'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ ಖಾಲಿ ಮೂರ್ತ ರೂಪ

'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ ಖಾಲಿ ಮೂರ್ತ ರೂಪ

ಬರಹ

ನಡೆಯುತ್ತಾ ಇರುವಾಗ ಇಡ್ತಿರೊ ಪ್ರತಿಯೊಂದು ಹೆಜ್ಜೆಯೂ ಸಹ ಯಾವ ಕಾರಣಕ್ಕಾಗಿ ಅಂತ ಗೊತ್ತಿಲ್ದೇನೆ ನಡಿತಾನೆ ಇದೀನಿ . ದುನಿಯಾ, ಮುಂಗಾರು ಮಳೆ ನಂತರ ಹೊಸ ಅಲೆಯ [ಕೊಲೆಯ] ಹೆಸರಿನಲ್ಲಿ ಬರ್ತಿರೋ ಕನ್ನಡ ಸಿನಿಮಾಗಳ ಥರಾ. ಉದ್ದೇಶಾನೆ ಇಲ್ಲಾ ಆದ್ರೂನು ನಡೀತಾನೆ ಇದೀನಿ. ಕಾಲೇಜು ಮುಗೀತು, ಸಿನಿಮಾ ನೋಡ್ತಾ ಇರೋವಾಗ ಮುಂದೇನಾಗುತ್ತೆ ಅಂತ ಭವಿಷ್ಯದ ಕಡೆ ಯೋಚನೆ ಮಾಡ್ತಾ , ಸಿನಿಮಾ ಮುಗಿದ ಮೇಲೆ ಸಿನಿಮಾದಲ್ಲಿ ಏನಾಯ್ತು ಅಂತ ಭೂತ ಕಾಲದ ಕುರಿತು ಯೋಚನೆ ಮಾಡೋಥರಾ ಆಗಿದೆ ನನ್ನ ಪರಿಸ್ಥಿತಿ.ಭೂತದ [ಕಾಲದ ಬಗ್ಗೆ ಅಲ್ಲ] ಮಾತು ಬಂದಾಗಲೆಲ್ಲಾ ನಮ್ಮ ಸಿನಿಮಾದಲ್ಲಿರೊ ಭೂತಗಳ ಬಗ್ಗೆ ನನಗಿರೊ ಒಂದು ಪ್ರಶ್ನೆ ಏನಪ್ಪಾ ಅಂತಂದರೆಯಾಕೆ ಭೂತ್ ಗಳು[ ಎಲೆಕ್ಷನ್ ಭೂತ್ ಗಳಲ್ಲಾ] ಸದಾ ಹಿಂದೇನೆ ಬರ್ತಾವೆ. ಭಯಾ ಪಡಿಸ್ಬೇಕು ಅಂತಿದ್ದರೆ ಭವಿಷ್ಯ ಅಂದರೆ ಮುಂದೆಯಿಂದ ಬರಬಹುದಲ್ವಾ. ಬಹುಶ: ಭವಿಷ್ಯ ಅಮೂರ್ತದ ಗುಂಪಿಗೆ ಸೇರಿಸ್ಬಿಟ್ಟಿರೊದ್ರಿಂದ ಭೂತಕ್ಕೆ ಮೂರ್ತದ ಕಲ್ಪನೆ ಕೊಡೋದಿಕ್ಕಂತಲೇ ಇರಬೇಕು ಕಾಲಕ್ಕೂ ಮೂರ್ತಕ್ಕೂ ಸಂಕೇತವಾಗಿ ಭೂತ್ ನಾತ್ ಯಾವಾಗಲೂ ಹಿಂದೆಯಿಂದಲೇ ಎಂಟ್ರಿ ಕೊಡ್ತಾನೆ. ಕ್ಷಮಿಸ್ಬೇಕು ಐಟಿ ಯುಗದಲ್ಲಿ ಕನ್ನಡದಲ್ಲಿ ಕೈಲಾಸಂ ನವರಿಂದ ನಾಮಕರಣವಾಗಿರೊ ಈ ಕಂಗ್ಲೀಷ್ ಪದಗಳು ಯಾವ್ ಲೈಸನ್ಸು, ಎಂಟ್ರಿ ಟಿಕೆಟ್ಟು ಇಲ್ದೆನೆ ಒಳಗಡೆ ನುಗ್ತಾ ಇರ್ತಾವೆ ನಮ್ ಇಂಡಿಯನ್ ಆರ್ಟ್ ಗ್ಯಾಲರಿಗೆ ಆವಾಗಾವಗ ಜನ ನುಗ್ಗಿದಂತೆ. ಈ ರೀತಿ ಆಗ್ಬಿಟ್ಟಿದೆ ಕಾಲೇಜ್ನ್ ಹಾಜರಾತಿಯ ಕೊನೆಯ ದಿನದಿಂದ ಆರಂಭವಾದ ನನ್ನ ದಿನಚರಿಯ ದಿನಗಳಲ್ಲಿಯ ಯೋಚನಾ ಲಹರಿ.