ನೆನಪುಗಳು, ನೆನಪಿನಂಗಳದ ಹೊರಗೆ

ನೆನಪುಗಳು, ನೆನಪಿನಂಗಳದ ಹೊರಗೆ

ಸಣ್ಣ ಮನೆ, ಆಗ. ಬೆಳಗಾದರಾಯ್ತು, ಅಪ್ಪ ಸ್ವಿಚ್ ಆನ್ ಮಾಡಿದ ರೇಡಿಯೋ ನಮ್ಮೆಲ್ಲರನ್ನೂ ಎಚ್ಚರಿಸಿಬಿಡುತ್ತಿತ್ತು. ಪಿಟೀಲು ಚೌಡಯ್ಯನವರ ವಯೋಲ ಟ್ಯೂನು ನಮಗೆಲ್ಲ ಸುಪ್ರಭಾತ. ನಂತರ ರೇಡಿಯೋ ವಂದೇ ಮಾತರಂ ಗುನುಗುತ್ತಿದ್ದರೆ ನಮಗೆಲ್ಲ ಮುಖ ತೊಳೆಯದೆಯೇ ಫ್ರೆಶ್ ಆದಂತೆ! (ಆದರೂ ಮುಖ ತೊಳೆಯದಿದ್ದರೆ ಕಾಫಿ ಸಿಗೋದಿಲ್ಲ ಅನ್ನೋ ಕಾರಣಕ್ಕೆ ಕಣ್ಣು ಮುಚ್ಚಿಕೊಂಡೇ ಹಲ್ಲುಜ್ಜಿ ಬರುತ್ತಿದ್ದೆ).
ಅದಾಗಿ ಅಡುಗೆ ಮನೆಯಲ್ಲಿ ಗೋಡೆಗೊರಗಿ, ಕಾಲು ಚಾಚಿ ನೆಲದ ಮೇಲೆ ಕುಳಿತು ನಾನು ನಮ್ಮಣ್ಣ ಅಮ್ಮನ ಜೊತೆ ಮೆಲ್ಲನೆ ಮಾತನಾಡುತ್ತಿರುವಂತೆ ಸರಿಯಾಗಿ ರೇಡಿಯೋಲಿ ಸಿನಿಮಾ ಹಾಡುಗಳು ಪ್ರಾರಂಭವಾಗಿಬಿಟ್ಟಿರುತ್ತಿದ್ದವು. ನಾವು ಅಮ್ಮನ ಹತ್ತಿರ ಹಠ ಮಾಡಿ ಕಾಫಿಗೆ ಸಿಕ್ಕಾಪಟ್ಟೆ ಸಕ್ಕರೆ ಹಾಕಿಸಿಕೊಂಡು ಮೆಲ್ಲನೆ ಸಿನಿಮಾ ಹಾಡುಗಳನ್ನು ಕೇಳುತ್ತ ಚಮ್ಮಚದಲ್ಲಿ ಕಾಫಿ ಕುಡಿಯುತ್ತಿರುವಂತೆ (ಅಥವ ತಿನ್ನುತ್ತಿರುವಂತೆ) ಅತ್ತ ಕಡೆ ಅಕ್ಕ ಇನ್ನು ಮುಸುಕು ಹೊದ್ದಿಕೊಂಡು ಮಲಗಿರುತ್ತಿದ್ದಳು!

