ದೆಹಲಿ ದೂದ ಹಾಗೂ ನೆನಪುಗಳು!

ದೆಹಲಿ ದೂದ ಹಾಗೂ ನೆನಪುಗಳು!

ಕಾಡಬೆಳದಿಂಗಳಿಗೆ ಪ್ರಶಸ್ತಿ ಬಂದ ವಿಷಯ ಹರಿ ಬರೆದಿದ್ರು. ಅದನ್ನ ಓದ್ದೆ. ಅದ್ರಲ್ಲಿ ದಟ್ಸ್ ಕನ್ನಡದಲ್ಲಿದ್ದ ವರದಿಗೂ ಕೊಂಡಿ ಹಾಕಿದ್ರು. ನಾನೂ ಹಿನ್ನಲೆ ಗಾಯನಕ್ಕೆ ಯಾರಿಗೆ ಬಂದಿದೆ ಈ ಸರ್ತಿ ಪ್ರಶಸ್ತಿ ಅಂತ ನೋಡ್ದೆ. ಪಂಜಾಬಿ ಸಿನೆಮಾದಲ್ಲಿ ಗುರುದಾಸ್ ಮಾನ್ ಗೆ ಪ್ರಶಸ್ತಿ ಬಂದಿದೆ! ಆಗ ಹಿಂದೆ ನಮಗೆಲ್ಲ ಟಿ.ವಿ. ಅಂದ್ರೆ ಬರೀ ಹಿಂದಿ ದೂರದರ್ಶನ ಆಗಿದ್ದ ಕಾಲ ನೆನಪಾಯ್ತು. ನಮ್ಮೂರಲ್ಲಿ ಟಿ.ವಿ. ಸ್ಟೇಷನ್ ಶುರುವಾದ ಹೊಸತು. ದಿನಾ ಬೆಳಗೂ ಸಂಜೆ ಬರೀ ಹಿಂದಿ ಅಷ್ಟೆ. ಭಾನುವಾರ ಮಧ್ಯಾಹ್ನ ಒಂದು ಪ್ರಾದೇಶಿಕ ಚಿತ್ರ ಅಂತ ಹಾಕೋರು. ಕನ್ನಡದ ಸರತಿ ಎರಡೋ ಮೂರೋ ತಿಂಗಳಿಗೆ ಒಮ್ಮೆ. ಆದ್ರೆ, ಅದು ಹೇಗೋ ನಮ್ಮ ಮನೆಗೆ ಟಿ.ವಿ.ತಂದ ದಿನವೇ ಕನ್ನಡ ಚಿತ್ರ ಸಂಧ್ಯಾರಾಗ ಬಂದಿತ್ತು. ಅದ್ದ್ಯಾವ್ದೋ ಶ್ರೀವಾಸ್ತವ ಅನ್ನೋ ನಿರ್ವಾಹಕಿ "ಅಬ್ ದೇಖಿಯೇ ಕನ್ನಡ್ ಚಿತ್ರ್ ಸಾಂಧ್ಯ್ ರಾಗ್" ಅಂತ ತಪ್ಪು ತಪ್ಪಾಗಿ ಉಲಿದಿದ್ದಳು. ಈ ಪ್ರಾದೇಶಿಕ ಚಿತ್ರದ ಸಾಲಿನಲ್ಲೇ ಎಷ್ಟೋ ಒಳ್ಳೆ ಮಲೆಯಾಳಮ್, ತಮಿಳು ಚಿತ್ರಗಳನ್ನೂ ನೋಡಿದ ನೆನಪಿದೆ.

