ಕಪ್ಪೆ ಕಪ್ಪೆ ನೀರು ಕೊಡು...
ಶಾಲೆಯ ಆರಂಭದ ದಿನ. ಒಂದನೇ ತರಗತಿಗೆ ಕಾಲಿಡುವ ಸಂತಸ. ನನ್ನ ಮನೆಯ ಹತ್ತಿರವೇ ಇರುವ ಶಾಲೆ. ಶಾಲೆಯ ಗಂಟೆಯ ಸದ್ದು ಯಾವಾಗಲೂ ನಮ್ಮ ಮನೆಗೆ ಕೇಳುತ್ತಿತ್ತು. ನನ್ನ ಅಣ್ಣ ಅಕ್ಕ ಎಲ್ಲರೂ ಅಲ್ಲಿ ಓದಿದವರೇ. ನಮ್ಮ ಹಳ್ಳಿಯಲ್ಲಿರುವ ಏಕೈಕ ಕನ್ನಡ ಶಾಲೆ ಅದು. ಕೇರಳವಾಗಿದ್ದರಿಂದ ಮಲಯಾಳ ಕಲಿಯಬೇಕೆಂದಿದ್ದವರಿಗೆ ಬಸ್‌ನಲ್ಲಿಯೇ ಶಾಲೆಗೆ ಹೋಗಬೇಕು. ಅಂತೂ ಬಸ್‌ನಲ್ಲಿ ಮಕ್ಕಳನ್ನು ಕಳುಹಿಸಲು ಇಷ್ಟವಿಲ್ಲದ ಮಲಯಾಳಿಗರಿಗೆ ಕನ್ನಡ ಶಾಲೆಯೇ ಆಶ್ರಯ. ಒಂದರಿಂದ ಏಳನೇ ತರಗತಿಯವರೆಗಿರುವ "ಮಜದೂರರ" ಶಾಲೆ. ಅಲ್ಲಿ ಕಲಿಯುವಂತಹ ಮಕ್ಕಳೆಲ್ಲರಿಗೂ ಬಡತನದ ಕಹಿ ಗೊತ್ತು. ಬೆರಳೆಣಿಕೆಯಷ್ಟೇ ಮಂದಿ ಸ್ವಲ್ಪ ಅನುಕೂಲ ಕುಟುಂಬದಿಂದ ಬಂದವರಾಗಿದ್ದರು. ಆದರೂ ಬಡತನದ ಬೇನೆಯಲ್ಲಿಯೂ ಉತ್ತಮವಾಗಿ ಕಲಿತು ಏಳನೇ ತರಗತಿಯವರೆಗೇರಿದರೂ ನಂತರ ಹೈಸ್ಕೂಲ್ ಮೆಟ್ಟಿಲು ಹತ್ತಲು ತಾಪತ್ರಯಗಳು ಅವರ ಬೆನ್ನು ಬಿಡುತ್ತಿರಲಿಲ್ಲ.
