ಮೇಲು ಕೀಳು(ಪ್ರೇರಕ ಪ್ರಸಂಗಗಳು)
ರೋಮ ಸಾಮ್ರಾಜ್ಯದ ಸಾಮ್ರಾಟ ಅಲೆಗ್ಸಾಂಡರರು ದೇಶದ ಆಂತರಿಕ ಆಡಳಿತವನ್ನು ಅರಿಯಲು ಆಗಾಗ್ಗೆ
ವೇಷ ಬದಲಿಸಿ ಒಬ್ಬರೇ ನಡೆಯುತ್ತಲೇ ತಿರುಗುತ್ತಿದ್ದರು.ಒಮ್ಮೆ ತಿರುಗುತ್ತ ತಿರುಗುತ್ತ ದಾರಿ ತಿಳಿಯದ ಒಂದು
ಗಲ್ಲಿಗೆ ಬಂದರು.ಮುಂದಿನ ದಾರಿ ತಿಳಿಯಲು ಯಾರಾದರೂ ಕಂಡಾರೆಂದು ನೋಡುತ್ತ ನಿಂತಿದ್ದರು.ಆಗ
ಕೆಲಸದ ಮೇಲಿದ್ದ ಸಿಪಾಯಿ ಎದುರಾದನು.
'ಅಣ್ಣಾ,ಈ ದಾರಿ ಎಲ್ಲಿಗೆ ಹೋಗುತ್ತದೆ?'ಎಂದು ಕೇಳಿದರು.
'ಇದೆಲ್ಲೂ ಹೋಗುವದಿಲ್ಲ.ಇಲ್ಲೇ ಬಿದ್ದಿರುತ್ತದೆ' ನಗುತ್ತ ಸಿಪಾಯಿ ಹೇಳಿದ.
'ಇರಲಿ ನನಗೆ ಇವರ ಮನೆಗೆ ಹೋಗಬೆಕಾಗಿದೆ ದಾರಿ ತೋರಿಸುವಿರಾ?'ಎಂದು ವಿಳಾಸದ ಚೀಟಿ
ತೋರಿಸಿದರು.
'ಮೂರ್ಖ,ತಿಳಿಯುವುದಿಲ್ಲವೇ!ನಾನು ಸರಕಾರಿ ಅಧಿಕಾರಿ' ದಾರಿ ತೋರಿಸುವದು ನನ್ನ ಕೆಲಸವಲ್ಲ.ಹೋಗು
ಯಾರನ್ನಾದರೂ ಕೇಳು ಹೋಗು' ಎಂದ ಸೆಡವಿನಿಂದ.
ರಾಜ ನಮ್ರತೆಯಿಂದ ಕೇಳಿದರು-'ಸಾಹೇಬರೆ,ಸರಕಾರಿ ಅಧಿಕಾರಿಗಳು ತಿಳಿಯದವರಿಗೆ ದಾರಿ ತೋರಿಸಿದರೆ
ತಪ್ಪಾಗುವದೇ?ಹೋಗಲಿ ಬಿಡಿ,ಬೇರೆಯವರನ್ನು ಕೇಳುವೆ.ತಾವು ಯಾವ ಪದಾಧಿಕಾರಿಗಳೆಂದು
ಕೇಳಬಹುದೇ?'ಎಂದರು.
ಸಿಪಾಯಿ ಹುಬ್ಬೇರಿಸಿ ಕೇಳಿದ-'ಕಣ್ಣು ಕಾಣುವುದಿಲ್ಲವೇ? ಕುರುಡನೇ! ನನ್ನ ಪೋಷಾಕು ನೋಡಿ ನಾನು
ಯಾರೆಂದು ಗುರುತಾಗಲಿಲ್ಲವೆ?'
"ತಾವು ಸಿಪಾಯಿಗಳೇನು?" ರಾಜರೆಂದರು.
"ಅದಕ್ಕೂ ಮೇಲು" ಸಿಪಾಯಿ ಹೇಳಿದ.
"ಹವಾಲದಾರರೇ?"
"ಅದಕ್ಕೂ ಮೇಲೆ"ಸಿಪಾಯಿ ಎಂದ.
"ನಾಯಕರೇ?"
"ಹಾಂ! ನೀನೀಗ ನಾನು ಯಾರೆಂದು ಸರಿಯಾಗಿ ಗುರುತಿಸಿದೆ.ಅದಿರಲಿ ಇಷ್ಟೆಲ್ಲ ಕೇಳುವ ಅವಶ್ಯಕತೆ ಏನು?
ನೀನಾರು?"ಸಿಪಾಯಿ ಕೇಳಿದ.
"ನಾನೂ ಒಬ್ಬ ಸರಕಾರಿ ಮನುಷ್ಯನೇ"
ಸಿಪಾಯಿ ಸ್ವಲ್ಪು ನಮ್ರನಾಗಿ "ನೀವೂ ನಾಯಕರೇ?" ಎಂದು ಕೇಳಿದ ಮೆಲ್ಲಗೆ.
"ಅದಕ್ಕೂ ಮೇಲೆ" ರಾಜರೆಂದರು.
"ಸೇನಾಪತಿಯೇ?"
"ಅದಕ್ಕೂ ಮೇಲೆ"
"ಸುಬೇದಾರರೇ?"
"ಅದಕ್ಕೂ ಮೇಲೆ"
ಸಿಪಾಯಿ ಗಾಬರಿಯಾಗಿ "ಹಾಗಾದರೆ ತಾವು ಮಂತ್ರಿಗಳೇನು?" ಎಂದ.
"ಸ್ವಲ್ಪು ಸಮೀಪ ಬಂದಿರಿ.ಇನ್ನೂ ಒಂದು ಮೆಟ್ಟಿಲು ಮೇಲೆ"
ಸಿಪಾಯಿ ಕಣ್ಣು ಬಿಟ್ಟು ನೋಡಿದ.ಸಾದಾ ವೇಷದಲ್ಲಿ ಸಾಮ್ರಾಟ್ ಅಲೆಗ್ಸಾಂಡರರೇ ನಿಂತಿದ್ದರು.ಸಿಪಾಯಿಯ
ಕಾಲು ಕುಸಿದವು.ತಡಬಡಿಸುತ್ತ ಅವರ ಕಾಲ ಮೇಲೆ ಬಿದ್ದು ತನ್ನ ತಪ್ಪಿಗೆ ಕ್ಷಮೆ ಕೇಳತೊಡಗಿದ.
"ಕ್ಷಮೆ ಕೇಳುವ ಅವಶ್ಯಕತೆ ಇಲ್ಲ.ನಾನು ಬಲ್ಲೆ- ಬರಿ ಕೊಡ ಸಪ್ಪಳ ಮಾಡುವದೆಂದು.ನೀನು ದೊಡ್ಡವನಾದಾಗ
ನನ್ನಂತೆಯೇ ನಮ್ರತೆಯಿಂದ ವರ್ತಿಸುವೆ.ಯಾರು ಎಷ್ಟು ಎತ್ತರಕ್ಕೆ ಹೋಗುವರೋ ಅಷ್ಟು
ಸಹನಶೀಲ-ವಿನಮ್ರರಾಗುತ್ತಾರೆ.ಎಷ್ಟು ಕೆಳಕ್ಕಿಳಿಯುವರೋ ಅಷ್ಟು ಕೀಳಾಗುವರು,ಗರ್ವದಿಂದ ತುಂಬುವರು"
ಎಂದರು.