Manada maathugalu

Manada maathugalu

ನನ್ನ ಅಮ್ಮ

೦೪-ಜೂನ್-೨೦೦೮

ನೆನ್ನೆ ತಾನೆ ಅಪ್ಪನ ಮಾಸಿಕ ಇತ್ತು, ಅದಕ್ಕೆಂದು ಮೊನ್ನೆ ರಾತ್ರಿ ಬೆಂಗಳೂರಿನಿಂದ ಬಸ್ ನಲ್ಲಿ ಹೊರಟಿದ್ದ ನನ್ನ ಪಕ್ಕದಲ್ಲಿ ಸರಿ ಸುಮಾರು ೩೦ರಿಂದ ೪೦ರ ಒಳಗಿನ ಮಹಿಳೆ ಕುಳಿತಿದ್ದರು. ನೋಡಲಿಕ್ಕೆ ಅವಿದ್ಯಾವಂತೆಯಂತೆ ಕಾಣಿತ್ತಿದ್ದ ಆ ಮಹಿಳೆ ಬಸ್ಸನ್ನು ಹತ್ತಿದಾಗಿನಿಂದಾ ಏನಾದರೊಂದು ತಿಂಡಿಯನ್ನ ತಿನ್ನುತ್ತಲೇ ಇದ್ದರು.

ಪ್ರಯಾಣ ಇನ್ನೂ ಬಿಡದಿಯನ್ನೂ ಮುಟ್ಟಿರಲಿಲ್ಲ, ಆಕೆಗೆ ವಾಂತಿ ಶುರುವಾಯಿತು. ಒಬ್ಬೊಂಟಿ ಮಹಿಳೆ, ಅದರಜೊತೆಯಲ್ಲಿ ಆಕೆಗೆ ಕಾಡುತ್ತಿದ್ದ ಅನಾರೋಗ್ಯ. ಸುಸ್ತಾಯ್ತಾ ? ನೀರುಬೇಕಾ ? ಸ್ವಲ್ಪ ಸುಧಾರಿಸ್ಕೊ !!! ನಿದ್ದೆಮಾಡು !!! ಹೀಗೆಲ್ಲಾ ಹೇಳುವುದಕ್ಕೆ ಅಲ್ಲಿ ಆಕೆಯ ಸಂಭಂದಿಗಳು ಯಾರೂ ಇರಲಿಲ್ಲ. ಅದರ ಬದಲಿಗೆ ಏನು ಹೆಂಗಸೋ ಏನೋ, ಮೈ ಗೆಲ್ಲಾ ಹಾರಿಸ್ತಾಳೆ, ಏಯ್, ಹೋಗಿ ಹಿಂದಿನ ಸೀಟಿನಲ್ಲಿ ಕೂತ್ಕೋ, ಅಲ್ಲಿ ಹೋಗಿ ವಾಂತಿ ಮಾಡ್ಕೊ !!! ಹೀಗೆ ಎಲ್ಲಾ ಬೈಗುಳಗಳ ಸುರಿಮಳೆ ಪ್ರಾರಂಭಿಸಿದ್ರು. ನನಗೆ ಆಕೆಯ ಮೇಲೆ ಮರುಕ ಉಂಟಾಗಿ ನನ್ನಬಳಿ ಇದ್ದ ನೀರನ್ನ ಸ್ವಲ್ಪ ಕುಡಿಯಲಿಕ್ಕೆ ಕೊಟ್ಟೆ. ಆಗ ನನ್ನ ಕಣ್ಣಲ್ಲಿ ನನಗರಿವಿಲ್ಲದಂತೆ ನೀರು ತುಂಬಿತ್ತು. ಒಂಟಿತನದಲ್ಲಿ ಇರುವ ನೋವು ಅದನ್ನ ಅನುಭವಿಸಿದವರಿಗೇ ಗೊತ್ತು.

ನೀರು ಕುಡಿದ ಆಕೆ ನನ್ನ ಪಕ್ಕದಲ್ಲೇ ಮುದುಡಿ ಮಲಗಿದಳು. ಆಕೆಗೆ ಏನು ಸಮಸ್ಯೆ ಇತ್ತೋ ಏನೋ, ಯಾವ ಕಾರಣಕ್ಕಾಗಿ ಮೈಸೂರಿನ ಪ್ರಯಾಣ ಬೆಳಸಿದ್ದಳೋ ಏನೋ, ಒಂದಲ್ಲಾ ಒಂದು ದಿನ ನಾವೂ ಹೀಗೇ ಇದೇ ಪಾಡು ಅನುಭವಿಸಿರಬಹುದು. ಆಗಲೇ ನಮಗೆ ನಮ್ಮ ಆಪ್ತರು ನೆನಪಾಗುವುದು. ಇಂದಿನ ಪೀಳಿಗೆಗೆ ಇದರ ಆತಂಕವಿಲ್ಲ, ಏಕೆಂದರೆ ತಕ್ಷಣದ ನೆರವಿಗೆ ಒಂದು ಫೋನಾದರೂ ಮಾಡಬಹುದು ಕಾರಣ ಅವರ ಕೈನಲ್ಲಿ ಇರುವ ಮೊಬೈಲು. ಆದರೆ ಆಕೆಗೆ ಫೋನು ಕೊಟ್ಟರೂ ಆಕೆ ಸಂಪರ್ಕಿಸಬೇಕಾದವರ ದೂರವಾಣಿ ಸಂಖ್ಯೆ ತಿಳಿಯದು.

ಆ ಸಂಧರ್ಭದಲ್ಲಿ ನನಗೆ ನನ್ನ ಅಮ್ಮ ನೆನಪಾದಳು. ಮಗುವಿನ ಮನಸ್ಸಿನ ನನ್ನ ಅಮ್ಮನಿಗೆ ಹೊರಗಿನ ಪ್ರಪಂಚದ ಒಂದೇ ಒಂದು ಕಿಂಡಿಯೆಂದರೆ ದೂರದರ್ಶನ (ಕೇಬಲ್ ಕೂಡಾ ಇಲ್ಲ), ಅದರಲ್ಲಿ ಬರುವ ಧಾರಾವಹಿಗಳ ಪಾತ್ರಗಳನ್ನು ಕಂಡು ತನ್ನ ತಾನೇ ಮರೆಯುವಷ್ಟು ಮುಗ್ದೆ. ಅಯ್ಯೋ !!! ನೋಡು ನೋಡು ಅವ್ಳಿಗೆ ಎಲ್ಲಾ ಬೈತಾ ಇದಾರೆ, ಪಾಪ, ಅವ್ಳು ಯಾಕೆ ಅವ್ನ ಮನೆಗೆ ಹೋಗ್ಬೇಕಿತ್ತು ? ಸುಮ್ನೆ ಇರ್ಬಾರ್ದಿತ್ತಾ ??? ಎಂದೆಲ್ಲಾ ತಾನೇ ಆ ಧಾರಾವಾಹಿಯೊಳಗೆ ಇರುವ ಒಂದು ಪಾತ್ರವೆಂಬಂತೆ ಅದರಲ್ಲಿ ತಲ್ಲೀನಳಾಗಿಬಿಡುತ್ತಾರೆ. ಹೌದು, ಈಗ ಆಕೆಯ ದಿನದ ಹೆಚ್ಚಿನಪಾಲು ಸಮಯ ಕಳೆಯುವುದು ಆ ಮಾಂತ್ರಿಕ ಪೆಟ್ಟಿಗೆಯೊಡನೆಯೇ.

ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ನಾನು ಹೋಗಿ ನೋಡಿಕೊಂಡು ಮಾತನಾಡಿಸಿಕೊಂಡು ಬರುತ್ತೇನೆ. ನನ್ನ ಸಹೋದರ/ಸಹೋದರಿಯರ ಪ್ರೀತಿ ಆಕೆಗೆ ಸಿಕ್ಕರೂ ನಾನು ನನ್ನ ಪಾಲಿನ ಪ್ರೀತಿಯನ್ನ ಆಕೆಗೆ ಕೊಡುವುದರಲ್ಲಿ ಮೋಸ ಮಾಡುತ್ತಿದ್ದೇನೆಬ ಅಳುಕು ನನ್ನಲ್ಲಿ. ಸಾಧ್ಯವಾದಷ್ಟು ಆಕೆಯೊಡನೆ ಮಾತನಾಡಿ ಆಕೆಯ ಒಂಟಿತನವನ್ನ ದೂರಮಾಡಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ.

ಮುಲತಃ ಸ್ವಲ್ಪ ಹಠವಾದಿಯಾದ ನನ್ನ ಅಮ್ಮ ಸುಲಭವಾಗಿ ಯಾರ ಮಾತನ್ನೂ ಒಪ್ಪಿಕೊಳ್ಳುವುದಿಲ್ಲ. ಒಂದು ತಿಂಗಳಿನ ಹಿಂದೆ ಆಕೆಯನ್ನ ಬೊಂಬಾಯಿಗೆ ನನ್ನ ಅಕ್ಕ ಕರ್ಕೊಂಡು ಹೋಗಿದ್ರು, ಸ್ವಲ್ಪ ಮನಸ್ಸು ಹಗುರವಾಗ್ಲಿ ಅಂತ. ಆಕೆಯನ್ನ ನಾನೇ ಉಡುಪಿಗೆ ಬಿಟ್ಟು ಬಂದಿದ್ದೆ. ಉಡುಪಿಗೆ ಹೋಗೋವಾಗ ಸ್ವಲ್ಪ ನೆಮ್ಮದಿಯಾಗಿ ಪ್ರಯಾಣ ಮಾಡ್ಲಿ ಅಂತ ನನ್ನ ಹತ್ತಿರ ಇದ್ದ ಒಂದು ಐಪಾಡ್ ನಲ್ಲಿ ಹಾಡುಗಳನ್ನ ಆಕೆಗೆ ಕೇಳೋಕ್ಕೆ ಕೊಟ್ಟೆ. ಅಯ್ಯೋ !!!! ಇದು ನನ್ಗೆ ಆಗೋದಿಲ್ಲ ಮಾರಾಯಾ !!! ಕಿವಿಯಿಂದ ಬಿದ್ದು ಬಿದ್ದು ಹೋಗತ್ತೆ ಅಂತ ಆಕೆಯ ಕಂಪ್ಲೈಂಟು !!! ಕೊನೆಗೆ ನನ್ನ ಮೊಬೈಲಿನ ಇಯರ್ ಫೋನನ್ನ ಕೊಟ್ಟು ಆಕೆ ಹಾಡುಕೇಳೋಹಾಗೆ ಮಾಡಿದೆ. ಹಾಡು ಕೇಳ್ತಾ ನನ್ನ ಮುದ್ದು ಅಮ್ಮ ನಿದ್ದೆ ಮಾಡಿದ್ಳು. ನಿದ್ದೆಯಲ್ಲಿ ಒಂದು ಪುಟ್ಟ ಪಾಪು ನನ್ನ ಹತ್ತಿರ ಮಲಗಿರೋತರ ಕಾಣ್ತಾ ಇತ್ತು.

ಅಮ್ಮ, ನಿನ್ನ ಋಣ ನಾ ಹೇಗೆ ತೀರಿಸಲಿ !!!

Rating
No votes yet

Comments