ಕುವೆಂಪು ಜೊತೆ ಕಂಪ್ಯೂಟರೂ ಬೇಕು!

ಕುವೆಂಪು ಜೊತೆ ಕಂಪ್ಯೂಟರೂ ಬೇಕು!

ಬರಹ

ಹೈಸ್ಕೂಲ್ನಲ್ಲಿರಬೇಕು!

ಒಂದು ಕಣ್ಣು ಮುಚ್ಚಿಕೊಂಡು ನೋಡಬೇಕಾದ ಸೂಕ್ಷ್ಮದರ್ಶಕ ಯಂತ್ರದ ಎದುರು ನಾವೆಲ್ಲ ಸಾಲಾಗಿ ನಿಂತಿದ್ದೆವು. ಎಲ್ಲರಿಗೂ ಕುತೂಹಲ. ಯಂತ್ರದ ಕಿಂಡಿಯಲ್ಲಿ ಕಣ್ಣಿಟ್ಟು ನೋಡುತ್ತಿದ್ದವರ ಬೆರಗನ್ನು ಆಸೆಯಿಂದ ಗಮನಿಸುತ್ತ, ಮುಂದೆ ನಿಂತವ ಸರಿಯದ್ದಕ್ಕೆ ಅಸಹನೆ ಪಟ್ಟುಕೊಳ್ಳುತ್ತ ನಮ್ಮ ಸರದಿಗಾಗಿ ಚಡಪಡಿಸುತ್ತಿದ್ದೆವು. ಕೊನೆಗೂ ನಮ್ಮ ಪಾಳಿ ಬಂದು, ಸೂಕ್ಷ್ಮದರ್ಶಕದ ಕಣ್ಣೊಳಗೆ ಇಣುಕಿ ನೋಡಿದಾಗ, ಗಾಜಿನ ಪಟ್ಟಿಯ ಮೇಲಿದ್ದ ನೀರ ಹನಿಯಲ್ಲಿ ಬಾಲ ಬೀಸಿಕೊಂಡು ಈಜುತ್ತಿದ್ದ ಪ್ಯಾರಮೀಸಿಯಂ ಏಕಾಣು ಜೀವಿಗಳು ಕಂಡವು. ಅಲ್ಲೆಲ್ಲೋ, ಮೂಲೆಯಲ್ಲಿ ಆಕಾರವಿಲ್ಲದ ಅಮೀಬಾ!

ಆ ರೋಮಾಂಚನ ಹೇಗೆ ಬಣ್ಣಿಸುವುದು?

ಬರಿಗಣ್ಣೀಗೆ ಕಾಣದ ಸೂಕ್ಷ್ಮ ಜೀವಿಗಳ ವೈವಿಧ್ಯತೆ ಹಾಗೂ ಪ್ರಮಾಣ ದೊಡ್ಡದು ಎಂದು ಜೀವ ವಿಜ್ಞಾನ ಬೋಧಿಸುವ ಶಿಕ್ಷಕರು ಹೇಳಿದಾಗ ಬುರುಡೆ ಬಿಡುತ್ತಾರೆ ಎಂದೇ ಅಂದುಕೊಂಡಿದ್ದೆವು. ಚಿತ್ರವಿಚಿತ್ರ ಆಕಾರದ ಜೀವಿಗಳನ್ನು ಪಠ್ಯಪುಸ್ತಕದಲ್ಲಿ ನೋಡಿದಾಗ ಆಸಕ್ತಿ ಕೆರಳಿರಲಿಲ್ಲ. ಅವುಗಳನ್ನೇ ಯಥಾವತ್ತಾಗಿ ಬೋರ್ಡಿನ ಮೇಲೆ ಇಳಿಸಿ, ’ಇದು ಹೊರ ಪೊರೆ, ಇದು ಒಳ ಪೊರೆ, ಇದು ನ್ಯೂಕ್ಲಿಯಸ್, ಇದು ಸೈಟೋಪ್ಲಾಸಂ’ ಎಂದೆಲ್ಲ ನೀಡುತ್ತಿದ್ದ ವಿವರಣೆಗಳು ಬೇಸರ ತಂದಿದ್ದವು.

