ಬೀಸಣಿಗೆಯ ನೆಪದಲ್ಲಿ ...

ಬೀಸಣಿಗೆಯ ನೆಪದಲ್ಲಿ ...

ಮೊನ್ನೆ ಒಂದು ದಿನ ವಿಪರೀತ ಸೆಖೆ ಇಲ್ಲಿ. ಬೇಸಿಗೆ ಶುರುವಾಗಿದೆ. ಪ್ರತಿ ದಿನ 10 - 12 ಡಿಗ್ರಿ ಇದ್ದ ವಾತಾವರಣ ... ಈಗ ಕೆಲವೊಮ್ಮೆ 20 ಡಿಗ್ರಿ ಆದಾಗಲೂ ಸೆಖೆ ತಡೆಯಲಾಗುವುದಿಲ್ಲ. ಅಮ್ಮ ಕೊಟ್ಟ ಲಾವಂಚದ ಬೀಸಣಿಗೆಯಿಂದ ಗಾಳಿ ಹಾಕುತ್ತಾ ಕುಳಿತವಳಿಗೆ ಜತಿನ್ ದಾಸ್ ರ ನೆನಪಾಯಿತು .
ಕಳೆದ 20 ವರ್ಷಗಳಿಂದ ವಿವಿಧ ಶೈಲಿಯ , ವಿವಿಧ ಪ್ರಾಂತ್ಯಗಳ ಬೀಸಣಿಗೆಗಳನ್ನು ಸಂಗ್ರಹ ಮಾಡುತ್ತಿರುವ ಜತಿನ್ ದಾಸ್ ಪ್ರಖ್ಯಾತ ಚಿತ್ರಕಾರರು.

ಒರಿಸ್ಸಾದ ಮಯೂರ್‍ಭಂಜ್ ನಲ್ಲಿ , 1941 ರಲ್ಲಿ ಜನಿಸಿದ ಜತಿನ್ ದಾಸ್ , ಮುಂಬಯಿನ ಜೆ ಜೆ ಸ್ಕೂಲ್ ಆಫ್ ಆರ್ಟ್ಸ್ ನ ವಿದ್ಯಾರ್ಥಿ. ಕಳೆದ 45 ವರ್ಷಗಳಿಂದ ಕುಂಚ ಹಿಡಿದು ತಮ್ಮ ಕಲ್ಪನೆಯ ಕಣ್ಣನ್ನು ವಿಸ್ತರಿಸುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಅನೇಕ ಏಕವ್ಯಕ್ತಿ ಪ್ರದರ್ಶನ ಗಳನ್ನು ನೀಡಿರುವ ದಾಸ್ , ವಾಟರ್ ಕಲರ್, ತೈಲಚಿತ್ರ, ಮೂರ್ತಿ ಶಿಲ್ಪ, ಗ್ರಾಫಿಕ್ಸ್ ಶೈಲಿಗಳಿಗೆ ಹೆಸರು ಪಡೆದವರು.

ಸಾಮಾಜಿಕ ಕಳಕಳಿ , ಚಿಂತನೆ ಮತ್ತು ಮಾನವೀಯ ದೃಷ್ಟಿಕೋನವುಳ್ಳ ದಾಸ್ ಅವರು ಕವಿಯೂ ಹೌದು. ಸಾಂಸ್ಕೃತಿಕ ಮಹತ್ವವುಳ್ಳ ವಸ್ತುಗಳ ಸಂಗ್ರಹ ಅವರ ಮೆಚ್ಚಿನ ಹವ್ಯಾಸ. ಇದಕ್ಕಾಗಿಯೇ ದೇಶದ ಮೂಲೆ ಮೂಲೆಗೆ ಹೋಗಿ ವಸ್ತು ಸಂಗ್ರಹಣೆ ಮಾಡುತ್ತಾರೆ. ಒರಿಸ್ಸಾದ ಭುವನೇಶ್ವರದಲ್ಲಿ ಜೆ ಡಿ ಸೆಂಟರ್ ಆಫ್ ಆರ್ಟ್ ಎನ್ನುವ ಮ್ಯೂಸಿಯಂ ಸ್ಥಾಪಿಸಿದ್ದಾರೆ. ದಾಸ್ ಅವರ ಸಂಗ್ರಹದ ಪ್ರದರ್ಶನ ಅಲ್ಲಿದೆ.
20 ವರ್ಷಗಳಿಂದ ಬೀಸಣಿಗೆಗಳನ್ನು ಸಂಗ್ರಹಿಸುತ್ತಿರುವ ದಾಸ್ ಅವರ ಸಂಗ್ರಹದಲ್ಲಿರುವ ಬೀಸಣಿಗೆಗಳ ಸಂಖ್ಯೆ 2000 ದಾಟಿದೆ. ಬೆತ್ತ, ಹುಲ್ಲು, ರೇಷ್ಮೆ, ಭತ್ತದ ಹುಲ್ಲು, ಹಕ್ಕಿಗರಿ, ಕನ್ನಡಿ ಚೂರುಗಳು, ಮಣಿಗಳು - ಹೀಗೆ ವಿಶಿಷ್ಟ ವಸ್ತುಗಳಿಂದ ತಯಾರಾಗಿರುವ ಬೀಸಣಿಗೆಗಳು ದಾಸ್ ಅವರ ಸಂಗ್ರಹದಲ್ಲಿವೆ. ಇವುಗಳಲ್ಲಿ ಕೆಲವನ್ನು ದಾಸ್ ಅವರ ಮಿತ್ರರು ಕೊಡುಗೆಯಾಗಿ ನೀಡಿದ್ದರೆ, ಉಳಿದವು , ದಾಸ್ ಅವರು ಭಾರತದ ಉದ್ದಗಲಕ್ಕೂ ಹಳ್ಳಿಗಳಲ್ಲಿ ಸಂಚರಿಸಿ ,ಮನೆ ಮನೆಗೆ ಹೋಗಿ ಸಂಗ್ರಹಿಸಿದವು.

ಬೀಸಣಿಗೆಗಳ ಬಗ್ಗೆ ಪುಸ್ತಕವನ್ನೂ ಬರೆಯುತ್ತಿದ್ದಾರೆ ಜತಿನ್ ದಾಸ್ . ಅದರ ಹೆಸರು -‘ to stir the still air ’ .
[ www.indianhandfans.org ದಲ್ಲಿ ಜತಿನ್ ದಾಸ್ ಅವರ ಬೀಸಣಿಗೆಗಳ ವಿವರ ಇದೆ. www.jatindas.com -ದಾಸ್ ಅವರ ವೆಬ್‍ಸೈಟ್. ]

- ಹೇಮಶ್ರೀ
www.smilingcolours.blogspot.com

Rating
No votes yet

Comments