ಶ್ರೀಬಸವೇಶ್ವರರ ವಚನಗಳು-2
ನೀನೊಲಿದರೆ ಕೊರಡು ಕೊನರುವುದಯ್ಯ
ನೀನೊಲಿದರೆ ಬರಡು ಹಯನಹುದಯ್ಯ
ನೀನೊಲಿದರೆ ವಿಷವಮೃತವಹುದಯ್ಯ
ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು
ಕೂಡಲಸಂಗಮದೇವ
ನೀರಿಂಗೆ ನೈದಿಲೆಯೇ ಶೃಂಗಾರ
ಊರಿಂಗೆ ಅಕನೆಯೇ ಶೃಂಗಾರ
ಸಮುದ್ರಕ್ಕೆ ತೆರೆಯೇ ಶೃಂಗಾರ
ನಾರಿಗೆ ಗುಣವೇ ಶೃಂಗಾರ
ಗಗನಕ್ಕೆ ಚಂದ್ರಮನೇ ಶೃಂಗಾರ
ನಮ್ಮ ಕೂಡಲಸಂಗಮನ ಶರಣರಿಗೆ
ನೊಸಲ ವಿಭೂತಿಯೇ ಶೃಂಗಾರ
ಹುತ್ತವ ಬಡಿದರೆ ಉರಗ ಸಾವುದೆ
ಘೋರತಪವ ಮಾಡಿದರೇನು
ಅಂತರಂಗ-ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯ
ಕೂಡಲಸಂಗಮದೇವ?
ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದು:ಖಕ್ಕೆ ಅಳುವರ ಮೆಚ್ಚ
ನಮ್ಮ ಕೂಡಲಸಂಗಮದೇವ
ಹಾವು ತಿಂದವರ ನುಡಿಸಬಹುದು
ಗರ ಹೊಡೆದವರ ನುಡಿಸಬಹುದು
ಸಿರಿಗರ ಹೊಡೆದವರ ನುಡಿಸಬಾರದು ನೋಡಯ್ಯ
ಬಡತನವೆಂಬ ಮಂತ್ರವಾದಿ ಹೋಗಲು
ಒಡನೆ ನುಡಿವರಯ್ಯ ಕೂಡಲಸಂಗಮದೇವ
ಮಾಡುವಂತಿರಬೇಕು, ಮಾಡದಂತಿರಬೇಕು!
ಮಾಡುವ ಮಾಟದೊಳಗೆ ತಾನಿಲ್ಲದಿರಬೇಕು!!
ನೋಡುವಂತಿರಬೇಕು, ನೋಡದಂತಿರಬೇಕು!
ನೋಡುವ ನೋಟದೊಳಗೆ ತಾನಿಲ್ಲದಿರಬೇಕು!!
ನಮ್ಮ ಕೂಡಲಸಂಗಮದೇವರ
ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು!
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ.
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ.
ಮಾಡುವ ನೀಡುವ ನಿಜಗುಣವುಳ್ಳಡೆ,
ಕೂಡಿಕೊಂಬುವ ನಮ್ಮ ಕೂಡಲಸಂಗಮದೇವ
ಕಲ್ಲನಾಗರ ಕಂಡರೆ ಹಾಲನೆರೆ ಎಂಬರು;
ದಿಟನಾಗರ ಕಂಡರೆ ಕೊಲ್ಲು ಕೊಲ್ಲು ಎಂಬರಯ್ಯ!
ಉಂಬ ಜಂಗಮ ಬಂದರೆ ನಡೆ ಎಂಬರು;
ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ!
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದರೆ,
ಕಲ್ಲತಾಗಿದ ಮಿಟ್ಟೆಯಂತಪ್ಪರಯ್ಯ!
ಮಡಕೆಯ ಮಾಡುವೊಡೆ ಮಣ್ಣೇ ಮೊದಲು,
ತೊಡಿಗೆಯ ಮಾಡುವೊಡೆ ಹೊನ್ನೇ ಮೊದಲು,
ಶಿವಪಥ ಅರಿವೊಡೆ ಗುರುಪಥ ಮೊದಲು,
ಕೂಡಲಸಂಗಮ ದೇವರನರಿವೊಡೆ,
ಶರಣರ ಸಂಗವೇ ಮೊದಲು, ಮೊದಲು.