ಅಂತಿಮ ಸಂಸ್ಕಾರ:ಹೊಸ ವಿಧಾನ

ಅಂತಿಮ ಸಂಸ್ಕಾರ:ಹೊಸ ವಿಧಾನ

ಬರಹ

(ಇ-ಲೋಕ-74)(12/5/2008 )
ಮಾನವ ದೇಹದ ಅಂತಿಮ ಸಂಸ್ಕಾರಕ್ಕೆ ದಹನ ಅಥವಾ ದಫನ ವಿಧಾನಗಳನ್ನು ಬಳಸುವುದು ಗೊತ್ತೇ ಇದೆ.ಸತ್ತ ನಂತರ ನಮಗೆ ಬೇಕಾದ್ದು ಆರಡಿ-ಮೂರಡಿ ಚೌಕದ ಜಾಗ ಅನ್ನುವುದು ಇದಕ್ಕೇ ಇರಬೇಕು.ಈಗ ನಮ್ಮ ಅಂತಿಮ ಸಂಸ್ಕಾರಕ್ಕೆ ಪರಿಸರಪ್ರಿಯ ಪದ್ಧತಿ ಲಭ್ಯ.ಈ ಪದ್ಧತಿಯಲ್ಲಿ ದೇಹವನ್ನು ಉರಿಸಲು ಕಟ್ಟಿಗೆ ಅಥವಾ ವಿದ್ಯುತ್ ಯಾವುದೂ ಬೇಡ.ದೇಹವನ್ನು ಹೂಳಲು ಸ್ಥಳಾವಕಾಶವೂ ಬೇಡ.ಪ್ರೆಷರ್ ಕುಕರ್‌ನಲ್ಲಿ ಬೇಯಿಸಿದಂತೆ ದೇಹವನ್ನು ಅತಿ ಒತ್ತಡ ಮತ್ತು ಅತ್ಯಧಿಕ ಶಾಖದಲ್ಲಿ ಕಾಸ್ಟಿಕ್ ಸೋಡಾದ ಜತೆ ಬೇಯಿಸಿದರೆ ಮುಗಿಯಿತು.ಕಳೇಬರ ಹೋಗಿ ದ್ರಾವಣ ಲಭ್ಯವಾಗುತ್ತದೆ.ಅಮೋನಿಯಾ ಘಾಟಿನ,ಸಿರಪ್ ಅಂತೆ ಕಾಣಿಸುವ ದ್ರವ ರೂಪಕ್ಕೆ ಶರೀರ ಇಳಿಯುತ್ತದೆ.ಜತೆಗೆ ಅಸ್ಥಿಯ ತುಂಡುಗಳೂ ಉಳಿಯುತ್ತವೆ ಅನ್ನಿ.ಘನ ಪದಾರ್ಥಗಳನ್ನು ಸೋಸಿ ತೆಗೆದು,ದ್ರಾವಣವನ್ನು ಒಳಚರಂಡಿಗೂ ಹರಿಯ ಬಿಡಲು ಅಡ್ಡಿ ಇಲ್ಲ ಎಂದು ಈ ವಿಧಾನವನ್ನು ಅಭಿವೃದ್ಧಿ ಪಡಿಸಿರುವ ಬಯೋಸೇಫ್ ಇಂಜಿನಿಯರಿಂಗ್ ಕಂಪೆನಿಯ ವಕ್ತಾರ ಹೇಳುತ್ತಾರೆ.ಅಮೆರಿಕಾದ ಕೆಲವು ರಾಜ್ಯಗಳಲ್ಲಿ ಈ ವಿಧಾನದಿಂದ ಮೃತರ ಶರೀರಕ್ಕೆ ಅಂತಿಮ ಸಂಸ್ಕಾರ ಮಾಡುವುದಕ್ಕೆ ಅನುಮತಿಯಿದೆಯಂತೆ.ಕ್ಷಾರ ಪದಾರ್ಥ ಬಳಸುವ ಈ ವಿಧಾನಕ್ಕೆ ಅಲ್ಕಲೈನ್ ಹೈಡ್ರ್‍ಆಲಿಸಿಸ್ ಎಂದು ಹೆಸರಿಸಲಾಗಿದೆ.ಆದರೆ ಮಾನವ ಕಳೇಬರವನ್ನು ದ್ರಾವಕವಾಗಿಸಿ,ಒಳಚರಂಡಿಯ ಮೂಲಕ ನಿವಾರಿಸಿಬಿಡುವ ವಿಧಾನ ಮೃತನಿಗೆ ಅಗೌರವ ತೋರಿಸಿದಂತಾಗುತ್ತದೆ ಎಂದು ವಾದಿಸುವ ಜನರೂ ಇದ್ದಾರೆ.ಉಕ್ಕಿನ ಸಿಲಿಂಡರುಗಳಲ್ಲಿ ದೇಹವನ್ನಿರಿಸಿ,ಅಲ್ಕಲೈನ್ ಹೈಡ್ರಾಲಿಸಿಸ್ ಮಾಡುವ ವಿಧಾನ ದುಬಾರಿಯಾಗಲಿದೆ.ಯಾಕೆಂದರೆ ಇಂತಹ ಚಿತಾಗಾರಗಳು ಸ್ಥಾಪಿಸಲು ದುಬಾರಿಯಾಗುತ್ತವೆ.ಆದರೆ ಚಿತಾಗಾರದಲ್ಲಿ ಹೆಣ ಸುಡಲು ಸದ್ಯ ವಿಧಿಸುವ ದರವನ್ನಷ್ಟೇ ವಿಧಿಸಲಾಗುತ್ತದೆಯಂತೆ.ಈಗಾಗಲೇ ಮಯೋ ಕ್ಲಿನಿಕ್ ಮತ್ತು ಫ್ಲೊರಿಡಾ ವಿಶ್ವವಿದ್ಯಾಲಯಗಳಲ್ಲಿ ಈ ವಿಧಾನ ಬಳಸಿ ಅಂಗಾಂಗ ಕಳೇಬರಗಳಿಂದ ಮುಕ್ತಿ ಕಾಣಲಾಗುತ್ತಿದೆ.
ಚಂದಮಾಮನನ್ನು ಅಂತರ್ಜಾಲದಲ್ಲಿ ನೋಡಿ
    ಚಂದಮಾಮ ಪತ್ರಿಕೆಯನ್ನು ಓದದೆ ಬೆಳೆದು ದೊಡ್ದವರಾದವರು ಭಾರತದಲ್ಲಿ ಹುಡುಕಿದರೂ ಸಿಗುವುದು ಕಷ್ಟ.ಅರುವತ್ತು ತುಂಬಿದ ಪತ್ರಿಕೆಯ ವಜ್ರಮಹೋತ್ಸವದಲ್ಲಿ ಅಮಿತಾಭ್ ಬಚ್ಚನ್ ಇದ್ದರು.ತಮ್ಮ ಮೊಮ್ಮಗನಿಗೂ ಚಂದಮಾಮ ಕೊಡಿಸಲಿದ್ದೇನೆಂದು ಅವರು ಈ ಸಂದರ್ಭದಲ್ಲಿ ಹೇಳಿಯೂ ಇದ್ದರು.ಅರುವತ್ತರ ಸಂಭ್ರಮದಲ್ಲಿರುವ ಪತ್ರಿಕೆಯ ಅಂತರ್ಜಾಲ ತಾಣ http://www.chandamama.com ಆದರೆ,ಅದರ ಹಳೆಯ ಸಂಚಿಕೆಗಳು http://www.chandamama.com/content/story_archive_pdf/archive.phpದಲ್ಲಿ ಲಭ್ಯ.
ಭಾರತೀಯ ವಿದ್ಯಾಲಯಗಳು ಉಪಗ್ರಹ ತಯಾರಿಸಲಿವೆ
    ಇತ್ತೀಚೆಗೆ ಇಸ್ರೋ ಹತ್ತು ಉಪಗ್ರಹಗಳನ್ನು ಸುರಕ್ಷಿತವಾಗಿ ಕಕ್ಷೆಗೆ ಸೇರಿಸಿ ಹೊಸ ದಾಖಲೆ ನಿರ್ಮಿಸಿದ್ದು ಈಗ ಹಳೆಸುದ್ದಿ.ಇವುಗಳ ಪೈಕಿ ಎರಡು ಉಪಗ್ರಹಗಳು ಮಾತ್ರಾ ಇಸ್ರೋದ್ದು.ಉಳಿದ ಎಂಟು ಉಪಗ್ರಹಗಳನ್ನು ವಿದೇಶೀ ವಿಶ್ವವಿದ್ಯಾಲಯಗಳು ತಯಾರಿಸಿದ್ದುವು.ಅವುಗಳ ತೂಕ ಮೂರು ಕೆಜಿಯಿಂದ ಹದಿನಾರು ಕೆಜಿಯ ಒಳಗೇ ಇದ್ದುವು.