ಪ್ರಶಂಸೆಯ ಪ್ರಶಂಸೆ-ಪಾ.ವೆಂ.ಆಚಾರ್ಯರ ಬರಹಗಳಿಂದ.

ಪ್ರಶಂಸೆಯ ಪ್ರಶಂಸೆ-ಪಾ.ವೆಂ.ಆಚಾರ್ಯರ ಬರಹಗಳಿಂದ.

ಬರಹ

ಆ ದಿವಸ ನನಗಿನ್ನೂ ನೆನಪಿದೆ.ನಾನಾಗ ನಾಲ್ಕನೇ ಫಾರ್ಮಿನಲ್ಲಿದ್ದೆ.ನನ್ನ ಎಂಗ್ಲೀಷ್ ಮಾಸ್ತರರು ಕ್ಲಾಸಿಗೆ ಬಂದವರೇ ತಾವು ತಿದ್ದಲು ಒಯ್ದಿದ್ದ ಪ್ರಬಂಧ ಪುಸ್ತಕಗಳಲ್ಲಿ ಒಂದನ್ನು ಆರಿಸಿ ಅದರ ಕೆಲ ವಾಕ್ಯಗಳನ್ನು ಕ್ಲಾಸಿಗೆಲ್ಲ ಓದಿ ಹೇಳಿದರು.

"ಮಕ್ಕಳೇ ನಿಮ್ಮಲ್ಲೇ ಒಬ್ಬಾತ ಈ ಪ್ರಬಂಧ ಬರೆದಿದ್ದಾನೆಂಬುದು ನನಗೆ ಹೆಮ್ಮೆ ತರುತ್ತದೆ.ನಮಗೂ ತರಬೇಕು.ನನ್ನ ಅಭಿಪ್ರಾಯದಲ್ಲಿ ಅವನು ಒಳ್ಳೆ ಲೇಖಕನಾಗುತ್ತಾನೆಂದು ನನಗೆ ಅನಿಸುತ್ತದೆ."ಹೀಗೆ ಹೇಳಿ ಅವರು ನನ್ನನ್ನು ಕರೆದು 'ಇವನೇ ಈ ಪ್ರಬಂಧದ ಕರ್ತ' ಎಂದು ಬೆನ್ನು ಚಪ್ಪರಿಸಿದರು.ಅಳುಕಿನ ಸ್ವಭಾವದವನಾದರೂ ಆಗ ಒಳಗೆ ಒಂದು ಉತ್ಸಾಹದ ಬುಗ್ಗೆ ಒಡೆಯುತ್ತಿರುವಂತೆ ಅನಿಸುತ್ತದೆ.

"Good" ಎಂದು ಅವರು ತಮ್ಮ ಕೆಂಪು ಶಾಯಿಯಿಂದ ಗುರುತು ಹಾಕಿದ್ದ ಪ್ರಬಂಧವನ್ನು ಎಷ್ಟೋ ವರ್ಷ ನನ್ನ ಹತ್ತಿರ ಇಟ್ಟುಕೊಂಡಿದ್ದೆ.ಅದೇನು ಮಹಾ ಪ್ರಬಂಧವಾಗಿರಲಿಲ್ಲ.'ಹೇಂಟೆ' ಅದರ ವಸ್ತುವಾಗಿತ್ತು.ನಿತ್ಯ ಕಂಡದ್ದನ್ನು ನೇರವಾಗಿ ಆತ್ಮಕಥನ ರೂಪದಲ್ಲಿ ಸುಲಭವಾದ ವಾಕ್ಯಗಳಲ್ಲಿ ಬರೆದಿದ್ದೆನಷ್ಟೇ.ಆದರೆ ನನ್ನ ಲೇಖಕತ್ವದ ಬುನಾದಿ ಅಂದೇ ಬಿದ್ದಿತು ಎಂದು ನನ್ನ ಧೃಢವಾದ ನಂಬಿಕೆ.

ಹೊಗಳಿಕೆಯನ್ನು ತೆಗಳುವವರು ಎಷ್ಟೋ ಜನ.ಆದರೆ ನಾನು ಅವರಲ್ಲೊಬನಲ್ಲ.ಹೊಗಳಿಕೆಯಿಂದ ಉಬ್ಬದ ಜೀವವೇ ಇಲ್ಲ.ಅದೊಂದು ತರಹದ ವಿಟಾಮಿನ್.ಅದೇ ಅನ್ನವಾಗಲಾರದು ನಿಜ,ಆದರೆ ಅದಿಲ್ಲದೆ ಯಾವ ಪೌಷ್ಠಿಕ ಆಹಾರವೂ ಸರಿಯಾಗಿ ಜೀರ್ಣವಾಗಿ ಮೈಗೂಡಲಾರದು.ತಕ್ಕ ಸಮಯದಲ್ಲಿ ಸಿಕ್ಕ ಹೊಗಳಿಕೆ ಹೃದಯವನ್ನು ಅರಳಿಸುವುದಲ್ಲದೆ ಹುದುಗಿದ ಶಕ್ತಿಯನ್ನು ಹೊರ ತೆಗೆಯುತ್ತದೆ.