ಬಹುಶಃ ಶಿಕ್ಷಕರಿಗೂ ಇದು ಗೊತ್ತಾಯಿತು ಎಂದು ಕಾಣುತ್ತದೆ. ಮರುದಿನವೇ ಮೈಕ್ರೋಸ್ಕೋಪ್ ತರಿಸಿ, ನಮ್ಮೂರ ಅಳವಂಡಿಯ ಜಕ್ಕಂಬಾವಿಯ ಕೊಳೆ ನೀರನ್ನು ತಂದು, ಸ್ಲೈಡ್ ಮೇಲೆ ಒಂದು ಹನಿ ಸವರಿ, ಮೈಕ್ರೋಸ್ಕೋಪ್ ಅಡಿ ಇಟ್ಟು ನಮ್ಮನ್ನು ನೋಡಲು ಕರೆದರು.

ಕಂಡಿದ್ದು ಮಾತ್ರ ಅದ್ಭುತ ಲೋಕ

*****

ತಂತ್ರಜ್ಞಾನ ತರುವ ಸೊಗಸಿದು. ಕಣ್ಣಿಗೆ ಕಾಣುವುದೇ ಅಂತಿಮ ಎಂಬ ಭ್ರಮೆಯಲ್ಲಿ ಇರುವ ವ್ಯಕ್ತಿಗೆ, ಕಾಣದ ಜಗತ್ತನ್ನು ತೋರಿಸಿ ಅಚ್ಚರಿಪಡಿಸುವ ಸಾಮರ್ಥ್ಯ ತಂತ್ರಜ್ಞಾನ ಬಿಟ್ಟರೆ ಬಹುಶಃ ಅಧ್ಯಾತ್ಮಕ್ಕೆ ಮಾತ್ರ ಸಾಧ್ಯವೇನೋ. ಬೋರ್ಡ್, ಚಾಕ್ಪೀಸ್, ಇಕ್ಕಟ್ಟಾದ ತರಗತಿಯೊಳಗೇ ಒತ್ತೊತ್ತಾಗಿ ಕೂತು, ಶಿಕ್ಷಕರು ಹೇಳುವುದನ್ನೇ ನೋಟ್ಸ್ ಬರೆದುಕೊಳ್ಳುತ್ತ ಓದುವುದೇ ಕ್ರಮವಾಗಿದ್ದರೆ ಶಿಕ್ಷಣದಷ್ಟು ಬೇಸರದ ಸಂಗತಿ ಇನ್ನೊಂದಿಲ್ಲ.

ಈ ಕಾರಣಕ್ಕಾಗಿಯೇ ಸಾಮಾನ್ಯ ಸೂಕ್ಷ್ಮದರ್ಶಕದಂಥ ಯಂತ್ರವೂ ಕಲಿಕೆಯನ್ನು ಆಸಕ್ತಿಯ ವಿಷಯವಾಗಿಸುತ್ತದೆ. ಒಂದು ಸಾಮಾನ್ಯ ಗ್ಲೋಬ್ ಜಗತ್ತನ್ನು ಸುತ್ತಿಸುತ್ತದೆ. ಸೌರವ್ಹೂಹದ ಮಾದರಿ ಆಸಕ್ತಿಯನ್ನು ಅಂತರಿಕ್ಷದಾಚೆಗೆ ವಿಸ್ತರಿಸುತ್ತದೆ. ನಕಾಶೆಗಳು, ಗಣಿತದ ಚಿತ್ರವಿಚಿತ್ರ ಮಾದರಿಗಳು, ಪ್ರಯೋಗಾಲಯದಲ್ಲಿ ನೀರಲ್ಲಿಟ್ಟ ಬಿಳಿ ಗಂಧಕ ಗಾಳಿಯ ಸಂಪರ್ಕಕ್ಕೆ ಬಂದೊಡನೇ ಉರಿಯುವುದು, ಲಿಟ್ಮಸ್ ಹಾಳೆ ಬಣ್ಣ ಬದಲಿಸುವುದು, ಒಂದು ನಿರ್ದಿಷ್ಟ ಪ್ರಮಾಣಕ್ಕೆ ಪ್ರಣಾಳದಲ್ಲಿರುವ ದ್ರವ ಗುಲಾಬಿ ಬಣ್ಣಕ್ಕೆ ತಿರುಗುವುದು, ಹರಳುಗಳು ಬೆಳೆಯುವುದು, ಜೀವ ವಿಜ್ಞಾನ ವಿಭಾಗದಲ್ಲಿ, ಫಾರ್ಮಾಲ್ಡಿಹೈಡ್ ದ್ರಾವಣದಲ್ಲಿ ಮುಳುಗಿಸಿಟ್ಟ ಚಿತ್ರ ವಿಚಿತ್ರ ಜೀವಿಗಳು, ಅವುಗಳ ವಿಚಿತ್ರ ವೈಜ್ಞಾನಿಕ ಹೆಸರುಗಳು ಹೊಸ ಲೋಕವನ್ನೇ ತೆರೆದಿಡುತ್ತವೆ.

