ಲೆಕ್ಕಾಚಾರ(ಪ್ರೇರಕ ಪ್ರಸಂಗಗಳು)

ಲೆಕ್ಕಾಚಾರ(ಪ್ರೇರಕ ಪ್ರಸಂಗಗಳು)

ಸುಮಾರು ಎರಡು ಸಾವಿರ ವರುಷಗಳ ಹಿಂದಿನ ಕತೆ.

ರೋಮ ಸಾಮ್ರಾಜ್ಯದ ಸಾಮ್ರಾಟ ಜುಲಿಯಸ್ ಸೀಜರನು ಅಂದು ಬಹಳೇ ಸಂತೋಷದಲ್ಲಿದ್ದನು.ಏಕೆಂದರೆ ಅವನ ಸೇನಾಪತಿ ಚೆರಿಂಟೀಯಸ್ ನು ಒಂದು ಪ್ರದೇಶ ಗೆದ್ದು ಬಂದಿದ್ದನು.ಸೀಜರನು ಎಷ್ಟು ರಾಜ್ಯ ಗೆದ್ದಿದ್ದನೋ ಅಷ್ಟೆಲ್ಲ ಯುದ್ಧದಲ್ಲಿ ಅವನು ಸೇನಾಪತಿಯಾಗಿ ಮುಂದಿರುತ್ತಿದ್ದನು.ಇಂದು ಅವನೊಬ್ಬನೆ ಹೋಗಿ ರಾಜ್ಯ ಗೆದ್ದು ಬಂದಿದ್ದನು.

ಸಾಮ್ರಾಟ ಸೀಜರನು ಅವನನ್ನು ಅಪ್ಪಿಕೊಂಡು ಸ್ವಾಗತಿಸಿದನು.ಬಹಳೇ ಹೆಮ್ಮೆಯಿಂದ ದರಬಾರದಲ್ಲಿ ಅವನಿಗೆ ರಾಜ್ಯದ ಅತಿ ದೊಡ್ಡ ಪುರಸ್ಕಾರ ಕೊಟ್ಟು ಗೌರವಿಸಿದನು. ಅಲ್ಲದೆ ಮತ್ತಾವ ಬಹುಮಾನ ಬೇಕು ಕೇಳು ಎಂದನು.

ಸೇನಾಪತಿಯು ಸಾಮ್ರಾಟನ ಈ ಉದಾರತೆಯಿಂದ ಬಹಳೇ ಸಂತುಷ್ಟನಾದನು.'ಮಹಾಪ್ರಭೋ! ನಿಜವಾಗಿ ನೀವು ನಾನು ಕೇಳಿದ ಬಹುಮಾನ ಕೊಡುತ್ತಿದ್ದರೆ ನಾನು ಕೇಳುವೆನು' ಎಂದನು.

'ನಿನ್ನ ಗೆಲುವಿನಿಂದ ನಾನು ಬಹಳೇ ಸಂತುಷ್ಟನಾಗಿರುವೆ.ನೀನು ಬೇಡಿದ್ದನ್ನು ಕೊಡುವೆ,ಸಂಶಯ ಬೇಡ' ಎಂದನು ದೊರೆ.'

ಸಾಮ್ರಾಟ್ ನನಗೀಗ ವಯಸ್ಸಾಗಿದೆ.ಯುದ್ಧ ಮಾಡಿ ಮಾಡಿ ಬೇಜಾರಾಗಿದೆ.ಅಲ್ಲದೆ ಶಕ್ತಿಯೂ ಸಾಲದು.ಒಂದು ವೇಳೆ ನನ್ನ ಮೇಲೆ ನಿಮ್ಮ ಅಭಿಮಾನವಿದ್ದರೆ ನನ್ನನ್ನು ಈ ಕೆಲಸದಿಂದ ಬಿಡುಗಡೆ ಮಾಡಿರಿ.ಮತ್ತು ಈ ಅಯಸ್ಸಿನಲ್ಲಿ ನನ್ನ ಮುಂದಿನ ಜೀವನ ಸಾಗಿಸಲು ಇಪ್ಪತ್ತು ಲಕ್ಷ ನಾಣ್ಯ ಕೊಡುವ ಕೃಪೆ ಮಾಡಿರಿ' ಎಂದನು.

