ಮೊದಲ ದಿನ ಮೌನ...

ಮೊದಲ ದಿನ ಮೌನ...

ಬರಹ

ನನ್ನ ಗೆಳತಿಯೊಬ್ಬಳಿಗೆ ಇತ್ತೀಚೆಗಷ್ಟೇ ಮದುವೆಯಾಗಿದೆ. ಧಾರವಾಡದ ರಪಾಟಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಗೆ ಹಳೆಯ ಗೆಳತಿಯರೆಲ್ಲ ಸೇರಿದ್ದೆವು. ಮಾತಿಗೆ ಸಡಗರದ ಸೊಗಸು, ನೆನಪುಗಳ ಅಲಂಕಾರ, ನಗುವಿನ ಉಡುಗೊರೆ. ನಮ್ಮ ನಗು, ಕೇಕೆ, ಉಲ್ಲಾಸ ಕಂಡು ವೇದಿಕೆ ಮೇಲೆ ಗಂಡನೊಂದಿಗೆ ಕೂತಿದ್ದ ಮಾಧವಿ ಸಿಕ್ಕಾಪಟ್ಟೆ ಅಸೂಯೆಪಟ್ಟಿದ್ದಳು. ಅಲ್ಲಿಂದಲೇ ನಮ್ಮ ಮೊಬೈಲ್‌ಗಳಿಗೆ ಫೋನ್‌ ಮಾಡಿ, ’ನನ್ನ ಒಬ್ಬಾಕಿನ್ನ ಮ್ಯಾಲೆ ಬಿಟ್ಟು, ನೀವು ಹರಟಿ ಹೊಡಿತಾ ಕೂತಿರೇನ್ರೆ?’ ಎಂದು ತರಾಟೆಗೆ ತೆಗೆದುಕೊಂಡಿದ್ದಳು. ಆದರೂ ಅವಳಿಗೆ ಬಹುತೇಕ ಗೆಳತಿಯರು ಮದುವೆಗೆ ಬಂದಿದ್ದು ಖುಷಿ. ಎಲ್ಲರೂ ನಗುನಗುತ್ತ ಇದ್ದುದನ್ನು ಕಂಡು ಡಬಲ್‌ ಖುಷಿ. ಅದು ನಮಗೆ ಗೊತ್ತಿದ್ದರಿಂದಲೇ, ’ನಿನಗೇನೆ ಜೊತಿಗೆ ಗಂಡ ಅದಾನ. ಇನ್ಮೇಲೆ ನಮ್ಮ ಹಂಗ ನಗೋ ಹಂಗಿಲ್ಲ. ಮದುವೆಯಾಗವರ್ಗೆ ನಮ್ಮುನ್ನ ನಗಾಕ ಬಿಡ ಮಾರಾಯ್ತಿ’ ಎಂದು ಫೋನ್‌ನಲ್ಲೇ ಗದರಿಸಿ ನಮ್ಮ ಮಾತು-ಕತೆ ಮುಂದುವರೆಸಿದ್ದೆವು.

ಈಗ ಮಾಧವಿ ಗಂಡನ ಮನೆಗೆ ಹೊರಟಿದ್ದಾಳೆ. ಬೆಳಿಗ್ಗೆಯಿಂದ ಮುಖದಲ್ಲಿ ಮಂಕು. ಹುಟ್ಟಿ ಬೆಳೆದ ಮನೆ ಬಿಟ್ಟು ಹೋಗಬೇಕು. ಹೊಸ ಜಾಗದಲ್ಲಿ ಹೇಗೋ ಏನೋ ಎಂಬ ಅಳುಕು. ಆಕೆ ಬದುಕಬೇಕಾಗಿರುವುದು ಅಪರಿಚಿತ ವ್ಯಕ್ತಿಗಳೊಂದಿಗೆ, ಅಪರಿಚಿತ ಮನೆಯಲ್ಲಿ. ಯಾರ ಮನಸ್ಸು ಹೇಗೋ ಏನೋ. ಮಾತು ಆಡಿದರೆ ಕಷ್ಟ, ಆಡದಿದ್ದರೂ ಕಷ್ಟ ಎಂಬ ಅರಿವಿನಿಂದ ಕಂಗಾಲಾಗಿದ್ದಳು.

ನಾವೆಲ್ಲ ಸಮಾಧಾನ ಹೇಳಿದೆವು. ’ಬದುಕಿನ ಅನಿವಾರ್ಯ ಅಂಗ ಇದು ಮಾಧು. ಸುಮ್ಮನಿರು, ನೀನು ಹೇಗಿರ್ತೀಯೋ ಎಲ್ಲ ಹಾಗೇ ಆಗ್ತದ. ಮನಸ್ಸು ಗಟ್ಟಿ ಮಾಡ್ಕೋ. ಗೌರವದೊಂದಿಗೆ ಮಾತಾಡು. ಆದರೆ, ಯಾರಾದ್ರೂ ನಿನ್ನ ವಿಧೇಯತೆ ಮೇಲೆ ಸವಾರಿ ಮಾಡಕ್ಕೆ ಬಂದ್ರೆ ಮಾತ್ರ ಸುಮ್ಮನೇ ಸಹಿಸಿಕೋಬ್ಯಾಡ. ಒಮ್ಮೆ ಸುಮ್ಮನಿದ್ದರೆ ಮುಂದೆ ಅದೇ ರೂಢಿ ಆಗ್ತದೆ’ ಎಂದೆಲ್ಲ ಮಹಾ ಅನುಭವಸ್ಥರಂತೆ ಮಾತನಾಡಿದೆವು. ಹಳೆಯ ನೆನಪುಗಳನ್ನು ಮತ್ತೊಮ್ಮೆ ಹೊರ ತೆಗೆದು ಹಂಚಿಕೊಂಡೆವು. ನಾವೂ ಆಕೆಯೊಂದಿಗೆ ಕಣ್ಣೀರು ಹಾಕಿದೆವು. ಆಕೆಯನ್ನು ಹತ್ತಿಸಿಕೊಂಡ ಗಾಡಿ ಕಾಣದಾದಾಗ ಎಂಥದೋ ಖಾಲಿ ಭಾವ.

