ಕನಸುಗಳ ನನಸಾಗಿಸುತ್ತ - ೨

ಕನಸುಗಳ ನನಸಾಗಿಸುತ್ತ - ೨

ಅದೊಂದು ಹೊಸ ಅನುಭವ. ದಿನನಿತ್ಯದ ಕೆಲಸಗಳನ್ನು ಬಿಟ್ಟು ಹೊಸ ಕಾರ್ ತಗೊಂಡು ರಸ್ತೆಗಿಳಿದ ದಿನ. ಚಿಕ್ಕಂದಿನಿಂದ ಕೈನಲ್ಲಿ ಪ್ಲಾಸ್ಟಿಕ್ ಕಾರ್ ಹಿಡ್ಕೊಂಡು ಡ್ರೈವ್ ಮಾಡಿದ್ದೋ ಮಾಡಿದ್ದು. ಕಾಲೇಜಿಗೆ ಬರೋವರ್ಗು ಬೈಕ್ ಕೂಡ ಕೈಗೆ ಬಂದಿರಲಿಲ್ಲ. ಪಿ.ಯು ನಲ್ಲಿ ಲೈಸೆನ್ಸ್ ಇಲ್ಲದೆ ೩ ನಿಮಿಷದಲ್ಲಿ ಅಪ್ಪನ ಸ್ಕೂಟರ್ ನಲ್ಲಿ ಮನೆಯಿಂದ ಕಾಲೇಜ್ ತಲುಪೋದು. ಪೋಲೀಸ್ ನವರ ಕಣ್ಣು ತಪ್ಪಿಸಿ ಪಕ್ಕದ ರೋಡ್ ನಲ್ಲಿ ಗಾಡಿ ಓಡಿಸ್ತಿದ್ದಿದ್ದು ನೆನಪಿಸಿ ಕೊಂಡ್ರೆ ಇನ್ನೂ ನಗು ಬರತ್ತೆ. ಡ್ರೈವಿಂಗ್, ಟ್ರಾಫಿಕ್ ಇವುಗಳ ಸಹವಾಸವೇ ಬೇಡ ಅಂತ ದಿನಾಲೂ ಬಿ.ಎಂ.ಟಿ.ಸಿ, ಇಲ್ಲ ಆಫೀಸಿನ ಕಾರ್ ಉಪಯೋಗಿಸ್ತಿದ್ದ ನಾನು ಇದ್ದಕ್ಕಿದ್ದಂತೆ ಡ್ರೈವಿಂಗ್ ಸ್ಕೂಲ್ ಸೇರಿ ಲರ್ನರ್ಸ್ ಲೈಸೆನ್ಸ್ ತಗೊಂಡು, ಡ್ರೈವಿಂಗ್ ಕಲಿತು, ನಾನೇ ಕಾರ್ ತಗೊಂಡಾಗ ನನ್ನೊಡಗೂಡಿ ನನ್ನ ಪರಿಚಯದ ಎಲ್ಲ ಆಪ್ತರಿಗೆ, ಕುಟುಂಬದವರಿಗೆ, ಸಹೋದ್ಯೋಗಿಗಳಿಗೆ ಎಲ್ಲರಿಗೂ ಆಶ್ಚರ್ಯ.

