ಅನಂತಮೂರ್ತಿಯವರ -'ಕನ್ನಡ ಕಾಪಾಡುವ ಹೋರಾಟ, ಆನಂದ'.

ಅನಂತಮೂರ್ತಿಯವರ -'ಕನ್ನಡ ಕಾಪಾಡುವ ಹೋರಾಟ, ಆನಂದ'.

ಬರಹ

ಇವತ್ತಿನ 'ವಿಜಯ ಕರ್ನಾಟಕ'ದ ಸಾಪ್ತಾಹಿಕಪುರವಣಿಯಲ್ಲಿ ಬಂದಿರುವ ಅನಂತಮೂರ್ತಿಯವರ ಲೇಖನ ಇದು.
ಅನಂತಮೂರ್ತಿಯವರು ಇತ್ತೀಚೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ನೀಡಿದ Reflections of an Indian Bhasha writer ಎಂಬ ಶೀರ್ಷಿಕೆಯ ಅಡಿಯಲ್ಲಿ ಅವರು ಮಾಡಿದ ಮೂರು ಭಾಷಣಗಳೇ ಈ ಲೇಖನದಲ್ಲಿ ಮೂಡಿಬಂದಿವೆ. ವಿಜಯ ಕರ್ನಾಟಕ ಓದದ ನಮ್ಮ ಸಂಪದದ ಎಲ್ಲ ಗೆಳೆಯರು ಇದನ್ನು ಓದಲಿ ಎಂಬ ಸದಾಶಯದಿಂದ ಇದನ್ನು ಇಲ್ಲಿ ಹಾಕುತ್ತಿದ್ದೇನೆ.--
ಲೇಖನ ಕೃಪೆ 'ವಿಜಯ ಕರ್ನಾಟಕ'

ಕನ್ನಡ ಕಾಪಾಡುವ ಹೋರಾಟ, ಆನಂದ.

ಬೈಬಲ್‌ನಲ್ಲಿ ಹೇಳುವ ಸೃಷ್ಟಿಯ ಆರಂಭದಲ್ಲಿ ಪ್ರಾಣಿಪಕ್ಷಿಗಳಲ್ಲಿ ಹೆಸರು ಹೊತ್ತೇ ಬಂದವು. ದೇವರು ಈ ಕುರಿತಂತೆ ಆಡಮ್‌ನೊಂದಿಗೆ ಹೀಬ್ರೂನಲ್ಲಿ ಮಾತಾಡಿದ. ಆಯಾ ಪ್ರಾಣಿಗಳ ಗುಣ ಸ್ವಭಾವಗಳಿಗೆ ಹೊಂದುವ ಹೆಸರನ್ನೇ ಕೊಟ್ಟ (called them by their own names). ಆದರೆ ಕ್ರಿಶ್ಚಿಯನ್ನರಿಗೆ ದಕ್ಕಿದ್ದು ಗ್ರೀಕ್. ಸೇಂಟ್ ಆಗಸ್ಟೀನ್‌ನಂತಹ ಮೇಧಾವಿ ಕೂಡ ಗ್ರೀಕ್‌ಅನ್ನೇ ನೆಚ್ಚಿಕೊಂಡ. ಆಗ ಅದು ಒಂದು ಪ್ರಾದೇಶಿಕ ಭಾಷೆ. ನಂತರ ಇನ್ನೊಂದು ಪ್ರಾದೇಶಿಕ ಭಾಷೆಯಾಗಿಯೇ ಉದಯವಾಗಿದ್ದ ಲ್ಯಾಟಿನ್ ಜೊತೆಗೂಡಿ ಅದು ಇಡೀ ಯೂರೋಪ್ ಖಂಡವನ್ನೇ ವ್ಯಾಪಿಸಿತು. ಇಂಗ್ಲಿಷ್ ಕವಿ ಶೆಲ್ಲಿ ಹೇಳುವಂತೆ Universal Language ಅಥವಾ Language of the Cosmopolis ಆಯಿತು. ಹಾಗಾದಾಗ ಕೃತಕವಾಯಿತು. ಇದರ ಹಿಂದೆ ಒಂದು ರಾಜಕಾರಣವೂ ಇದೆ. ಆಗ ರೋಮನ್ ಚಕ್ರಾಧಿಪತ್ಯದ ಉಚ್ಛ್ರಾಯ. ಈ ಕಾರಣವಾಗಿ ಲ್ಯಾಟಿನ್ ಹೇರಿಕೆಯಾಗಿತ್ತು. ಯುರೋಪ್ ವಿಂಗಡಣೆಯಾಗಿ ಬೇರೆ ಬೇರೆ ಬೇರೆ ಬೇರೆ ಸ್ವತಂತ್ರ ರಾಷ್ಟ್ರಗಳು ಹುಟ್ಟಿದೊಡನೆ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳ ಪ್ರಾಬಲ್ಯ ಕಡಿಮೆಯಾಯಿತು. ನಮ್ಮ ಕೆ.