ಸೇನಾಪತಿಯ ಮಾತು ಕೇಳಿ ಸಾಮ್ರಾಟರು ಗಾಬರಿಯಾದರು.ಅವನನ್ನು ಕೆಲಸದಿಂದ ಬಿಡುಗಡೆ ಮಾಡಬಹುದಿತ್ತು.ಆದರೆ ಅಷ್ಟೊಂದು ನಾಣ್ಯ ಕೊಡಲು ಸಾಧ್ಯವಿರಲಿಲ್ಲ.ಸ್ವಲ್ಪ ಸಮಯ ವಿಚಾರಿಸಿ 'ಸರಿ,ನಾಳೆ ಇದರ ನಿರ್ಣಯ ಹೇಳುವೆ ದರ್ಬಾರಿನಲ್ಲಿ ಬಂದು ಭೆಟ್ಟಿಯಾಗು' ಎಂದು ಹೇಳಿದರು.ಸೇನಾಪತಿಯು ಹಿಗ್ಗಿನಿಂದ ಹೋದನು.

ಸಾಮ್ರಾಟರು ರಾತ್ರಿಯೆಲ್ಲ ವಿಚಾರಿಸಿ ಒಂದು ನಿರ್ಣಯಕ್ಕೆ ಬಂದರು.ಮರುದಿನ ಸಮಯಕ್ಕೆ ಸರಿಯಾಗಿ ಸೇನಾಪತಿ ದರಬಾರಿಗೆ ಬಂದನು.

'ಮಹಾಸೇನಾಪತಿಯೇ,ನಿನ್ನನ್ನು ಸೇವೆಯಿಂದ ನಿವೃತ್ತಗೊಳಿಸುವೆ.ಈಗ ಹಣದ ವಿಚಾರ.ಅದಕ್ಕಾಗಿ ಒಂದು ಕೆಲಸ ಮಾಡು.ನನ್ನ ಖಜಾನೆಯಲ್ಲಿ ಐವತ್ತು ಲಕ್ಷ ಮಾತ್ರ ನಾಣ್ಯಗಳಿವೆ.ಒಮ್ಮೆಲೆ ಕೊಟ್ಟರೆ ಖಜಾನೆ ಖಾಲಿಯಾಗುವುದು.ಕಾರಣ ನೀನು ದಿನಾಲು ಬಂದು ನೀನು ಸಾಯುವವರೆಗೆ ಅವುಗಳಲ್ಲಿರುವ ದಿನದ ದುಪ್ಪಟ್ಟು ನಾಣ್ಯ ಒಯ್ಯುತ್ತಿರು.ಅಂದರೆ-ಇಂದು ಒಂದು,ನಾಳೆ ಎರಡು,ಮೂರನೆಯ ದಿನ ನಾಲ್ಕು,ನಾಲ್ಕನೆಯ ದಿನ ಎಂಟು.ಹೀಗೆ ಪ್ರತಿಯೊಂದು ದಿನ ಹಿಂದಿನ ದಿನದ ದುಪ್ಪಟ್ಟು ನಾಣ್ಯಗಳನ್ನು ಖಜಾನೆಯಿಂದ ತೆಗೆದುಕೊಂಡು ದರಬಾರಿಗೆ ಬಂದು ತೋರಿಸಿ ಒಯ್ಯಬೇಕು.ಆದರೆ ಒಂದು ಕರಾರು-ನಿನು ಒಯ್ಯುವ ನಾಣ್ಯಗಳನ್ನು ಸ್ವತಃ ನೀನೆ ಎಣಿಸಿ ನೀನೇ ಹೊತ್ತುಕೊಂಡು ಹೋಗಬೇಕು.ಇದಕ್ಕೆ ಯಾರ ಸಹಾಯ ಸಿಕ್ಕುವದಿಲ್ಲ'.

