ಶ್ರೀಪಾದರಾಜರು
ಇದೇ ತಿಂಗಳ ೧೭ ನೇ ತೇದಿಯಂದು ೧೪ನೇ ಶತಮಾನದ ಮಹಾನ್ ಭಕ್ತ, ದಾಸಕೂಟದ ಹರಿಕಾರ ಶ್ರೀಪಾದರಾಜರ ಆರಾಧನೆ ನಡೆಯಿತು. ಅವರ ಒಂದು ಚಿಕ್ಕ ಪರಿಚಯ ಕೊಡುವ ಲೇಖನ ಇದು.
ಶ್ರೀಪಾದರಾಜರ ಬಾಲ್ಯದ ಹೆಸರು ಲಕ್ಶ್ಮೀನಾರಾಯಣ ಎಂದು. ಅವರು ೧೪೧೨ ರಲ್ಲಿ ಬೆಂಗಳೂರು ಸಮೀಪದ ಅಬ್ಬೂರಿನಲ್ಲಿ ಜನಿಸಿದರು. ಒಮ್ಮೆ ಪದ್ಮನಾಭತೀರ್ಥರ ಶಿಷ್ಯಗಣದವರಲ್ಲೊಬ್ಬರಾದ ೮ ನೇ ಪೀಠಾದಿಪತಿ ಸ್ವರ್ಣವರ್ಣಾತೀರ್ಥರು ಅಬ್ಬೂರಿನ ಮೂಲಕ ಸಾಗುತ್ತಿದ್ದಾಗ ಆಟವಾಡುತ್ತಿದ್ದ ಈ ಬಾಲಕನನ್ನು ಗಮನಿಸಿ, ಮಾತನಾಡಿಸಿ ಅವನಲ್ಲಿದ್ದ ಅಪಾರ ಶಕ್ತಿಯನ್ನು ಗಮನಿಸಿ ೫ನೇ ವರ್ಷಕ್ಕೆ ಸನ್ಯಾಸ ಕೊಡಿಸಿ ವಿಧ್ಯಾಭ್ಯಾಸ ಮಾಡಿಸಿದರು. ಅಬ್ಬೂರು ಎಷ್ಟುದೂರ ಇದೇ ಎಂದು ಕೇಳಿದ್ದಕ್ಕೆ ’ಮುಳುಗುತ್ತಿರುವ ಸೂರ್ಯನನ್ನು ನೋಡಿರಿ, ನಾವು ಇಲ್ಲಿ ಇನ್ನೂ ಆಟವಾಡುತ್ತಿರುವುದನ್ನು ನೋಡುತ್ತಿದ್ದೀರಿ. ಅಬ್ಬೂರು ಎಷ್ಟುದೂರ ಇದೆ ಎಂದು ಊಹಿಸಿಕೊಳ್ಳಿ’ ಎಂದರಂತೆ. ಶ್ರೀಪಾದರಾಜರು ಧೃವಾಂಶ ಸಂಭೂತರೆಂದು ನಂಬಿಕೆಇದೆ. ಶ್ರೀವ್ಯಾಸರಾಯರು ಇವರ ಶಿಷ್ಯರಲ್ಲೊಬ್ಬರು.
ಕೃತಿಗಳು: ಇವರು ಭ್ರಮರಗೀತ, ಗೋಪಿಗೀತ, ಮಧ್ವನಾಮ ಮೊದಲಾದ ಕೃತಿಗಳನ್ನು ರಚಿಸಿದರು. ಇಂದಿಗೂ ಇವುಗಳನ್ನು ನಿತ್ಯಪಾರಾಯಣ ಮಾಡುವವರೂ ಇದ್ದಾರೆ. ಇವರ ಕೆಲವು ಹೆಸರಾಂತ ಕೃತಿಗಳು ’ನೀ ಇಟ್ಟಂಗೆ ಇರುವೆನೋ ಹರಿಯೇ’, ’ಕಂಗಳಿನ್ಯಾತಕಯ್ಯಾ ಕಾವೇರಿ ರಂಗನ ನೋಡದಾ’, ’ಭೂಷಣಕೆ ಭೂಷಣವು...’ ಇತ್ಯಾದಿ. ’ರಂಗ ವಿಠಲ’ ಎಂಬ ಅಂಕಿತದಿಂದ ಅವರು ಹಾಡುಗಳನ್ನು ರಚಿಸಿದರು. ವಾಗ್ವಜ್ರ ಎಂಬ ಕೃತಿಯನ್ನು ಸಂಸ್ಕೃತದಲ್ಲಿ ರಚನೆ ಮಾಡಿದರು.
