ಸ್ನೇಹಕ್ಕಾಗಿ(ಪ್ರೇರಕ ಪ್ರಸಂಗಗಳು)
'ನಿನ್ನ ಹೆಸರು?'
'ವಿಲಿಯಂ ಸ್ಕಾಟ್!'
'ಗಸ್ತು ತಿರುಗುವಾಗ್ಗೆ ಮಲಗಿದ್ದೀಯಂತೆ.'
'ಹೌದು ಸರ್!'
'ಏಕೆ?'
ಅದೊಂದು ಕತೆ.ನಮ್ಮ ಗುಂಪಿನಲ್ಲಿ 'ವಾಯಿಟ್' ಎಂಬ ಸೈನಿಕ ಮಿತ್ರ ಇರುವನು.ನಾನು ಅವನನ್ನು ಕಾಪಾಡುವೆನೆಂದು ಅವನ ತಾಯಿಗೆ ಮಾತು ಕೊಟ್ಟಿದ್ದೇನೆ.ಕೆಲ ದಿನಗಳಿಂದ ಅವನು ಅಸ್ವಸ್ಥನಾಗಿದ್ದಾನೆ.ಹಿಂದಿನ ಬಿಡಾರದಿಂದ ಈ ಬಿಡಾರಕ್ಕೆ ಬರುವಾಗ ಅವನ ಸಾಮಾನುಗಳನ್ನು ನಾನೇ ನನ್ನ ಸಾಮಾನುಗಳ ಜೊತೆ ಬೆನ್ನ ಮೇಲೆ ಹೊತ್ತು ತಂದೆ.ಅಂದು ಅವನ ಪಾಳಿ ಇತ್ತು.ಅವನ ಬದಲಿಗೆ ನಾನೆ ಗಸ್ತು ತಿರುಗಲು ನಿಂತೆ.ಹೀಗಾಗಿ ದಣಿವಾಗಿದ್ದರಿಂದ ಕಣ್ಣು ಮುಚ್ಚಿ ಜೊಂಪು ಹತ್ತಿರಬಹುದು.
'ನಿನಗೆ ತಿಳಿದಿದೆ.ಕೆಲಸದ ಮೇಲಿದ್ದಾಗ ತಪ್ಪಿದ್ದಕ್ಕೆ ನಿನಗೆ ಸೈನಿಕ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ನೀಡಿದೆ ಎಂದು!'
'ತಿಳಿದಿದೆ.ನಾನು ಮರಣಕ್ಕೆ ಅಂಜಿಲ್ಲ.ಆದರೆ ಈ ಮರಣ ಮಾತೃಭೂಮಿಯ ಸೇವೆಯಲ್ಲಿ ವಿರೋಚಿತವಾಗದೆ ನಾಯಿ-ನರಿಗಳಂತೆ ನಿರರ್ಥಕವಾಗುತ್ತದಲ್ಲ ಎಂದು ನನಗೆ ಮುಜುಗರವಾಗಿದೆ.ದುಃಖವಾಗಿದೆ.'
ಈ ಸಂಭಾಷಣೆ ನಡೆದದ್ದು ಸುಮಾರು ನೂರು ವರುಷಗಳ ಹಿಂದೆ ಅಮೇರಿಕೆಯ ಸಂಯುಕ್ತ ಸಂಸ್ಥಾನದಲ್ಲಿ ದಕ್ಷಿಣ ಹಾಗು ಉತ್ತರ ಸಂಸ್ಥಾನಗಳಲ್ಲಿ ನಡೆದ ಯುದ್ಧದ ಸಮಯದಲ್ಲಿ.ಅಮೇರಿಕೆಯ ರಾಷ್ಟ್ರಪತಿ ಅಬ್ರಾಹಂ ಲಿಂಕನ್ ರು ಯುದ್ಧದ ಮುಂಚೂಣಿಯಲ್ಲಿದ್ದ ಜನರಲ್ ಗ್ರಾಂಟ್ ರನ್ನು ಕಾಣಲು ಬಂದಿದ್ದರು.ಸ್ಕಾಟರಿಗೆ ಮರಣ ದಂಡನೆಯ ಶಿಕ್ಷೆಯಾದ ಬಗ್ಗೆ ತಿಳಿಯಿತು.ಆಗ ಸ್ಕಾಟರನ್ನು ಕರೆಸಿ ವಿಚಾರಣೆ ನಡೆಸಿದ್ದರು.