ಸಾಯುವ ತನಕ ಖಜಾನೆಯಿಂದ ದಿನದ ದುಪ್ಪಟ್ಟು ನಾಣ್ಯ ಒಯ್ಯುವ ವಿಚಾರ ತಿಳಿದು ಹಿಗ್ಗಿದನು.ಹಿಂದು ಮುಂದು ವಿಚಾರಿಸದೆ ಒಪ್ಪಿಕೊಂಡನು.

ಸೇನಾಪತಿ ದಿನಾಲು ಬಂದು ನಾಣ್ಯ ಒಯ್ಯತೊಡಗಿದನು.ಐದು ದಿನಗಳವರೆಗೆ ಭಾರ ಕಡಿಮೆಯಾಗಿತ್ತು.ಆರನೇ ದಿನ ಅವನು 32 ನಾಣ್ಯ ತೆಗೆದುಕೊಂಡನು.ಅದರ ಭಾರ 160 ಗ್ರಾಮ್ ಆಗಿತ್ತು.ಏಳನೇ ದಿನ 64 ನಾಣ್ಯ ತೆಗೆದುಕೊಂಡ.ಅದರ ಭಾರ 320 ಗ್ರಾಮ್.ಹೀಗೆಯೇ ದಿನಾಲು ದುಪ್ಪಟ್ಟು ಎಣಿಸಿ ತಂದು ಸಾಮ್ರಾಟರಿಗೆ ತೋರಿಸಿ ಒಯ್ಯತೊಡಗಿದನು.ಹದಿನೆಂಟನೆಯ ದಿನ 1,37,072 ನಾಣ್ಯ ಎಣಿಸಿದನು.ಅದರ ಭಾರವು 655 ಕಿಲೋಗ್ರಾಮ್ ಆಯಿತು.ಅಂದು ಆ ಭಾರ ಹೊರಲು ಕಷ್ಟವಾಯಿತು.ನಾಣ್ಯದ ಪೆಟ್ಟಿಗೆ ಹೊತ್ತು ದರಬಾರಿಗೆ ಬರುತ್ತಲೇ ಬಹಳೇ ಭಾರವಾದುದರಿಂದ ಮುಗ್ಗರಿಸಿ ಬಿದ್ದನು.ಕಣ್ಣಿಗೆ ಕತ್ತಲು ಕವಿಯಿತು.ತಲೆ ಸುತ್ತಿತು.ಏದುಸಿರು ಬಿಡಹತ್ತಿದನು.ಸೇನಾಪತಿ ಗಾಬರಿಯಾದನು.ಸಾಮ್ರಾಟರಿಗೆ ಬಗ್ಗಿ ನಮಸ್ಕರಿಸಿ,'ಪ್ರಭೋ,ನನಗಿನ್ನು ಸಾಕು.ಇಂದಿನವರೆಗೆ ಎಷ್ಟು ನಾಣ್ಯ ಒಯ್ದಿರುವೆನೋ ಅಷ್ಟರಿಂದ ನನ್ನ ಜೀವನ ಸಾಗುವುದು.ಹೆcಚಿನದೇನು ಮಾಡಲಿ? ತಮ್ಮ ಬಹುಮಾನಕ್ಕೆ ಕೃತಜ್ಞನಾಗಿರುವೆ' ಎಂದು ಹೇಳಿದನು.

ಸಾಮ್ರಾಟರು ತಮ್ಮ ಲೆಕ್ಕಾಚಾರದ ಬಗ್ಗೆ ಅಭಿಮಾನ ಮೂಡಿ ಮುಗುಳು ನಕ್ಕರು.'ಆಗಲಿ,ಒಳ್ಳೆಯದಾಗಲಿ.ನೀನು ಸುಖವಾಗಿರು' ಎಂದು ಹೇಳಿ ಕಳಿಸಿದರು.

ನಿಜವಾಗಿ ಚೆರಿಂಟಿಯಸ್ ಒಟ್ಟು 2,62,143 ನಾಣ್ಯ ಒಯ್ದಿದ್ದನು.ಅದು ಅವನ ಬೇಡಿಕೆಯ ಹತ್ತನೆಯ ಭಾಗವಾಗಿತ್ತು.

Rating
No votes yet

Comments