ಹುಟ್ನಿಂದ ಹಾರ್ಟಿಸ್ಟ್ ಆಗಿ ಮಧ್ಯಂತರದಲ್ಲಿ ಆರ್ಟಿಸ್ಟ್ ಆಗೋಣ ಅಂತ ಆರ್ಟ್ ಕಾಲೇಜುಗ[ಘ]ಳಿಗೆ ಸೇರಿ...[ ಎಲ್ಲಾ ಕಾಲೇಜುಗಳಿಗೆ ಒಂದೇ ಸರ್ತಿ ಸೇರ್ಲಿಲ್ಲಾ ಒಂದಾದ ಮೇಲೆ ಒಂದು].ಕಾಲೇಜುಗಳಲ್ಲಿ ಎಂಟು ವರ್ಷ ಮಾಡಿದ ಓ ರಾಟ ಕ್ಷಮಿಸಿ ಹೋರಾಟ [ಈಗಿನ ಎಲೆಕ್ಷನ್ ಹೋರಾಟದ ತರಾ ಅಲ್ಲಾ ] ಇದು 'ನನ್ನ' ಮತ್ತು 'ನನಗೆ' ಮಧ್ಯ ನಡೆದ ಭೀಕರ ಹೋರಾಟದಲ್ಲಿ ಕ್ಲೈಮ್ಯಾಕ್ಸ್ ಭಾಗದ ಫಲಿತಾಂಶ ಏನಂದರೆ 'ಖಾಲಿ'ಯಾಗಿ ಓಡಾಡ್ತಿರೋದ್ರಿಂದ, ಆರ್ಟಿಸ್ಟ್ ಆಗಲು ಮಾಡುವ ಪ್ರಯತ್ನದ ಭಾಗ2[ ಮುಂಬರಲಿರುವ ಜೋಗಿ ಭಾಗ2 ಅಲ್ಲಾ] ಆರಂಭವಾಗಿದೆ ಅಂತ ಎಂಡ್ ನಲ್ಲಿ ಹೆಡ್ ಲೈನ್ ಕೊಡೋ ಪರಿಸ್ಥಿತಿ ಬಂದಿದೆ. ಈ ಹೆಡ್ ಲೈನ್ ಕೊಡೊದಿಕ್ಕೆ 'ಹೆಡ್'ನ ಅವಶ್ಯಕತೆ ಜಾಸ್ತಿ ಇದೆ ಅನ್ನೋ ವಿಷಯ ನನಗೆ ನನ್ನ "ಹೆಡ್'ನಿಂದ ಯೋಚನೆ ಮಾಡಿದಾಗಲೇ ತೋಚಿದ್ದು.ಅದೇ ಟೈಮಿಗೆ ಇನ್ನೊಂದು ಯೋಚನೆ ಬಂತು, ಈಗಿನ ನನ್ನ ಖಾಲಿ ಖಾಲಿ ಖಯಾಲಿಗಳೆನ್ನೆಲ್ಲಾ ಬರೆಯೋದಿಕ್ಕೆ ಖಾಲಿ ಹೆಡ್ ನಿಂದ ಹೇಗೆ ಸಾಧ್ಯ ಅಂತ.ಈ ಯೋಚನೆಗೆ ದಿ ಎಂಡ್ ಅಂತ ಹೇಳಿ ಹೊಸ ರೀತಿಯ ಸಿನಿಮಾ ಮಾಡ್ತಾ ಇದೀವಿ ಅಂತ ಹೇಳಿ ಹೊಸಾ 'ರೀಲ್'ನಲ್ಲಿ ಹಳೇ ರಿಯಲ್ ನ ತೋರಿಸೋ ಕನ್ನಡದ ಸಿನಿಮಾಗಳ ರೀತಿಯಲ್ಲೇ ನನ್ನ ಯೋಜನೆಗಳು ಯೋಚನೆಗಳಾಗ್ತ ಇವೆ. ನನ್ನ ಹಿಂದಿನ ಎಂಟು ವರ್ಷದ ಹೋ[ಓ]ರಾಟದಲ್ಲಿ 'ನಾನು' 'ನನ್ನ' ಜೊತೆ ಯುದ್ಧ ಮಾಡಿದ್ದೇನೆ ಅಂತ ಅನ್ಕೊಂಡು ಇದನ್ನ ಬರೆಯೋದಿಕ್ಕೆ ಶುರು ಮಾಡಿದ್ರೆ ಪಕ್ಷಾಂತರೀ ರಾಜಕಾರಣಿಗಳಿಗೆ ಓಟು ಹಾಕುವಷ್ಟೇ ಕಷ್ಟ ಆಗುತ್ತದೆ. ನನ್ನ ಹೋರಾಟದಲ್ಲಿ ನಾನು ಮಾಡಿದ್ದು ನನ್ನ ವಿರುದ್ಧ ಗೆಲ್ಲಬೇಕೆಂಬ ಹಠದಿಂದ 'ನಾನು' ಸದಾ 'ನನ್ನನ್ನು' ಟೀಕಿಸುತ್ತಾ ಕೊನೆಗೆ 'ನನ್ನ' ಪರವಾಗಿಯೇ ಕೆಲಸಾ ಮಾಡ್ತಾ ಬರೀತಾ ಇದೀನಿ. ಎಲ್ಲಾ 'ಹೆಡ್' ಲೀಲೆ. ಅಟ್ ಪ್ರೆಸೆಂಟ್ ಯೋಚನೆ ಏನಪ್ಪಾ ಅಂದರೆ ಎಂಟು ವರ್ಷ ಓದಿದ್ರೂ ಸಹ ನಾನೇಕೆ 'ಖಾಲಿ'ಯಾಗಿ ಓಡಾಡ್ತ ಇದೀನಿ. ಈಗ ಭೂತದಲ್ಲಿರೊ ಆಗಿನ ವರ್ತಮಾನದಲ್ಲಿ , ಈಗ ವರ್ತಮಾನವಾಗಿರೊ ಆಗಿನ ಭವಿಷ್ಯದಲ್ಲಿ ಮಾಡಬೇಕೆಂದು ಮೂರ್ತವಾಗುತ್ತವೆಯೆಂಬ ಅಮೂರ್ತ ಕಲ್ಪನೆಗಳನ್ನು . ಆದರೆ ಆಗಿನ ಅಮೂರ್ತಗಳನ್ನು ಹುಡ್ಕೊಂಡು ಈ ವರ್ತಮಾನಕ್ಕೆ ಬಂದ್ರೆ ಅಮೂರ್ತಗಳು ಈಗಿನ ಭೂತಕಾಲದ ಮೂರ್ತಗಳಾಗಿವೆ . ಹೌದು ನಾನ್ಯಾಕೆ ಈ ಮೂರ್ತ ಅಮೂರ್ತ ವೆಂಬ ನಮ್ ಕಲೆಯ ಪದ ಬಳಕೆಯನ್ನೇ ಹೆಚ್ಹು ಮೂರ್ತ ಗೊಳಿಸ್ತಾಇದ್ದೀನಿ. ಬಹುಶ: ಈಗಿನ ನಮ್ ಕಲಾವಿದರ ರಾಜಕಾರಣದ ಗಾಳಿ ನನಗೂ ಸೋಕಿರಬೇಕು. ಈ ಕಲಾವಿದರ ರಾಜಕಾರಣ ಯಾವುದಪ್ಪಾ ಅಂದರೆ ಕಲೆಯ ಕುರಿತೇ ಮಾತಾಡ್ಬೇಕು, ಕಲೆಯ ಮೂಲಕವೇ ಮಾತಾಡಬೇಕು, ಕಲೆ ಸರ್ವಾಂತರ್ಯಾಮಿ ಆಗಿರುವುದ್ರಿಂದ ಕಲೆಯ ವಿಷಯಾನೆ ಬರೀಬೇಕು ಎನ್ನುವ ರಾಜಕಾರಣ. "ಕಲೆಯಿಂದ, ಕಲೆಗಾಗಿ, ಕಲೆಗೋಸ್ಕರ". ನಮ್ಮ ಸಂವಿಧಾನದ ಧ್ಯೇಯ ವಾಕ್ಯವನ್ನು ಕಲೆಯ ಸೄಜನಶೀಲ ಅಭಿವ್ಯಕ್ತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಮುಕ್ತವಾಗಿ ಬಳಸಬಹುದೆಂಬ ಧೈರ್ಯದಿಂದ 'ಯಿಂದ', 'ಗಾಗಿ', 'ಗೋಸ್ಕರ' ಗಳನ್ನು ಬಳಸುತ್ತಿದ್ದೇನೆ. ಇಷ್ಟೆಲ್ಲಾ ಹೆಡ್ ನಿಂದ ಬಂದಿದ್ದನ್ನು ಹೆಡ್ 'ಮುಖಾ'ಂತರ ಓದಿದ ಹೆಡ್ ನಲ್ಲಿ 'ಕ್ರಿಯೇಟಿವ್ ಖಾಲಿ' ತನ ಕ್ರಿಯೇಟ್ ಆದರೆ ಕನ್ನಡ ಸಿನಿಮಾ ಶತದಿನ ಓಡಿದಷ್ಟೇ [ಥಿಯೇಟರ್ನಿಂದ ಅಲ್ಲಾ] ಖುಷಿ ಈ ಖಾಲಿಯಾಗಿ ಓಡಾಡಿಕೊಂಡು ಕಾಲಿ ಖಯಾಲಿಗಳನ್ನ ಬರೆದಿರೋ 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ ಖಾಲಿ ಮೂರ್ತ ರೂಪ ಸಾರ್ಥಕವಾದಂತೆ.