ಇನ್ನು, ಇಂಥ ಸಣ್ಣಪುಟ್ಟ ಚೋದ್ಯಗಳಿಗೆ ಕಂಪ್ಯೂಟರ್, ಜೈವಿಕ ತಂತ್ರಜ್ಞಾನ, ಆನಿಮೇಶನ್ನಂಥ ಇತ್ತೀಚಿನ ಮಹತ್ವದ ಸಂಶೋಧನೆಗಳ ಪ್ರವೇಶವಾದರೆ ಕಲಿಕೆ ಹೇಗಿರಬಹುದು?

ಊಹಿಸಿಕೊಂಡರೇ ರೋಮಾಂಚನವಾಗುತ್ತದೆ.

ನಿಜ. ಕಲಿಕೆ ಇವತ್ತು ಪೂರ್ತಿಯಾಗಿ ಬದಲಾಗುತ್ತಿದೆ. ಕೇವಲ ಹತ್ತು ವರ್ಷಗಳ ಹಿಂದೆ ಕಂಪ್ಯೂಟರ್ ಎಂದರೆ ಕಣ್ಕಣ್ಣು ಬಿಡುತ್ತಿದ್ದ ನಾವೆಲ್ಲ ಇವತ್ತು ಬದುಕಿಗೆ ಅದನ್ನೇ ಅವಲಂಬಿಸಿದ್ದೇವೆ. ಪತ್ರಿಕೋದ್ಯಮದಲ್ಲಿರುವ ನಮಗೆ ಸುದ್ದಿಗಳು ಬರುವುದು, ಹೋಗುವುದು, ಗುಲ್ಲೆಬ್ಬಿಸುವುದು, ಮೆಚ್ಚುಗೆ, ವಿರೋಧ, ಭಿನ್ನಾಭಿಪ್ರಾಯ, ಬೆಳವಣಿಗೆ ಹುಟ್ಟಿಸುವುದೇ ಕಂಪ್ಯೂಟರ್ನಿಂದ. ಲೇಖನ ಬರೆಯಲು ಬೇಕಾದ ಪೂರಕ ಸಾಮಾಗ್ರಿ ಹುಡುಕಿಕೊಂಡು ಪತ್ರಕರ್ತರ್ಯಾರೂ ಗ್ರಂಥಾಲಯಗಳಿಗೆ ಹೋಗುವುದಿಲ್ಲ. ಅಥವಾ, ಆ ಪರಿ ಬೆಳೆಯುತ್ತಿರುವ ವಿವಿಧ ಮಜಲುಗಳ ಸಾಮಾಗ್ರಿಗಳನ್ನೆಲ್ಲ ತಂದಿಡಲು ಗ್ರಂಥಾಲಯದಲ್ಲಿ ಜಾಗವೂ ಸಾಕಾಗುವುದಿಲ್ಲ.

ಹೀಗಾಗಿ, ಅಂತರ್ಜಾಲ (ಇಂಟರ್ನೆಟ್) ನಮ್ಮ ಅನಿವಾರ್ಯ ಅಂಗವಾಗಿದೆ. ಅತ್ಯುತ್ತಮ ಗೆಳೆಯನೂ ಆಗಿದೆ. ಅಲ್ಲಿ ಸಿಗದಿರುವ ವಿಷಯಗಳೇ ಇಲ್ಲ. ಏನೋ ಹುಡುಕಲು ಹೋಗಿ ಇನ್ಯಾವುದೇ ಸಂಗತಿ ಗೋಚರಿಸುತ್ತದೆ. ಅದರ ಹಿಂದೆ ಹೊರಟು ಇನ್ನೆಲ್ಲೋ ತಲುಪುತ್ತೇವೆ. ಕ್ಷಣಕ್ಷಣಕ್ಕೂ ಅಚ್ಚರಿಪಡುತ್ತ, ಕೈಗೆ ಸಿಕ್ಕ ವಿಷಯವನ್ನು ಕನ್ನಡಕ್ಕೆ ಆಕರ್ಷಕವಾಗಿ ಇಳಿಸುವುದು ಹೇಗೆಂದು ಯೋಚಿಸುತ್ತ, ಆ ದಿಕ್ಕಿನಲ್ಲಿ ಯತ್ನಿಸುತ್ತ, ನಾವೂ ಬೆಳೆಯುತ್ತಲೇ ಇದ್ದೇವೆ. ತಂತ್ರಜ್ಞಾನದ ಅಪಾರ ಸಾಧ್ಯತೆಗಳು ಓದು ಮುಗಿದ ನಂತರವೂ ನಮ್ಮನ್ನು ವಿದ್ಯಾರ್ಥಿಯಾಗಿಸಿವೆ. ಬರೆಯುವುದನ್ನೇ ಬದುಕಾಗಿಸಿಕೊಂಡ ನಮ್ಮನ್ನು ಓದಲು ಹಚ್ಚಿವೆ.

*****

ಕಲಿಕೆ ಇವತ್ತು ಹೈಟೆಕ್ ಆಗಿದೆ.

ಹಾಗೆ ಆಗಬೇಕಾಗಿರುವುದು ಅನಿವಾರ್ಯವೂ ಹೌದು. ಪೈಥಾಗೊರಸ್ನ ಪ್ರಮೇಯ ಕಲಿಯಲು ಗ್ರಾಫಿಕ್ಸ್ಗಳ ನೆರವು ದೊರೆತಿದೆ. ಸೌರವ್ಯೂಹ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಲು ಆನಿಮೇಶನ್ ಇದೆ. ನಿಮ್ಮ ಗುಂಡುಪಿನ್ನಿನ ಮೊನೆ ಹೆಬ್ಬರಳಿನಷ್ಟು ಅಗಲವಾಗಿ, ಅದರ ಮೇಲೆ ಕೂತ ಬ್ಯಾಕ್ಟೀರಿಯಾಗಳನ್ನು ನೋಡಬೇಕೆಂದರೆ ಎಲೆಕ್ಟ್ರಾನಿಕ್ ಸೂಕ್ಷ್ಮದರ್ಶಕ ಯಂತ್ರ ಇದೆ. ಮನುಷ್ಯ ಮಾತ್ರದವರು ಮುಳುಗಲು ಸಾಧ್ಯವಾಗದ ಸಾಗರ ತಳದ ಅಚ್ಚರಿಗಳನ್ನು ಹೆಕ್ಕಿ ತರಲು ರೋಬಾಟ್ಗಳು ಬಂದಿವೆ. ಕಲಿಕೆ ಈಗ ತರಗತಿಗಳ ನಾಲ್ಕು ಗೋಡೆ ದಾಟಿ ದಾಂಗುಡಿಯಿಟ್ಟಿದೆ.