ಮನೆಯಲ್ಲಿ ಕೂತವಳಿಗೆ ಮಾಧವಿಯದೇ ನೆನಪು. ನಾನೂ ಒಂದಲ್ಲ ಒಂದಿನ ಅಪ್ಪ-ಅವ್ವನ ಮನೆ ಬಿಟ್ಟು ಹೋಗಬೇಕು. ಯಾರೋ ಅಪರಿಚಿತನೊಂದಿಗೆ ಜೀವನಪೂರ್ತಿ ಕಳೆಯಬೇಕು. ಯಾಕೆ? ಇದು ಯಾರು ಮಾಡಿದ ನೀತಿ? ಎಂದೆಲ್ಲ ಮನಸ್ಸು ತಳಮಳಿಸಿತು. ಗೊತ್ತಿರದ ವ್ಯಕ್ತಿಯೊಂದಿಗೆ ಹೇಗೆ ಬದುಕುವುದು ಎಂಬ ದಿಗಿಲು ಹೆಚ್ಚಾಗುತ್ತ ಹೋದಂತೆ, ಅವ್ವನ ಹತ್ತಿರ ಹೋದೆ. ದುಗುಡ ಹೇಳಿಕೊಂಡೆ. ಆಕೆ ನಕ್ಕಳು. ನಾನೂ ಹಂಗೇ ಬಂದಿದ್ದು ಪಲ್ಲು. ನಿಮ್ಮಪ್ಪನ್ನ ಮೊದಲು ನೋಡಿದ್ದೇ ಮದುವೆ ದಿನದಂದು ಎಂದಳು. ಈಗ ನಾವು ಚೆನ್ನಾಗೇ ಇದ್ದೇವಲ್ಲ? ’ಯಾವಾಗ್ಲೂ ಇದು ಹಂಗ ಪುಟ್ಟಿ. ಇರೋ ಜಾಗ ಬಿಟ್ಟು ಇನ್ನೆಲ್ಲೋ ಬದುಕು ಶುರು ಮಾಡ್ತೀವಿ. ಕ್ರಮೇಣ ಅದೇ ಅಭ್ಯಾಸವಾಗಿಬಿಡ್ತದ. ಇದು ಮದುವೆಗಷ್ಟ ಸೀಮಿತ ಅನ್ಕೋಬ್ಯಾಡ. ಹುಡುಗ್ರನ್ನ ನೋಡು. ನೌಕರಿ ಹುಡುಕ್ಕಂಡು ಎಲ್ಲೆಲ್ಲೋ ಹೋಗ್ತಾವು. ಏನೆಲ್ಲ ಕಷ್ಟಪಡ್ತಾವು. ಅವ್ರು ಕೂಡ ಬದುಕೋದು ಅಪರಿಚತಳ ಜೊತೆಗೇ ಅಲ್ಲಾ? ಮೊದಮೊದ್ಲು ಇದು ಅನ್ಸೋದ ಹಿಂಗ. ಕ್ರಮೇಣ ಅಭ್ಯಾಸ ಆಗ್ತದ’ ಎಂದು ಸಮಾಧಾನ ಹೇಳಿದಳು.

ಅಷ್ಟೇ ಅಲ್ಲ, ’ಇನ್ನೊಂದು ವಾರದಾಗ ಮಾಧವಿನ ನಿನಗ ಫೋನ ಮಾಡಿ ಹೇಳ್ತಾಳ: ತಾನೆಷ್ಟು ಆರಾಮ ಇದ್ದೀನಿ ಅಂತ. ಬೇಕಾದ್ರ ನೋಡು’ ಎಂದು ಸವಾಲೂ ಎಸೆದಳು.

ಅದಕ್ಕಾಗಿ ಒಂದು ವಾರವೇನೂ ಬೇಕಾಗಲಿಲ್ಲ. ಎರಡೇ ದಿನದೊಳಗೆ ಮಾಧವಿ ಫೋನ್‌ ಮಾಡಿದಳು. ಧ್ವನಿಯಲ್ಲಿ ಧಾವಂತವಿಲ್ಲ. ಆರಾಮದೀನಿ ಪಲ್ವಿ. ಏನೂ ಸಮಸ್ಯಾ ಇಲ್ಲ. ಎಲ್ರೂ ಚೆಂದ ನೋಡ್ಕಂತಾರ. ನೀನೂ ಲಗೂ ಮದ್ವಿ ಆಗು ಎಂದು ಹಿರಿಯಳಂತೆ ಬುದ್ಧಿವಾದ ಹೇಳಿದಳು.

ನಾನು ಅವಾಕ್ಕಾಗಿದ್ದೆ. ಕೆ.ಎಸ್‌. ನರಸಿಂಹಸ್ವಾಮಿಯವರ ’ಮೊದಲ ದಿನ ಮೌನ’ ಗೀತೆ ಅಣಕಿಸಿತು.

ಸುಮ್ಮನೇ ಕೂತ ನನ್ನನ್ನು ನೋಡಿ ಅವ್ವ ನಕ್ಕಳು.

- ಪಲ್ಲವಿ ಎಸ್‌.