ಸಮರ್ಸೆಟ್ ಮಾಮ್ ಹತ್ತು ಮಹಾ ಕಾದಂಬರಿ ಮತ್ತು ಕಾದಂಬರಿಕಾರರನ್ನ ಕುರಿತು ಬರೆದ ಪುಸ್ತಕದಲ್ಲಿ ಆ ಮಹಾಪ್ರತಿಭಾಶಾಲಿಗಳಲ್ಲಿ ಹೆಚ್ಚಿನವರು ಪ್ರಶಂಸೆಯಿಂದ ಉಬ್ಬುತ್ತಿದ್ದರೆಂದು ಹೇಳಿದ್ದಾನೆ.ಇದರಲ್ಲಿ ತಪ್ಪೇನು ಇಲ್ಲ.ಹೊಗಳಿಕೆ ನಮ್ಮ ನಿಮ್ಮಂಥ ಸಾಮಾನ್ಯರಿಗೆ ಎಷ್ಟು ಹಿತವೆನಿಸುತ್ತದೊ ಮಹಾಶಯರಿಗೂ ಅಷ್ಟೇ.ಪ್ರತಿಭೆಗೂ ಹೊಗಳಿಕೆ ಉನ್ನಾಯಕವಾಗಿದೆ.ಅದೊಂದು ಸಾರ್ವತ್ರಿಕ ಅಮೃತ ಎನ್ನಬೇಕು.
ನನ್ನ ಹಿರಿಯ ಮಿತ್ರರೊಬ್ಬರ ಪತ್ನಿ ಐವತ್ತರಲ್ಲಿಯೂ ತರುಣಿಯಾಗಿಯೂ ಉತ್ಸಾಹಿಯಾಗಿಯೂ ಇದ್ದಾರೆ.ಇದಕ್ಕಾಗಿ ಅವರನ್ನು ನಾನು ಅಭಿನಂದಿಸಿದಾಗ ಅವರು ಹೇಳಿದ್ದು: "ಅದೆಲ್ಲ ಪ್ರಶಂಸೆಯ ಮಹಿಮೆ.ನಾನು ಅವಳನ್ನು ದಿನಕ್ಕೊಮ್ಮೆಯಾದರೂ ಪ್ರಶಂಸೆ ಮಾಡುತ್ತೇನೆ.ಅವಳ ಅಡಿಗೆಗಾಗಿ,ಅವಳ ಕಸೂತಿಗಾಗಿ ಇಲ್ಲವೇ ಅವಳು ಸೀರೆಯುಟ್ಟ ರೀತಿಗಾದರೂ".

ನಮ್ಮಲ್ಲಿ ಹೆಚ್ಚಿನವರು ನಮ್ಮ ಹೆಂಡಿಂದಿರಿಗೆ ಒಂದು ಒಳ್ಳೆ ಮಾತು ಹೇಳುವುದು ಅಗತ್ಯವೇ ಇಲ್ಲ ಎಂದು ಭಾವಿಸುತ್ತೇವೆ.ಹೆಂಗಸರು ತ್ಯಾಗಮೂರ್ತಿಗಳು ಎಂಬ ಸುಳ್ಳು ತಿಳಿವಳಿಕೆಯಿಂದ ನಾವು ಅವರನ್ನ ಪ್ರಶಂಸೆಯ ಬೆಳದಿಂಗಳಿಂದ ವಂಚಿಸಿ ಒಣಗಿಸುತ್ತೇವೆ.
" ಪೂಜ್ಯರನ್ನು ಪೂಜಿಸಲು ತಪ್ಪುವುದು ಹೇಗೆ ದೋಷವೊ ಹಾಗೆಯೇ ಪ್ರಸಂಸಾರ್ಹರನ್ನು ಪ್ರಶಂಸಿಸದಿರುವುದೂ ಪಾಪವೇ ".

