ಹಿಂದೂ ಕೋಮುವಾದ ಮತ್ತು ಬುದ್ಧಿಜೀವಿಗಳ ಪೀಕಲಾಟ

ಹಿಂದೂ ಕೋಮುವಾದ ಮತ್ತು ಬುದ್ಧಿಜೀವಿಗಳ ಪೀಕಲಾಟ

ಬರಹ

ಹಿಂದೂ ಕೋಮುವಾದ ಮತ್ತು ಬುದ್ಧಿಜೀವಿಗಳ ಪೀಕಲಾಟ

ಹೋದ ವಾರದ ಅಂಕಣದಲ್ಲಿ ಬರೆದಂತೆ ಕೆ.ಎಚ್.ಶ್ರೀನಿವಾಸ ಅವರು ಬಿ.ಜೆ.ಪಿ.ಗೆ ಸೇರುತ್ತಿಲ್ಲವಂತೆ. ಅವರಿಗೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆ ಇದೆಯಂತೆ. ಈ ನಗರದ ಬ್ರಾಹ್ಮಣ ಮಹಾಸಭೆ, ಅವರಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿ ಕೊಡುವುದಾಗಿ ಭರವಸೆ ನೀಡಿದೆಯಂತೆ. ಈ ಮಹಾಸಭೆ ಎಲ್ಲ ಪಕ್ಷಗಳಿಗೂ ಈ ರೀತಿಯ ಭರವಸೆ ನೀಡಿದೆಯೆಂದು ಸುದ್ದಿ. ಈಚಿನ ಪುರಸಭಾ ಅಧ್ಯಕ್ಷರ ಚುನಾವಣೆಯಲ್ಲಿ ಇಂತಹುದೇ ಜಾತಿ ರಾಜಕಾರಣ ನಡೆದು, ಕೊನೆಗೂ ಬ್ರಾಹ್ಮಣರೇ ಗೆದ್ದಿದ್ದಾರೆ. ಇದರಿಂದಾಗಿ ಕೆ.ಎಸ್.ಈಶ್ವರಪ್ಪ ಮಾತ್ರ ಸೋತು ಹೋದಂತಾಗಿದ್ದಾರೆ! ಒಳ್ಳೆಯ ವ್ಯಕ್ತಿಯೆಂದು ಅಧ್ಯಕ್ಷ ಸ್ಥಾನಕ್ಕೆ ಬ್ರಾಹ್ಮಣ ಅಭ್ಯರ್ಥಿಯನ್ನು ಬೆಂಬಲಿಸಿದ್ದೇ ಅವರಿಗೆ ಮುಳುವಾಗಿದೆ. ತಮ್ಮ ಜಾತಿಯ ಅಭ್ಯರ್ಥಿಯನ್ನು ಕೈಬಿಟ್ಟದ್ದಕ್ಕಾಗಿ ಈಗ ವೀರಶೈವ ಸಮಾಜದ ನಾಯಕರು ಈಶ್ವರಪ್ಪನವರನ್ನು ಕೈಬಿಡಲು ಸಿದ್ಧರಾಗುತ್ತಿದ್ದಾರೆ. ಇನ್ನು ಶ್ರೀನಿವಾಸರಿಗೆ ಟಿಕೆಟ್ ಸಿಕ್ಕರೆ, ಬ್ರಾಹ್ಮಣರೂ ತಮ್ಮನ್ನು ಕೈಬಿಡುವುದು ಖಚಿತ ಎಂದು ಗಾಬರಿಗೊಂಡಿರುವ ಅವರು ತಮ್ಮ ವಿಧಾನಸಭಾ ಸ್ಥಾನವನ್ನು ಉಳಿಸಿಕೊಳ್ಳಲು ಕಂಡ ಕಂಡ ವೀರಶೈವ ಸ್ವಾಮಿಗಳ ಕೈ ಕಾಲು ಹಿಡಿಯಲು ಅವಕಾಶಗಳನ್ನು ಕಲ್ಪಿಸಿಕೊಳ್ಳತೊಡಗಿದ್ದಾರೆ! ಇತ್ತೀಚಿನ ಅವರ ಭರ್ಜರಿ ಷಷ್ಠ್ಯಬ್ಧಿ ಸಮಾರಂಭ ಇದಕ್ಕೊಂದು ಉದಾಹರಣೆಯಂತಿತ್ತು.