ಜೂನ್ ಒಂದನೇ ತಾರೀಕಿಗೆ ಹೊಸ ಅಧ್ಯಯನ ವರ್ಷ ಪ್ರಾರಂಭ. ಅಂದು ಒಂದನೇ ಕ್ಲಾಸಿಗೆ ಕಾಲಿಟ್ಟಾಗ ಅತೀವ ಸಂತಸವಾಗಿತ್ತು. ಪ್ರಾರಂಭ ದಿನದಂದು ಒಂದನೇ ಕ್ಲಾಸಿನ ಮಕ್ಕಳನ್ನು ಸ್ವಾಗತಿಸಲು ಶಾಲೆ ಸಜ್ಜಾಗಿತ್ತು. ಹೊಚ್ಚ ಹೊಸತಾದ ನೀಲಿ ಬಣ್ಣದ ತುಂಡು ಲಂಗ, ಬಿಳಿ ರವಿಕೆ ಧರಿಸಿ, ಮೋಟುದ್ದದ ಜಡೆಗೆ ಚೆಂಡು ಹೂವನ್ನು ಮುಡಿದು ಶಾಲೆಗೆ ಹೋದ ಬಾಲ್ಯದ ನೆನಪು. ಹೊಸ ತರಗತಿ, ಅಪ್ಪ ತಂದು ಕೊಟ್ಟಂತಹ ಹೊಸ ಬ್ಯಾಗು, ಮರದ ಸ್ಲೇಟು, ಪೆನ್ಸಿಲು ಇರಿಸುವ ಪ್ಲಾಸ್ಟಿಕ್ ಪೆಟ್ಟಿಗೆ (ನಮ್ಮಲ್ಲಿ ಹೆಚ್ಚಾಗಿ ಇದನ್ನು ಕಂಪಾಸು ಪೆಟ್ಟಿಗೆ ಅಂತನೇ ಹೇಳ್ತಾರೆ ) ಅದೂ ಅಲ್ಲದೆ ರೈನ್‌ಕೋಟ್, ಚಪ್ಪಲಿ, ಕೈತುಂಬಾ ಬಳೆ, ಅದಾಗಲೇ ಅಣ್ಣ ಖರೀದಿಸಿ ಕೊಟ್ಟ ಉದ್ದದ ಬಳಪ ಎಲ್ಲವೂ ಹೊಸತು ಹೊಸತು. ಮೊದಲ ದಿನ ಗುರುಗಳು ತರಗತಿಗೆ ಬಂದು ಆರೆಂಜ್ ಮಿಠಾಯಿ ಕೈಗೆ ಕೊಟ್ಟಿದ್ದರು. ಇನ್ನು ಕೆಲವು ಮಕ್ಕಳಂತೂ ರಂಪಾಟ ಮಾಡಿ "ಅಮ್ಮಾ" ಎಂದು ಅಳುವಾಗ, ಅವರನ್ನು ನೋಡಿ ನಾನು ಅತ್ತಿದ್ದೆ. ಆ ಶಾಲೆಯಲ್ಲಿರುವ ಎಲ್ಲಾ ಟೀಚರ್‌ಗಳಿಗೂ ನಾನು ಮೊದಲೇ ಪರಿಚಿತಳಾಗಿದ್ದ ಕಾರಣ ಹೆಚ್ಚಿನ ಭಯವೇನು ಇಲ್ಲವಾಗಿತ್ತು. ಅದೂ ಅಲ್ಲದೆ ತರಗತಿಯ ಹೊರಗೆ ಬಂದರೆ ನಮ್ಮ ಮನೆಯ ಗೇಟು, ಮಾವಿನ ಮರ ಎಲ್ಲವೂ ಕಾಣಿಸುತ್ತಿತ್ತು. ಅದನ್ನು ಕಂಡಾಗ ಅದೇನೋ ಒಂಥರಾ ತೃಪ್ತಿ.
ಮೊದನ ದಿನದ ಅನುಭವವಂತೂ ಅಚ್ಚಳಿಯದ ನೆನಪಾಗಿ ಉಳಿದಿದೆ. ನನ್ನನ್ನು ಮೊದಲ ಬೆಂಚಿನಲ್ಲಿ ಕುಳಿತು ಕೊಳ್ಳಲು ಹೇಳಿದಾಗ ಏನೋ ಒಂದು ರೀತಿ ಭಯ. ಮೊದಲ ಬೆಂಚಿನಲ್ಲಿ ಯಾರೂ ಕುಳಿತು ಕೊಳ್ಳಲು ಧೈರ್ಯ ತೋರಿಸದೇ ಇರುವ ಕಾರಣ ಮೊದಲನೇ ಬೆಂಚು ಖಾಲಿಯಾಗಿತ್ತು. ನಾನೊಬ್ಬಳೇ ಮುಂದಿನ ಬೆಂಚಿನಲ್ಲಿ ಕುಳಿತಿದ್ದೆ. ಮುಸು ಮುಸು ಅಳುವ ಮಕ್ಕಳು ಒಂದೆಡೆಯಾದರೆ ತುಂಟ ಬುದ್ದಿ ತೋರಿಸುವ ಮಕ್ಕಳು ಇನ್ನೊಂದೆಡೆ. ಸ್ವಲ್ಪ ಹೊತ್ತು ಕಳೆದ ನಂತರ ಇನ್ನೊಂದು ಹುಡುಗಿಯನ್ನು ಕರೆದು ನನ್ನ ಹತ್ತಿರ ಕುಳಿತು ಕೊಳ್ಳಿಸಿದ ನಂತರವೇ ನನಗೆ ಸಮಾಧಾನವಾದದ್ದು. ಅವಳೇ ನನ್ನ ಮೊದಲ ಗೆಳತಿಯೂ ಆಗಿ ಬಿಟ್ಟಳು. ಬೆಳಗ್ಗೆ ಅಸೆಂಬ್ಲಿ ಮುಗಿಸಿ ಹತ್ತು ಗಂಟೆಗೆ ಶಾಲೆ ಆರಂಭವಾದುದರಿಂದ ಇನ್ನಿತರ ತರಗತಿಯಲ್ಲಿ ಪಾಠ ಮುಂದುವರಿಯುತ್ತಿತ್ತು. ಹನ್ನೊಂದುವರೆ ಗಂಟೆಯ ಮಧ್ಯಾಂತರದಲ್ಲಿ ಒಂದನೇ ಕ್ಲಾಸಿನ ಪುಟಾಣಿಗಳನ್ನು ನೋಡಲು ಮೇಲಿನ ತರಗತಿಯ ಮಕ್ಕಳ ಗುಂಪೇ ಬರುತ್ತಿತ್ತು. ಅವರಲ್ಲಿ ಅಣ್ಣ ಅಕ್ಕಂದಿರು ತಮ್ಮ ತಮ್ಮ ತಂಗಿ, ತಮ್ಮಂದಿರನ್ನು ಗೆಳೆಯರಿಗೆ ಪರಿಚಯ ಮಾಡಿಕೊಡುವುದು, ಮಿಠಾಯಿ ತಂದು ಕೊಡುವುದು ಎಲ್ಲಾ ಮಾಡುತ್ತಿದ್ದರು. ತರಗತಿಯಿಡೀ ಹೊಸ ಬಟ್ಟೆಯ ಬ್ಯಾಗಿನ ಪರಿಮಳದಿಂದ ತುಂಬಿತ್ತು. ಮಕ್ಕಳಿನ್ನು ಸುಮ್ಮನೆ ಹರಟೆ ಮಾಡುವುದು ಬೇಡ ಎಂದು ನಮ್ಮ ಗುರುಗಳು ಎಲ್ಲರಲ್ಲೂ ಹೆಸರನ್ನು ಕೇಳಿದರು. ಹಾಗೆಯೇ ಆಯ್ದ ಕೆಲವು ಮಕ್ಕಳಲ್ಲಿ ನಿಮ್ಮ ಅಪ್ಪನ ಹೆಸರೇನು? ಅಮ್ಮನ ಹೆಸರೇನು? ಅಕ್ಕ, ಅಣ್ಣನ ಹೆಸರು ಹೇಳು ಎಂದು ಕೇಳುತ್ತಿದ್ದರು. ಹಲವಾರು ಭಾಷೆಗಳಿರುವ ನಮ್ಮೂರಿನ ಶಾಲೆಯಲ್ಲಿ ಕೊಂಕಣಿ, ಹವ್ಯಕ, ಮರಾಠಿ, ಮಲಯಾಳಂ, ತುಳು ಭಾಷೆಯನ್ನಾಡುವ ಮಕ್ಕಳು ಇದ್ದರೂ ತರಗತಿಯಲ್ಲಿ ತುಳುವರದ್ದೇ ಮೇಲುಗೈ ಯಾಗಿತ್ತು. ಇಂತಿರುವಾಗ ನಮ್ಮ ಮಾಸ್ತರ್ ನಿನ್ನ ಅಪ್ಪನ ಹೆಸರು ಏನು ಎಂದು ಓರ್ವ ಸಹಪಾಠಿಯೊಡನೆ ಕೇಳಿದಾಗ, ಹೆದರುತ್ತಾ ಎದ್ದು ನಿಂತ ಹುಡುಗ "ಪೊಪ್ಪ" ಎಂದ. ಅಪ್ಪನನ್ನು ಮನೆಯಲ್ಲಿ ಪೊಪ್ಪ ಎಂದು ತುಳುವಿನಲ್ಲಿ ಸಂಭೋಧಿಸುತ್ತಿರುವ ಆ ಹುಡುಗ ತನ್ನ ಅಪ್ಪನ ಹೆಸರು ಪೊಪ್ಪ ಎಂದೇ ತಿಳಿದಿದ್ದ. ಈಗಲೂ ಆ ಹುಡುಗನನ್ನು ಕಂಡಾಗ ಪೊಪ್ಪ ನೆನಪಿಗೆ ಬರುತ್ತಾರೆ.