ಹೀಗಾಗಿ, ಶಿಕ್ಷಣ ಕ್ಷೇತ್ರದ ಸಾಧ್ಯತೆಗಳು ಮೊದಲಿಗಿಂತ ವಿಸ್ತಾರವಾಗುತ್ತ ನಡೆದಿವೆ. ಹಿಂದಿನಂತೆ ಊರಲ್ಲಿಯ ಹೈಸ್ಕೂಲ್ನಲ್ಲಿ ಓದಿ, ಪಕ್ಕದ ದೊಡ್ಡ ಊರಲ್ಲಿ ಕಾಲೇಜ್, ನಗರದಲ್ಲಿ ಡಿಗ್ರಿ ಮುಗಿಸಿ ನಿರುದ್ಯೋಗಿಯಾಗಿ ಊರಿಗೆ ಮರಳುವ ಪ್ರಮೇಯ ಈಗಿಲ್ಲ. ಪಿಯುಸಿ ಎಂದರೆ ಆರ್ಟ್ಸ್, ಸೈನ್ಸ್, ಕಾಮರ್ಸ್ ಎಂಬ ಸಿದ್ಧ ಮಾದರಿಯ ಕಾಲ ಹೋಯಿತು. ಪಿಯುಸಿಗೆ ಸೇರುವಾಗಲೇ ಆದ್ಯತೆ ಸ್ಪಷ್ಟವಾಗಿರುತ್ತದೆ. ಮುಂದೆ ಎಂಜನಿಯರಿಂಗ್ ಹೋಗಬೇಕೆ? ಡಾಕ್ಟರ್ ಆಗಬೇಕೆ? ಪಶುವೈದ್ಯ ಕೋರ್ಸ್ ಹೇಗೆ? ಅಥವಾ ಸಾಫ್ಟ್ವೇರ್ ಎಂಜನಿಯರ್ ಆದರೆ ಹೇಗೆ? ಎಂಬೆಲ್ಲ ವಿಷಯಗಳನ್ನು ಗಮನಿಸಿಯೇ ಸೈನ್ಸ್ ತೆಗೆದುಕೊಳ್ಳುತ್ತಾರೆ. ಕಾಮರ್ಸ್ ಆದರೆ ಸಿ.ಎ. ಅಥವಾ ದೊಡ್ಡ ಕಂಪನಿಗಳಲ್ಲಿ ಅಕೌಂಟ್ಸ್ ಆಫೀಸರ್ ಆಗಲು ಬೇಕಾದ ವಿಷಯಗಳನ್ನೇ ಒತ್ತು ಕೊಟ್ಟು ಕಲಿಯಬೇಕು ಎಂಬ ಬೀಜ ಮೊಳಕೆಯೊಡೆದಿರುತ್ತದೆ. ಆರ್ಟ್ಸ್ ತೆಗೆದುಕೊಳ್ಳುವವರು ಎಲ್ಎಲ್ಬಿ, ಕೆಎಎಸ್ ಅಥವಾ ಐಎಎಸ್ ಕನಸು ಹೊತ್ತೇ ಅಡ್ಮಿಶನ್ ಪಡೆದಿರುತ್ತಾರೆ. ಕೊನೆಗೆ ಏನಿಲ್ಲವೆಂದರೂ, ಡಿ.ಇಡಿ., ಮುಂದೆ ಬಿ.ಇಡಿ. ಇದೆ ಎಂಬ ನಿರಾಳತೆ.

