ಬೆಲೆ ಏರಿಕೆಯೆಂಬ ವಿಷವ್ಯೂಹ
ಬೆಲೆ ಏರಿಕೆಯೆಂಬ ವಿಷವ್ಯೂಹ
ಮುಂಗಾರು ಆರಂಭವಾಗುತ್ತಿದ್ದಂತೆ ರಾಜ್ಯಾದ್ಯಂತ ರಸಗೊಬ್ಬರ ಪೂರೈಕೆ ಸಂಬಂಧವಾಗಿ ಹಾಹಾಕಾರ ಆರಂಭವಾಗಿದೆ. ಬಿತ್ತನೆ ಬೀಜ ಪೂರೈಕೆ ಕುರಿತಂತೆಯೂ ರೈತರ ದೂರು - ದುಮ್ಮಾನಗಳು ಪ್ರಕಟಗೊಳ್ಳತೊಡಗಿವೆ. ದಾವಣಗೆರೆ ಮತ್ತು ಧಾರವಾಡಗಳಲ್ಲಂತೂ ಹಾಹಾಕಾರ ಮುಗಿಲು ಮುಟ್ಟಿ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡು ಅಶಾಂತಿ ತಾಂಡವವಾಡಿದೆ. ಇದಕ್ಕೆ ಕೇಂದ್ರ ಸರ್ಕಾರ ರಸಗೊಬ್ಬರ ಕಾರ್ಖಾನೆಗಳ ಬಾಕಿ ತೀರಿಸದೇ ಪೂರೈಕೆ ಕಡಿತಗೊಂಡಿರುವುದೇ ಕಾರಣವೆಂದು ಮುಖ್ಯಮಂತ್ರಿ ಹೇಳುತ್ತಿದ್ದರೆ, ಕೇಂದ್ರ ರಸಗೊಬ್ಬರ ಖಾತೆಯ ಕಾರ್ಯದರ್ಶಿ ಇದನ್ನು ತಳ್ಳಿ ಹಾಕಿ; ರಾಜ್ಯ ಸರ್ಕಾರ ಬಿತ್ತನೆ ಕಾಲಕ್ಕಾಗಿ ಮಾಡಿಕೊಂಡ ಅಸಮರ್ಪಕ ಸಿದ್ಧತೆಯೇ ಕಾರಣವೆಂದು ಹೇಳುತ್ತಿದ್ದಾರೆ. ಕೆಲವೆಡೆ ಕೃಷಿ ಅಧಿಕಾರಿಗಳು ವ್ಯಾಪಾರಿಗಳೊಂದಿಗೆ ಶಾಮೀಲಾಗಿ ರಸಗೊಬ್ಬರದ ಅಕ್ರಮ ದಾಸ್ತಾನಿಗೆ ಕಾರಣರಾಗಿದ್ದಾರೆ ಎಂಬ ವದಂತಿಗಳೂ ಕೇಳಿ ಬರುತ್ತಿವೆ. ಇದಕ್ಕೆ ತಕ್ಕುನಾಗಿ ಅನೇಕ ಕಡೆ ರೈತರೇ ಅಕ್ರಮ ದಾಸ್ತಾನುಗಳನ್ನು ಕಂಡು ಹಿಡಿದು ಜಿಲ್ಲಾಡಳಿತದ ಸಹಾಯದಿಂದ ಅದನ್ನು ಮಾರಾಟಕ್ಕೆ ಬಿಡುಗಡೆ ಮಾಡಿಸುತ್ತಿರುವ ವರದಿಗಳೂ ಬರುತ್ತಿವೆ. ಮುಖ್ಯಮಂತ್ರಿಗಳೇನೋ ಎಲ್ಲ ಜಿಲ್ಲಾಧಿಕಾರಿಗಳಿಗೆ ರಸಗೊಬ್ಬರ ಪೂರೈಕೆ ಸಂಬಂಧ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. ಆದರೆ ಪರಿಸ್ಥಿತಿ ಅಷ್ಟೇನೂ ಸುಧಾರಿಸಿದಂತಿಲ್ಲ. ರೈತರಿಗೆ ಅಗತ್ಯವಿರುವಷ್ಟು ಗೊಬ್ಬರ - ಬಿತ್ತನೆ ಬೀಜ ಸಿಗುತ್ತಿಲ್ಲ.
ಈ ಎಲ್ಲ ಹಾಹಾಕಾರ - ಅಶಾಂತಿ - ಗೊಂದಲಗಳಿಗೆ ಮುಖ್ಯ ಕಾರಣ, ರಸಗೊಬ್ಬರದ ಉತ್ಪಾದನೆಯೇ ಕಡಿಮೆಯಾಗುತ್ತಿರುವುದು ಎಂದು ಹೇಳಲಾಗುತ್ತಿದೆ. ಇದು ಕರ್ನಾಟಕದಲ್ಲಿ ಅಥವಾ ಭಾರತದಲ್ಲಿ ಮಾತ್ರವಲ್ಲ, ಆರ್ಥಿಕ ಉದಾರೀಕರಣದ ನಂತರದ ದಿನಗಳಲ್ಲಿ ಎಲ್ಲ ವಿಷಯಗಳಿಗೂ ಸಂಬಂಧಿಸಿದಂತೆ ಹೇಳಲಾಗುವಂತೆ, ಜಾಗತಿಕವಾಗಿ ಕೂಡಾ ರಸಗೊಬ್ಬರದ ಉತ್ಪಾದನೆ ಬಿದ್ದು ಹೋಗಿದೆ; ಬೆಲೆಗಳು ಏರಿವೆ. ಈ ಉತ್ಪಾದನೆ ಕುಸಿತಕ್ಕೂ ಬೆಲೆ ಏರಿಕೆಗೂ ಸಹಜವಾಗಿಯೇ ಸಂಬಂಧವಿದ್ದು, ಈ ಬೆಲೆ ಏರಿಕೆ ಇಂದು ನಾವು ಜಗತ್ತಿನಾದ್ಯಂತ ಕಾಣುತ್ತಿರುವ ಸಾರ್ವತ್ರಿಕ ಬೆಲೆ
ಏರಿಕೆಯೊಂದಿಗೂ ಸಂಬಂಧ ಹೊಂದಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದೀಗ ತಾನೇ ಭಾರತ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸಿ, ಈ ಜಾಗತಿಕ ಬೆಲೆ ಏರಿಕೆ ದೇಶದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರದಂತೆ ತಡೆಯಲು ಯತ್ನಿಸಿದೆ. ಆದರೆ ಆ ಮೂಲಕ ಮತ್ತಷ್ಟು ಸಾರ್ವತ್ರಿಕ ಬೆಲೆ ಏರಿಕೆಗೆ ಕಾರಣವಾಗಿದೆ! ಹೀಗಾಗಿ ಇಂದು ಬೆಲೆ ಏರಿಕೆಯೆಂಬುದು ಒಂದು ಜಾಗತಿಕ ವಿಷವ್ಯೂಹವಾಗಿ ಪರಿಣಮಿಸಿದೆ. ಇದರ ತಲೆ - ತುದಿಗಳು ಒಂದಕ್ಕೊಂದು ಹೆಣೆದುಕೊಂಡು; ಪರಿಣಾಮವೇ ಕಾರಣವಾಗಿ, ಮತ್ತೆ ಕಾರಣವೇ ಪರಿಣಾಮವಾಗಿ ಬೆಲೆ ಏರಿಕೆಯ ಚಕ್ರ ಕಳೆದ ಆರು
ತಿಂಗಳುಗಳಿಂದ ತನ್ನೊಳಗೆ ತಾನೇ ಸುತ್ತಿಕೊಳ್ಳುತ್ತಾ ವಿಸ್ತಾರವೂ ಆಗುತ್ತಿದೆ.
ಬೆಲೆ ಏರಿಕೆಯನ್ನು ಸೂಚಿಸುವ ಹಣದುಬ್ಬರದ ಸೂಚ್ಯಂಕ ಭಾರತದಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲೇ ಅತಿ ಹೆಚ್ಚಿನದಾಗಿರುವ ಶೇ.ಎಂಟೂವರೆ ದರವನ್ನು ಮುಟ್ಟಿದೆ. ಹಣದುಬ್ಬರ ಸೂಚ್ಯಂಕಕ್ಕೂ ತಮ್ಮ ಆದಾಯಕ್ಕೂ ಸಂಬಂಧವೇ ಇನ್ನೂ ಸ್ಥಾಪಿವಾಗದಂತಹ ಅಪಾರ ಪ್ರಮಾಣದ ಅಸಂಘಟಿತ ದುಡಿಯುವ ವರ್ಗವನ್ನೊಳಗೊಂಡ ಅವ್ಯವಸ್ಥಿತ ಆರ್ಥಿಕತೆಯ ಭಾರತದಲ್ಲಂತೂ ಇದರ ಪರಿಣಾಮ ಭೀಕರವಾಗಿದೆ. ಈ ಭೀಕರತೆ ಅಷ್ಟಾಗಿ ಎದ್ದು ಕಾಣುವಂತಾಗದಿರಲು ಮುಖ್ಯ ಕಾರಣ; ಬೆಲೆ ಏರಿಕೆಯ ಭೀಕರತೆಯನ್ನು ಈ ಹಿಂದೆ ಸಾರ್ವತ್ರಿಕವಾಗಿ ಪರಿಣಾಮಕಾರಿಯಾಗಿ ಬಿಂಬಿಸಿ
ಹಾಹಾಕಾರವೆಬ್ಬಿಸುತ್ತಿದ್ದ್ದ ಮಧ್ಯಮ ವರ್ಗ - ಇದರಲ್ಲಿ ಬುದ್ಧಿಜೀವಿಗಳೂ, ಮಾಧ್ಯಮ ಪ್ರತಿನಿಧಿಗಳೂ ಸೇರಿದ್ದಾರೆ - ಈಗ ಇಂತಹ ಬೆಲೆ ಏರಿಕೆಯಂತಹ 'ಸಾಮಾನ್ಯ' ಸಮಸ್ಯೆಗಳಿಂದ ಮುಕ್ತಗೊಳ್ಳುವಷ್ಟು ಆರ್ಥಿಕ ಚೇತನ ಪಡೆದುಕೊಂಡು ಸಾಮಾಜಿಕ ಏಣಿಯ ಮೇಲೇರಿ ಹೋಗಿರುವುದೇ ಆಗಿದೆ. ಇದು ಈ ವರ್ಗಗಳ ಪಾಲಿಗೆ ಸಾಧ್ಯವಾಗಿರುವುದು ಆರ್ಥಿಕ ಉದಾರೀಕರಣದ
ಪರಿಣಾಮಗಳಿಂದ.
ಈ ಆರ್ಥಿಕ ಉದಾರೀಕರಣದ ಮುಖ್ಯ ತೊಂದರೆ ಎಂದರೆ, ಇದು ಸಮಾಜದ ಕೆಲವು ವರ್ಗಗಳಿಗೆ ಸಂಬಂಧಿಸಿದಂತೆ ಮಾತ್ರ 'ಉದಾರ'ವಾಗಿರುವುದು! ವಿಶೇಷವಾಗಿ ಇದು 'ಕೈಗಾರಿಕೋದ್ಯಮ'ದ ಸ್ವರೂಪ ಪಡೆದಿರುವ ಕ್ಷೇತ್ರಗಳಿಗೆ ಅಪಾರ ಮತ್ತು ಅನಿರ್ಬಂಧಿತ ಲಾಭಾಂಶಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಷ್ಟೇ ಅಲ್ಲ, ಅದು 'ಮಧ್ಯವರ್ತಿ' ಕೆಲಸಗಳನ್ನು 'ಸೇವೆ' ಎಂಬ ಹೊಸ ಹೆಸರಿನಿಂದ ಕರೆದು, ಅದನ್ನೂ ಕೈಗಾರಿಕೋದ್ಯಮದ ಅವಿಭಾಜ್ಯ ಅಂಗವನ್ನಾಗಿ ಮಾಡಿ, ಅದಕ್ಕೂ ಈ ಅನಿರ್ಬಂಧಿತ ಲಾಭಾಂಶದಲ್ಲಿ ಪಾಲು ದೊರಕಿಸಿಕೊಟ್ಟಿದೆ. ಇದರಿಂದಾಗಿ ಕೃಷಿ ಮತ್ತು ಸಂಬಂಧಿತ ದೇಶಿ ಉದ್ಯೋಗಗಳು - ಇದರ ವ್ಯಾಪ್ತಿಗೆ ಅಪಾರ ಪ್ರಮಾಣದಲ್ಲಿರುವ ಅಸಂಘಟಿತ ಕಾರ್ಮಿಕ ವರ್ಗವೂ ಸೇರುತ್ತದೆ - ಆರ್ಥಿಕ 'ಅಸ್ಪೃಶ್ಯತೆ'ಗೆ ಒಳಗಾಗಿ, ಅವರ ಆರ್ಥಿಕತೆ ರಾಷ್ಟ್ರದ (ಅಥವಾ ಜಗತ್ತಿನ) 'ಅಧಿಕೃತ' ಆರ್ಥಿಕತೆಯಿಂದ ಬೇರ್ಪಟ್ಟು, ಈ ವರ್ಗಗಳು ದಿನೇ ದಿನೇ ಆರ್ಥಿಕವಾಗಿ ಪಾತಾಳ ಮುಟ್ಟುತ್ತಿವೆ. ಈ ಮುನ್ನ ಇದೇ ಆರ್ಥಿಕ ಉದಾರೀಕರಣದ ಅಂಗವಾಗಿ ಜಾರಿಗೆ ತರಲಾದ ಸರ್ಕಾರದ ಪಡಿತರ ಹಾಗೂ ಪ್ರೋತ್ಸಾಹ ಧನ ಪದ್ಧತಿಗಳ ಕಡಿತದಿಂದಾಗಿ ಈ ವರ್ಗಗಳ ಉತ್ಪನ್ನಗಳು ಸರ್ಕಾರದಿಂದ ನಿಗದಿತ ಬೆಲೆಗಳನ್ನೂ ಪಡೆಯದಂತಹ ಪರಿಸ್ಥಿತಿ
ಉಂಟಾಯಿತು. ಅದೇ ಸಮಯದಲ್ಲಿ ಸರ್ಕಾರ ಪಡಿತರ ಆಹಾರ ಧಾನ್ಯಗಳ ಬೆಲೆಗಳನ್ನೂ ವಿಪರೀತ ಪ್ರಮಾಣದಲ್ಲಿ ಏರಿಸಿತು. ಜೊತೆಗೆ ಅನೇಕ ಗ್ರಾಮಾಂತರ ಅಭಿವೃದ್ಧಿ ಕಾರ್ಯಕ್ರಮಗಳ ಮೇಲಿನ ವೆಚ್ಚವನ್ನು ತಗ್ಗಿಸಿತು. (ಈಚೆಗಷ್ಟೇ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಹಣ ಹೆಚ್ಚಿಸಿದ್ದು ಮತ್ತು 'ಭಾರತ್ ನಿರ್ಮಾಣ್'ದಂತಹ ಗ್ರಾಮಾಂತರ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಿದ್ದು). ಇದರಿಂದಾಗಿ ಈ ವರ್ಗಗಳ ಕೊಳ್ಳುವ ಶಕ್ತಿಯೇ ಉಡುಗಿ ಹೋಗಿ, ಆಹಾರ ಧಾನ್ಯಗಳ ಸರ್ಕಾರಿ ದಾಸ್ತಾನು ಅಪಾರ ಪ್ರಮಾಣದಲ್ಲಿ ಉಳಿದು ಹೋಯಿತು. ಇದನ್ನು ಆಗಿನ ಸರ್ಕಾರ ರಾಷ್ಟ್ರದ 'ಆಹಾರ ಸಮೃದ್ಧಿ' ಎಂದು ಪ್ರತಿಬಿಂಬಿಸಿ ಅದನ್ನು ವ್ಯಾಪಾರಿಗಳಿಗೆ ಸುಲಭ ದರದಲ್ಲಿ ಮಾರಿತು. ಇದು, ಈ ಆರ್ಥಿಕ ಉದಾರೀಕರಣ ಹುಟ್ಟು ಹಾಕುವ ವಿಕ್ಷಿಪ್ತತೆಗೊಂದು ಉದಾಹರಣೆಯಷ್ಟೆ!
ಸರ್ಕಾರ ಪಡಿತರ ಪದ್ಧತಿಯ ಸುಧಾರಣೆಯ ಹೆಸರಿನಲ್ಲಿ ಒಂದು ದೊಡ್ಡ ಜನವರ್ಗವನ್ನೇ ಅದರ ವ್ಯಾಪ್ತಿಯಿಂದ ಹೊರಕ್ಕೆ ಹಾಕಲು ಬಡತನವನ್ನು ಪುರ್ನವ್ಯಾಖ್ಯಾನಿಸಿ, ದಿನಕ್ಕೆ ತಲಾ ಹನ್ನೆರಡು ರೂಪಾಯಿಗಳ ಆದಾಯದ ಹೊಸ ಬಡತನ ಸೀಮಾರೇಖೆಯೊಂದನ್ನು ಸೃಷ್ಟಿಸಿತು. ಇದರ ಆಧಾರದ ಮೇಲೆ ದೇಶದಲ್ಲಿ ಬಡತನ ಶೇಕಡಾ 40 ರಷ್ಟು ಕಡಿಮೆಯಾಗಿರುವುದಾಗಿ ಹೇಳಿಕೊಂಡಿತು. ಆದರೆ ಜಾಗತಿಕವಾಗಿ ಬಡತನವನ್ನು ಅಳೆಯುವ ತಲಾ ದಿನವಹಿ 2400 ಕ್ಯಾಲರಿ ಪೌಷ್ಠಿಕ ಆಹಾರ ಲಭ್ಯತೆಯ ಅಳೆತೆಗೋಲಿನ ಪ್ರಕಾರ ಭಾರತದ ಶೇಕಡಾ 87ರಷ್ಟು ಜನ ಬಡವರೇ ಆಗಿದ್ದಾರೆ. ಸರ್ಕಾರ ನೇಮಿಸಿದ ಅರ್ಜುನ ಸೇನಗುಪ್ತ ಸಮಿತಿ ವರದಿಯೇ ದಿನಕ್ಕೆ 20 ರೂಪಾಯಿಗಳಿಗಿಂತ ಕಡಿಮೆ ಆದಾಯದಲ್ಲಿ ಬದುಕುತ್ತಿರುವ ಜನರ ಸಂಖ್ಯೆ ದೇಶದಲ್ಲಿ ಶೇ.77 ಎಂದು ತಿಳಿಸಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಈಗ ಪಡಿತರ ಪದ್ಧತಿಯಿಂದ ಬಹಿಷ್ಕೃತರಾದವರೇ ಆಗಿದ್ದಾರೆ. ಹೀಗೆ ಪಡಿತರ ವ್ಯವಸ್ಥೆಯನ್ನು ದುರ್ಬಲಗೊಳಿಸಿದ ಸರ್ಕಾರ ಸಹಜವಾಗಿಯೇ ಇದಕ್ಕಾಗಿ ಒಂದು ನಿಗದಿತ ಬೆಲೆಗೆ ರೈತರಿಂದ ಖರೀದಿಸುತ್ತಿದ್ದ ಆಹಾರಧಾನ್ಯದ ಪ್ರಮಾಣವನ್ನು ಕಡಿತಗೊಳಿಸಿತು. ಇದರ ಜೊತೆಗೇ ಜಾಗತಿಕ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದ್ದರ ಪರಿಣಾಮವಾಗಿ ಆಹಾರ ಧಾನ್ಯಗಳ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಮುಕ್ತ ಅವಕಾಶ ದೊರೆತು, ದೇಶಿ ಮಾರುಕಟ್ಟೆಯಲ್ಲಿ ಬೆಲೆಗಳ ಸ್ಥಿರತೆ ಯಾರ ಹಿಡಿತಕ್ಕೂ ಸಿಕ್ಕದೇ ಹೋಯಿತು. 'ಆಹಾರ ಸ್ವಾವಲಂಬನೆ' ಮತ್ತು 'ಆಹಾರ ಸುರಕ್ಷತೆ'ಗಳೆಂಬ ರಾಷ್ಟ್ರೀಯ ಗುರಿಗಳೇ ಅಪ್ರಸ್ತುತಗೊಂಡವು. 'ಫ್ಯೂಚರ್ ಟ್ರೇಡಿಂಗ್' ಎಂಬ ಬಂಡವಾಳಶಾಹಿ ವ್ಯಾಪಾರ ಪದ್ಧತಿಯ ಮೇಲಿದ್ದ ನಿರ್ಬಂಧಗಳನ್ನೂ ಈ ಹಿಂದಿನ ಎನ್.ಡಿ.ಎ. ಸರ್ಕಾರ ತೆಗೆದು ಹಾಕಿ, ಆಹಾರ ಧಾನ್ಯಗಳ ವ್ಯಾಪಾರ ಸಂಪೂರ್ಣ ಸಟ್ಟಾ ವ್ಯಾಪಾರವಾಗಲು ಅನುವು ಮಾಡಿಕೊಟ್ಟಿತು. ಇದರಿಂದಾಗಿ ಹಣವಂತ ಸಂಸ್ಥೆಗಳು ಆಹಾರ ಧಾನ್ಯಗಳನ್ನು
ಸಂಗ್ರಹಿಸಿಟ್ಟುಕೊಂಡು ಜಾಗತಿಕ ಕೊರತೆಯನ್ನುಂಟು ಮಾಡಿ ಅಪಾರ ಬೆಲೆ ಏರಿಕೆಗೆ ಕಾರಣವಾಗಿವೆ. ಈಗಿನ ಸರ್ಕಾರ ಇಂದಿನ ಸಂಕಟವನ್ನು ಎದುರಿಸಲು ಈಗ ಆ ಕಾನೂನನ್ನು ಸರಿಪಡಿಸಲು ಯತ್ನಿಸುತ್ತಿದೆ!
ಕೊರತೆ ಮತ್ತು ಬೆಲೆ ಏರಿಕೆ ಜೊತೆ ಜೊತೆಗೆ ಸೃಷ್ಟಿಯಾಗುವುದು ಮುಕ್ತ ಮಾರುಕಟ್ಟೆ ಅಥವಾ ಮುಕ್ತ ಬಂಡವಾಳಶಾಹಿ ಆರ್ಥಿಕತೆಯ ಒಂದು ಪ್ರಧಾನ ಲಕ್ಷಣ. ಹಾಗೇ ಇಂತಹ ಆರ್ಥಿಕತೆಯ ಶಕ್ತಿ ಕೇಂದ್ರವಾಗಿರುವ ಸಮಾಜ ನಿಯಮಿತವಾಗಿ ಆರ್ಥಿಕ ಹಿಂಜರಿತಕ್ಕೊಳಗಾಗುವುದೂ (ವಿಪರೀತ 'ತಿನ್ನುವ' ವ್ಯವಸ್ಥೆಯ ಅಜೀರ್ಣ ಕಾಲ ಎಂದೂ ಇದನ್ನು ಕರೆಯಬಹುದು!) ಇದರ ಇನ್ನೊಂದು ಲಕ್ಷಣ. ಅಮೆರಿಕಾ ಈಗ ಒಂದು ದೊಡ್ಡ ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿದೆ. ಇದರ ಅಂಗವಾಗಿ ಅದು ಕೂಡಾ ಆಹಾರದ ಕೊರತೆಯನ್ನೂ, ಬೆಲೆ ಏರಿಕೆಯನ್ನೂ ಅನುಭವಿಸುತ್ತಿದ್ದು, ಅದರ
ಅಧ್ಯಕ್ಷ ಜಾರ್ಜ ಬುಷ್ ಇದಕ್ಕೊಂದು ವಿಚಿತ್ರ ಕಾರಣವೊಂದನ್ನು ಕಂಡುಕೊಂಡಿದ್ದರು. ಅದೆಂದರೆ, ಆರ್ಥಿಕ ಉದಾರೀಕರಣದ ಲಾಭ ಪಡೆದ ಭಾರತ ಮತ್ತು ಚೀನಾಗಳ ಜನ ತಿನ್ನುವುದನ್ನು ಹೆಚ್ಚು ಮಾಡಿದ್ದಾರೆ! ಇದನ್ನು ಕೆಲವರು ಖಂಡಿಸಿ, ಕೆಲವರು ಗೇಲಿ ಮಾಡಿದರಾದರೂ, ಇದು ಸತ್ಯವೂ ಹೌದು. ಆದರೆ ಅರ್ಧ ಸತ್ಯ ಮಾತ್ರ! ಚೀನಾ ಮತ್ತು ಭಾರತಗಳಲ್ಲಿ ಆಹಾರ ಧಾನ್ಯಗಳ ಬಳಕೆ ಹೆಚ್ಚಿದೆ, ನಿಜ. ಆದರೆ ಕೆಲವು ವರ್ಗಗಳಲ್ಲಿ ಮಾತ್ರ. ಇದು ಬುಷ್ ಅವರ ಬಂಡವಾಳಶಾಹಿ ಆರ್ಥಿಕ ನೋಟದಿಂದ ತಪ್ಪಿಸಿಕೊಂಡು ಹೋದದ್ದು ಸಹಜವೇ ಆಗಿದೆ.
ಆರ್ಥಿಕ ಉದಾರೀಕರಣ ಆರಂಭವಾದ ಕಳೆದ ಶತಮಾನದ ತೊಂಭತ್ತರ ದಶಕದಿಂದೀಚೆಗೆ ಆಹಾರ ಧಾನ್ಯಗಳ ಜಾಗತಿಕ ಉತ್ಪಾದನೆಯ ವರ್ಷಾವಾರು ಹೆಚ್ಚಳದ ದರ ಕಡಿಮೆಯಾಗುತ್ತಾ ಬಂದಿದೆ. ಈಗದು ಜನಸಂಖ್ಯಾ ಹೆಚ್ಚಳದ ದರಕ್ಕಿಂತ ತೀರಾ ಕಡಿಮೆಯಾಗಿದೆ. ಹಾಗಾಗಿ, ಜಗತ್ತಿನಾದ್ಯಂತ ಆಹಾರ ಕೊರತೆ ಉಂಟಾಗಿರುವುದು ಸಹಜವೇ ಆಗಿದೆ. ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾಗಲು ಕಾರಣಗಳು ಹಲವಾರು. ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಸರ್ಕಾರ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಹಾಯಧನಗಳನ್ನು ಕಡಿತಗೊಳಿಸುತ್ತಿರುವುದು, ಈ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ವಿಸ್ತರಣೆಗಾಗಿ ಸರ್ಕಾರಿ ಹೂಡಿಕೆ ಹೆಚ್ಚೂ ಕಡಿಮೆ ಬತ್ತಿ ಹೋಗಿರುವುದು ಮತ್ತು ರೈತರಿಂದ ಆಹಾರ ಧಾನ್ಯಗಳ ಖರೀದಿಯನ್ನು ಗಣನೀಯವಾಗಿ ಕಡಿತಗೊಳಿಸಿ ಜಾಗತಿಕ ಮಾರುಕಟ್ಟೆಯ ಲಾಭ ಪಡೆಯಲು ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಿದ್ದು - ಇವುಗಳಿಂದಾಗಿ ಆಹಾರ ಧಾನ್ಯಗಳ ಬೇಸಾಯ ಕ್ರಮೇಣ ಕಡಿಮೆಯಾಗುತ್ತಾ ಹೋಗಿದೆ. ಇದರ ಲಾಭ ಪಡೆದ ಅಂತಾರಾಷ್ಟ್ರೀಯ
ಬಂಡವಾಳ ಸಂಸ್ಥೆಗಳು ಸ್ಥಳೀಯ ಮಧ್ಯವರ್ತಿಗಳ ಮೂಲಕ ರೈತರಿಂದ ಕೊಂಡ ಆಹಾರ ಧಾನ್ಯಗಳ ಅನಿರ್ಬಂಧಿತ ಸಟ್ಟಾ ವ್ಯಾಪಾರಕ್ಕೆ ಇಳಿದರು! ಇದರಿಂದಾಗಿ ಭಾರತ ಸರ್ಕಾರ ಇಂದು ತನ್ನ ಜನಕ್ಕೆ ಗೋಧಿ ಪೂರೈಸಲು ತಾನು ತನ್ನ ರೈತರಿಗೆ ನೀಡುತ್ತಿದ್ದ ಬೆಲೆಗಿಂತ ಬಹುಪಾಲು ಹೆಚ್ಚಿನ ಬೆಲೆ ತೆತ್ತು ಅದನ್ನು ಆಮದು ಮಾಡಿಕೊಳ್ಳುವ ದುಃಸ್ಥಿತಿಗೆ ಈಡಾಗಿದೆ.
ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ, ವಿಶೇಷವಾಗಿ ಅಭಿವೃದ್ಧಿಗೊಂಡ ದೇಶಗಳಲ್ಲಿ (ಜೈವಿಕ)ಇಂಧನ ತಯಾರಿಕೆಗಾಗಿ ಅಪಾರ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಬೆಳೆಯತೊಡಗಿದ್ದಾರೆ. ಅಮೆರಿಕಾದಲ್ಲಿ ಶೇ.25ರಷ್ಟು ಆಹಾರ ಧಾನ್ಯಗಳು ಎಥೆನಾಲ್ ತಯಾರಿಕೆಗೆ ಬಳಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸುಲಭ ಬೆಲೆ ಹಾಗೂ ಲಭ್ಯತೆಯ ಇಂಧನದ ಹಿಂದೆ ಬಿದ್ದಿರುವ ಅಭಿವೃದ್ಧಿಗೊಂಡಿರುವ ದೇಶಗಳು, ಹೆಚ್ಚೆಚ್ಚು ಭೂಮಿಯನ್ನು ಜೈವಿಕ ಇಂಧನಕ್ಕೆ ಬೇಕಾದ ಧಾನ್ಯಗಳನ್ನು ಬೆಳೆಯಲು ಕೃಷಿಗೆ ಒಳಪಡಿಸತೊಡಗಿದ್ದಾರೆ. ಜೊತೆಗೆ ಜಗತ್ತಿನಲ್ಲಿ ಮಾಂಸದ ಬೇಡಿಕೆ ಹೆಚ್ಚುತ್ತಿದ್ದು, ಹೆಚ್ಚೆಚ್ಚು ಮಾಂಸದ ಪ್ರಾಣಿಗಳನ್ನು ಸಾಕಲು ಬೇಕಾದ ಆಹಾರ ಬೆಳೆಯಲೂ ಹೆಚ್ಚೆಚ್ಚು ಭೂಮಿಯನ್ನು ಬಳಸತೊಡಗಿದ್ದಾರೆ. ಇದರಿಂದಾಗಿ ಮತ್ತು ಅಭಿವೃದ್ಧಿ ದೇಶಗಳಲ್ಲಿನ ವಾಣಿಜ್ಯ ಬೆಳೆ ಕೃಷಿಯ ಹೆಚ್ಚಳದಿಂದಾಗಿ ರಸಗೊಬ್ಬರದ ಬೇಡಿಕೆ ವಿಪರೀತ ಪ್ರಮಾಣದಲ್ಲಿ ಹೆಚ್ಚಿದೆ. ಇದು ರಸಗೊಬ್ಬರದ ಬೆಲೆ ಏರಿಕೆ ಹಾಗೂ ಕೊರತೆಗೆ ಕಾರಣವಾಗಿದೆ!
ಇದೆಲ್ಲದರ ಹಿಂದಿರುವ ಖಳನಾಯಕನೆಂದರೆ ಪೆಟ್ರೋಲ್! ಸದ್ಯದ ವಿಶ್ವದ ಆರ್ಥಿಕತೆಯ ಇಂಜಿನ್ ನಡೆಯುತ್ತಿರುವುದೇ ಪೆಟ್ರೋಲಿಯಂ ಉತ್ಪನ್ನಗಳಿಂದ ಎಂದು ಅರಿತಿರುವ ಪೆಟ್ರೋಲಿಯಂ ಉತ್ಪಾದನಾ ದೇಶಗಳ ಸಂಸ್ಥೆ, ಕಳೆದ ಒಂದೂವರೆ ದಶಕದಿಂದ ಪೆಟ್ರೋಲಿಯಂ ಉತ್ಪಾದನೆಯನ್ನು ನಿಯಮಿತಗೊಳಿಸಿ, ಅದರ ಬೆಲೆಗಳು ಸದಾ ಏರು ಗತಿಯಲ್ಲಿರುವಂತೆ ನೋಡಿಕೊಂಡಿದ್ದಾರೆ. ಜೊತೆಗೆ ನೈಜೀರಿಯಾದ ರಾಜಕೀಯ ಅಶಾಂತಿಯಿಂದಾಗಿ ಅಲ್ಲಿನ ತೈಲ ಬಾವಿಗಳು ಸ್ಥಗಿತಗೊಂಡಿವೆ ಹಾಗೂ ಅಮೆರಿಕಾದ ಆಕ್ರಮಣಕ್ಕೆ ಸಿಕ್ಕಿರುವ ಇರಾಕ್ನ ತೈಲ ಉತ್ಪಾದನೆಯೂ ಧಕ್ಕೆಗೊಳಗಾಗಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಜಾಗತಿಕ ಆರ್ಥಿಕತೆ ಯಾವುದೇ ಮಿತಿಯಿಲ್ಲದೆ, ಮನುಷ್ಯ ಜೀವನವನ್ನು ಹೆಚ್ಚೆಚ್ಚು 'ಸುಖಮಯ'ವನ್ನಾಗಿ ಮಾಡುವ ಖಯಾಲಿಗೆ ಸಿಕ್ಕು, ತನ್ನ ಇಂಧನ ಬೇಡಿಕೆಯನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಿರುವ ವೇಗಕ್ಕೆ ತಕ್ಕನಾಗಿ ಅದರ ಬೆಲೆ ಏರಿಕೆಯ ವೇಗವೂ ಹೆಚ್ಚುತ್ತಿದೆ! ಈ ರಹಸ್ಯವನ್ನರಿತ ಬಂಡವಾಳಿಗರು ಪೆಟ್ರೋಲಿಯಂ ಉತ್ಪನ್ನಗಳ ಸಟ್ಟಾ ವ್ಯಾಪಾರದಲ್ಲಿ ತೊಡಗಿ ಅದರ ಬೆಲೆಗಳು ಈಗ ಮುಗಿಲು ಮುಟ್ಟುವಂತೆ ಮಾಡಿದ್ದಾರೆ. ಆರ್ಥಿಕ ಉದಾರೀಕರಣದ ಮೂಲಕ ಇದೇ ಖಯಾಲಿಗೆ ಸಿಕ್ಕಿರುವ ಭಾರತದ ಆರ್ಥಿಕತೆ ಇದರ ಪರಿಣಾಮಗಳಿಂದ ತಪ್ಪಿಸಿಕೊಳ್ಳದಾಗಿದೆ. ಈ ಪರಿಣಾಮಗಳ ವ್ಯಾಪ್ತಿ ಮತ್ತು ಆಳ ಎಷ್ಟು ಭಯಾನಕ ವಿಸ್ತಾರದ್ದೆಂದರೆ, ಈ ದೇಶದ ರಾಜಕೀಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ನಮ್ಮ ಪ್ರಧಾನ ಮಂತ್ರಿ ಪೆಟ್ರೋಲಿಯಂ ಬೆಲೆ ಏರಿಕೆಯನ್ನು - ಅದೂ ಜಾಗತಿಕ ಏರಿಕೆಯ ಶೇ.10ಕ್ಕೂ ಕಡಿಮೆ - ಸಮರ್ಥಿಸಿಕೊಳ್ಳಲು, ಅದರ ಅನಿವಾರ್ಯತೆಯನ್ನು ವಿವರಿಸಲು ರಾಷ್ಟ್ರವನ್ನುದ್ದೇಶಿಸಿ ಪ್ರಸಾರ ಭಾಷಣ ಮಾಡುವ ಒತ್ತಾಯಕ್ಕೆ ಒಳಗಾಗಬೇಕಾಯಿತು! ಆರ್ಥಿಕ ಉದಾರೀಕರಣದ ಪಿತಾಮಹರೆನಿಸಿರುವ ಡಾ||ಮನಮೋಹನ ಸಿಂಗರು ಅದರ ದುಷ್ಪರಿಣಾಮಗಳ ರಾಜಕೀಯ ಬಿಸಿಯನ್ನೂ ಅನುಭವಿಸಬೇಕಾಗಿ ಬಂದಿರುವುದು ಸಹಜ ನ್ಯಾಯವೇ ಆಗಿದೆ!
ಭಾರತ ಸರ್ಕಾರ ಬೆಲೆ ಏರಿಕೆಯನ್ನು ಒಂದು ರೋಗಚಿಹ್ನೆಯೆಂದು ಪರಿಗಣಿಸಿ, ಕೆಲವು ವಸ್ತುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವ ಮೂಲಕ ಅದನ್ನು ನಿವಾರಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ ಈ ಸಂಕೀರ್ಣ ಸ್ವರೂಪದ ಬೆಲೆ ಏರಿಕೆ ಯಾವ ರೋಗದ ಚಿಹ್ನೆಯೆಂದು ಅದಕ್ಕಿನ್ನೂ ಮನವರಿಕೆಯಾದಂತಿಲ್ಲ. ಆರ್ಥಿಕ ಉದಾರೀಕರಣ ಸೃಷ್ಟಿಸಿರುವ ಸಂಪತ್ತಿನ ಅಮಲಿನಲ್ಲಿರುವ ಸರ್ಕಾರ, ಈ ಸಂಪತ್ತು ಸೃಷ್ಟಿಸಿರುವ ಸಾಮಾಜಿಕ ಒಡಕು ಹಾಗೂ ಅಪರಾಧ ವೈವಿಧ್ಯಗಳ ಆತ್ಯಂತಿಕ ಪರಿಣಾಮಗಳ ಬಗ್ಗೆ ಯೋಚಿಸಲೂ ಸಾಧ್ಯವಾಗಿಲ್ಲ. ಶೇಕಡಾ ಎಂಟೂವರೆ ಬೆಳವಣಿಗೆ ದರದ ಜೊತೆಯಲ್ಲೇ ಶೇ.87 ಜನಕ್ಕೆ ಕನಿಷ್ಠ ಅಗತ್ಯ ಪೌಷ್ಠಿಕ ಆಹಾರ ದೊರಕುತ್ತಿಲ್ಲ; ಹಾಗೇ ಜಾಗತಿಕ ಮಾನವ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ ನಮ್ಮ ರಾಷ್ಟ್ರದ ಸ್ಥಾನ ಕೆಳ ಕೆಳಕ್ಕೆ ಇಳಿದು, ಈಗ 128ನೇ ಸ್ಥಾನ ತಲುಪಿದೆ ಎಂಬುದರ ಪರಿವೆಯೂ ಸರ್ಕಾರಕ್ಕೆ ಇದ್ದಂತಿಲ್ಲ. ಮನಮೋಹನ ಸಿಂಗರಿಂದ ಅನಾವರಣಗೊಂಡ ಹಾಗೂ ಆನಂತರ ಅಪವಾದವಿಲ್ಲದಂತೆ ರಾಷ್ಟ್ರದ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೂ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳೊಂದಿಗೆ ಅನುಮೋದಿಸಿ ಮುಂದುವರೆಸಿರುವ ಈ ಹೊಸ ಆರ್ಥಿಕ ನೀತಿ, ದುಡಿಮೆ ಮತ್ತು ವ್ಯಾಪಾರಗಳ ಎಲ್ಲ ನೈತಿಕತೆಯನ್ನೂ ಅಪ್ರಸ್ತುತಗೊಳಿಸಿ, ಸಾರ್ವಜನಿಕ ಜೀವನದಲ್ಲಿ ಹಣವೊಂದನ್ನೇ ಪರಮ ಮೌಲ್ಯವಾಗಿ ಸ್ಥಾಪಿಸಿದೆ. ಹಣ ಮಾಡುವುದೊಂದೇ ಬದುಕಿನ ಗುರಿ ಎಂದು ಸಾರಿ ಹೇಳುತ್ತಿದೆ. ಹಾಗಾಗಿಯೇ ಇಂದು ಇಂದು ಎಲ್ಲ ಕ್ಷೇತ್ರಗಳೂ ಒಂದಲ್ಲ ಒಂದು ರೂಪದಲ್ಲಿ ಸಟ್ಟಾ ವ್ಯಾಪಾರ ಕ್ಷೇತ್ರಗಳಾಗಿವೆ. ಮನಮೋಹನ ಸಿಂಗರು ಈ ಸಟ್ಟಾ ವ್ಯಾಪಾರಿಗಳಿಗೆ ಸರಳ ಬದುಕು ನಡೆಸುವಂತೆ ಮತ್ತು ಸಾಮಾಜಿಕ ದಾನ - ಧರ್ಮಗಳ ಕೆಲಸಗಳಲ್ಲಿ ತೊಡಗುವಂತೆ ಬೋಧಿಸುತ್ತಾ ಇಂದಿನ ಆರ್ಥಿಕ ಸಂಕಟಗಳನ್ನು ಪರಿಹರಿಸಲು ಯತ್ನಿಸುತ್ತಿದ್ದಾರೆ! ತಾವೇ ಸೃಷ್ಟಿಸಿದ ರಾಕ್ಷಸರಿಗೆ ಇವರು ಈಗ ಧರ್ಮ ಬೋಧನೆ ಮಾಡತೊಡಗಿದ್ದಾರೆ. ಇದೊಂದು ದೊಡ್ಡ ಹಾಸ್ಯ ನಾಟಕದಂತೆ ಕಾಣುತ್ತಿದೆ. ಆದರದು ಮನಮೋಹನಸಿಂಗರಿಗೆ ಗೊತ್ತಿದ್ದಂತಿಲ್ಲ. ಅದೇ ರಾಷ್ಟ್ರದ ಸದ್ಯದ ದುರಂತ.