ಪ್ರಸಿದ್ಧ ಬ್ಯಾಂಕ್ ಮ್ಯಾನೇಜರರೊಬ್ಬರು ಒಂದು ಶಾಖಾ ಕಚೇರಿಯಲ್ಲಿ ಕೊಟ್ಟ ಒಂದು ಪಾರ್ಟಿಗೆ ನಾನು ಹೋಗಿದ್ದೆ.ಬ್ಯಾಂಕಿನ ನೌಕರರೆಲ್ಲರೂ ಅದಕ್ಕೆ ಆಮಂತ್ರಿಸಲ್ಪಟ್ಟಿದ್ದರು.ಮ್ಯಾನೇಜರರು ಪಾರ್ಟಿ ಮುಕ್ತಾಯವಾಗುತ್ತಿದ್ದ ಹಾಗೆ ಸ್ಥಳೀಯ ಏಜೆಂಟರನ್ನು ಕುರಿತು "ನೀವು ಒಳ್ಳೆ ಕೆಲಸ ಮಾಡುತ್ತಾರೆಂದು ರಿಪೋರ್ಟು ಮಾಡಿದ ಆ ತರುಣ ಯಾರು?" ಎಂದು ಕೇಳಿದರು. ಏಜೆಂಟರು ಒಬ್ಬ ಬಹಳ ಎಳೇ ಹುಡುಗನನ್ನು ಕರೆಸಿದರು.ಮ್ಯಾನೇಜರರು ಎದ್ದು ಅವನ ಕೈ ಕುಲುಕಿ "ನೀವು ಇಷ್ಟೊಂದು ತರುಣ ವಯಸ್ಸಿನಲ್ಲಿ ಇಷ್ಟೊಂದು ದಕ್ಷತೆಯಿಂದ ಕೆಲಸ ಮಾಡುವುದು ಕೇಳಿ ನನಗೆ ಬಹಳ ಆನಂದವಾಗಿದೆ!" ಎಂದು ಹೇಳಿದರು.ತರುಣನ ಮುಖ ಅರಳಿದ ರೀತಿಯನ್ನು ನೋಡಿ ನನಗೆ ಆ ಬ್ಯಾಂಕು ದೇಶದ ಅತ್ಯಂತ ದಕ್ಷ ಬ್ಯಾಂಕುಗಳಲ್ಲಿ ಒಂದಾಗಿರುವುದು ಹೇಗೆ ಎಂದು ಅರ್ಥವಾಗಿ ಹೋಯಿತು.

ಒಳ್ಳೆಯ ಮಾತು ಹೇಳುವುದಕ್ಕೆ ಏನೂ ಖರ್ಚಾಗುವುದಿಲ್ಲವಾದರೂ ನಾವೆಲ್ಲ ಏಕೆ ಇಷ್ಟೆಲ್ಲಾ ಜಿಪುಣರಾಗುತ್ತೇವೆಯೋ ತಿಳಿಯದು.ಮಂದಿಯನ್ನು ಪ್ರಶಂಸಿಸುವುದಕ್ಕೆ ಪಂಡಿತರಿಗೆ ನಾಲಿಗೆಯೇ ಎಳುವುದಿಲ್ಲವಂತೆ.ನಮ್ಮ ದೇಶದಲ್ಲಿ ಪ್ರಶಂಸೆಗೂ ಮುಖ-ಸ್ತುತಿಗೂ ಅಂತರವನ್ನು ಗ್ರಹಿಸದಿರುವುದು ಇದಕ್ಕೊಂದು ಕಾರಣವೆಂದು ತೋರುತ್ತದೆ.