ನಮ್ಮ ರಾಜಕಾರಣ ಹೀಗೆ ಜಿಗುಪ್ಸೆಕರ ರೀತಿಯಲ್ಲಿ ಜಾತಿಮಯವಾಗುತ್ತಿರುವ ಸಂದರ್ಭದಲ್ಲಿ, ಇಂತಹುದನ್ನೆಲ್ಲ ಖಂಡ ತುಂಡವಾಗಿ ಖಂಡಿಸುತ್ತಿದ್ದ ಮಾಜಿ ಪೋಲೀಸ್ ಅಧಿಕಾರಿ ಸುಭಾಷ್ ಭರಣಿಯವರು ಬಿಜೆಪಿ ಸೇರಿ ಎಲ್ಲರನ್ನೂ ದಂಗು ಬಡಿಸಿದ್ದಾರೆ! ಕರೆದೆಡೆಯಲ್ಲೆಲ್ಲ 'ಹಿಂದುತ್ವ' ಮತ್ತು ಕೋಮುವಾದದ ವಿರುದ್ಧ ಭರ್ಜರಿ ಭಾಷಣ ಬಿಗಿಯುತ್ತಿದ್ದ ಭರಣಿ, ಯಾವ 'ಸೆಕ್ಯುಲರ್' ಪಕ್ಷವೂ ತಮಗೆ ಮಣೆ ಹಾಕಲಿಲ್ಲವೆಂದು ಬಿಜೆಪಿಗೆ ಮೊರೆ ಹೋಗಿದ್ದಾರೆ. ಈ ಭರಣಿಯವರಂತೆಯೇ ಸರ್ಕಾರಿ ಸೇವೆಯಲ್ಲಿ ಭರ್ಜರಿ ಅಧಿಕಾರ ಅನುಭವಿಸಿ, ಅದನ್ನೆಲ್ಲ ರಾಜಕಾರಣದಲ್ಲಿ ಹೂಡಿ ಬೆಳೆ ತೆಗೆಯಲು ಮುಂದಾಗಿದ್ದ ಅನೇಕ ಅಧಿಕಾರಿಗಳ ಬೆಡಗು - ಬಿನ್ನಾಣಗಳಿಗೆ ಈ ಬಾರಿ ಕಾಂಗ್ರೆಸ್ ಸೊಪ್ಪು ಹಾಕದೆ ಈ ವ್ಯಕ್ತಿತ್ವಗಳ ಢೋಂಗಿತನವನ್ನು ಬಯಲಿಗೆಳೆದಿದೆ. ಹಾಗೆ ನೋಡಿದರೆ ಈ ಬಾರಿ ಕಾಂಗ್ರೆಸ್ ಇಂತಹ ಹಲವು ಢೋಂಗಿಗಳಿಗೆ ಟಿಕೆಟ್ ನಿರಾಕರಿಸಿ ಭರ್ಜರಿ ಧೈರ್ಯ ತೋರಿದೆ. ತನ್ನ ಹಿರಿಯ ನಾಯಕರುಗಳ ಮಕ್ಕಳು - ಮೊಮ್ಮಕ್ಕಳಿಗೆ, ಸೋದರರಿಗೆ, ಸಿನೆಮಾ ನಟ - ನಟಿಯರಿಗೆ ಟಿಕೆಟ್ ನಿರಾಕರಿಸಿ ಗಂಭೀರ ರಾಜಕಾರಣ ಮಾಡುವ ಸೂಚನೆ ನೀಡಿದೆ. ಆದರೆ ಕೊನೆಯ ನಿಮಿಷದ ಒತ್ತಡದಲ್ಲಿ - ಜಿ.ಮಾದೇಗೌಡರಂತಹ ಹಿರಿಯರೇ ಕುಟುಂಬ ರಾಜಕಾರಣಕ್ಕಿಳಿದು ಬಿಜೆಪಿ ಸೇರುವ ಬೆದರಿಕೆ ಒಡ್ಡುತ್ತಿರುವಾಗ - ಅದು ಹೇಗೆ ವರ್ತಿಸುವುದೋ ಕಾದು ನೋಡಬೇಕು.