ಇದಲ್ಲದೆ, ಟಿ.ವಿ.ಯಲ್ಲಿ ಕನ್ನಡ ಏನಾರೂ ಕೇಳ್ಬೇಕಂತಿದ್ರೆ, ಎರಡುವಾರಕ್ಕೊಂದು ಸಲ ರಾತ್ರಿ ೧೦:೧೦ ಕ್ಕೋ ಏನೋ ( ಅದ್ಯಾಕೆ ಈ ಸಮಯ ಇಟ್ಕೊಂಡಿದ್ರೋ ಗೊತ್ತಿಲ್ಲ, ಬೇರೆ ಭಾಷೆಯವರಿಗೆ ತಾನೇ, ತಡ ಆದ್ರೂ ಕಾಯ್ತಾರೆ ಅಂತಿರ್ಬೋದು), ಚಿತ್ರಮಾಲಾ ಅಂತ ಒಂದು ಕಾರ್ಯಕ್ರಮ. ಅದರಲ್ಲಿ ಹಿಂದಿ ಬಿಟ್ಟು ಬೇರೆಬೇರೆ ಭಾಷೆಯ ಚಿತ್ರಗೀತೆ ಹಾಕೋರು. ಒಂದು ತರಹದಲ್ಲಿ ಈ ಚಿತ್ರಗೀತೆ ಕಾರ್ಯಕ್ರಮಕ್ಕೇ ಪರವಾಗಿಲ್ಲ, ಸ್ಪೆಶಲ್ ಟ್ರೀಟ್‍ಮೆಂಟ್ ಅಂದ್ಕೋಬಹುದು. ಯಾಕಂದ್ರೆ, ತಿಂಗಳಿಗೋ ಎರಡು ತಿಂಗಳಿಗೋ ಬರ್ತಿದ್ದ ಶಾಸ್ತ್ರೀಯ ಸಂಗೀತ ಬರ್ತಾ ಇದ್ದದ್ದು ಇನ್ನೂ ತಡವಾಗಿ - ರಾತ್ರಿ ಹತ್ತೂ ಐವತ್ತಕ್ಕೋ ಏನೋ!

ಸರಿ, ಎಲ್ಲೆಲ್ಲೋ ಹೋಗ್ತಿದೀನಿ. ಇದೆಲ್ಲ ನೆನಪಾಗಿದ್ದು ಗುರ್ದಾಸ್ ಮಾನ್ ನಿಂದ. ಚಿತ್ರಮಾಲ ಅಂತ ಹೇಳಿದ್ನಲ್ಲ, ಅದರಲ್ಲಿ ಒಂದಾದ್ರೂ ಕನ್ನಡ ಹಾಡು ಬರತ್ತಾ ಅಂತ ನಾವೆಲ್ಲ ಕಣ್ಣು ಬಾಯಿ ಬಿಟ್ಕೊಂಡು ಕೂತಿರ್ತಿದ್ವಿ. ತೊಗೋಪ್ಪಾ ಶುರುವಾಗೋದು ಒಂದು ಪಂಜಾಬಿ ಹಾಡು! ಶುರುವಾದರೇ ಮುಗೇವೇ ಒಲ್ದು. ಎರಡು ಚರಣ- ಮೂರು ಚರಣ- ನಾಕು ಚರಣ - ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ ಪುನಃ ಪೂಜಾಂ ಸಮರ್ಪಯಾಮಿ ಅನ್ನೋ ತರಹ "ಬಲ್ಲೇ ಬಲ್ಲೇ" ಕಾರಗಳೂ ಕೂಡ :( ಒಟ್ಟಲ್ಲಿ, ಈ ಗುರುದಾಸ್ ಮಾನ್ ಬಂತು ಅಂದ್ರೆ ರೇಗಿ ಹೋಗ್ತಿತ್ತು. ಈತ ಪಾಪ ಹಾಡೋದೂ ಅಲ್ದೆ ಕುಣೀತಾ ಬೇರೆ ಇರ್ತಿದ್ದ. ಆಗೇನೋ ನನಗೆ ರೇಗ್ತಿತ್ತು - ಆದ್ರೆ ಒಳ್ಳೇ ಗಾಯಕ ಇದ್ರೂ ಇರಬಹುದು ಅಂತ ಈಗ ಅನಿಸ್ತಿದೆ. ಗೊತ್ತಿಲ್ಲ, ಯಾಕಂದ್ರೆ ಅವನ ಕಂಠ ಕೇಳಿ ಅದೆಷ್ಟು ದಿವಸವಾಯ್ತೊ! ಇರ್ಲಿ.