ತರಗತಿ ಆರಂಭವಾದಾಗ ಗುರುಗಳು ಕರಿಹಲಗೆಯಲ್ಲಿ ಅ ಆ ಇ ಈ ಬರೆದು ನಮ್ಮ ಸ್ಲೇಟಿನಲ್ಲಿಯೂ ಬರೆದು ಕೊಟ್ಟು ಅದರ ಮೇಲೆಯೇ ಬರೆಯುವಂತೆ ಹೇಳುತ್ತಿದ್ದರು. ಅದು ಬರೆದು ಉಜ್ಜಿದಷ್ಟೂ ಹೋಗದಿದ್ದರೆ ನೀರು ಹಾಕಿ ಉಜ್ಜುವುದು ಅಭ್ಯಾಸ. ಇಲ್ಲದಿದ್ದರೆ ಸ್ಲೇಟಿನ ಮೇಲೆ ಅಂಗೈ 'ಕಪ್ಪೆ ಕಪ್ಪೆ ನೀರು ಕೊಡು ಹಾಲು ಕೊಡ್ತೇನೆ 'ಎಂದು ರಾಗ ಎಳೆಯುತ್ತಿದ್ದೆವು. ಅಂಗೈ ಬೆವರು ಸ್ಲೇಟಿನ ಮೇಲೆ ಮೂಡಿದಾಗ ಕಪ್ಪೆಯೇ ನೀರು ಕೊಟ್ಟ ಸಂತಸವಾಗುತ್ತಿದ್ದು. ಅದೂ ಅಲ್ಲದೆ ನೀರ ಕಡ್ಡಿ( ಒಂದು ಜಾತಿಯ ಹುಲ್ಲು)ಯನ್ನು ತೆಗೆದು ಕೊಂಡು ಶಾಲೆಗೆ ಹೋಗುತ್ತಿದ್ದೆವು. ಸ್ಲೇಟಿನ ವಿಷಯ ಹೇಳುವಾಗ ಬಳಪವೂ ಬೇಕಲ್ಲವೇ? ಅದು ಉದ್ದವಾಗಿಯೇ ಇರಬೇಕೆಂದು ಜಾಗರೂಕತೆ ವಹಿಸುತ್ತಿದ್ದದ್ದು, ಸುಂದರವಾದ ಪೆಟ್ಟಿಗೆ ಕೈಗೆ ಸಿಕ್ಕಾಗ ಕಡ್ಡಿಯನ್ನು ತುಂಡುಮಾಡಿ ಅದರೊಳಗೆ ಹಾಕಿದ್ದು, ನಂತರ ಅದು ತುಂಡಾಗಿ ಹೋಯ್ತು ಇನ್ನು ಅದನ್ನು ಉದ್ದಮಾಡಿ ಕೊಡು ಎಂಬುದಾಗಿ ಅಮ್ಮನಲ್ಲಿ ರಚ್ಚೆ ಹಿಡಿದದ್ದು. ಎಲ್ಲವೂ ಶಾಲೆಯ ತುಂಟತನದ ದಿನಗಳ ನೆನಪುಗಳು... ಪ್ರಸ್ತುತ ಶಾಲೆ ಆರಂಭವಾಗಿ ಮಕ್ಕಳು ಶಾಲೆಯತ್ತ ಹೆಜ್ಜೆಯಿಡುತ್ತಿರುವುದನ್ನು ಕಂಡಾಗ ನನ್ನ ಬಾಲ್ಯದ ನೆನಪುಗಳು ಅಕ್ಷರಗಳ ರೂಪವನ್ನು ಪಡೆಯಿತು.