ಬಿಜೆಪಿಯಂತೂ ಕಾಂಗ್ರೆಸ್ ಟಿಕೆಟ್ ವಂಚಿತ ಪುಢಾರಿಗಳನ್ನೆಲ್ಲ ಹಲ್ಲು ಕಿರಿಯುತ್ತಾ ತನ್ನ ತೆಕ್ಕೆಗೆ ತೆಗೆದುಕೊಂಡು ತನ್ನ ತತ್ವಾವೇಶವೆಲ್ಲ ಬರೀ ಬುರುಗು ಎನ್ನುವುದನ್ನು ಸಾಬೀತುಪಡಿಸುತ್ತಿದೆ. ಇನ್ನು ತತ್ವಾದರ್ಶಗಳಿಗೆಲ್ಲ ಬಹು ಹಿಂದೆಯೇ ತಿಲಾಂಜಲಿ ಘೋಷಿಸಿರುವ ಜೆಡಿಎಸ್, ಕಾಂಗ್ರೆಸ್ - ಬಿಜೆಪಿಗಳೆಲ್ಲ ತುಂಬಿ ಅವುಗಳಿಂದ ತುಳುಕಿ ಬೀಳುತ್ತಿರುವ ಗಿರಾಕಿಗಳನ್ನು ಹಾರ ಹಾಕಿ ಆಹ್ವಾನಿಸುತ್ತಾ ತನ್ನ ರಾಜಕಾರಣವನ್ನು ಪುನಾರಚಿಸಿಕೊಳ್ಳುತ್ತಿದೆ! ಈ ಮಧ್ಯೆ ಎಲ್ಲೂ ಸಲ್ಲದಂತಾಗಿರುವ ಒಂಟಿ ಸಲಗ ಎಚ್.ಎನ್.ನಂಜೇಗೌಡರು ಬಿ.ಎಸ್.ಪಿ. ಸೇರುವಷ್ಟು ಅಸಹಾಯಕರಾಗಿದ್ದಾರೆಂದರೆ, ನಮ್ಮ ರಾಜ್ಯ ರಾಜಕಾರಣ ಎಷ್ಟು ದಿಕ್ಕೆಟ್ಟು ಹೋಗಿರಬಹುದು! ಇಂತಹ ಪರಿಸ್ಥಿತಿಯಲ್ಲಿ ಈ ರಾಜ್ಯ ರಾಜಕಾರಣಕ್ಕೆ ಒಂದು ದಿಕ್ಕು ತೋರಿಸಲು ತಮ್ಮ ಮಿತಿಗಳಲ್ಲೇ ಪ್ರಯತ್ನಿಸ ಹೊರಟಿರುವುದಾಗಿ ಹೇಳಿಕೊಂಡಿರುವ 'ಸರ್ವೋದಯ ಕರ್ನಾಟಕ'ದವರ ಸಾಹಸ, ರವಿಕೃಷ್ಣಾ ರೆಡ್ಡಿಯವರ ವೈಯುಕ್ತಿಕ ಧೈರ್ಯ ಮತ್ತು ಮಹಿಮಾ ಪಟೇಲರ 'ಸುವರ್ಣ ಯಗ'ದ ಬದ್ಧತೆ ಎಷ್ಟರ ಮಟ್ಟಿಗೆ ಕೆಲಸ ಮಾಡಬಹುದು ಎಂಬ ಸಂಶಯ ಎಲ್ಲರಿಗೂ ಇದ್ದೇ ಇದೆ. ಆದರೆ ಸದ್ಯದ ಸಂದರ್ಭದಲ್ಲಿ ಇಂತಹವರಿಗಲ್ಲದೆ, ಉರಿಯುವ ಮನೆಯಲ್ಲಿ ಗಳ ಹಿರಿಯಲೆಂಬಂತೆ ಚುನಾವಣೆ ಹೊತ್ತಿಗೆ ತಮ್ಮ ಹೊಸ ಪಕ್ಷಗಳ ಅಂಗಡಿ ತೆರೆದುಕೊಂಡು ಕೂತಿರುವ ಮಾಜಿ ರೌಡಿಗಳು ಮತ್ತು ಮಾಜಿ ಸಾಹಿತಿಗಳಿಗೆ ಶುಭಾಶಯ ಹೇಳಲಾದೀತೆ?

ಇಂತಹ ಆತಂಕದ, ಗೊಂದಲದ, ಅನಿರ್ದಿಷ್ಟತೆಯ, ಹತಾಶೆಯ ಸನ್ನಿವೇಶದಲ್ಲಿ ಯಾವುದೇ ಆದರ್ಶದ, ತತ್ವದ ಅಥವಾ ಒಳ್ಳೆಯತನದ ಮಾತುಗಳನ್ನಾಡಲು ಧೈರ್ಯ ಸಾಲದಾಗುತ್ತದೆ. ಇದನ್ನೇ ಗೆಳೆಯ ಕೆ.