ಅದ್ಯಾಕೋ ವರ್ಷಗಳು ಕಳೆದಂತೆ, ಅಪ್ಪ ನಲವತ್ತರ ಬೌಂಡರಿ ದಾಟಿದಂತೆ ಚೌಡಯ್ಯನವರ ಟ್ಯೂನು ಹಾಗು ಸಿನಿಮಾ ಹಾಡುಗಳು ಹೋಗಿ ನಿಜವಾದ ಸುಪ್ರಭಾತ ಹಾಗೂ ಭಕ್ತಿ ಗೀತೆಗಳು ಶುರುವಾದವು (ಅಷ್ಟರಲ್ಲಿ ನಮ್ಮ ಮನೆಯಲ್ಲೊಂದು ಟೇಪ್ ರೆಕಾರ್ಡರ್ರು, ಜೊತೆಗೆ ನೂರಾರು ಕ್ಯಾಸೆಟ್ಟುಗಳು ಬಂದುಬಿಟ್ಟಿದ್ದವು. ರೇಡಿಯೋ ಕಡಿಮೆಯಾಗಿತ್ತು). ಆಗಲೂ ನಮಗೆ ಸಿನಿಮಾ ಹಾಡುಗಳು ಕೇಳಲು ಸಿಗುತ್ತಿದ್ದವು. ನಮ್ಮ ತಂದೆಯವರು ಇನ್ನೂ 'ತರುಣ'ರಿದ್ದಾಗ ಕೊಂಡಿದ್ದ ಕ್ಯಾಸೆಟ್ಟುಗಳು ಒಂದು ಡಬ್ಬದಲ್ಲಿ ಇನ್ನೂ ಇದ್ದವು. ಅವುಗಳಲ್ಲಿ ಸಿನಿಮಾ ಹಾಡುಗಳಿರುತ್ತಿದ್ದವು. ಉಳಿದಂತೆ ಭಕ್ತಿ ಗೀತೆಗಳೆ. ರೆಕಾರ್ಡರ್ರು ಕೈಗೆ ಸಿಕ್ಕಾಗಲೆಲ್ಲ ಆ ಕ್ಯಾಸೆಟ್ಟುಗಳನ್ನು ಹಾಕಿ ಕೇಳೋದೇ ಮಜ. ಕೆಲವು ಹಳೇ ಕ್ಯಾಸೆಟ್ಟುಗಳು ಸರಿಯಾಗಿ ಪ್ಲೇ ಆಗದೆ ಮೆಲ್ಲ ಮೆಲ್ಲನೆ ಅಪಸ್ವರ ಹಾಡುತ್ತಿದ್ದವು. ಅದನ್ನು ಕೇಳಿ ಹೋ ಅನ್ನೋದು. ಆಗೀಗ ಒಂದೊಂದು ಬಹಳ ಹಳೆಯ ಹಾಡುಗಳು ನಾವು ಹಾಕಿದ ಕ್ಯಾಸೆಟ್ಟಿನಿಂದ ಶುರುವಾದಾಗ ಅಮ್ಮ ಕೂಡ ಅಡುಗೆ ಮನೆಯಿಂದ ಆಚೆ ಬಂದು ಒಂದೆರಡು ಕ್ಷಣ ಕೇಳಿಸಿಕೊಂಡು "ಇದು ಕಲ್ಪನಾ ಮಾಡಿರೋ ಚಿತ್ರದ್ದು", "ಇದು ಘಂಟಸಾಲಾ ಹಾಡಿರೋದು", ಇದು ಆ ಚಿತ್ರದ್ದು, ಇದು ಈ ಚಿತ್ರದ್ದು ಅಂತೆಲ್ಲ ನೆನಪಿಸಿಕೊಂಡು ಮರುಕ್ಷಣ ಕೆಲಸವಿದೆಯೆಂದು ಹೇಳಿ ಒಳಗೆ ಹೋಗಿಬಿಡುತ್ತಿದ್ದರು ("ಈ ಹಾಡುಗಳು ಎಷ್ಟೊಂದು ಇಷ್ಟ ಅಮ್ಮನಿಗೆ - ಅಡುಗೆ ಆಮೇಲೆ ಮಾಡಿಕೊಳ್ಳಬಹುದು, ಅಡುಗೆ ಬಿಟ್ಟು ಬಂದು ಕೇಳಬಾರದ?" ಅಂತ ಆಗ ನನಗನ್ನಿಸುತ್ತಿತ್ತು. ಈಗ ಅದರ ಹಿಂದಿದ್ದ ತುಡಿತ ಚೆನ್ನಾಗಿ ಅರ್ಥವಾಗುತ್ತೆ)

ನಮ್ಮ ಅಪ್ಪನಿಗೆ ರಾಜ್ಕುಮಾರ್ ಅಂದ್ರೆ ಬಹಳ ಇಷ್ಟ - ಅವರ ಎಲ್ಲ ಸಿನಿಮಾ ಹಾಡುಗಳು ಕೊಳ್ಳಲಾಗದೆ ಆಯ್ದ ಕೆಲವನ್ನು ಎಲ್ಲೋ ಒಂದು ಕಡೆ ಆಗ ಕೆಲವು ವರ್ಷಗಳ ಹಿಂದೆ ನಾಲ್ಕು ರೂಪಾಯಿ ಕೊಟ್ಟು ರೆಕಾರ್ಡ್ ಮಾಡಿಸಿ ತಂದು ಇಟ್ಟಿದ್ದರು ("ಹೃದಯದಲ್ಲಿ ಇದೇನಿದು...", "ಗಂಗಾ... ಯಮುನಾ ಸಂಗಮ..." "ನಾ ನಿನ್ನ ಮರೆಯಲಾರೆ..." ಇತ್ಯಾದಿ. ತದನಂತರ ರಾಜ್ಕುಮಾರ್ ಹಾಡಿದ ಭಕ್ತಿ ಗೀತೆಗಳೂ ಹೀಗೆಯೇ ಮನೆಯ ಕ್ಯಾಸೆಟ್ ಕಲೆಕ್ಷನ್ನಿಗೆ ಬಂದು ಸೇರಿದವು (ಅದರಲ್ಲಿ "ಹಾಲಲ್ಲಾದರು ಹಾಕು - ನೀರಲ್ಲಾದರು ಹಾಕು" ಅನ್ನುವ ಹಾಡು ಚೆನ್ನಾಗಿ ನೆನಪಿದೆ - ಇದ್ಯಾಕೆ ನೀರಲ್ಲಿ ಹಾಕು ಅಂತ ಕೇಳಿಕೊಳ್ಳುತ್ತಾರೆ ಈ ಹಾಡಿನಲ್ಲಿ ಎಂದು ಪ್ರಶ್ನೆ ಹಾಕಿಕೊಂಡು ತಲೆಕೆಡಿಸಿಕೊಳ್ಳುತ್ತಿದ್ದೆ).