ಮಹಾಕವಿ ಭಾರವಿಯನ್ನು ಕುರಿತು ಒಂದು ಪ್ರಸಿದ್ಧ ಕಥೆ ಇದೆ.ಆತ ತರುಣನಾಗಿದ್ದಾಗಲೇ ಒಳ್ಳೆಯ ಕವಿಯಾಗಿದ್ದನಂತೆ.ಆದರೆ ಅವನ ತಂದೆ ಯಾವಾಗಲೂ ನೀನು ನಿರುಪಯೋಗಿ ದಡ್ಡ ಎಂದೇ ತೆಗಳುತ್ತಿದ್ದ.ಒಂದು ರಾತ್ರಿ ಭಾರವಿ ಕ್ರೋಧದಿಂದ ಕೆಳಗೆ ಮಲಗಿದ್ದ ತಂದೆಯ ಮೇಲೆ ಒಂದು ಕಲ್ಲನ್ನು ಒಯ್ದು ಅಟ್ಟದ ಕಿಂಡಿಯಲ್ಲಿ ಇಟ್ಟುಕೊಂಡನಂತೆ.ಆಗ ಕೆಳಗೆ ತಾಯಿಗೂ ತಂದೆಗೂ ನಡೆದ ಸಂವಾದ ಅವನ ಕಿವಿಗೆ ಬಿತ್ತು."ಎಲ್ಲರೂ ನಮ್ಮ ಮಗು ಶ್ರೇಷ್ಟ ಕವಿಯೆಂದು ಹೊಗಳುತ್ತಾರೆ.ನೀವು ಮಾತ್ರ ಪಾಪ,ಅವನನ್ನು ಯಾವಾಗಲೂ ತೆಗಳುವುದೇಕೆ?"ಎಂದಳು ತಾಯಿ."ನಿನಗೇನು ಗೊತ್ತು?ನಾನೂ ಹೊಗಳಿಬಿಟ್ಟರೆ ಅವನ ತಲೆಗೆ ಪಿತ್ತವೇರಿ ಮುಂದೆ ಅವನು ಏನೂ ಪ್ರಗತಿ ಹೊಂದಲಿಕ್ಕಿಲ್ಲ" ಎಂದನಂತೆ.ಭಾರವಿಗೆ ಪಶ್ಚಾತ್ತಾಪವಾಯಿತು ಅವನು ತಂದೆಯ ಕ್ಷಮೆ ಬೇಡಿದ ಎಂಬಿತ್ಯಾದಿಯಾಗಿ ಕತೆ ಮುಂದುವರೆಯುತ್ತದೆ.ಆದರೆ ಭಾರವಿಯ ತಂದೆ ಮಗನನ್ನು ಹೊಗಳಿ ಪ್ರೋತ್ಸಾಹಿಸುತ್ತಲೇ ಇದ್ದಿದ್ದರೆ ಅವನು ಇನ್ನೂ ಮಹಾ ಕವಿಯಾಗಬಹುದಿತ್ತೆಂದು ಆಧುನಿಕ ವಿಜ್ಞಾನದ ಸಂಶೋಧನೆಗಳಿಂದ ತರ್ಕಿಸಬಹುದು.

ಶಿಶು ವಿಜ್ಞಾನಿಗಳು ಇದನ್ನು ಪ್ರಯೋಗದಿಂದ ಸಿದ್ಧಪಡಿಸಿದ್ದಾರೆ.ಒಂದೇ ತರಗತಿಯ ವಿದ್ಯಾರ್ಥಿಗಳನ್ನು ಮೂರು ತಂಡಗಳಾಗಿ ವಿಂಗಡಿಸಿ.ಒಂದನೆಯ ತಂಡದಲ್ಲಿ ವಿದ್ಯಾರ್ಥಿಗಳು ಸರಿಯಾಗಿ ಬಿಡಿಸಿದ ಲೆಕ್ಕಗಳಿಗೆ ಪ್ರೋತ್ಸಾಹವನ್ನೂ,ಇನ್ನೊಂದರಲ್ಲಿ ತಪ್ಪಾಗಿ ಬಿಡಿಸಿದ ಲೆಕ್ಕಗಳಿಗೆ ದೂಷಣೆಯನ್ನೂ ಕೊಟ್ಟರು.ಮೂರನೆಯ ಪ್ರೋತ್ಸಾಹ-ದೂಷಣೆ ನೀಡದೆ ನಿರ್ಲಕ್ಷ್ಯ ಮಾಡಿದರು.ಮೊದಲನೇ ತಂಡದಲ್ಲಿ ದಿನ ಕಳೆದಂತೆ ಮಕ್ಕಳ ಕೆಲಸ ಉತ್ತಮವಾಗುತ್ತ ಹೊಯಿತು.ಎರಡನೆಯದರಲ್ಲಿಯೂ ಅಷ್ಟಿಷ್ಟು ಸುಧಾರಣೆ ಕಾಣಿಸಿತು.ಮೂರನೆಯ ತಂಡದ ಮಕ್ಕಳು ಇದ್ದಲ್ಲೇ ಇದ್ದರು.ಪ್ರಶಂಸೆಯ ಫಲಕ್ಕೆ ಬೇರೆ ಪ್ರಮಾಣ ಬೇಕೆ?