ಇಂಥ ಎಲ್ಲ ಬೆಳವಣಿಗೆಗಳ ಹಿಂದೆ ತಂತ್ರಜ್ಞಾನ ಸದ್ದಿಲ್ಲದೇ ಕೆಲಸ ಮಾಡುತ್ತಿದೆ. ನಿಮಗೆ ಒಂದು ವಿಷಯ ಹೇಳಿದರೆ ಅಚ್ಚರಿಯಾಗಬಹುದು. ಇವತ್ತು ಬೆಂಗಳೂರಿನ ಬಿಪಿಒ (ಹೊರಗುತ್ತಿಗೆ) ಕಂಪನಿಗಳಲ್ಲಿ ಕೆಲಸಕ್ಕಿರುವ ಶೇ.೭೦ರಿಂದ ೮೦ರಷ್ಟು ಉದ್ಯೋಗಿಗಳು ಎಂಜನಿಯರ್ಗಳೂ ಅಲ್ಲ, ವೈದ್ಯಕೀಯ ಓದಿದವರೂ ಅಲ್ಲ. ಅವರೆಲ್ಲ ಕೇವಲ ಬಿ.ಎ., ಬಿ.ಕಾಂ. ಓದಿದವರು. ಆದರೆ, ಬರೀ ಬಿ.ಎ. ಓದಿದರೆ ನೌಕರಿಯ ಮಾತಿರಲಿ, ಹಳ್ಳಿಯ ಬಸ್ಸ್ಟ್ಯಾಂಡ್ನ ಚಾದಂಗಡಿಯಲ್ಲಿ ಉದ್ರಿ ಕೂಡ ಹುಟ್ಟುವುದಿಲ್ಲ ಎಂಬ ಸತ್ಯದರ್ಶನ ಆಗಿರುವುದರಿಂದ, ಅವರೆಲ್ಲ ಕಂಪ್ಯೂಟರ್ ಕೋರ್ಸ್ ಮಾಡಿದರು. ನೌಕರಿ ಬೇಕೆಂದರೆ ಇಂಗ್ಲಿಷ್ ಗೊತ್ತಿರಬೇಕಿರುವುದು ಕಡ್ಡಾಯವಾಗಿದ್ದರಿಂದ ಮೂರು ತಿಂಗಳ ಸ್ಪೋಕನ್ ಇಂಗ್ಲಿಷ್ ತರಗತಿ ಮುಗಿಸಿ ಹೊರಬರುವ ಹೊತ್ತಿಗೆ ಆತ್ಮವಿಶ್ವಾಸ ಕುದುರಿತ್ತು. ಬಹುರಾಷ್ಟ್ರೀಯ ಬಿಪಿಒ ಕಂಪನಿಗಳು ಕೈಬೀಸಿ ಕರೆದವು. ಅವಕ್ಕೆ ಬೇಕಾದ ಕನಿಷ್ಠ ಅರ್ಹತೆಯನ್ನು ಗಳಿಸಿದ್ದರಾದ್ದರಿಂದ ನೌಕರಿಯೂ ಸಿಕ್ಕಿತು.

ಇಂಥದೇ ಮನಃಸ್ಥಿತಿ ಇತರ ಕೋರ್ಸ್ಗಳಲ್ಲಿಯೂ ಕಾಣಿಸಿಕೊಂಡಿದೆ. ತಂತ್ರಜ್ಞಾನ ಅಗಾಧವಾಗಿ ಬೆಳೆಯುತ್ತಿರುವುದರಿಂದ ಅದರ ಅಗತ್ಯ ಪೂರೈಸಲು ವಿಶೇಷ ತರಬೇತಿ ಹೊಂದಿದ ಮೆದುಳುಗಳ ಅವಶ್ಯಕತೆ ಇದೆ. ಈಗಂತೂ ಹೊಸ ಹೊಸ ರೋಗಗಳು ಬಂದಿವೆ. ಹಳೆಯ ಔಷಧಿ ಅವಕ್ಕೆ ನಾಟುವುದಿಲ್ಲ. ಅಲ್ಲೆಲ್ಲೋ ನಾಟಿ ಔಷಧಿಯೊಂದು ಕೆಲಸ ಮಾಡುತ್ತಿದೆ ಎಂಬ ಸುದ್ದಿ ಬರುತ್ತದೆ. ಅದರ ಮೇಲೆ ಸಂಶೋಧನೆ ಆಗಬೇಕು. ಅಲ್ಲಿಗೆ ಬಯೋಟೆಕ್ನಾಲಜಿಯ (ಜೈವಿಕ ತಂತ್ರಜ್ಞಾನ) ಪ್ರವೇಶವಾಗುತ್ತದೆ.

ತುಂಬ ಸೂಕ್ಷ್ಮ ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಮೆದುಳಿನ ಒಳಮೂಲೆಯ ಎಲ್ಲೋ ರಕ್ತ ಗಡ್ಡೆಕಟ್ಟಿದೆ. ತಲೆಬುರುಡೆ ಕೊರೆದು, ಹೆಪ್ಪುಗಟ್ಟಿದ ರಕ್ತ ಹೀರಬೇಕು. ಅದಕ್ಕೆ ವಿಶೇಷ ಉಪಕರಣಗಳೂ, ತಂತ್ರಜ್ಞಾನವೂ ಬೇಕು. ಅಲ್ಲಿ ನ್ಯಾನೋ ಟೆಕ್ನಾಲಜಿಯ (ಅತಿ ಸೂಕ್ಷ್ಮ ತಂತ್ರಜ್ಞಾನ) ಪ್ರವೇಶ ಅನಿವಾರ್ಯ.