ಸತ್ಯನಾರಾಯಣ ನನ್ನ 'ನಮ್ಮ ಮೈಮರೆತಂತಿರುವ ಸೆಕ್ಯುಲರ್ ರಾಜಕಾರಣ' ಲೇಖನಕ್ಕೆ ಬರೆದಿರುವ ಪ್ರತಿಕ್ರಿಯೆಯಲ್ಲಿ ('ನುಡಿಕಟ್ಟು ಬದಲಾಗಬೇಕು': ವಿಕ್ರಾಂತ ಕರ್ನಾಟಕ: ಏಪ್ರಿಲ್, 18) ಪರೋಕ್ಷವಾಗಿ ಪ್ರಸ್ತಾಪಿಸಿರುವುದು ಎಂದು ನಾನು ಭಾವಿಸಿದ್ದೇನೆ. ನನ್ನ 'ವಾರದ ಒಳನೋಟ' ಅಂಕಣಗಳೆಲ್ಲ ಅಂತರ್ಜಾಲದಲ್ಲಿನ ನನ್ನ 'ನಾಗಸಂಪದ' ಬ್ಲಾಗ್‌ನಲ್ಲಿ ಪ್ರಕಟವಾಗುತ್ತಿರುವುದರಿಂದ, ನನ್ನ ಈ ಅಂಕಣಕ್ಕೆ ಇನ್ನೂ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಬಹಳಷ್ಟು 'ಬ್ಲಾಗ್' ಓದುಗರು 'ಟೈಮ್ ಪಾಸ್'ಗೆಂಬಂತೆ ಲೇಖನಗಳನ್ನು ಓದಿ ಲಘು ಸಂವಾದ - ಮನರಂಜನೆಗಳಿಗೆಂಬಂತೆ ಪ್ರತಿಕ್ರಿಯಿಸುವುದರಿಂದ ನಾನು ಅವುಗಳಿಗೆ ಮತ್ತೆ ಪ್ರತಿಕ್ರಿಯಿಸಲು ಹೋಗುವುದಿಲ್ಲ. ಆದರೆ ನನ್ನ ಲೇಖನಗಳನ್ನು 'ಬ್ಲಾಗ್'ಗೆ ಹಾಕಿ ಸಹಕರಿಸುತ್ತಿರುವ (ಆ ತಂತ್ರಜ್ಞಾನ ನನಗೆ ಗೊತ್ತಿಲ್ಲವಾದ್ದರಿಂದ) ಗೆಳೆಯ ಶ್ರೀನಿವಾಸ ಮೂರ್ತಿಯವರು ಇತ್ತೀಚೆಗೆ ನನ್ನ ಇದೇ ಲೇಖನದ ಬಗ್ಗೆ ಕೆ.ಎಸ್.ಸುಪ್ರೀತ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರ ಪ್ರತಿಕ್ರಿಯೆಯೊಂದನ್ನು, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಅಗತ್ಯ ಎಂಬರ್ಥದಲ್ಲಿ ನನಗೆ ರವಾನಿಸಿದ್ದಾರೆ. ಇವರು ನನ್ನ ಈ ಲೇಖನದಲ್ಲಿ ವ್ಯಕ್ತವಾಗಿರುವ ಆತಂಕಗಳ ಬಗ್ಗೆ ತಾತ್ವಿಕವಾಗಿ ಆಂತರಂಗಿಕ ಸಹಮತ ಹೊಂದಿರುವುದಾದರೂ, ಬಹಿರಂಗ ವಾತಾವರಣ ಅದಕ್ಕೆ ಪೂರಕವಾಗಿಲ್ಲದಿರುವುದರ ವಾಸ್ತವದ ಬಗ್ಗೆ ಬರೆದಿದ್ದಾರೆ. ತಾವು ಸಹ ಇಂತಹ ವಾತಾವರಣದ ಸಹಜ ಬಲಿಯಾಗಿದ್ದು, ಇದರಿಂದ ತಮ್ಮಂತಹವರು ಹೊರ ಬರಲು ಪೂರಕವಾಗುವಂತಹ ವಾತಾವರಣವನ್ನು ನಿರ್ಮಿಸಲು ಸೆಕ್ಯುಲರ್‌ವಾದಿಗಳು ಏಕೆ ಪ್ರಯತ್ನಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಹಾಗೇ, ಈ ವಿಷಯದಲ್ಲಿ ಮಾರ್ಗದರ್ಶಕವಾಗುವಂತಹ ಸಾಹಿತ್ಯವನ್ನೂ ಸೂಚಿಸಿ ಎಂದು ಸುಪ್ರೀತ್ ಕೇಳಿದ್ದಾರೆ.

