ಜಯನಗರದ ಬೀದಿಗಳು
ಜಯನಗರದ ಬೀದಿಗಳಲ್ಲಿ
ಈಗ,
ಹೀಗೇ ಸುಮ್ಮನೆ
ಅಂಡಲೆಯಲು ಸಾಧ್ಯವಿಲ್ಲ.
ಇಕ್ಕಟ್ಟು ರಸ್ತೆಗಳಲ್ಲಿ,
ಭಾನುವಾರದ ನಡಿಗೆಯ ನಡುವೆಯೂ,
ಅಕಸ್ಮಾತ್ತಾಗಿ,
ಪ್ರಜ್ನೆಗೆ
ಅನಾಥವಾಗಲು ಬಿಡುವಾಗುವುದಿಲ್ಲ.
ಬೆಂಬಿಡದೆ ಭಯೋತ್ಪಾದಿಸುವ,
ಬಿಲ್ ಬೋರ್ಡಿನ ಹೊಸ ಸೆಲ್-ಫ಼ೋನು,
ತಿರುವಿನಲ್ಲಿ ತೆರೆದ ಹೊಸ
ಚಿನ್ನದಂಗಡಿ,
(ಮಧ್ಯೆ ಸರಕ್ಕನೆ ಬಂದು
ಎರಡು ಪಲ್ಟಿ ಹೊಡೆದು ಕೈಯೊಡ್ಡುವ
ಗಿಡ್ಡ ದೊಂಬರಾಟದ ಹುಡುಗಿ),
ಇರದ ಹಸಿವನು ಇಂಗಿಸುತ್ತ
ಕಾಲ ದೂಡುವ ಸಮೂಹಗಳು,
ಮತ್ತೆ, ನಡುನಡುವೆ,
ಸೆಕ್ಸಿ-ಗುರುವಿನ ಗುರುಕುಲದ ಜಬರ್ದಸ್ತು ಪೋಸ್ಟರು.
ಇಲ್ಲ, ಇಲ್ಲಿ ಸಾಧ್ಯವಿಲ್ಲ,
ದು:ಖ ಪಡಲು,
ಪಡುವ ದು:ಖದ ಕಹಿಯ
ಸಿಹಿ ಅಮಲಿನಲ್ಲಿ ತೇಲಲು,
ಹಠಾತ್ ವಿಷಾದ ಯೋಗ ಸ್ವೀಕರಿಸಲು.
(ಕೆರೆವ ಕಾಲಿನ ಪುಟ್ಟ ಗಾಯವ
ತುರಿಸಿ ಸುಖಪಡಲೂ).
ರಸ್ತೆಗಳೆಲ್ಲ ಇಕ್ಕಟ್ಟು. ಎಲ್ಲ
ರಸ್ತೆಗಳೂ ಒಂದೇ ಹದ.
ಇಲ್ಲ, ಇಲ್ಲಿ ಸಾಧ್ಯವಿಲ್ಲ,
ಎಲ್ಲೂ ನಿಂತು
ಒಂದರೆಘಳಿಗೆ
ಮರೆತು -
ಕಾರುಗಳ ಹಾರನ್ನು,
ಬೈಕುಗಳ ರೇಸು,
ಬಸ್ಸುಗಳ ಭಯ,
ಹೆಂಡತಿಯ ಕೋರಿಕೆ,
ನಿನ್ನೆ ಓದಿದ ಆಧ್ಯಾತ್ಮದ ಅರ್ಥ,
ಬರೆಯಲು ಹೊರಗೆ ಬಾರದೆ
ಕಾಡುತಿರುವ ಕಮ್ಮರದೇಗು ಕವನ,
ಕೊಳ್ಳಲೇ ಬೇಕಿಲ್ಲದ ಹೊಸ ಕಾರು,
ಗುದ್ದಲಿ, ಸನಿಕೆ, ಗಡಾರಿ ಹಾರೆಗಳ
ಹೊತ್ತು ಮಾರ್ಚ್ ಪಾಸ್ಟ್ ಮಾಡುತ್ತ ಹಾಯ್ದುಹೋಗುವ
ಮನುಷ್ಯರ ಗುಂಗುಂಗಾನ-
ಎಲ್ಲವನು,
ಒಂದೊಳದಾರಿಯ ಹೆಸರಿಲ್ಲದ
ಗಲ್ಲಿಯ ಅನಾಮಧೇಯತ್ವಕ್ಕೆ
ಶರಣಾಗಲು.
-- ರವಿಶಂಕರ
ಫ಼ೆಬ್ ೦೮