ಶೋರೂಮ್ ನಿಂದ ಗಾಡಿ ಆಫೀಸಿನವರೆಗೂ ತರ್ಲಿಕ್ಕೆ ಬೆಳಗ್ಗೆನೆ ಹೋದ್ರೂ ಅದು ಇದು ಚೆಕ್ ಮಾಡ್ತಾ ಮಧ್ಯಾನ್ಹವಾಗಿವಾಗಿ ಹೋಗಿತ್ತು. ಎಲ್ಲೂ  ಸ್ಕ್ರಾಚ್ ಇಲ್ಲ ಅಂತ ನೋಡ್ ಕೊಂಡು, ಎಲ್ಲೋ ಎನೋ ಸಣ್ಣ ದನ್ನ ಗಮನಿಸೋದ್ರೊಳಗೆ ನನ್ನ ಗೆಳೆಯನಿಗೆ ಆಫೀಸ್ ನಿಂದ ಕರೆ, ಅವನು ಹೊರಡ್ತಿದ್ದಾಂಗೆ ಕಾರು ರೆಡಿ. ಆದ್ರೆ ನಮ್ಮ ಕೆಲಸ ಆಗಿರಲಿಲ್ಲ. ಮತ್ತೆ ಅದನ್ನ ಶೋರೂಮಿನವನಿಗೆ ತೋರಿಸಿ, ಸಂಜೆ ಬಂದು ಕಾರ್ ತಗೋತೀನಿ ಅಂದು ಹೊರಟಿದ್ದು ಮತ್ತೆ ವಾಪಸ್ ಬಂದು ಕಾರನ್ನ ಕೈಗೆ ತಗೋಳೋವರ್ಗೂ ಸಮಾಧಾನ ಇಲ್ಲ. ಕಾರ್ ತಗೊಂಡಿದ್ದಾಯಿತು, ಇನ್ನ ಡ್ರೈವ್ ಮಾಡ್ಬೇಕಿತ್ತು ಬೇರಾರೂ ಇಲ್ಲ ನಾನೆ ಮಾಡ್ಬೇಕು. ಮನಸ್ಸು ಹಿಂಜರೀಲೇ ಇಲ್ಲ. ನನ್ನ ಜೊತೆ ಬಂದ ಸಹೋದ್ಯೋಗಿ ಕ್ಯಾಮರ ಕ್ಲಿಕ್ಕಿಸಿ (ಮೊದಲನೇ ಚಿತ್ರ ಹಾಕಿದ್ದೆನಲ್ಲ ಅವತ್ತು ಅವನೇ ತೆಗೆದಿದ್ದು) ಬಂದು (ಸ್ವಲ್ಪ ಹೆದರ್ಕೊಂಡೇನೆ) ನನ್ನ ಪಕ್ಕ ಕುಳಿತ. ಟ್ರಾಫಿಕ್ ಕೂಡ ಸಣ್ಣದಾಗಿ ಹೆಚ್ಚಾಗ್ತಿತ್ತು. ಯು ಟರ್ನ್ ತಗೊಂಡು ಸ್ವಲ್ಪ ಮುಂದೆ ಹೋದ್ಮೇಲೆ ನನ್ನ ಮೊದಲ (ಗಾಡಿ ತಗೊಂಡ್ಮೇಲಿನ ಮೊದಲು) ಟ್ರಾಫಿಕ್ ಸಿಗ್ನಲ್. ಅಲ್ಲಿ ಮುಂದೆ ಎಡಕ್ಕೆ ವಾಲಬೇಕು, ಸರಿ ನಿದಾನವಾಗಿ ಮುಂದುವರೆದೆ. ಕ್ಲಚ್ಚು, ಬ್ರೇಕು ಮತ್ತೆ ಸ್ಟಿಯರಿಂಗು ಎಲ್ಲ ಹತ್ತಿ ಮುಟ್ಟಿದಂತಹ ಅನುಭವ. ಡ್ರೈವಿಂಗ್ ಸ್ಕೂಲಿನ ಕಾರ್ ನೆನಪಿಗೆ ಬಂತು. ಅದರಲ್ಲಿ ಸಿಗ್ನಲ್ ಕ್ರಾಸ್ ಮಾಡೋದು ದೊಡ್ಡ ಕೆಲಸ. ಸುಸ್ತಾಗಿ ಬಿಡ್ತಿತ್ತು. ಈಗ ಎಲ್ಲ ಸಲೀಸು. ಪವರ್ ಸ್ಟಿಯರಿಂಗ್ ಇಷ್ಟು ಚೆಂದಗಿರತ್ತೆ ಅಂತ ಅನ್ನಿಸಿರ್ಲೇ ಇಲ್ಲ. (ಟೆಸ್ಟ್ ಡ್ರೈವ್ ಮಾಡಿದ್ದಾಗ ಕಂಪೆನಿಯ ಡ್ರೈವರ್ ನ ತಾಳ್ಮೆ ಪರೀಕ್ಷೆ ಮಾಡಿದ್ದೆ :) ಸ್ಟಿಯರಿಂಗ್ ಮೇಲೆ ಗಮನ ಕಡಿಮೆ ಇತ್ತು.) ಸ್ವಲ್ಪ ದೂರ ಬರೋದ್ರೊಳಗೆ, ಇದು ತುಂಬಾ ಸುಲಭ ಅನ್ನಿಸ್ತಾ ಹೋಗಿ ಆಫೀಸ್ ಗೆ ಬರೋದ್ರೊಳಗೆ ಎಲ್ಲ ಗೇರ್ ಗಳನ್ನ ಬಳಸಿಯಾಗಿತ್ತು. ರಸ್ತೆಯಲ್ಲಿ ಮಾತ್ರ ಯಾರ ಕೂಗೂ ಇಲ್ಲ. ಅಂದ್ರೆ ಸೇಫಾಗಿ ಹೋಗಿ ಸೇರಿದೆ ಅಂತಾಯ್ತು. ಆಫೀಸಿಗೆ ಬಂದ ನಂತರ ಮೊದಲು ಮಾಡಿದ ಕೆಲಸ ಸಂಪದದ ನನ್ನ ಕನ್ನಡ ಬ್ಲಾಗು ಮತ್ತು ಇಂಗ್ಲೀಷ್ ಬ್ಲಾಗ್ ನಲ್ಲಿ ನನ್ನ ಕಾರಿನೊಡನೆ ತೆಗೆದ ಚಿತ್ರವನ್ನ ಗಿಂಪ್ ನಲ್ಲಿ ಎಡಿಟ್ ಮಾಡಿ ಹಾಕಿದ್ದು.  ನಂತರ ಸಿಹಿ ಹಂಚಿ ತಿನ್ನೋ ಕಾರ್ಯಕ್ರಮ. ಇಲ್ಲಿಂದ ಮುಂದೆ ಮನೆ ಸೇರಿದಾಗ ರಾತ್ರಿ ೨ ಘಂಟೆ. ಅದರ ಬಗ್ಗೆ ಸಂಜೆ ಬರೀತೇನೆ. ನನ್ನ ಕೆಲಸ ಶುರು ಮಾಡಬೇಕಿದೆ.

Rating
No votes yet

Comments