ಆದರೆ ನನಗೆ ಈಗಲೂ ಬಹಳ ನೆನಪಾಗೋದು ಆಗ ಕೇಳೋಕೆ ಬಹಳ ಇಷ್ಟವಾಗುತ್ತಿದ್ದ ಬಾಲಸುಬ್ರಮಣ್ಯಂ - ಎಸ್ ಜಾನಕಿ ಜೊತೆಗೂಡಿ ಹಾಡಿದ ಹಾಡುಗಳು. ಎಲ್ಲಕ್ಕಿಂತ ಇಷ್ಟವಾಗುತ್ತಿದ್ದುದು 'ಬೆಂಕಿಯ ಬಲೆ' ಸಿನಿಮಾದ ಈ ಹಾಡು:

ಮೊನ್ನೆ ಯೂ ಟ್ಯೂಬಿನಲ್ಲಿ ಎಂದಿನಂತೆ ಮತ್ತೇನೋ ಹುಡುಕುತ್ತಿದ್ದಾಗ ಇದು ಸಿಕ್ತು.

ಹಾಡಿನ ಬಗ್ಗೆ ಹೇಳಲೇ ಬೇಕಿಲ್ಲ. ಆದರೆ ಈ ಹಾಡಿನ ವೀಡಿಯೋ ಗಮನಿಸಿ. ಇಲ್ಲಿ luxury ಕಾರ್ ಇಲ್ಲ. ಪ್ರಮುಖ ಪಾತ್ರಗಳು ಸೈಕಲ್ ಮೇಲೆ. ಹಾಡಿನಲ್ಲಿ ಕುಣಿತ ಇಲ್ಲ. ಮೊದಲೊಂದು ಹಾಡಿನ contextಗೆ ಹೊಂದುವಂತೆ ಗಂಡ ಹೆಂಡತಿ ಇಬ್ಬರೂ ಮಾತನಾಡಿಕೊಳ್ಳುವ ಬಹಳ ಸಹಜವಾದ ಮನಮುಟ್ಟುವ ದೃಶ್ಯ ಇದೆ. ನಾಯಕಿ ಪಾತ್ರದಲ್ಲಿರುವ ಲಕ್ಷ್ಮಿ ಕನ್ನಡದವರಲ್ಲ, ಆದರೆ ಅವರು ಮಾತನಾಡಿರುವ ಸರಾಗವಾದ ಕನ್ನಡ ದೃಶ್ಯಕ್ಕೆ ಮತ್ತಷ್ಟು ಜೀವ ತುಂಬಿದೆ. 'ಬಯಲು ದಾರಿ'ಯ ಅನಂತ ನಾಗ್ ಗೂ ಇಲ್ಲಿರುವ ಅನಂತ ನಾಗ್ ಗೂ ಸಾಕಷ್ಟು ವ್ಯತ್ಯಾಸ, ಆದರೆ ಈ ಪಾತ್ರ ಎಷ್ಟು ಚೆನ್ನಾಗಿ ಮೂಡಿದೆ; ಲಕ್ಷ್ಮಿ ಸೀರೆ ಉಟ್ಟಿಕೊಂಡಿದ್ದಾರೆ. ಪಾತ್ರಗಳದ್ದು ಸಹಜವಾದ ನಡವಳಿಕೆ. ದೃಶ್ಯ ಹಳ್ಳಿಯ ರೋಡಿನಂತೆ ಕಾಣುವ ಜಾಗವೊಂದರಲ್ಲಿ.