ವಿ. ಸುಬ್ಬಣ್ಣ, ಚಿ.ಮೂ. ಇದನ್ನು ಗಮನಿಸಿದ್ದಾರೆ. ಆದರೆ ನಮ್ಮ ಸಂಸ್ಕೃತ ಭಾಷೆಯ ವಿಷಯದಲ್ಲಿ ಹೀಗಾಗಲಿಲ್ಲ. ಸಂಸ್ಕೃತ ಹಾಗೂ ಪ್ರಾದೇಶಿಕ ಭಾಷೆಯಾದ ಪ್ರಾಕೃತ ಅಶೋಕನ ಕಾಲದಲ್ಲಿ ಒಟ್ಟೊಟ್ಟಿಗೇ ಜಾರಿಯಲ್ಲಿದ್ದವು. ಪ್ರಾಕೃತದಿಂದ ದ್ರಾವಿಡಭಾಷೆಗಳು ಹುಟ್ಟಿದವು. ಪೋಲಕ್ ಹಾಗೂ ನಮ್ಮವರೇ ಆದ ಡಿ.ಆರ್. ನಾಗರಾಜ್ ಈ ವಿದ್ಯಮಾನವನ್ನು ಮಾರ್ಕ್ಸಿಸ್ಟ್ ದೃಷ್ಟಿಕೋನದಿಂದ ನೋಡುವ ಪ್ರಯತ್ನ ಮಾಡಿದ್ದಾರೆ.
ಇಂಗ್ಲಿಷ್‌ನಲ್ಲಿ ಈ ಕಷ್ಟ ಹೋಗಿಲ್ಲ. ಕವಿ ಮಿಲ್ಟನ್ ಅದನ್ನು ಲ್ಯಾಟಿನೈಸ್ ಮಾಡಿದ. ಯುರೋಪ್‌ನಲ್ಲಿದ್ದ ಸಮಾನ ಮನಸ್ಕರನ್ನು ತಲುಪಲಿಕ್ಕಾಗಿ ಇದೇ ಕಾರಣಕ್ಕಾಗಿ ಪ್ಲೇಟೋ ಕೂಡ ಯುಟೋಪಿಯಾ ಅನ್ನು ಇಂಗ್ಲಿಷ್ ಮತ್ತು ಲ್ಯಾಟಿನ್ ಭಾಷೆಗಳೆರಡರಲ್ಲೂ ಬರೆದ. ಹೆಂಡಿರನ್ನು ಜೈಲಿಗೆ ಹಾಕುತ್ತಿದ್ದ, ಹಾಕಿ ಕೊಲ್ಲಿಸುತ್ತಿದ್ದ ಕ್ರೂರ, ಅಸಂಸ್ಕೃತ ಇಂಗ್ಲಿಷ್ ರಾಜರ ಕತೆ ಎಲ್ಲರಿಗೂ ಗೊತ್ತಾಗಲಿ ಎನ್ನುವುದು ಅವನ ಉದ್ದೇಶವಾಗಿತ್ತು. ಗಾಂಧೀಜಿ ತಮ್ಮ ’ಹಿಂದ್ ಸ್ವರಾಜ್’ ಕೃತಿಯನ್ನು ಗುಜರಾತಿಯಲ್ಲಿ ಬರೆದರು. ಇಂಗ್ಲಿಷ್‌ನಲ್ಲೂ ಬರೆದರು. ಅವರ ಗುಜರಾತಿ ಪುಸ್ತಕವನ್ನು ಇಂಗ್ಲಿಷರು ಬ್ಯಾನ್ ಮಾಡಿದರಾದರೂ ಇಂಗ್ಲಿಷ್ ಕೃತಿಯನ್ನು ಮಾಡಲಾಗಲಿಲ್ಲ. ಅದರಿಂದಾಗಿ ಅವರ ’ಕೀರ್ತಿ’ ತಾಯ್ನಾಡಿನಲ್ಲಿ ಪಸರಿಸಿ, ಅಲ್ಲಿಯ ಸಂವೇದನಾಶಾಲಿಗಳು ಇಂಡಿಯಾದಲ್ಲಿನ ಇಂಗ್ಲಿಷ್ ಪ್ರಭುತ್ವ ಕುರಿತು ಹೇಸಿಕೊಳ್ಳುವಂತೆ ಮಾಡಿತ್ತು. ಈ ಪ್ರತಿಭಟನೆಯ ಮುಂದೆ ಇಂಗ್ಲಿಷರು ನಿಸ್ಸಹಾಯಕರಾಗಿದ್ದರು.
ಮಿಲ್ಟನ್ ನಂತರ ಬಂದ ಕೀಟ್ಸ್ ’Life to Milton is Death to me' ಎಂದು ಹೇಳುತ್ತಾ ತಾನು ಹಾಗೆ ಬರೆಯಲಾರೆ ಎಂದುಕೊಂಡು ಆಂಗ್ಲೋಸ್ಯಾಕ್ಸನ್‌ಗೆ ಮರಳಿಹೋದ. ಇವರಿಬ್ಬರ ನಡುವೆ ಬಂದ ಶೇಕ್ಸ್‌ಪಿಯರ್ ಎರಡರ ಹಿತವಾದ ಮಿಶ್ರಣವನ್ನು ಮಾಡಿ ಗೆದ್ದಿದ್ದ. ಶೇಕ್ಸ್‌ಪಿಯರನ ಈ ಮ್ಯಾಜಿಕ್ ನಮ್ಮ ಪಂಪನಲ್ಲಿದೆ. ಆತ ಕವಿರಾಜಮಾರ್ಗ ಹೇಳುವ ಮಾರ್ಗ, ದೇಸಿ ಎರಡನ್ನೂ ಬಳಸುತ್ತಾನೆ.
ರೋಮನ್ ಚಕ್ರಾಧಿಪತ್ಯ ಪತನಗೊಂಡು, ಯುರೋಪ್ ವಿಂಗಡಣೆಯಾಗಿ ಅದರಲ್ಲಿನ ರಾಷ್ಟ್ರಗಳು ಸ್ವಾಧೀನತೆ ಪಡೆಯುವ ಹೊತ್ತಿಗೆ ಎರಡು ಮಹಾಯುದ್ಧಗಳು ಘಟಿಸಿದ್ದವು. ಈ ಮಹಾಯುದ್ಧದ ಮುಂಚೂಣಿಯಲ್ಲಿದ್ದ ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ರಷ್ಯ ದೇಶಗಳೆಲ್ಲ ರೋಮ್ ಸಾಮ್ರಾಜ್ಯವನ್ನೇ ತಾವು ಸರಿಗಟ್ಟಬೇಕಾದ ’ಮಾದರಿ’ಯಾಗಿ ಪರಿಗಣಿಸಿದ್ದವು. ರಷ್ಯಾದ ಭೂತಾಕಾರದ ಕಟ್ಟಡಗಳು, ಬೃಹತ್ ಶಾಂಡಿಲಿಯರ್‌ಗಳನ್ನು ನೋಡಿದರೆ ರಷ್ಯನ್ನರ ಅಧಿನಾಯಕ ಸ್ಟ್ಯಾಲಿನ್ ರೋಮನ್ನರನ್ನು ಅನುಕರಿಸಿದ್ದು ಸ್ಪಷ್ಟವಾಗುತ್ತದೆ.
