ಸಹನಶೀಲತೆ(ಪ್ರೇರಕ ಪ್ರಸಂಗಗಳು)
ಸರ್ ಐಸಾಕ್ ನ್ಯೂಟನ್ನರು ಪ್ರಸಿದ್ಧ ವಿಜ್ಞಾನಿ.
ಅವರೊಂದು ನಾಯಿ ಸಾಕಿದ್ದರು.ಅದರ ಹೆಸರು 'ಡಾಯ್ಮಂಡ್'.
ಅದೊಂದು ಮುದ್ದಾದ ಕುನ್ನಿ.ನ್ಯೂಟನ್ನರು ಅದನ್ನು ಬಹಳೇ ಪ್ರೀತಿಸುತ್ತಿದ್ದರು.
ಅದು ಅವರ ಜೊತೆಗೆ ಇರುತ್ತಿತ್ತು.ಸಂಶೋಧನೆ ಮಾಡುತ್ತ ಕೋಣೆಯಲ್ಲಿರುವಾಗ
ಒಳಗೂ-ಹೊರಗೂ ಕುಂಯಿಗುಡುತ್ತ ತಿರುಗುತ್ತಿತ್ತು.
ಒಂದು ಸಂಜೆ ಉರಿಯುತ್ತಿದ್ದ ಮೇಣಬತ್ತಿಯ ಬೆಳಕಿನಲ್ಲಿ ಬರೆಯುತ್ತ ಕುಳಿತಿದ್ದರು.
ಮೇಜು ತುಂಬ ಬರೆದ ಕಾಗದ,ಸಾಧನ ಸಲಕರಣೆಗಳು ಹರಡಿದ್ದವು.
ಏನೋ ನೆನಪಾಗಿ ಸಾಮಾನು ತರಲು ಹೊರಗೆ ಹೋದರು.
ಅಷ್ಟರಲ್ಲಿ ಅವರ ಮುದ್ದು ನಾಯಿ ಒಳಗೆ ಬಂದು ಮೇಜಿನ ಮೇಲೆ ಜಿಗಿಯಿತು.
ಉರಿಯುತ್ತಿದ್ದ ಮೇಣಬತ್ತಿ ಮೇಜಿನ ಮೇಲೆ ಉರುಳಿತು.ತಟ್ಟನೆ ಕಾಗದ
ಪತ್ರಗಳಿಗೆಲ್ಲ ಉರಿ ಹತ್ತಿತು.
ನ್ಯೂಟನ್ನರು ತಿರುಗಿ ಬಂದು ನೋಡಿ ಮೂಕರಾದರು.
ಅವರು ವರ್ಷಾನುಗಟ್ಟಲೆ ಮಾಡಿದ ಶೋಧನೆಯ ಕಾರ್ಯವೆಲ್ಲ ಕ್ಷಣಾರ್ಧದಲ್ಲಿ
ಕಣ್ಣ ಮುಂದೆ ಸುಡುತ್ತಿತ್ತು.
"ಡಾಯ್ಮಂಡ್ ಇದನ್ನೇನು ಮಾಡಿದೆ? ನನಗೆಷ್ಟು ಹಾನಿ ಮಾಡಿದೆಯೆಂದು
ನಿನಗೇನು ಗೊತ್ತು!" ಇಷ್ಟೇ ನುಡಿದು ಕುಸಿದು ಕುರ್ಚಿಯಲ್ಲಿ ಕುಳಿತರು.
ಮತ್ತಾರಾದರೂ ಆಗಿದ್ದರೆ ಸಿಟ್ಟಿನ ಭರದಲ್ಲಿ ನಾಯಿಯನ್ನು ಸಾಯುವಂತೆ
ಹೊಡೆಯುತ್ತಿದ್ದರು.
'ಇದರಲ್ಲಿ ನಾಯಿಯದೇನು ತಪ್ಪು! ಅದಕ್ಕೇನು ಗೊತ್ತು ವರ್ಷಾನುಗಟ್ಟಲೆ
ನಾನು ಮಾಡಿದ ಶೋಧನೆಯ ಫಲ ಮೇಜಿನ ಮೇಲಿದೆ ಎಂದು! ಉರಿಯುತ್ತಿರುವ
ಬತ್ತಿ ಅದು ತನ್ನ ಕೆಲಸ ಮಾಡಿದೆ.ನಾನು ಉರಿವ ಬತ್ತಿಯನ್ನು ಬಿಟ್ಟು ಹೋಗಿರದಿದ್ದರೆ
ಇಷ್ಟೆಲ್ಲ ಎಲ್ಲಿ ಆಗುತ್ತಿತ್ತು.?ಇದಕ್ಕಾಗಿ ಪಾಪ ಕುನ್ನಿಯನ್ನು ದಂಡಿಸಿದರೇನು ಬಂತು?
ಅದನ್ನು ಬಡಿದರೆ ಬರೆದ ಕಾಗದ ಬರುವದೇ?' ಎಂದು ವಿಚಾರಿಸಿದರು.
ಇದಕ್ಕೆನ್ನುವರು ಸಹನಶೀಲತೆ.