ಈಗ ಇದನ್ನು ಇತ್ತೀಚಿನ ಒಂದು ಹಾಡಿಗೆ ಹೋಲಿಸಿ ನೋಡಿ (ಬಾಲಿವುಡ್ ಹಾಡಿಗೆ ಹೋಲಿಸಿದರೆ ಇನ್ನೂ ಉತ್ತಮ - ಇತ್ತೀಚೆಗೆ ಬಂದ 'Race' ಹಾಗೂ (ಬರುತ್ತಿರುವ?) 'Tashan' ಹಾಡುಗಳು, for instance). ಕೋಟಿಗಟ್ಟಲೆ ಖರ್ಚು ಮಾಡಿ ತೆಗೆದ ಹೈಟೆಕ್ ಕಾರುಗಳನ್ನು ನುಜ್ಜುಗುಜ್ಜಾಗಿಸುವ ಸ್ಪೋಟ ಹಿನ್ನೆಲೆಯಲ್ಲಿ, ಮಿಲಿಯನ್ನುಗಟ್ಟಲೆ ಬೆಲೆ ಬಾಳುವ ಕಾರು - ಅದರಲ್ಲಿ ಡಿಸೈನರ್ ಬಟ್ಟೆ ಹಾಕಿಕೊಂಡು ಮಾಡೆಲ್ ನಂತೆ ಓಡಾಡುವ ನಾಯಕಿಯ ಪಾತ್ರ; ಬುರ್ರ್ ಬುರ್ರ್ ಎನ್ನಿಸಿಕೊಂಡು ಗಾಡಿ ಓಡಿಸುತ್ತ ಲೈನು ಹೊಡೆಯುವ ನಾಯಕನ ಪಾತ್ರ; ಸ್ವಚ್ಛವಾಗಿ ಹೊಳೆಯುವ ಪಶ್ಚಿಮ ದೇಶಗಳ ಊರಡ್ಡಗಲ ರೋಡು ಅಥವ ಒಂದೇ ಬಣ್ಣ ಹೂವುಗಳ ಬನ - ಇವು ಯಾವೂ ಮೇಲಿನ ಹಾಡು ಕೊಟ್ಟಷ್ಟು ಖುಷಿ ಕೊಡುವುದಿಲ್ಲ. ಒಂದು ಸಾಧಾರಣ ದೃಶ್ಯದಲ್ಲಿ ಅಳವಡಿಸಿರುವ subtle ವಿಷಯಗಳು ತರುವ ಮನರಂಜನೆ ಕೋಟಿ ಖರ್ಚು ಮಾಡಿದರೂ ಬರುವುದಿಲ್ಲ.

ಸಕಲ ಸವಲತ್ತಿರುವ ಬೆಂಗಳೂರಲ್ಲಿ, ಸಾಧಾರಣವಾಗಿ "ಮುಂಚೆಗಿಂತ ಪರವಾಗಿಲ್ಲ" ಅನ್ನೋ ಅಷ್ಟು ದೊಡ್ಡದೇ ಇರುವ ಮನೆಯಲ್ಲಿ ಆರಾಮದ ಸೋಫ ಮೇಲೆ ಕುಳಿತು ಕಾಫಿ ಕುಡಿಯುತ್ತ ಅಮ್ಮನ ಜೊತೆ ಆತ್ಮೀಯವಾಗಿ ಮಾತನಾಡಿದ್ದರೂ ಅದು ನೆನಪಿಗೆ ಬರುವುದಿಲ್ಲ, ಈಗ ಇಡಿಯ ಸಕ್ಕರೆ ಡಬ್ಬ ಪಕ್ಕದಲ್ಲಿಟ್ಟುಕೊಳ್ಳಬಹುದು, ಆದರೆ ಕಾಫಿಯಲ್ಲಿ ಹೆಚ್ಚಿನ ಸಕ್ಕರೆ ರುಚಿಸುವುದಿಲ್ಲ, ಏ ಸಿ ಇದ್ದರೂ ಸರಿಹೋಗೋದಿಲ್ಲ. ಮೆತ್ತನೆಯ ಕರ್ಲ್-ಆನ್ ಹಾಸಿಗೆಯೂ ಹತ್ತಿಯ ಹಾಸಿಗೆ ಕೊಡುತ್ತಿದ್ದಷ್ಟು ನಿದ್ರೆ ಕೊಡೋದಿಲ್ಲ. ಕಾರಿನಲ್ಲಿ ಕುಳಿತು ಓಡಾಡುವುದರಲ್ಲಿ ಏನೂ ಮಜವಿಲ್ಲ.

Rating
No votes yet

Comments