ಮೊದಲಿಗೆ, ನಾನೇನೂ ಇಂದಿನ ಸೆಕ್ಯುಲರ್ವಾದಿಗಳ ವಕ್ತಾರನಲ್ಲ ಎಂದು ಸ್ಪಷ್ಟಪಡಿಸ ಬಯಸುವೆ. ಈ ಸೆಕ್ಯಲರ್‌ವಾದವೆಂಬುದೇ ಅನುಮಾನಾಸ್ಪದತೆಗೆ ಈಡಾಗಿರುವ ಇಂದಿನ ರಾಜಕೀಯ ಸನ್ನಿವೇಶದಲ್ಲ್ಲಿ ನಿಂತು, ಕೋಮುವಾದದ ವಿರುದ್ಧ ಮಾತನಾಡುವಾಗ ಅನೇಕ ತಪ್ಪು ಕಲ್ಪನೆಗಳುಂಟಾಗುವ ಸಂಭವವಿದೆ. ಏಕೆಂದರೆ, ಕೋಮುವಾದದ ವಿರುದ್ಧ ಏಕೈಕ ಅಸ್ತ್ರ ಸೆಕ್ಯುಲರ್‌ವಾದ ಎಂಬ ನಂಬಿಕೆಯನ್ನು ಸೃಷ್ಟಿಸಲಾಗಿದೆ. ಮೂಲತಃ ಭೌತವಾದಿ ರಾಜಕಾರಣದ ಪ್ರತಿಪಾದಕರಾದ ಕಟ್ಟಾ ಎಡಪಂಥೀಯರು ಸೃಷ್ಟಿಸಿರುವ ನಂಬಿಕೆಯಿದು. ಆದರೆ ಸೆಕ್ಯುಲರಿಸಂ ಎಂದರೇನೆಂದು ಈವರೆಗೆ ಈ ಯಾರೂ ಖಚಿತವಾಗಿ, ನಿರ್ದಿಷ್ಟವಾಗಿ ನಿರೂಪಿಸಿಲ್ಲ. ಅದಕ್ಕೆ ನಮ್ಮ ಯಾವುದೇ ಭಾರತೀಯ ಭಾಷೆಯಲ್ಲೂ ಸಮರ್ಪಕವಾದ ಸಮಾನ ಶಬ್ದವನ್ನು ಟಂಕಿಸಲಾಗಿಲ್ಲ. ಧರ್ಮ ನಿರಪೇಕ್ಷತೆ ಎಂಬ ಶಬ್ದದಿಂದ ಹಿಡಿದು ಇದಕ್ಕೆ ತದ್ವಿರುದ್ಧ ಅರ್ಥವಿರುವ ಸರ್ವಧರ್ಮ ಸಮಭಾವ ಎಂಬ ಶಬ್ದದವರೆಗೆ ಇದರರ್ಥವನ್ನು ಎಳೆದಾಡಲಾಗಿದೆ! ಇದಕ್ಕೆ ಕಾರಣ ಇದು ಆಧುನಿಕತೆಯ ಹಂಬಲದಲ್ಲಿ ನಮ್ಮ ಸಂವಿಧಾನ ನಿರ್ಮಾತೃಗಳು ಐರೋಪ್ಯ ರಾಜಕಾರಣದಿಂದ ಕಿತ್ತು ತಂದು ಇಲ್ಲಿ ನೆಡಲಾಗಿರುವ ಪರಿಕಲ್ಪನೆಯಾಗಿರುವುದೇ ಆಗಿದೆ.

ಸೆಕ್ಯುಲರಿಸಂ ಎಂಬುದು ಆಧುನಿಕ ಐರೋಪ್ಯ ಸಂದರ್ಭದಲ್ಲಿ, ಆಗ ಸರ್ವ ಪ್ರಧಾನವಾಗಿದ್ದ ಕ್ರಿಶ್ಚಿಯನ್ ಧರ್ಮದ ನಿಯಂತ್ರಣದಿಂದ ರಾಜಕಾರಣವನ್ನು ಬಿಡುಗಡೆಗೊಳಿಸಿಕೊಳ್ಳಲು ಅಲ್ಲಿನ ರಾಜ ತಂತ್ರಜ್ಞರು ರೂಪಿಸಿದ ಒಂದು ಪರಿಕಲ್ಪನೆ. ಆದರೆ ಬಹು ಬಗೆಯ ಧರ್ಮಗಳಿರುವ ಈ ರಾಷ್ಟ್ರದಲ್ಲಿ ಸೆಕ್ಯುಲರಿಸಂ ಎಂದರೆ ಒಂದೊಂದು ಧರ್ಮದ ನೆಲೆಯಿಂದ ಒಂದೊಂದು ಅರ್ಥ ಹೊರಡುವಂತಿದೆ. ಹಾಗೇ ಒಂದೊಂದು ರಾಜಕೀಯ ಪಕ್ಷವೂ ತನ್ನ ತಾತ್ವಿಕತೆಗೆ ತಕ್ಕಂತೆ ಇದನ್ನು ಅರ್ಥೈಸಬಹುದಾಗಿದೆ! ಹೀಗಾಗಿಯೇ, ಹಿಂದೂ ಕೋಮುವಾದಿಗಳು ಹಿಂದೂ ಧರ್ಮವೇ ಮೂಲತಃ ಸೆಕ್ಯುಲರ್ ಆಗಿರುವುದರಿಂದ ಇತರರು ಹೇಳುವ ಸೆಕ್ಯುಲರಿಸಂ 'ಹುಸಿ' ಸೆಕ್ಯುಲರಿಸಂ ಎಂದು ಪ್ರತಿಪಾದಿಸುತ್ತಾ ತನ್ನ ರಾಜಕಾರಣವನ್ನು ಯಶಸ್ವಿಯಾಗಿ ಮಾಡುತ್ತಿದ್ದರೆ, ಮುಸ್ಲಿಂ ಕೋಮುವಾದಿಗಳೂ ತಮ್ಮೆಲ್ಲ ಕಾರ್ಯಕ್ರಮಗಳನ್ನೂ ಸೆಕ್ಯುಲರಿಸಂನ ಹೆಸರು ಹೇಳಿಕೊಂಡೇ ಯಶಸ್ವಿಯಾಗಿ ನಡೆಸುತ್ತಿದ್ದಾರೆ! ಆದರೆ ಸೆಕ್ಯುಲರಿಸಂ ನಮ್ಮ ಸಮಾಜದಲ್ಲಿ ಯಾವುದೇ ಗೊಂದಲಗಳನ್ನುಂಟುಮಾಡದೆ, ಅರ್ಥಪೂರ್ಣವಾಗಿ ಬೇರೂರಲು ಸಾಧ್ಯವಾಗುತ್ತಿದ್ದುದು, ಎಲ್ಲ ಧರ್ಮಗಳಿಗೆ ಸಮಾನವಾದ ಸಾಮಾನ್ಯ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಮೂಲಕ - ಅಂದರೆ ರಾಷ್ಟ್ರವನ್ನು ಒಂದು ಸರ್ವ ಸಾಮಾನ್ಯ ನಾಗರಿಕ ಸಂಹಿತೆಯ ಸಮಾಜವನ್ನಾಗಿ ಪುನರ್ರೂಪಿಸುವ ಮೂಲಕ. ಆದರೆ ಈ ಜವಾಬ್ದಾರಿಯಿಂದ ನುಣಿಚಿಕೊಂಡು, ಸೆಕ್ಯುಲರಿಸಂನ ಆಧುನಿಕತೆ ಬೇಕು; ಅದು ಒತ್ತಾಯಿಸುವ ಸಾಮಾನ್ಯ ನಾಗರಿಕ ಸಂಹಿತೆ ಅನಿವಾರ್ಯವೇನೂ ಅಲ್ಲ ಎಂದು ನಂಬಿ ಹುಂಬತನದಿಂದ ಮುಂದುವರಿದ ನಮ್ಮ ಈವರೆಗಿನ ಸುಲಭ ಹಾಗೂ ವಿರೋಧಾಭಾಸದ ರಾಜಕಾರಣವೇ ಇಂದು ಬಹುಸಂಖ್ಯಾತ ಕೋಮುವಾದಿ ಮತ್ತು ಅಲ್ಪಸಂಖ್ಯಾತ ಕೋಮುವಾದಿ ರಾಜಕಾರಣಗಳೆರಡನ್ನೂ ಹುಟ್ಟು ಹಾಕಿದೆ. ಇದು, ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಸಮಾಜವನ್ನು ಸೆಕ್ಯುಲರೀಕರಣಗೊಳಿಸದೆ ಸರ್ಕಾರವನ್ನು ಮಾತ್ರ ಸೆಕ್ಯುಲರೀಕರಣಗೊಳಿಸ ಹೊರಟ ಸಮಯಸಾಧಕ ರಾಜಕಾರಣದ ಫಲವೇ ಆಗಿದೆ. ಇದರ ಲಾಭ ಸಹಜವಾಗಿಯೇ ಇತ್ತೀಚೆಗೆ - ಗಾಂಧೀಜಿ ಪ್ರಭಾವ ಕುಂದಿ, ನೆಹರೂ - ಇಂದಿರಾಗಾಂಧಿಯವರಂತಹ ಪ್ರಬಲ ರಾಜಕಾರಣಿಗಳ ಆಡಳಿತ ಕೊನೆಗೊಳ್ಳುತ್ತಿದ್ದಂತೆ - ಬಹುಸಂಖ್ಯಾತ ಕೋಮುವಾದಿ ರಾಜಕಾರಣಕ್ಕೇ ಹೆಚ್ಚು ದಕ್ಕಿದೆ.

