಹೊಸದೇನೂ ಅಲ್ಲ. ಇದೂ ನೋಟುಗರ ಎದುರಿಗೆ ಆಡುವ ನಾಟಕ, ಹಾಡು ಕುಣಿತದಂತೆ. ಏನಿದ್ದರೂ ಕೂಡಲೇ ಅದರ ಸೋಲು ನಿರ್ಧಾರವಾಗಿಬಿಡುವಂತದು. ಗೆಲುವು ಅಲ್ಲದಿರಬಹುದು. ಬ್ಲಾಗುಗಳು ಒಂದು ಬಗೆಯ ಜೀವಂತ ಪ್ರಕ್ರಿಯೆ ನಾಟಕದ ಹಾಗೆ ಅನಿಸಿದೆ. ಇದರ ವಿರೋಧಾಭಾಸ ನೋಡಿ - ಇಂದಿನ ವರ್ಚುವಲ್ ಲೋಕದಲ್ಲಿ ಬ್ಲಾಗುಗಳು ಜೀವಂತ ಪ್ರಕ್ರಿಯೆ ಅನಿಸುವುದು!
ಇಷ್ಟೆಲ್ಲಾ ಹೇಳಿಯೂ ಒಂದು ಮಾತು ಉಳಿಯುತ್ತದೆ. ಎಲ್ಲೆಲ್ಲೋ ಕೂತು ಬರೆಯುವ ಕನ್ನಡದವರ ಬರಹಗಳಲ್ಲಿ ನನಗೆ ಇಷ್ಟವಾಗುವುದು - ಕನ್ನಡವಲ್ಲದ ಅವರ ಸುತ್ತಲಿನ ಲೋಕವನ್ನು ಅವರು ಸ್ವೀಕರಿಸುವ, ಧಿಕ್ಕರಿಸುವ ಬಗೆ. ಯಾಕೆಂದರೆ, ಆ ಬಗೆಯ ಬರಹದ ಮೂಲಕ ಹಿಂದೆಂದೂ ಕನ್ನಡ ಲೋಕದೊಳಕ್ಕೆ ಬಂದಿರದ ಸಂಗತಿಗಳು ನುಗ್ಗಿಬರುವುದು. ಆ ನುಗ್ಗಾಟದಲ್ಲಿರುವ ಒಂದು ಬಗೆಯ ಚಂದ. ಮತ್ತು ಮುಖ್ಯವಾಗಿ ಈ ನುಗ್ಗಾಟ ಆಗುಹೋಗಿನ ಮೂಲಕ ಕನ್ನಡ ಲೋಕ ವಿಸ್ತರಿಸುತ್ತಾ ಹೋಗುವುದು.
ಇಂತ ಪ್ರಕ್ರಿಯೆಯನ್ನು ಪ್ರೇರೇಪಿಸಲು, ಪ್ರಚೋದಿಸಲು ಬ್ಲಾಗುಗಳು ಇವೆ, ಆದರೆ ವಿಶಾಲ ಕನ್ನಡ ಮನಸ್ಸು ಅದಕ್ಕೆ ಸಿದ್ಧವಾಗಿದೆಯೆ ಎಂದು ಹಲವು ಸಲ ಕೇಳಿಕೊಂಡಿದ್ದೇನೆ.