ಗುರಜಿ ಹಾಡು

ಗುರಜಿ ಹಾಡು

ಬರಹ

ನಾನು ಚಿಕ್ಕವನಿದ್ದಾಗಿನ ನೆನಪು....
ಮುಂಗಾರು ಮಳೆ ಬರುವದು ತಡವಾದರೆ ನಮ್ಮ ಕಡೆ ಗುರಜಿ ಆಡಿಸುವ ಸಂಪ್ರದಾಯ.
ಒಬ್ಬ ಹುಡುಗನನ್ನು ಅರೆಬೆತ್ತಲೆ ಮಾಡಿ (ಅವನೂ ಸಂತೊಷದಿಂದಲೇ ಒಪ್ಪುತ್ತಿದ್ದಾ) ತಲೆಯ ಮೇಲೆ ರೊಟ್ಟಿ ಬಡಿವ ಹಂಚು ಬೋರಲಾಕಿ ಅದರ ಮೇಲೆ ಸಗಣಿ ಗುಳ್ಳವ್ವ ಮಾಡಿ ಆ ಸಗಣಿ ಗುಳ್ಳವ್ವಕ್ಕೆ ಸಲ್ಪ ಹುಲ್ಲು ಸಿಗಿಸಿ ಮನೆ ಮೆನೆಗೆ ಹೋಗಿ ಗುರಜಿ ಹಾಡು ಹಾಡ್ತಾ ಇದ್ವಿ, ಆ ಮನೆಯವರು ಒಂದು ತಂಬಿಗೆ ನೀರನ್ನು ತಂದು ಗುರಜಿ ಮೇಲೆ ಸುರಿಯುತ್ತಿದ್ದರು ಆಗ ಗುರಜಿ ಆದ ಹುಡುಗ ಸಗಣಿ ಕೊಚ್ಚಿ ಹೋಗದಂತೆ ಗುಳ್ಳವ್ವನನ್ನು ಎರಡು ಕೈಯಿಂದ ಮುಚ್ಚಿಕೊಂಡು ತನ್ನ ಮೈ ಸುತ್ತಾ ಸುತ್ತುತ್ತಿದ್ದ ಆಗ ನಾವೆಲ್ಲಾ ಸಂಗಡಿಗರು ಕೆಳಗಿನಂತೆ ಹಾಡು ಹೇಳುತ್ತಿದ್ವಿ.

ಗುರಜಿ...ಗುರಜಿ.....
ಎಲ್ಲಾಡಿ ಬಂದೆ...
ಹಳ್ಳಾ ಕೊಳ್ಳಾ ತಿರುಗಾಡಿ ಬಂದೆ
ಉದ್ದತ್ತಿನ್ಯಾಗಾ ಉರುಳಾಡಿ ಬಂದೆ

ಮ್ಯಾದಾರವ್ವ ಏನ್ ಹಡದಾಳಾ
ಹೆಣ್ನ ಹಡದಾಳ
ಹೆಣ್ಣಿನ ತಲಿಗೆ ಎಣ್ಣಿಲ್ಲೋ ಬೆಣ್ಣಿಲ್ಲೋ

ಕುಂಬಾರಣ್ಣಾ ಮಣ್ಣಾ ತಂದಾನ
ಮಣ್ಣ ಕಲಸಾಕ ನೀರಿಲ್ಲೊ ನಾರಿಲ್ಲೊ

ಬಿತ್ತದ ಬಂತು ಬೆಳೆಯದು ಬಂತು
ಬೇಗನೆ ಬಾ ಮಳಿರಾಯಾ ಮಳಿರಾಯಾ

ಕಾರ ಮಳಿಯೆ ಕಪ್ಪತ್ತ ಮಳಿಯೆ
ಬೇಗನೆ ಬಾ ಸುರಿಮಳಿಯೆ ಸುರಿಮಳಿಯೆ

ಹೀಗೆ ಹಾಡಿದ ಮೇಲೆ ಮನೆಯವರು ಸಲ್ಪ ದವಸ ಕೊಡುತ್ತಿದ್ದರು, ಎಲ್ಲ ಮನೆಗಳಿಂದ ದವಸ ಸಂಗ್ರಹಿಸಿ ಊರ ಹೊರಗೆ ಬಾವಿಗೆ ಹೋಗಿ ಗುಳ್ಳವ್ವನನ್ನು ನೀರಿನಲ್ಲಿ ವಿಸರ್ಜಿಸಿ, ಅಲ್ಲೆ ಒಂದು ವಲೆ ಹೊಡಿ ದವಸವನ್ನೆಲ್ಲಾ ಒಂದು ಪಾತ್ರೆಯಲ್ಲಿ ಕುದುಸಿ ಗುಗ್ಗರಿ ಮಾಡಿ ಎಲ್ಲರಿಗೊ ಹಂಚಿ ತಿನ್ನುತ್ತಿದ್ದೆವು.