ಕೆನಡಾ,ಜರ್ಮನಿ,ಜಪಾನ್,ನೆದರ್ಲೆಂಡ್ ಮತ್ತು ಡೆನ್ಮಾರ್ಕಿನ ವಿಶ್ವವಿದ್ಯಾಲಯಗಳಲ್ಲಿ ಅವನ್ನು ತಯಾರಿಸಲಾಗಿತ್ತು.ಘನಾಕಾರದ ಈ ಉಪಗ್ರಹಗಳನ್ನು ಕ್ಯೂಬ್‍ಸ್ಯಾಟ್ ಎನ್ನುವ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ.ಉಪಗ್ರಹಗಳನ್ನು ನಿರ್ಮಿಸಿದಾಗ ವಿದ್ಯಾರ್ಥಿಗಳಿಗೆ ಕ್ಲಿಷ್ಟ ವ್ಯವಸ್ಥೆಗಳನ್ನು ನಿರ್ವಹಿಸುವುದರ ಬಗ್ಗೆ ಸ್ಪಷ್ಟವಾದ ಕಲ್ಪನೆ ಬರುತ್ತದೆ.ಈಗಾಗಲೇ ಇಂತಹ ತಂತ್ರಜ್ಞಾನ ಬಳಸಿದ ನಲುವತ್ತಕ್ಕೂ ಹೆಚ್ಚು ಉಪಗ್ರಹಗಳನ್ನು ನಿರ್ಮಿಸಲಾಗಿದ್ದು,ಅವುಗಳ ಪೈಕಿ ಹತ್ತು ಹನ್ನೆರಡು ಉಪಗ್ರಹಗಳಿನ್ನೂ ಕಕ್ಷೆಯಲ್ಲಿರಬಹುದು ಎಂದು ಅಂದಾಜಿಸಲಾಗಿದೆ.ಭಾರತದ ವಿಶ್ವವಿದ್ಯಾಲಯಗಳೂ ಉಪಗ್ರಹ ನಿರ್ಮಿಸುವ ಪ್ರಯತ್ನದಲ್ಲಿವೆ.ಅಣ್ಣಾ ವಿಶ್ವವಿದ್ಯಾಲಯವು ಇಸ್ರೋ ಜತೆ ಸೇರಿ ಅಣುಸ್ಯಾಟ್ ಎನ್ನುವ ಮೂವತ್ತೈದು ಕೆಜಿ ತೂಕದ ಉಪಗ್ರಹ ನಿರ್ಮಿಸಿದೆ.ಬಾಂಬೆ ಐಐಟಿಯು ಹತ್ತು ಕೆಜಿ ತೂಕದ ಉಪಗ್ರಹ ನಿರ್ಮಿಸುತ್ತಿರುವ ಸುದ್ದಿ ಬಂದಿದೆ.ನಲುವತ್ತು ವಿದ್ಯಾರ್ಥಿಗಳು ಇಪ್ಪತ್ತು ಶಿಕ್ಷಕರ ಜತೆ ಸೇರಿ ಈ ಸಾಹಸಕ್ಕಿಳಿದಿದ್ದಾರೆ.ಐಐಟಿ ಕಾನ್‍ಪುರವು ಸಂವೇದಕಗಳನ್ನು,ಯಾಂತ್ರಿಕ ಬಿಡಿ ಭಾಗಗಳನ್ನು ಐಸಿ ತಯಾರಿಸುವ ವಿಧಾನದ ಮೂಲಕವೇ ಕಿರುಗಾತ್ರದಲ್ಲಿ ತಯಾರಿಸುವ ಮೆಮ್ಸ್ ತಂತ್ರಜ್ಞಾನದಲ್ಲಿ ತನಗಿರುವ ಪ್ರಾವಿಣ್ಯವನ್ನು ಬಳಸಿ,ಉಪಗ್ರಹ ತಯಾರಿಸುವ ಯೋಜನೆ ಹಾಕಿಕೊಂಡಿದೆ.ಸಂಸ್ಥೆಯ ಸುವರ್ಣ ಮಹೋತ್ಸವದ ಮುನ್ನ ಐಐಟಿ-ಮೆಮ್‍ಸ್ಯಾಟ್ ತಯಾರಾಗಲಿದೆ ಎನ್ನುವುದು ಈಗಿನ ಲೆಕ್ಕಾಚಾರ.