ಇನ್ನು ಜರ್ಮನ್ ಭಾಷೆಗೆ ಬಂದರೆ ಮಾರ್ಟಿನ್ ಲೂಥರ್ ಕಿಂಗ್ ಬಳಸಿದ ಪ್ರಾದೇಶಿಕ ನುಡಿಕಟ್ಟಿನ ಜರ್ಮನ್ ಅನ್ನು ಈಗಿನ ವಿದ್ಯಾರ್ಥಿಗಳು ಬಳಸಲಾರರು. ಇಂಥ ಜಾಗದಲ್ಲಿ ಬಳಕೆಯಾಗುತ್ತಿದ್ದುದು ತಿರುಳುಗನ್ನಡ ಎಂದು ನಮ್ಮ ಕವಿರಾಜಮಾರ್ಗದಲ್ಲಿ ಲೂಥರ್ ಕಿಂಗ್‌ದು ಮೂಲ ಜರ್ಮನ್. ಇಂಥ ಮೂಲ ನುಡಿಕಟ್ಟುಗಳ ಎಲ್ಲ ಭಾಷೆಗಳೂ ಕ್ರಮವಾಗಿ literization ಮತ್ತು literalization ಪ್ರಕ್ರಿಯೆಗೆ ಒಳಗಾಗುತ್ತವೆ. ಲಿಪಿಯನ್ನು ಮಾಡಿಕೊಳ್ಳುವುದು ಲಿಟರೈಸೇಷನ್ ಆದರೆ ಕಾವ್ಯದ ಕಲ್ಪನೆಯನ್ನು ಹುಟ್ಟಿಸಿಕೊಳ್ಳುತ್ತಾ ಸಾಹಿತ್ಯದ ಒಂದು ಭಾಗವಾಗುವುದು ಲಿಟರಲೈಸೇಷನ್. ಕನ್ನಡ ಭಾಷೆ ಈ ಪ್ರಕ್ರಿಯೆಗೆ ಒಳಗಾದುದನ್ನು ವಿವರಿಸಲು ಕವಿರಾಜಮಾರ್ಗವನ್ನು ಇವತ್ತಿಗೂ ಆಧಾರವಾಗಿ ಪರಿಗಣಿಸಲಾಗುತ್ತದೆ. ಸಂಪೂರ್ಣವಾಗಿ ಸಂಸ್ಕೃತದಿಂದ ಬಂದ ರೀತಿಯನ್ನು ’ಮಾರ್ಗ’ ಎಂದೂ, ಅಗತ್ಯ ಬದಲಾವಣೆಗಳೊಂದಿಗೆ ಇವಾಲ್ವ್ ಆದ ರೀತಿಯನ್ನು ’ದೇಸಿ’ ಎಂದೂ ಕವಿರಾಜಮಾರ್ಗ ಗುರುತಿಸಿತು. ಎಚ್.ಎಸ್. ಶಿವಪ್ರಕಾಶ್ ಮತ್ತು ಷ. ಶೆಟ್ಟರ್‌ನಂತಹ ಕೆಲವೇ ಮಂದಿ ಇದನ್ನು ಅನುಮಾನಿಸುತ್ತಾರೆ.
ಇವೆರಡೂ ಬಿಟ್ಟು ಇರುವ ಇನ್ನೊಂದು ಮೌಖಿಕ ರೀತಿ, ಅದಕ್ಕೆ ಸಾಹಿತ್ಯವೆಂಬ ಹಣೆಪಟ್ಟಿ ಇರೊಲ್ಲ. ಅಕ್ಷರಕ್ಕೆ ಬಂದಾಗ ಹಾಗೆಂದು ಗುರುತಿಸಿಕೊಳ್ಳುತ್ತೆ. ಕನ್ನಡದ ನಂತರ ಲಿಪಿ ಪಡೆದುಕೊಂಡ ತಮಿಳುಭಾಷೆಯ ಮೌಖಿಕಕಾವ್ಯ ತಾನು ಕಾವ್ಯ ಎಂದು self conscious ಆಗಿ ತಿಳಿದಿರಲಿಲ್ಲ ಅಂತ ಶೆಟ್ಟರ್ ಹೇಳುತ್ತಾರೆ. ಮೌಖಿಕ ಅಂದಾಗ ವೇದಗಳು ನೆನಪಾಗುತ್ತವೆ. ಋಗ್ವೇದದಲ್ಲಿ ಬರುವ ಉಷಸ್ ಮಂತ್ರವನ್ನು ಕಾವ್ಯ ಅಂತೀವಿ. ನಮ್ಮ ಪೂರ್ವಿಕರ ಹಾಗೆ ದೇವರಿಂದ ಬಂದ ಮಾತು ಎಂದು ಹೇಳಲು ಸಂಕೋಚವಾಗಿ ಅದನ್ನು ಕಾವ್ಯ ಅಂತ ಕರೀತೀವಿ. ಮ್ಯಾಥ್ಯೂ ಆರ್ನಾಲ್ಡ್ ಕೂಡ ಬೈಬಲ್ ಅನ್ನು ಉತ್ತಮ ಸಾಹಿತ್ಯ ಎಂದು ಪರಿಗಣಿಸಿದ. ಇಲ್ಲಿ ಇನ್ನೊಂದು ಸ್ವಾರಸ್ಯ ಅಂದರೆ ಆರ್ನಾಲ್ಡ್ ನಂತರ ಬಂದ ಎಲಿಯಟ್ ಹೇಳ್ತಾನೆ, ಬೈಬಲ್ ಅಂತ ಓದುತ್ತಿರುವ ತನಕ ಅದಕ್ಕೆ ಕಾವ್ಯವನ್ನು ಪ್ರಭಾವಿಸುವ ಶಕ್ತಿ ಇತ್ತು. ಬೈಬಲನ್ನು ಒಂದು ಕಾವ್ಯವಾಗಿ ಓದುವಾಗ ಈ ಪ್ರಭಾವ ಸಾಧ್ಯವಾಗುವುದಿಲ್ಲ ಅಂತ. ಆದರೆ ನಮ್ಮ ಪಂಪ ಇಡೀ ಮಹಾಭಾರತವನ್ನೇ ಸ್ಥಳೀಯ ಭಾಷೆಯಲ್ಲಿ ಬರೆದ. ವಿಶ್ವ ಸಾಹಿತ್ಯದಲ್ಲೇ ಇದೊಂದು ಅನನ್ಯ ಸಂಗತಿ. ಅರ್ಜುನನನ್ನು ತನ್ನ ನಾಯಕನನ್ನಾಗಿ ಮಾಡಿಕೊಂಡು, ಅವನೊಂದಿಗೆ ತನ್ನ ರಾಜನನ್ನು ಸಮೀಕರಿಸಿ- ಇದನ್ನು ಸಮಾಸಾಲಂಕಾರ ಎನ್ನುತ್ತಾರೆ- ಜೈನ ಧರ್ಮಕ್ಕೆ ಅಡ್ಡಿಯಾಗದ ಹಾಗೆ ಅವನು ಬರೀತಾನೆ. ಹೀಗೆ ಸಮಾಸಾಲಂಕಾರ ಮಾಡಿದ್ದು ಮುಳಿಯ ತಿಮ್ಮಪ್ಪಯ್ಯನವರಿಗೆ ದೋಷ ಅನ್ನಿಸಲಿಲ್ಲ. ಆದರೆ ಇಂಗ್ಲಿಷ್ ಸಾಹಿತ್ಯ ಓದಿಕೊಂಡಿದ್ದ ತೀನಂಶ್ರೀ ಇದನ್ನು ದೋಷ ಎಂದು ಕರೆದರು.