ಈ ವೈರುಧ್ಯವನ್ನು ಈ ದೇಶದ ಎಡಪಂಥೀಯ ಬುದ್ಧಿಜೀವಿಗಳು ನೆಹರೂ ಪ್ರಣೀತ ಆಧುನಿಕ ರಾಜಕಾರಣದ ಮರುಳಿನಲ್ಲಿ ಇಷ್ಟು ವರ್ಷಗಳ ಕಾಲ ಗುರುತಿಸದೇ ಹೋದ ಕುರುಡಿನಿಂದಾಗಿ, ಬಹುಸಂಖ್ಯಾತ ಕೋಮುವಾದದ ಜೊತೆ ಜೊತೆಗೇ ಅಲ್ಪಸಂಖ್ಯಾತ ಕೋಮುವಾದವೂ ಬೆಳೆದು ನಿಂತಿರುವುದು ಕಾಣದೇ ಹೋಗಿದೆ! ಆದರೆ ಈಗ ಪರಿಸ್ಥಿತಿ ಕುತ್ತಿಗೆಗೆ ಬಂದಿರುವ - ಸಾಮಾನ್ಯ ಜನಕ್ಕೆ ಇದು ಸ್ಪಷ್ಟವಾಗಿ ಕಾಣತೊಡಗಿ ಈ ಬುದ್ಧಿಜೀವಿಗಳ ಬುದ್ಧಿಜೀವಿತ್ವವನ್ನೇ ಪ್ರಶ್ನಿಸಲಾರಂಭಿಸಿರುವ - ಸಂದರ್ಭದಲ್ಲಿ ನಮ್ಮ ಕೆಲವು ಬುದ್ಧಿಜೀವಿಗಳು ತಮ್ಮೆಲ್ಲಾ ಬುದ್ಧಿಜೀವಿತ್ವವನ್ನು ಬಳಸುತ್ತಾ, ಮೂಲಭೂತವಾದವೇ ಬೇರೆ ಕೋಮುವಾದವೇ ಬೇರೆ ಎಂಬ ಕೂದಲು ಸೀಳುವ ಬೌದ್ಧಿಕ ಆಟದಲ್ಲಿ ತೊಡಗಿ, ಅಲ್ಪಸಂಖ್ಯಾತರದ್ದು ಮೂಲಭೂತವಾದರೆ;ಬಹುಸಂಖ್ಯಾತರದು ಕೋಮುವಾದವಾಗಿದ್ದು, ಸದ್ಯಕ್ಕೆ ಈ ಕೋಮುವಾದವೇ ಹೆಚ್ಚು ಅಪಾಯಕಾರಿ ಎಂದು ವಾದಿಸುವ ಅಪ್ರಾಮಾಣಿಕ ಮತ್ತು ಅಪಾಯಕಾರಿ ರಾಜಕಾರಣಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ. ಆ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದನ್ನು ಅವರ ಮುಖಕ್ಕೆ - ರಾಜನ ಮೈಮೇಲೆ ಬಟ್ಟೆಯಿಲ್ಲ ಎಂದು ಹೇಳಬಲ್ಲ ಮಗುವಿನ ನಿರಾತಂಕ ಸ್ಪಷ್ಟತೆಯಲ್ಲ್ಲಿ - ಹೇಳುವ ಧೈರ್ಯ ತೋರದೇ ಹೋದಲ್ಲಿ ಈ ಬಹುಸಂಖ್ಯಾತರ ಹಾಗೂ ಅಲ್ಪಸಂಖ್ಯಾತರ ಕೋಮುವಾದಗಳ ನಡುವಣ ಜಗಳದಲ್ಲಿ ಮೊದಲಿನವರ ನಿರ್ಣಾಯಕ ವಿಜಯವನ್ನು - ಸ್ವಲ್ಪ ಕಾಲ ಇಂತಹ ಬೌದ್ಧಿಕ ಆಟಗಳ ಮೂಲಕ ಮುಂದೂಡಬಹುದಾದರೂ - ನಾವೇ ಕೈಯಾರೆ ಖಚಿತಪಡಿಸದಂತಾಗುತ್ತದಷ್ಟೆ. ಈ ಧೈರ್ಯ ಮತ್ತು ಸ್ಪಷ್ಟತೆಗಳಷ್ಟೇ ಸೆಕ್ಯುಲರಿಸಂಗೆ ಭಾರತೀಯ ಸಂದರ್ಭದಲ್ಲಿ ಹೊಸ ಅರ್ಥ ಕೊಡಬಲ್ಲವು ಮತ್ತು ಎಲ್ಲ ರೀತಿಯ ಕೋಮುವಾದಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಣಿಸಬಲ್ಲವು. ಇದು ನೇರವಾದ; ಹಾಗಾಗಿ ತುಸು ಕಷ್ಟದ - ಕೆಟ್ಟ ಆಪಾದನೆಗಳನ್ನು ಎದುರಿಸಬೇಕಾದ - ದಾರಿ. ಅದರೆ ಇದೊಂದೇ ಸದ್ಯಕ್ಕಿರುವ ದಾರಿ ಎಂದು ಗೆಳೆಯ ಸತ್ಯನಾರಾಯಣರಿಗೆ ಹೇಳಬಯಸುವೆ.