ಇನ್ನು ಅತ್ಯುತ್ತಮ ಗಾಯಕಿ ಅಂತ ಯಾರಿಗೆ ಬಂದಿದೆ ಅಂತ ನೋಡಿದ್ರೆ, ದಟ್ಸಕನ್ನಡದಲ್ಲಿ ಹಾಕಿರೋ ಹೆಸ್ರು "ಆರತಿ ಅಂಕ್ಳೀಕರ್ ಮತ್ತು ಟಿಕೇಕರ್" ಅಂತ! ನೋಡಿ ನಗು ತಡೆಯಕ್ಕಾಗ್ಲಿಲ್ಲ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಮದುವೆಯಾದ ಹೆಂಗಸ್ರು ತಮ್ಮ ತಂದೆ ಮನೆ ಹೆಸ್ರು, ಗಂಡನ ಮನೆ ಹೆಸ್ರು ಎರಡನ್ನೂ ಇಟ್ಕೋಳೋದು ಪದ್ಧತಿ ಆಗಿದೆಯಂತೆ. ಹಿಂದಾದ್ರೆ ತವರು ಮನೆ ಹೆಸರು ಬಿಟ್ಟು ಗಂಡನ ಮನೆ ಹೆಸ್ರು ಇಟ್ಕೊಳ್ತಿದ್ರು. ಆರತಿ ಅಂಕ್ಳೀಕರ್ ಅನ್ನೋವ್ರು ಟಿಕೇಕರ್ ಅಂತ ಕೊನೆ ಹೆಸ್ರಿರೋ ಗಂಡನ್ನ ಮದ್ವೆ ಆಗಿ, ತಮ್ಮ ಹೆಸರನ್ನ ಆರತಿ ಅಂಕ್ಳೀಕರ್ ಟಿಕೇಕರ್ ಅಂತ ಮಾಡ್ಕೊಂಡಿದ್ದಾರೆ. ಇದೇ ತರಹ ಅಶ್ವಿನಿ ಭ್ಹಿಡೆ ದೇಶ್ಪಾಂಡೆ ಅಂತಲೂ ಒಬ್ರು ಸಂಗೀತಗಾರ್ತಿ ಇದ್ದಾರೆ. ಅದನ್ನ ದಟ್ಸಕನ್ನಡದವರು "ಆರತಿ ಅಂಕ್ಳೀಕರ್ ಮತ್ತು ಟಿಕೇಕರ್" ಅಂತ ಇಬ್ರ ಹೆಸರಿನ ತರಹ ಮಾಡ್ಬಿಟ್ಟಿದ್ದಾರಲ್ಲಾ! ಇಂದಿರಾ ಗಾಂಧಿನ ಇಂದಿರಾ ಪ್ರಿಯದರ್ಶಿನಿ ಪಂಡಿತ್ ಮತ್ತು ಗಾಂಧಿ ಅನ್ನೋ ಹಾಗೆ!!

ಅದಿರಲಿ - ಆರತಿ ಒಬ್ಬರು ಬಹಳ ಒಳ್ಳೇ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ. ಬಹಳ ಒಳ್ಳೇ ಕಂಠ, ಶೈಲಿ ಎರಡೂ ಇವೆ ಅವರಿಗೆ. ಪುಣೆಯಲ್ಲಿ ಅವರ ಕೆಲವು ಕಚೇರಿಗಳನ್ನ ಕೇಳಿದ ನೆನಪಾಯಿತು. ಆವರಿಗೆ ಈ ಸಲ ಒಂದು ಕೊಂಕಣಿ ಸಿನೆಮಾಗೆ ಪ್ರಶಸ್ತಿ ಬಂದಿದ್ಯಂತೆ.

ಒಟ್ನಲ್ಲಿ ಈ ಸಲ ಪ್ರಶಸ್ತಿ ಬಂದೋರ್ಗೆಲ್ಲ ನನ್ನ ಕಡೆಯಿಂದ್ಲೂ ಒಂದಷ್ಟು ಅಭಿನಂದನೆಗಳು :) ಎಲ್ಲಾರ್ಗೂ ಒಳ್ಳೇದಾಗ್ಲಿ!

-ಹಂಸಾನಂದಿ

Rating
No votes yet

Comments