ಹೊಗಳುವುದು ಭಟ್ತಂಗಿತನ ಎಂಬ ತಿಳಿವಳಿಕೆ ಎಷ್ಟೋ ಜನರಿಗೆ ಸಸ್ಥಾನದಲ್ಲಿ ಪ್ರಶಂಸೆಯನ್ನು ಕೊಡುವುದಕ್ಕೆ ಆತಂಕವಾಗುತ್ತದೆ.ಭಟ್ಟಂಗಿತನವೆಂದರೆ ಪ್ರಶಂಸೆಯಲ್ಲ.ನಿಜವಾದ ಭಟ್ಟಂಗಿಗಳು ಪ್ರಶಂಸಕರಲ್ಲಿ ಕೇವಲ ಅನುಮೋದಕರು,ಬಾಲ ಆಡಿಸುವವರು,ನೀವು ಮಾಡಿದ್ದೇ ಸರಿ ಎಂಬುವವರು.ಒಳ್ಳೇ ಕೆಲಸವನ್ನು ಹೊಗಳುವವರಲ್ಲ.

ವಾಸ್ತವಿಕವಾಗಿ ಪ್ರಶಂಸೆಯೆಂಬುದು ದಾನದ ಹಾಗೆ.ದೊಡ್ಡವರು ಸಣ್ಣವರಿಗೆ ಅಥವಾ ಸಮಾನರು ಪರಸ್ಪರರಿಗೆ ಕೊಡುವಂಥದ್ದು.ನಾವು ಯಾರಿಂದ ಕೆಲಸ ಮಾಡಿಸಿಕೊಳ್ಳುತ್ತೇವೆಯೋ ನಮ್ಮ ದರ್ಜಿ,ನಮ್ಮ ಕ್ಷೌರಿಕ,ನಮ್ಮ ಮನೆಗೆ ಬಣ್ಣ ಬಳಿದವ-ಅವರಿಗೆ ನಾವು ಹೇಳುವ ಒಂದು ಪ್ರಶಂಸಾ ವಾಕ್ಯ ಸಂಬಳಕ್ಕಿಂತ ಇಮ್ಮಡಿ ಆನಂದವನ್ನು ತರುತ್ತದೆ.ಅವರಿಗೆ ತಮ್ಮ ಶ್ರಮದ ಸಾರ್ಥಕ್ಯವೆನಿಸುವುದು.ಅದರಲ್ಲಿ ಈ ಪ್ರಶಂಸೆ ಯಾವಾಗಲೂ ಅವರ ಕೆಲಸದ ಗುಣವನ್ನು ಹೆಚ್ಚಿಸುವುದು ಕಾಣುತ್ತದೆ.

ಪ್ರಶಂಸೆಯನ್ನು ಕೊಡುವುದಕ್ಕೂ ಮುದುಡಿಕೊಳ್ಳದೆ ತೆಗೆದುಕೊಳ್ಳುವುದಕ್ಕೂ ಔದಾರ್ಯ ಬೇಕು.ಆತ್ಮವಿಶ್ವಾಸವೂ ಬೇಕು.ಮಹಾಪುರುಷರು ಎಂದೂ ಪ್ರಶಂಸೆಯಿಂದ ಮುದುಡಿಕೊಳ್ಳುವುದಿಲ್ಲ.ಅದು ಅವರ ಆತ್ಮ ವಿಶ್ವಾಸವನ್ನು ಇನ್ನೂ ಹೆಚ್ಚಿಸಿದ್ದು ಕಾಣುತ್ತದೆ.ಮಹಾತ್ಮಾ ಗಾಂಧಿ ತಮ್ಮನ್ನು ಸಾಮಾನ್ಯ ಮಾನವ ಎಂದುಕೊಂಡರೂ ತಮ್ಮ ಒಳ್ಳೇ ಕೆಲಸಗಳಿಗೆ ಬಂದ ಪ್ರಶಂಸೆಯನ್ನು ತಿರಸ್ಕರಿಸುತ್ತಿದ್ದಿಲ್ಲ.ಮುಖ-ಸ್ತುತಿ ಯಾವುದು ಪ್ರಶಂಸೆ ಯಾವುದು ಎಂಬುದನ್ನು ಅವರು ತಕ್ಷಣ ಗುರುತಿಸಬಲ್ಲವರಾಗಿದ್ದರು."ಒಂದು ಒಳ್ಳೆ ಹೊಗಳಿಕೆ ಸಿಕ್ಕಿದರೆ ಎರಡು ತಿಂಗಳ ಕಾಲ ಅದರಿಂದ ನಾನು ಉಪಜೀವಿಸುತ್ತೇನೆ" ಎಂದು ಮಾರ್ಕ್ ಟ್ವೈನ್ ಹೇಳಿದ್ದಾನೆ.ಪ್ರಶಂಸೆ ಜಗತ್ತಿನಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ.ದಕ್ಷತೆಯನ್ನು ಹೆಚ್ಚಿಸುತ್ತದೆ.ಅದನ್ನು ಪ್ರಯೋಗಿಸಿ ನೋಡಬಾರದೇಕೆ?