'ನಿನ್ನ ತಂದೆ-ತಾಯಿಗಳಿಗೆ ಸೈನಿಕ ನ್ಯಾಯಾಲಯವು ನಿನಗೆ ಮರಣ ದಂಡನೆಯ ಶಿಕ್ಷೆ ವಿಧಿಸಿದ್ದರ ಬಗ್ಗೆ ತಿಳಿಸಲಾಗಿದೆಯೇ?'ಎಂದರು ಲಿಂಕನ್.
'ಇಲ್ಲ.ಮನೆಯಲ್ಲಿ ಕೇವಲ ನನ್ನ ವೃದ್ಧ ತಾಯಿಯೊಬ್ಬಳೇ ಇರುವಳು.ನಾನು ತಿಳಿದೂ ತಿಳಿದೂ ಅವಳಿಗೆ ಸುದ್ದಿ ತಲುಪಿಸಿಲ್ಲ.ಸುದ್ದಿ ತಿಳಿಸಿದರೆ ನಾನು ಸಾಯುವ ಮೊದಲೇ ಅವಳು ಎದೆಯೊಡೆದು ಸಾಯುವಳೆಂದು ನನಗೆ ಗೊತ್ತು.'ಓ! ನನ್ನ ಅಮ್ಮಾ...' ಎನ್ನುತ್ತ ಅಂಗಿಯ ಜೇಬಿನಿಂದ ಫೋಟೋ ತೆಗೆದು ಹಣೆಗೊತ್ತಿಕೊಂಡನು.
'ಅದೇನದು?'
'ನನ್ನ ತಾಯಿಯ ಚಿತ್ರ!' ಎಂದು ಲಿಂಕನ್ನರ ಎದುರಿಗೆ ಹಿಡಿದನು.
ಲಿಂಕನ್ನರು ಸ್ಕಾಟರ ಮಾತೃಪ್ರೇಮ,ದೇಶಪ್ರೇಮ,ಸ್ನೇಹಪರತೆ ಕಂಡು ಕಡು ಉಲ್ಲಸಿತರಾದರು.'ದುಃಖಿಸಬೇಡ ಸ್ಕಾಟ! ದೇಶಕ್ಕೆ ನಿಮ್ಮಂತಹ ಧೀರ ಯುವಕರ ಅವಶ್ಯಕತೆ ಇದೆ.ಕೊರತೆ ಇದೆ.ಕಾರಣ ನಿನ್ನ ತಪ್ಪನ್ನು ಕ್ಷಮಿಸಲಾಗಿದೆ. ಹೋಗು ಕೆಲಸಕ್ಕೆ ಹಾಜರಾಗು' ಎಂದರು.
ಹರ್ಷಚಿತ್ತನಾದ ಸ್ಕಾಟ್ ಸೈನಿಕ ಸೆಲ್ಯೂಟ್ ಹೊಡೆದು ಬಿಡಾರಕ್ಕೆ ತೆರಳಿದನು.
ಮಾರನೇ ದಿನವೇ ಸ್ಕಾಟನು ಯುದ್ಧದಲ್ಲಿ ಮುಂಚೂಣಿಯಲ್ಲಿದ್ದು ಹೋರಾಡಿ ವೀರಗತಿ ಹೊಂದಿದನೆಂದು ಸುದ್ದಿ ಹರಡಿತು.