ಹುಟ್ಟುವ ಹತ್ತು ಮಕ್ಕಳಲ್ಲಿ ಒಂದು ಮಗು ನರಸಂಬಂಧಿ ರೋಗಗಳಿಂದ ಬಳಲುತ್ತದೆ ಎಂಬುದು ಆಘಾತಕಾರಿಯಾದ ಅಂಶ. ಆಹಾರದಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ರಾಸಾಯನಿಕಗಳ ಬಳಕೆಯೂ ಇದಕ್ಕೆ ಕಾರಣವಾಗಿರಬಹುದು. ಗರ್ಭಧಾರಣೆಯಲ್ಲಿ ಉಂಟಾಗುವ ಕೋಶ ವಿಭಜನೆಯಲ್ಲಿ ಪುರುಷ ಹಾಗೂ ಸ್ತ್ರೀಯ ವಂಶವಾಹಿನಿಗಳಲ್ಲಿರುವ ಜೀನ್ಗಳು ಜೋಡಣೆಯಾಗುವಾಗ ಯಾವುದೋ ಒಂದು ಜೀನ್, ಯಾವ ಕಾರಣಕ್ಕೋ ಏನೋ, ತನ್ನ ಜಾಗದಿಂದ ನೆಗೆದು ಇನ್ನೆಲ್ಲೋ ಕೂತುಬಿಡುತ್ತದೆ. ಇದರಿಂದಾಗಿ ಹುಟ್ಟುವ ಮಗುವಿನಲ್ಲಿ ಬುದ್ಧಿಮಾಂದ್ಯವೋ, ಆಟಿಸಮ್ಮೋ ಕಾಣಿಸಿಕೊಳ್ಳುತ್ತದೆ. ಅಮೆರಿಕದಂತಹ ಮುಂದುವರೆದ ದೇಶಗಳಲ್ಲಿ ಈ ಸಮಸ್ಯೆ ಸಾಕಷ್ಟು ಬೆಳೆದಿದೆ. ಇದಕ್ಕೆಲ್ಲ ದೊಡ್ಡ ಪ್ರಮಾಣದ ಸಂಶೋಧನೆಗಳಾಗಬೇಕು. ಹೊಸ ಹೊಸ ಚಿಕಿತ್ಸಾ ಕ್ರಮಗಳು ಬರಬೇಕು. ಅವಕ್ಕೆಲ್ಲ ಹೊಸ ತಂತ್ರಜ್ಞಾನ ಬೇಕೇ ಬೇಕು.

ಹೀಗಾಗಿ ನಾವೆಲ್ಲ ಮತ್ತೆ ಹೊರಳುವುದು ಹಳ್ಳಿಯ ಮೂಲೆಗಳಲ್ಲಿರುವ ಇಕ್ಕಟ್ಟಾದ ತರಗತಿಗಳತ್ತಲೇ. ಅಲ್ಲಿರುವ ಉತ್ಸಾಹಿ, ಎಳೆ ಮನಸ್ಸುಗಳಿಗೆ ತಂತ್ರಜ್ಞಾನದ ನೆರವು ದೊರಕಿಸಬೇಕಿದೆ. ಕಲಿಕೆ ಆಕರ್ಷಕವಾಗಲು, ವೇಗವಾಗಲು, ಪರಿಣಾಮಕಾರಿಯಾಗಲು ಕುವೆಂಪು ಜೊತೆಗೆ ಕಂಪ್ಯೂಟರುಗಳೂ ಬೇಕು. ಅವನ್ನು ಬಳಸಲು ಗೊತ್ತಿರುವ, ಕಲಿಸಲು ಆಸಕ್ತರಾದ ಶಿಕ್ಷಕರೂ ಬೇಕು. ಹೈಸ್ಕೂಲ್ನಲ್ಲಿ ಮೈಕ್ರೋಸ್ಕೋಪ್ ಬಳಸಲು ಗೊತ್ತಿರುವ ವಿದ್ಯಾರ್ಥಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಮೈಕ್ರೋಸ್ಕೋಪ್ ಕಂಡಾಗ ಅಳುಕುವುದಿಲ್ಲ. ಹೈಸ್ಕೂಲ್ನಲ್ಲಿಯೇ ಕಂಪ್ಯೂಟರ್ ಬಳಸುವುದನ್ನು ಗೊತ್ತು ಮಾಡಿಕೊಂಡಿರುವ ವಿದ್ಯಾರ್ಥಿನಿ, ಸಾಫ್ಟ್ವೇರ್ ರೂಪಿಸುವಾಗ ಗೊಂದಲಗೊಳ್ಳುವುದಿಲ್ಲ. ತುಳಿದ ಹಾದಿ ಹಳೆಯದಾದಷ್ಟೂ ವೇಗವಾಗಿ ಹೊಸ ಹಾದಿ ನಮಗಾಗಿ ತೆರೆದುಕೊಳ್ಳುತ್ತ ಸಾಗುತ್ತದೆ.

