ನಮ್ಮನೆ ಮಗುವಿಗೆ ತಿನ್ನಲು ಆಸ್ಟ್ರೇಲಿಯಾದ ಆಹಾರವೇ ಬೇಕೇ?!

ನಮ್ಮನೆ ಮಗುವಿಗೆ ತಿನ್ನಲು ಆಸ್ಟ್ರೇಲಿಯಾದ ಆಹಾರವೇ ಬೇಕೇ?!

Comments

ಬರಹ

ನಿನ್ನೆ ರೇಡಿಯೋದಲ್ಲಿ ಬಂದ ಒಂದು ಜಾಹೀರಾತು ಕೇಳಿ ಕೊಂಚ ಆಘಾತವಾಯಿತು...

ಇಬ್ಬರು ಹೆಂಗಸರು ತಮ್ಮ ಮಕ್ಕಳು ಶಾಲೆಗೆ ತೆಗೆದುಕೊಂಡು ಹೋಗೋ ಟಿಫಿನ್ ಬಗ್ಗೆ ಹೀಗೆ ಮಾತಾಡ್ಕೊತಾರೆ...

ಈಕೆ- "ನನ್ ಮಗ ಒಂದು ವಾರದಿಂದ ನಾನು ಮಾಡಿದ ಊಟ ಮಾಡ್ತಾನೇ ಇಲ್ಲ, ನಿನ್ ಮಗ ರಾಹುಲ್ ತರೋ ಊಟ ಅಂದ್ರೆ ಅವನಿಗೆ ತುಂಬಾ ಇಷ್ಟ. ಅದೇನು ಮಾಡಿ ಕೊಡ್ತೀಯ ರಾಹುಲ್‍ಗೆ ದಿನಾಲೂ"..

ಆ ಕಡೆಯಿಂದ ಅದಕ್ಕೆ ಆಕೆ- "ರಾಹುಲ್ ದಿನಾ ಆಸ್ಟ್ರೇಲಿಯನ್ ಫುಡ್ ತಿಂತಾನೆ..!"

ಈಕೆ - "ಆಸ್ಟ್ರೇಲಿಯನ್ ಫುಡ್ ಆ? ! ಅದು ಹೇಗೆ ? "

ಆಕೆ - "ಹೂಂ.. ಇದು 'ಉತ್ಸವ್ ಆಸ್ಟ್ರೇಲಿಯಾ' ಎಂಬ ಆಸ್ಟ್ರೇಲಿಯಾ ಸರ್ಕಾರದ ಹೊಸ ಕಾರ್ಯಕ್ರಮ.. ಯಾವುದೇ ಸ್ಫರ್ ಸೂಪರ್ ಮಾರ್ಕೆಟ್‍ನಲ್ಲಿ (SPAR) ಆಸ್ಟ್ರೇಲಿಯಾದ 24 ಬಗೆಯ ಆಹಾರಗಳು ಸಿಗುತ್ತವೆ... ಅದನ್ನೇ ರಾಹುಲ್ ದಿನಾ ತಿನ್ನೋದು.. ಆಸ್ಟ್ರೇಲಿಯಾ ದೇಶದ ಆಹಾರ ವಿಶ್ವದಲ್ಲೇ ಅತ್ಯಂತ ಶುಚಿ ಮತ್ತು ಉತ್ಕೃಷ್ಟ, ಆಸ್ಟ್ರೇಲಿಯಾ ದೇಶದ ಕ್ರಿಕೆಟ್ ಆಟಗಾರರನ್ನು ನೋಡಿದ್ರೆ ಗೊತ್ತಾಗೋದಿಲ್ವಾ!?"

'ಉತ್ಸವ್ ಆಸ್ಟ್ರೇಲಿಯಾ' ಹೆಸರಿನಲ್ಲಿ ಆಸ್ಟ್ರೇಲಿಯಾ ಸರ್ಕಾರ ಮಾಡಿಕೊಂಡಿರುವ ಒಪ್ಪಂದದ ಫಲವೇ ಇದು.. ಹಾಗಾದ್ರೆ ನಮ್ಮ ದೇಶದಲ್ಲಿ ಮಕ್ಕಳಿಗೆ ಕೊಡಲು ಯೋಗ್ಯವಾದ ಶುಚಿಯಾದ ಉತ್ತಮ ಆಹಾರವೂ ಇಲ್ಲವೇ? ದೋಸೆ, ಇಡ್ಲಿ, ಮುದ್ದೆ ತಿಂದ ಮಕ್ಕಳೆಲ್ಲ ಬದುಕೋದೇ ಇಲ್ವಾ? !

ಜಾಗತೀಕರಣ ಎಷ್ಟರ ಮಟ್ಟಿಗೆ ನಮ್ಮ ದೇಶದ ಮೇಲೆ ಕರಾಳ ಛಾಯೆಯನ್ನು ಬೀರುತ್ತಿದೆ ಎಂಬುದಕ್ಕೆ ಇದು ತಾಜಾ ಉದಾಹರಣೆ. ವಿದೇಶೀ ಉಡುಪುಗಳ ವಿಜೃಂಭಣೆಯ ಮುಂದೆ ದೇಶೀಯ ಉಡುಪುಗಳನ್ನು ಕೇಳುವವರೇ ಇಲ್ಲ.. ಎಳನೀರು, ಮಜ್ಜಿಗೆ ಮತ್ತಿತರ ದೇಶೀಯ ಪಾನೀಯಗಳನ್ನು ಕೋಲಾ ಆಕ್ರಮಿಸಿದೆ.. ಹೋಗಲಿ ಪ್ರಕೃತಿ ದತ್ತವಾದ ನೀರಾದರೂ ಪರಕೀಯರ ಹಂಗಿಲ್ಲದೇ ಕುಡಿಯುತ್ತಿದ್ದೇವೆಯೇ? ಊಹೂಂ... ಅದನ್ನೂ ಸಹ ವಿದೇಶೀ ಕಂಪನಿಗಳಿಂದ ಖರೀದಿಸಿ ಕುಡಿಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.. ಬಾರ್ಬೀ ಬೊಂಬೆಗಳ ಎದುರು ಚೆನ್ನ ಪಟ್ಟಣದ ಗೊಂಬೆಗಳು ಕಾಲು ಮುರಿದುಕೊಂಡು ಬಿದ್ದಿವೆ.. ಸೋಪು, ಪೇಸ್ಟ್, ಅಲಂಕಾರಿಕ ಸಾಧನಗಳೆಲ್ಲ ಪರಕೀಯರ ತೆಕ್ಕೆಗೆ ಬಿದ್ದು ಯಾವುದೋ ಕಾಲವಾಯ್ತು.. ಹೀಗಾದರೆ ನಮ್ಮ ದೇಶದ ಉತ್ಪಾದಕರು, ರೈತರು ಎಲ್ಲಿಗೆ ಹೋಗಬೇಕು? ಮಕ್ಕಳು ತಿನ್ನುವ ಆಹಾರವೂ ಆಸ್ಟ್ರೇಲಿಯಾದಿಂದ ಆಮದಾಗಬೇಕೇ? ಭವಿಷ್ಯದಲ್ಲಿ ಇವೆಲ್ಲಾ ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೋ ಎಣಿಸಿಕೊಂಡರೆ ಭಯವಾಗುತ್ತದೆ..

ಏನಂತೀರಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet