ವೈವಿಧ್ಯಮಯ ಯಾಹೂ!

ವೈವಿಧ್ಯಮಯ ಯಾಹೂ!

ಮಾಹಿತಿ ತಂತ್ರಜ್ಞಾನ ದೈತ್ಯ ಮೈಕ್ರೊಸಾಫ್ಟ್‌ ನೀಡಿದ್ದ ಬೃಹತ್ ಮೊತ್ತದ ಆಹ್ವಾನವನ್ನು ನಿರಾಕರಿಸುವ ಮೂಲಕ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿರುವ ಮತ್ತೊಂದು ದೈತ್ಯ ಸಂಸ್ಥೆ ಯಾಹೂ! ಸದಾ ತನ್ನ ಪ್ರಯೋಗಶೀಲ ಚಟುವಟಿಕೆಗಳ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದು, ಈಗ ವಿಶ್ವದ ಐಟಿ ಸಂಸ್ಥೆಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಮೈಕ್ರೊಸಾಫ್ಟ್‌ ಮತ್ತು ಯಾಹೂ! ವಿಶ್ವದ ಪ್ರಮುಖ ಭಾಷೆಗಳಲ್ಲಿ ಜಾಲತಾಣಗಳನ್ನು ಹೊಂದಿದ್ದು, ಪ್ರತ್ಯೇಕವಾದ ಭಾರತೀಯ ಆವೃತ್ತಿಗಳನ್ನು ಹೊಂದಿದ್ದು, ಕನ್ನಡವೂ ಸೇರಿದಂತೆ (http://in.kannada.yahoo.com/)ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲಿಯೂ ಸಹ ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಿ ಯಶಸ್ಸು ಸಾಧಿಸಿರುವುದು ಅಂತರ್ಜಾಲದ ಪರಿಚಯವಿರುವ ಎಲ್ಲರಿಗೂ ತಿಳಿದೇ ಇದೆ.

ಯಾಹೂ! ತನ್ನ ಪ್ರಯೋಗಶೀಲತೆಗೆ ಸಾಕ್ಷಿಯೆಂಬಂತೆ ಮತ್ತೆರಡು ಪ್ರತ್ಯೇಕ ಎನಿಸುವಂತಹ ಜಾಲತಾಣಗಳನ್ನು ತೆರೆಯುವುದರೊಂದಿಗೆ ತನ್ನ ಉದ್ದಗಲಗಳನ್ನು ವಿಸ್ತರಿಸಿಕೊಂಡಿದೆ. ಆ ಸೇರ್ಪಡೆಗಳೆಂದರೆ, ಬಝ್ ಹಾಗೂ ಶೈನ್.

ಬಝ್ ಎಂದರೆ ಏನು ಬೇಕಾದರೂ ಆಗಿರಬಹುದು. ಅದು ಪ್ರಮುಖ ಸುದ್ದಿತಾಣದಿಂದ ಆಯ್ದ ವಿಶಿಷ್ಟ ಸುದ್ದಿಯಾಗಿರಬಹುದು, ಸಾಧಾರಣ ಸುದ್ದಿತಾಣದಿಂದ ಆಯ್ದ ಅಸಾಧಾರಣ ಸುದ್ದಿಯಾಗಿರಬಹುದು, ಚಿತ್ತಾಕರ್ಷಕ ವಿಡಿಯೋ ಆಗಿರಬಹುದು, ನೀವು ಮಿಸ್ ಮಾಡಿಕೊಳ್ಳಬಾರದಂತಹ ಬ್ಲಾಗ್ ಆಗಿರಬಹುದು.

ಬಝ್ ನ ವೈಶಿಷ್ಟ್ಯವೆಂದರೆ, ಇಲ್ಲಿ ಜಾಲತಾಣದ ಸಂಪಾದಕರ ಬದಲು ನಿಮ್ಮಂತ ಓದುಗರು ಅಗ್ರ ಶ್ರೇಯಾಂಕದ ಸುದ್ದಿಗಳನ್ನು ಆಯ್ಕೆ ಮಾಡುತ್ತಾರೆ. ಹೆಚ್ಚಿನ ವಿವರಗಳಿಗಾಗಿ http://buzz.yahoo.com/ ಗೆ ಭೇಟಿಕೊಡಿ.

ಇನ್ನು ಶೈನ್ ಮಹಿಳೆಯರಿಗಾಗಿಯೇ ಮೀಸಲಾದ ಜಾಲತಾಣ. ಮಹಿಳೆಯರ ಜೀವನಶೈಲಿಗೆ ಸಂಬಂಧಿಸಿದಂತಹ ವಿಚಾರಗಳಾದ ಫ್ಯಾಶನ್ ಮತ್ತು ಸೌಂದರ್ಯ, ಆರೋಗ್ಯ, ಮನರಂಜನೆ, ಪೋಷಣೆ, ಪ್ರೇಮ ಮತ್ತು ಲೈಂಗಿಕತೆ, ಉದ್ಯೋಗ ಮತ್ತು ಹಣ, ಆಹಾರ, ಮನೆಯಲ್ಲಿ, ಜ್ಯೋತಿಷ್ಯ ಮತ್ತು ಸಂವಾದದಂತಹ ವಿಚಾರಗಳೆಡೆ ಕೇಂದ್ರೀಕರಿಸುತ್ತದೆ. ಮಹಿಳೆಯರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬಯಸುವ ಪುರುಷರು ಕೂಡ ಈ ಜಾಲತಾಣ http://shine.yahoo.com/ ಗೆ ಭೇಟಿ ನೀಡಬಹುದು.

ಅಂತಾರಾಷ್ಟ್ರೀಯ ಗುಣಮಟ್ಟದ ಆಕರ್ಷಕ ವಿನ್ಯಾಸ, ಪುಟಗಳನ್ನು ಹೊಂದಿರುವ ಈ ಜಾಲತಾಣಗಳು ಎಲ್ಲಾ ವರ್ಗದ ಓದುಗರನ್ನು ತಲುಪುವುದರಲ್ಲಿ ಆಶ್ಚರ್ಯವಿಲ್ಲ. ಮೈಕ್ರೊಸಾಫ್ಟ್, ಯಾಹೂ!, ಗೂಗಲ್, ಎಓಎಲ್ ನಂತಹ ದೈತ್ಯರ ನಡುವೆ ಸ್ಪರ್ಧೆ ಏರ್ಪಟ್ಟಷ್ಟು ಅದರಿಂದ ಲಾಭ ಪಡೆದುಕೊಳ್ಳುವುದು ಓದುಗ ತಾನೇ? ಆದರೆ, ಆ ಸ್ಪರ್ಧೆ ಆರೋಗ್ಯಕರವಾಗಿದ್ದರಷ್ಟೆ ಸಾಕು.

Rating
No votes yet