ಆದರೆ, ಎಲ್ಲಿಯವರೆಗೆ ನಮ್ಮ ಶಿಕ್ಷಕರು ಪಠ್ಯಪುಸ್ತಕಗಳನ್ನಷ್ಟೇ ಬೋಧನೆಯ ಆಕರಗಳನ್ನಾಗಿ ಮಾಡಿಕೊಂಡಿರುತ್ತಾರೆಯೋ, ಅಲ್ಲಿಯವರೆಗೆ ಮಕ್ಕಳ ಮನಸ್ಸುಗಳಲ್ಲಿ ಅವರು ಕ್ರಿಯಾಶೀಲತೆ ತುಂಬಲಾರರು. ವಿಜ್ಞಾನದ ಶಿಕ್ಷಕನಿಗೆ ಕೊಂಚ ತಂತ್ರಜ್ಞಾನವೂ ಗೊತ್ತಿರಬೇಕು. ಕನ್ನಡ ಪಂಡಿತರಿಗೆ ಷೇಕ್ಸ್ಪಿಯರ್ ಗೊತ್ತಿದ್ದರೆ ಅನುಕೂಲವೇ ಅಲ್ಲವೆ? ಗಣಿತ ಮೇಷ್ಟ್ರರಿಗೆ ಕ್ಯಾಲ್ಕುಲೇಟರ್ ಬಳಸುವುದೂ ಗೊತ್ತಿಲ್ಲ ಎಂದರೆ ಹೇಗೆ? ನಮ್ಮ ದಿಗಂತಗಳು ವಿಸ್ತಾರವಾದರೆ ತಾನೆ ನಮ್ಮ ಮಕ್ಕಳು ಹೊಸ ದಿಗಂತ ಕಾಣುವುದು?

ತಂತ್ರಜ್ಞಾನ ಎಂಬುದೊಂದು ಓಡುವ ಕುದುರೆ. ನಾವೆಲ್ಲ ಅಶ್ವಾರೋಹಿಗಳು. ಸಣ್ಣ ವಯಸ್ಸಿನಲ್ಲಿಯೇ ಕುದುರೆಯನ್ನು ಕೊಂಚ ಮುಟ್ಟಿದರೆ, ಅದರ ಸಂಪರ್ಕ ಬಂದರೆ, ಬೆಳೆಯುತ್ತ ಹೋದಂತೆ ನಾವೇ ಅದನ್ನು ಪಳಗಿಸುತ್ತೇವೆ. ನಮಗೆ ಬೇಕೆನ್ನಿಸಿದ ಕಡೆ, ಬೇಕಾದ ಹಾಗೆ ಅದನ್ನು ಓಡಿಸುವುದು ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ಸವರಾಇ ಗೊತ್ತಿರದವರನ್ನು ದಾರಿಯಲ್ಲೇ ಕೆಡುವುವ ಕುದುರೆ ತನ್ನ ಪಾಡಿಗೆ ತಾನು ಓಡುತ್ತ ಹೋಗುತ್ತದೆ.

ಹಾಗಾಗಬಾರದಲ್ಲವೆ?

- ಚಾಮರಾಜ ಸವಡಿ