ಮಹಿಮೆಗಳು:
ಒಮ್ಮೆ ಅಬ್ಬೂರಿನಲ್ಲಿ ಇವರು ದೇಶಪರ್ಯಟನೆಗಳನ್ನೆಲ್ಲಾ ಮುಗಿಸಿಕೊಂಡು ಬಂದ ಕಾಲಕ್ಕೆ ಊರಿನ ಹಿರಿಯರು ಗಂಗಾಸ್ನಾನ ಮಾಡುವ ಇಚ್ಚೆಯನ್ನು ವ್ಯಕ್ತಪಡಿಸಿದರು. ಅವರ ಇಚ್ಚ್ಚೆಯನ್ನು ಪೂರೈಸಲೋಸುಗ ಆಚಾರ್ಯರು ಒಂದು ಸ್ಥಳದಲ್ಲಿ ಕುಳಿತು ಗಂಗೆಯ ಆವಾಹನೆಗಾಗಿ ತಪಸ್ಸನ್ನಾಚರಿಸಲಾಗಿ ತಮ್ಮ ಕಮಂಡಲದಿಂದ ಗಂಗೆ ಉಕ್ಕಿ ಹರಿದಳಂತೆ. ಹಾಗಾಗಿ ಇಂದಿಗೂ ನರಸಿಂಹ ತೀರ್ಥವೆಂದು ಹೇಳುವ ಆ ಪುಷ್ಕರಿಣಿಯಲ್ಲಿ ಸ್ನಾನಗೈದರೆ ಗಂಗಾಸ್ನಾನದಷ್ಟು ಫಲ ಎಂದು ಆಸ್ತಿಕರು ನಂಬಿದ್ದಾರೆ. ನರಸಿಂಹ ತೀರ್ಥ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಸಮೀಪ ಮುಳಬಾಗಿಲಿನಿಂದ ೧ ಕಿ.ಮೀ ದೂರದಲ್ಲಿದೆ.
ಆಚಾರ್ಯರು ಎಲ್ಲೇಇರಲಿ ನಿತ್ಯ ದೇವರಿಗೆ ೬೪ ಬಗೆಯ ಅಡುಗೆ ಮಾಡಿ ನೈವೇದ್ಯಮಾಡುತ್ತಿದ್ದರಂತೆ. ಒಮ್ಮೆ ಕಾಡಿನ ಮಾರ್ಗವಾಗಿ ಶಿಷ್ಯರ ಸಮೇತ ಸಾಗುತ್ತಿದ್ದಾಗ ಕೆಲವರು ಅವರನ್ನು ಪರೀಕ್ಷಿಸಲೋಸುಗ ಯಾವುದೇ ಪದಾರ್ಥಗಳು ಸಿಗದಂತೆ ಮಾಡಿದರಂತೆ. ಆದರೆ ಅಂದು ಕಾಡಿನ ಮಧ್ಯೆ ವ್ಯಾಪಾರಿಯೊಬ್ಬ ಬಂದು ಆಚಾರ್ಯರಿಗೆ ಅಗತ್ಯವಿದ್ದ ಪದಾರ್ಥಗಳನ್ನೆಲ್ಲಾ ಒದಗಿಸಿದ. ಕಾರಣ ಕೇಳಲಾಗಿ ಆತ ತಿರುಪತಿಗೆ ಪಯಣಿಸುತ್ತಿದ್ದಾಗಿಯೂ, ಹಿಂದಿನ ದಿನ ಸಪ್ನದಲ್ಲಿ ’ಪಕ್ಕದ ಕಾಡಿನಲ್ಲಿ ಒಬ್ಬರು ಮಹಾತ್ಮರು ಬರುತ್ತಿದ್ದಾರೆ, ನೀನು ತಿರುಪತಿಗೆ ಸಮರ್ಪಿಸಲು ತಂದಿರುವ ವಸ್ತುಗಳನ್ನು ಅವರಿಗೇ ಕೊಟ್ಟರೆ ನಮಗೇ ಸಮರ್ಪಿಸಿದಂತೆ’ ಎಂದು ಕನಸಾಯಿತಂತೆ.