ಬಂಗಾಲಿ ಭಾಷೆಯ ಕುರಿತು ಮಾತನಾಡುವಾಗ ಈಶ್ವರಚಂದ್ರ ವಿದ್ಯಾಸಾಗರರ ಕುರಿತು ಪ್ರಸ್ತಾಪಿಸಲೇ ಬೇಕು. ಅವರ ಸಾಹಿತ್ಯ ಕುರಿತು ಭಾಷಣ ಮಾಡಬೇಕಾದ ಸಂದರ್ಭದಲ್ಲಿ ಅವರನ್ನು ಓದಿಕೊಂಡೆ. ಆತ ಅಂಗಿಯೇ ಹಾಕುತ್ತಿರಲಿಲ್ಲ. ಅಂದರೆ ಆ ಮಟ್ಟಿಗಿನ ಸನಾತನಿ. ಆದರೆ ಇಂಗ್ಲಿಷ್ ಓದಿಕೊಂಡಿರ್ತಾರೆ. ಆ ಪ್ರಾಂತ್ಯದ ಇಂಗ್ಲಿಷ್ ಗವರ್ನರ್ ಜನರಲ್ ಜತೆ ತುಂಬಾ ಸ್ನೇಹದಿಂದಲೂ ಇರ್ತಾರೆ. ಆತ ಸಮಾರಂಭವೊಂದಕ್ಕೆ ಆಹ್ವಾನಿಸಿದಾಗ ಇಂಗ್ಲಿಷ್ ಡ್ರೆಸ್ ಹೊಲಿಸಿ ತಯಾರಿ ಮಾಡಿಕೋತಾರೆ. ಸೂಟು ಹಾಕಿಕೊಂಡರೆ ಮಾತೇ ಹೊರಡುತ್ತಿಲ್ಲ ಎಂದೂ ಗೆಳೆಯನಿಗೆ ವಿವರಿಸುತ್ತಾರೆ. ಹಾಗಾದರೆ ನೀವು ಮಾಮೂಲಿಯಾಗಿ ಇರುವಂತೆಯೇ ಬನ್ನಿ ಎಂದು ಆತ ವಿಶ್ವಾಸ ತೋರುತ್ತಾನೆ. ಅಂತಹವರು ಮನುಧರ್ಮಶಾಸ್ತ್ರದಂತಹುದೇ ಇನ್ನೊಂದು ಗ್ರಂಥ, ಪರಾಶರ ಧರ್ಮಶಾಸ್ತ್ರವನ್ನು ಓದಿ ದಿಗ್ಭ್ರಮೆಗೊಳ್ಳುತ್ತಾರೆ. ಅದನ್ನು ಬಂಗಾಲಿಗೆ ಅನುವಾದಿಸಿದರೆ ಬ್ರಾಹ್ಮಣ ಹೊರಡಬಹುದಾದ ವಿರೋಧ, ಧಿಕ್ಕಾರಗಳನ್ನು ಊಹಿಸಿ ಈ ಕೆಲಸ ಮಾಡಲೇ ಅಂತ ತಮ್ಮ ತಂದೆಯ ಅನುಮತಿ ಕೋರುತ್ತಾರೆ. ಅವರು ನಾನು ಬೇಡ ಅಂದರೆ ಏನು ಮಾಡುವೆ ಎಂದು ಪ್ರಶ್ನಿಸಿದಾಗ, ನೀನು ಸತ್ತ ಮೇಲೆ ಮಾಡುವೆ ಎಂದು ಮಗ ಉತ್ತರಿಸುತ್ತಾರೆ. ಮಗನನ್ನು ಮೀರುಸುವ ವಿಮರ್ಶಾತ್ಮಕ ನಿಲುವಿನ ತಂದೆ ಪರವಾಗಿಲ್ಲ ಈಗಲೇ ಮಾಡು ಎಂದಾಗ ಪೋಲೀಸರ ಸಹಾಯ ತೆಗೆದುಕೊಂಡು ಆ ಗ್ರಂಥವನ್ನು ಬಂಗಾಲಿಗೆ ತರುತ್ತಾರೆ. ಆದರೆ ಅದು ಅಶುದ್ಧವಾದ ಸಂಸ್ಕೃತ ಅನ್ನುವ ಕಸಿವಿಸಿ ಅವರನ್ನು ಕಾಡುತ್ತೆ.
ನಮ್ಮ ಮಾಯಾವಾದವನ್ನು ಹೋಲುವ ಸಿದ್ಧಾಂತವನ್ನು ಪ್ರಚುರಪಡಿಸುವ ಇಂಗ್ಲಿಷ್ ಗ್ರಂಥವಿದೆ. On Human Understanding ಶೀರ್ಷಿಕೆಯ ಈ ಪುಸ್ತಕದ ತಿರುಳು ’ಮನುಷ್ಯ ಕಲ್ಪನೆ ಕೇವಲ ಕಲ್ಪನೆಗಳು, ವಿಚಾರಗಳಲ್ಲ’ ಎಂದು. ಬ್ರಿಟಿಷರು ಇದನ್ನು ಪಠ್ಯವಾಗಿಸಬೇಕು ಎಂದು ಹೊರಟಾಗ ವಿದ್ಯಾಸಾಗರ ಅದನ್ನು ಬಲವಾಗಿ ವಿರೋಧಿಸುತ್ತಾರೆ. ಭಾರತೀಯ ಮಾಯಾವಾದ, ಈ ಪುಸ್ತಕದ ಸಿದ್ಧಾಂತ ಎರಡೂ ಸೇರಿ ಮಾಯಾವಾದ ಸ್ಥಿರವಾಗಿಬಿಟ್ಟೀತು ಎಂಬ ಭಯದಿಂದ. ಆದರೂ ಈ ಮಟ್ಟಿಗೆ ಕ್ರಿಟಿಕಲ್ ಇನ್‍ಸೈಡರ್ ಆಗಬಲ್ಲ ಅವರಿಗೆ ಈಗಿನ ಬಂಗಾಲಿ ತರ ಬರೆಯೋದು ಕಷ್ಟವಾಗಿರುತ್ತೆ.