ಹಾರ್ಡ್ ಡಿಸ್ಕ್ ಸುಟ್ಟರೂ,ಮಾಹಿತಿ ಮರುಗಳಿಕೆ
    ಕಂಪ್ಯೂಟರ್ ಹಾರ್ಡ್‌ಡಿಸ್ಕ್ ಕೆಟ್ಟರೆ,ಅದರಲ್ಲಿದ್ದ ಮಾಹಿತಿ ನಾಶವಾಯಿತೆಂದು ಕೊರಗುತ್ತೇವೆ.ಆದರೆ ಅಪಘಾತಕ್ಕೀಡಾಗಿ ನಾಶವಾದ ಕೊಲಂಬಿಯಾ ಬಾಹ್ಯಾಕಾಶ ಷಟಲ್‍ದಿಂದ ಉದುರಿದ ಹಾರ್ಡ್‍ಡಿಸ್ಕಿನಿಂದ ಕೂಡಾ ದತ್ತಾಂಶ ಮರುಗಳಿಸಲು ದತ್ತಾಂಶ ತಜ್ಞರಾದ ಜಾನ್ ಎಡ್ವರ್ಡ್ಸ್ ಸಫಲರಾಗಿದ್ದಾರೆ.ಅದು ಸುಟ್ಟು ಎಷ್ಟು ಕರಕಲಾಗಿತ್ತು ಎಂದರೆ,ಅದು ಹಾರ್ಡ್‍ಡಿಸ್ಕ್ ಎಂದು ಗುರುತಿಸಲೂ ಸಾಧ್ಯವಾಗುತ್ತಿರಲಿಲ್ಲವಂತೆ.ಇದರಲ್ಲಿ ಸ್ಪೇಸ್ ಷಟಲ್‍ನಲ್ಲಿ ನಡೆಸಿದ  ಪ್ರಯೋಗಗಳ ಮಾಹಿತಿಯಿದೆ.ಇವುಗಳಲ್ಲಿ ಹೆಚ್ಚಿನ ಮಾಹಿತಿ ರೇಡಿಯೋ ಸಂಕೇತಗಳ ರೂಪದಲ್ಲಿ ನಾಸಾವನ್ನು ತಲುಪಿದ್ದರೂ,ಅಳಿದುಳಿದ ಮಾಹಿತಿಯನ್ನು ಈಗ ಡಿಸ್ಕಿನ ಮೂಲಕ ಕಲೆ ಹಾಕಿ ಪ್ರಕಟಿಸಲು ಎಡ್ವರ್ಡ್ಸ್ ಸಫಲರಾಗಿದ್ದಾರೆ.
ಅಂತರ್ಜಾಲದ ಮೂಲಕ ತರಗತಿ ನಡೆಸಲು ಮೂಡಲ್ ತಂತ್ರಾಂಶ
    ಸ್ವಾಯತ್ತ ವಿದ್ಯಾಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಹೊಸ ಹೊಸ ವಿಷಯಗಳಲ್ಲಿ ತರಬೇತಿ ನೀಡಲು ಮುಂದಾಗುತ್ತಿವೆ.ಅಂಚೆ ತೆರಪಿನ ಶಿಕ್ಷಣದ ಜಾಗವನ್ನು ಅಂತರ್ಜಾಲದ ಮೂಲಕ ನಡೆಸುವ ದೂರಶಿಕ್ಷಣ ಆಕ್ರಮಿಸುತ್ತಿದೆ.ಇದರಲ್ಲಿ ತಮ್ಮ ಕೋರ್ಸುಗಳನ್ನು ಒದಗಿಸಿ,ವಿದ್ಯಾರ್ಥಿಗಳನ್ನು ನೋಂದಾಯಿಸುವುದರಿಂದ ಹಿಡಿದು,ವಿಷಯ ಮಾಹಿತಿ ಒದಗಿಸಲು,ಪರೀಕ್ಷೆಗಳನ್ನು ಆನ್‍ಲೈನಿನಲ್ಲಿ ನಡೆಸಲು,ಮನೆಕೆಲಸದ ಉತ್ತರಗಳನ್ನು ವಿದ್ಯಾರ್ಥಿಯಿಂದ ಪಡೆಯಲು ಹೀಗೆ ಸರ್ವರೀತಿಯಿಂದಲೂ ನೆರವಾಗುವ ನಿರ್ವಹಣಾ ತಂತ್ರಾಂಶ ಮೂಡಲ್ ಮುಕ್ತ ತಂತ್ರಾಂಶ ಅಂತರ್ಜಾಲದಲ್ಲಿ ಲಭ್ಯವಿದೆ.www.moodle.org ತಾಣದಲ್ಲಿ ವಿವರಗಳು ಲಭ್ಯ.

ashokworld 

udayavani
*ಅಶೋಕ್‍ಕುಮಾರ್ ಎ