ಹಾಗೇ ಸುಪ್ರೀತ್ ಅವರಿಗೆ ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾರನ್ನು ಮುಕ್ತ ಮನಸ್ಸಿನಿಂದ ಓದಿ ಎಂದು ಸೂಚಿಸಬಯಸುವೆ. ರಾಷ್ಟ್ರ ವಿಭಜನೆ ಸೃಷ್ಟಿಸಿದ್ದ ಕೋಮು ದಳ್ಳುರಿಯ ಮಧ್ಯೆಯೂ, ಪಾಕಿಸ್ಥಾನಕ್ಕೆ ಕೊಡಬೇಕಾದ ನಿಧಿಯನ್ನು ಕೊಡುವಂತೆ ಸಾರ್ವಜನಿಕವಾಗಿ ಒತ್ತಾಯಿಸಿ ಹಿಂದೂ ಕೋಮುವಾದಿಯೊಬ್ಬನ ಗುಂಡಿಗೆ ಬಲಿಯಾದ ಸನಾತನ ಹಿಂದೂ ಎನ್ನಿಸಿಕೊಂಡಿದ್ದ ಗಾಂಧಿ; ತಾವು ರೂಪಿಸಿದ್ದ ಸಮಗ್ರ ಹಿಂದೂ ನಾಗರಿಕ ಸಂಹಿತೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಅವಕಾಶ ಕೊಡದ ಸರ್ಕಾರದ ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಹೊರಬಂದ ಆಧುನಿಕತಾವಾದಿ ಅಂಬೇಡ್ಕರ್ ಮತ್ತು ಸಾಮಾನ್ಯ ನಾಗರಿಕ ಸಂಹಿತೆಯ ಜಾರಿಯನ್ನು ತಮ್ಮ ಪಕ್ಷದ ಒಂದು ಚುನಾವಣಾ ವಿಷಯವನ್ನಾಗಿ ಮಾಡಿಕೊಂಡು ಪ್ರಚಾರ ಮಾಡಬಲ್ಲವರಾಗಿದ್ದ ರಾಜಕೀಯ ದುಸ್ಸಾಹಸಿ ಲೋಹಿಯಾ ಹೊಸ ರಾಷ್ಟ್ರಕ್ಕೆ ಹೊಸ ಧರ್ಮ ಸಂಹಿತೆಯೊಂದನ್ನು ರೂಪಿಸಿ ಸೆಕ್ಯುಲರಿಸಂಗೆ ಹೊಸ ಅರ್ಥ ಕೊಡಲೆತ್ನಿಸಿದವರು. ಇವರ ಜೊತೆಗೇ, ಈಚಿನ ಅಸ್ಘರಾಲಿ ಇಂಜಿನಿಯರರ ಪುಸ್ತಕ - ಲೇಖನಗಳನ್ನು ಓದಿದರೆ ಚೆನ್ನು. ಆಗ ಆರೋಗ್ಯಕರ ವರ್ತಮಾನವನ್ನು ಕಟ್ಟಲು ಚರಿತ್ರೆಯನ್ನು ಎಷ್ಟು ಎಚ್ಚರಿಕೆ ಮತ್ತು ವಿವೇಕಗಳಿಂದ ಅರ್ಥ ಮಾಡಿಕೊಂಡು ಬಳಸಿಕೊಳ್ಳಬೇಕಾಗುತ್ತದೆ ಎಂಬುದು ಗೊತ್ತಾಗುತ್ತದೆ.

ಅಂದ ಹಾಗೆ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಾಜಕೀಯ - ಸಾಮಾಜಿಕ - ಆರ್ಥಿಕ - ಸಾಂಸ್ಕತಿಕ ಅನಾಚಾರಗಳನ್ನೆಲ್ಲ ಎಳೆಯಾಗಿ ಬಿಡಿಸುತ್ತಾ ಖಂಡಿಸುತ್ತಾ ಏನೋ ಸಾಧಿಸಿದವರಂತೆ ಹೆಮ್ಮೆಯಿಂದ ಬೀಗುವ ನಮ್ಮ ಎಲ್ಲ ರಾಷ್ಟ್ರೀಯ ಸುದ್ದಿ ವಾಹಿನಿಗಳೂ ಈಗ ಪ್ರತಿದಿನ ಐಪಿಎಲ್ ಎಂಬ ಕ್ರಿಕೆಟ್ 'ಅತ್ಯಾಚಾರ'ದ ವಿವರಗಳನ್ನು ತಮ್ಮ ಪ್ರಥಮ ಆದ್ಯತೆಯ ಸುದ್ದಿಯಾಗಿ ಸಂಭ್ರಮದಿಂದ ಸವಿಯುತ್ತಾ ಬಿತ್ತರಿಸುತ್ತಿರುವುದರ ಮರ್ಮವಾದರೂ ಏನು?

ಈ ಕ್ರಿಕೆಟ್ ಅತ್ಯಾಚಾರದಿಂದಾಗಿ ಹುಟ್ಟುವ ಗಂಟಿನಲ್ಲಿ ಅವುಗಳಿಗೂ ಪಾಲಿರಬಹುದೇ?