ಅದೃಷ್ಟವಶಾತ್ ನಮಗೆ, ಈ ಹದ ಪಂಪನ ಕಾಲದಿಂದಲೇ ಸಿದ್ಧಿಸಿದೆ. ಜತೆಗೆ ಸಂಪ್ರದಾಯದ ಜತೆ ತಿಕ್ಕಾಟ ಆದಾಗಲೆಲ್ಲ ಹೊಸ ಶಕ್ತಿ ಕನ್ನಡ ಭಾಷೆಗೆ ಪ್ರಾಪ್ತವಾಗಿದೆ. ಉದಾಹರಣೆಗೆ ಬಸವಣ್ಣ ಬರೆದದ್ದು ಶ್ರುತಿಯೂ ಅಲ್ಲ ; ಸ್ಮೃತಿಯೂ ಅಲ್ಲ ವಚನ ಅಂದರೆ ಆಡಿದ ಮಾತು. ಅದು ಅಷ್ಟೊಂದು ಆಧುನಿಕ. ವಚನಗಳಲ್ಲಿ ಶಿವ ಕನ್ನಡದಲ್ಲೇ ಮಾತಾಡಿದ. ಜಾನಪದದಿಂದಲೂ ವಚನ ಸಾಹಿತ್ಯ ಬಹಳಷ್ಟನ್ನು ಪಡೆದುಕೊಂಡಿತು. ಆಳ್ವಿಕೆಯಲ್ಲಿ, ಬಲಿಷ್ಠರಲ್ಲಿ ಸುಶಿಕ್ಷಿತರು ಕಡಿಮೆ ಇದ್ದುದರಿಂದ ಸಮಾನ ಮನಸ್ಕರ ನಡುವೆ ಮಾತನಾಡಬೇಕಾದ ತುರ್ತಿನಿಂದ, ಒಂದು ರಾಜಕೀಯ ಚಳುವಳಿಯ ಫಲವೆಂಬಂತೆ ವಚನ ಕಾವ್ಯ ಹುಟ್ಟಿತು. ಕುವೆಂಪು, ಬೇಂದ್ರೆ ಒಂದು ಸಂದರ್ಭದಲ್ಲಿ ಇಂಗ್ಲಿಷಿನಲ್ಲಿಯೂ ಬರೆದರು. ಅವರ ಕಾಲದ ಒಬ್ಬ ಬ್ರಿಟಿಷ್ ವಿದ್ಯಾರ್ಥಿ ಹೇಗೆ ಬರೆಯಬಹುದಿತ್ತೋ ಹಾಗೆ ಬರೆದರು.
