ಸೃಷ್ಟಿ(ಮೂರು)-ಹೀಗೊಂದು ಜೀವನದ ಕಥೆ

ಸೃಷ್ಟಿ(ಮೂರು)-ಹೀಗೊಂದು ಜೀವನದ ಕಥೆ

ಜೀವನವೆಂಬ ಒಂದೂರಿನಲಿ
ಇತ್ತೊಂದು ಸುಂದರ ಅರಮನೆ
ದೇಹವೆಂಬುದದರಾ ಹೆಸರು
ಇದ್ದುದು ಇಬ್ಬರೆ ಅದರೊಳಗೆ

ಒಬ್ಬನು ಕಾವಲುಗಾರ
ಹೆಸರವನದು ಬುದ್ಧಿಯೆಂದು
ಇನ್ನೊಬ್ಬ ಪುಟ್ಟ ರಾಜಕುಮಾರ
ಹೆಸರವನದು ಮನಸೆಂದು

ಇಬ್ಬರಿಗಿತ್ತು ಬಾಳ್ವೆಯ ನಂಟು
ಸಾಗುತಲಿದ್ದರು ಒಟ್ಟಾಗಿ
ಕಷ್ಟಗಳನೇಕ ಸುಖವದು ಅಲ್ಪ
ಸೇವಿಸುತಿದ್ದರು ಹಿತವಾಗಿ

ಕಷ್ಟವೆಂದೊಬ್ಬ ರಾಕ್ಷಸನೊಮ್ಮೆ
ಬಂದನು ಜೀವನದೂರಿನಲಿ
ದಿಕ್ಕೆಟ್ಟ ಜನರು ನೆರೆದರು ಎಲ್ಲರು
ದೇಹದರಮನೆಯ ಸಮ್ಮುಖದಲ್ಲಿ

ಸಲಹೆಯನಿತ್ತನು ಬುದ್ಧಿಯು ಈಗ
ಬೇಡವೆಂದನು ರಾಜಕುಮಾರ
ಮನಸಿನ ಮಾತನು ಕೇಳಿದ ಕೂಡಲೆ
ಧಿಕ್ಕರಿಸಿದನಾ ಕಾವಲುಗಾರ

ವಾಗ್ವಾದ ನಡೆಯಿತು ಈರ್ವರಲ್ಲಿಯೂ
ಅಂತ್ಯವ ಕಾಣದೆ ಮಾತಿನಲಿ
ಈರ್ವರ ಸಲಹೆಯ ಪ್ರಯೋಗಿಸಿ ನೋಡುವ
ನಿರ್ಧಾರಕೆ ಬಂದರು ಕೊನೆಯಲ್ಲಿ

ಮನಸಿನ ಮಾತದು ನಡೆಯಲೆ ಇಲ್ಲ
ಕಷ್ಟನು ಊರನು ಬಿಡಲಿಲ್ಲ
ಬುದ್ಧಿಯ ಮಾತನು ಕೇಳಿದ ಕಷ್ಟ
ಹೋದವ ತಿರುಗಿಯು ಬರಲಿಲ್ಲ

ಬುದ್ಧಿಯ ಮಾತನು ಕೇಳಿದ ಕಾರಣ
ಜೀವನವೀಗ ಶಾಂತಿಯುತ
ಬೇಸರವಾದರು ಮನಸಿಗೆ ಕೊಂಚ
ಹೊಂದಿಕೊಂಡನು ಕಾಲ ಕಳೆಯುತ್ತ

ರಾಜಕುಮಾರನ ಆತ್ಮೀಯರಿಗೊಮ್ಮೆ
ಕಾಡಿದ ಸಂಕಟ ರಾಕ್ಷಸನು
ವಿಷಯವ ತಿಳಿದ ಬುದ್ಧಿ,ಮನಸು
ನಡೆದರು ಹುಡುಕುತ ಆತ್ಮೀಯರನು

ಮಾತಿನ ಚಕಮಕಿ ಬೇಕಿರಲಿಲ್ಲ
ಪ್ರಯತ್ನಿಸಿದರು ಇಬ್ಬರು ಇಲ್ಲಿ
ಹೋರಾಟಕೆ ಸಂಕಟ ಓಡಿಹೋದನು
ಗೆದ್ದಿದ್ದು ಮನಸಿನ ಮಾತಿಲ್ಲಿ

ಮನಸಿನ ಮಾತಿಗೆ ಬೆಲೆ ಬಂದಿತ್ತು
ಆತ್ಮೀಯರ ವಿಷಯದಲಿ
ಯಾರೇ ಗೆದ್ದರು ಯಾರೇ ಸೋತರು
ಒಟ್ಟಿಗೆ ನಡೆದರು ಬುದ್ಧಿ ಮನಸಿಲ್ಲಿ

ಜೀವನದ ವಿಷಯಕೆ ಬುದ್ಧಿಯ ಮಾತನು
ಆತ್ಮೀಯರ ವಿಷಯಕೆ ಮನಸಿನ ಮಾತನು
ಕೇಳುತ ನಡೆದರೆ ಜೀವನ ಚಂದ!!
ಇರುವುದು ದೇಹದರಮನೆಯೂ ಅಂದ!!

Rating
No votes yet