ನಮ್ಮವರೇ ಜನರ ಜತೆ ಮಾತನಾಡಲು, ರಾಜಕೀಯವಾಗಿ ಯೋಚಿಸಲು, ಜನ ಮೂರ್ಖರಾಗುವುದನ್ನು ತಡೆಯಲು ಸ್ಥಳೀಯ ಭಾಷೆ ಬಳಸಬೇಕಾಗುತ್ತದೆ. ಅದಕ್ಕಾಗೇ ಗಾಂಧೀಜಿ ಕಡೆತನಕ ಗುಜರಾತಿಯಲ್ಲಿ ಬರೆದರು. ಆದರೆ ನೆಹರೂಗೆ ಆ ಒಳಗಿನ ಒತ್ತಡ ಇರಲಿಲ್ಲ. ಜನಾರ್ದನ ರೆಡ್ಡಿ ಆಳ್ವಿಕೆಯಲ್ಲಿ ನಾನೂ ಈಗ ಜನರು ಕಿವಿಯಿಂದ ಗ್ರಹಿಸಬಹುದಾದ ಮೌಖಿಕ ಬರಹ ಅಂದರೆ ಭಾಷಣಗಳಿಗೆ ಮೊರೆಹೋಗಬೇಕಾಗಿದೆ. ಗಣಿಧಣಿಗಳ ಪ್ರಸ್ತಾಪ ಬಂದಿರುವಾಗ ನನಗೆ ಇನ್ನೊಂದು ಸಂಗತಿ ನೆನಪಾಗುತ್ತದೆ.. ಇತಿಹಾಸ ಸಂಶೋಧನಕಾರರಾದ ನನ್ನ ಸ್ನೇಹಿತರೊಬ್ಬರಿದ್ದಾರೆ. ಮನುಮನುದೇವನ್ ಅಂತ. ಅವರು ’ದೊಡ್ಡ ಸಾಮ್ರಾಜ್ಯ ಸಣ್ಣ ಸಣ್ಣ ಸಂಸ್ಥಾನಗಳಾಗಿ ಒಡೆದಾಗ ವೈಶ್ಯ ವರ್ಗ ಮುಂಚೂಣಿಗೆ ಬರುತ್ತೆ, ಇನಿಷಿಯೇಟಿವ್ ತೆಗೆದುಕೊಳ್ಳುತ್ತೆ’ ಎನ್ನುವ ಕುತೂಹಲಕರ ಐತಿಹಾಸಿಕ ನಿರೀಕ್ಷಣೆ ಮುಂದಿಡುತ್ತಾರೆ. ಉದಾಹರಣೆಗೆ ಚೀನಾ ಕಟ್ಟಿದವರು ವೈಶ್ಯರು. ಹಾಗೆಯೇ ಭೂಮಿ ಮುಖ್ಯವಾದಾಗ ಕೃಷಿ ಪ್ರಾಮುಖ್ಯ ಪಡೆಯುತ್ತದೆ. ಸಣ್ಣ ಸಣ್ಣ ಪಾಳೆಯಗಾರರು ಹುಟ್ಟಿಕೊಳ್ಳುತ್ತಾರೆ.
ಒಟ್ಟಾರೆ ನಮ್ಮ ಪ್ರಾದೇಶಿಕ ಭಾಷೆಗಳು ಗಟ್ಟಿಯಾದಾಗ, ಇವರೆಲ್ಲ ಬೊಬ್ಬೆ ಹೊಡೆಯುವಂತೆ ದೇಶದ ಏಕತೆಗೆ ಭಂಗ ಬರುವುದಿಲ್ಲ; ಏಕಚಕ್ರಾಧಿಪತ್ಯಕ್ಕೆ ಭಂಗ ಬರುತ್ತದೆ. ಜಾಗತೀಕರಣದ ಗಡಿಬಿಡಿಯಲ್ಲಿ ಕನ್ನಡ ಭಾಷೆಯ ಉಳಿವಿಗೆ ಸಂಚಕಾರ ಬಂದಿರುವುದನ್ನು ವಿರೋಧಿಸುವ ಹಾಗೆ ಭೂಮಿ ಬಿಸಿಯಾಗುತ್ತಿದೆ ಎನ್ನುವ ವರ್ತಮಾನ ಕೂಡ ಇದೆ. ರೋಮ್ ಪತನದಂತಹ ಇಂತಹದೊಂದು ಕರ್ಷಣೆಯಲ್ಲಿ, ತುರ್ತಿನಲ್ಲಿಯೇ, ಆಯಕಟ್ಟಿನ ಗಳಿಗೆಯಲ್ಲೇ ಕನ್ನಡ ಹೊಸ ಬಲ ಪಡೆದುಕೊಳ್ಳಬಹುದು ಎನ್ನುವ ಆಶಯವನ್ನು ನನ್ನ ಮೂರೂ ಭಾಷಣಗಳಲ್ಲಿ ಪರೀಕ್ಷೆಗೊಡ್ಡಿದ್ದೇನೆ.