ನಾನು ಆಕಾಶವಾಣಿಯಲ್ಲಿ ಓದಿದ ಕತೆಯ ಕತೆ...
ಆಕಾಶವಾಣಿಯಲ್ಲಿ ಕಥೆ ಓದುವುದು ನನಗೆ ಕಷ್ಟ ಎನಿಸಿತ್ತು. ನನ್ನ ಬಳಿಯಿದ್ದ ಕತೆಗಳಲ್ಲಿ ಹಾಗೆ ಓದಬಹುದಾದ ಕತೆ ಒಂದಾದರೂ ಇದೆ ಅನಿಸಿರಲಿಲ್ಲ. ಕೊನೆಗೆ ಇದ್ದ ಒಂದನ್ನೇ ಪ್ರಯತ್ನಿಸುವ ಧೈರ್ಯ ಮಾಡಿ ಬರುತ್ತೇನೆ ಎಂದು ಹೇಳಿದಾಗ ಎಂದೋ ಬರೆದಿದ್ದ ಏಳು ಪುಟಗಳ ಒಂದು ಹಳೆಯ ಅಪ್ರಕಟಿತ ಕತೆ ಇದೆ ಎಂಬುದೇ ಮನಸ್ಸಿಗಿದ್ದ ನೆಮ್ಮದಿ. ಆದರೆ ಒಂದು ದಿನ ಹಾಗೇ ಕೂತು stop watchನ ಸಹಾಯದಿಂದ ಅದನ್ನು ಓದತೊಡಗಿದಾಗ ಅಚ್ಚರಿ ಕಾದಿತ್ತು. ಅದರ ಎರಡೇ ಎರಡು ಪುಟ ಓದುವುದರೊಳಗೆ ಹತ್ತು ನಿಮಿಷ ಕಳೆದಿತ್ತು! ಆಕಾಶವಾಣಿ ನನಗೆ ನೀಡಿದ್ದ ಸಮಯ ಹನ್ನೆರಡು ನಿಮಿಷ! ಅದರಲ್ಲೂ ಒಂಥರಾ ಹುಂಬ ಧೈರ್ಯ, ಓ, ಇಷ್ಟೇನಾ ಹಾಗಾದರೆ, ಎರಡು ಪುಟಗಳ ಒಂದು ಕತೆ ಬರೆಯುವುದು ಅಂಥ ಕಷ್ಟವ? ಬರೆದರಾಯಿತು!
ನನಗೆ ಮೊದಲಿನಿಂದಲೂ ಈ ವಿಷಯದಲ್ಲಿ ಖಚಿತವಾದ ನಿಲುವಿತ್ತು. ಧ್ವನಿ ತೆಗೆದು ಓದಿ ಹೇಳಬಹುದಾದ ಕಥೆಗಳೇ ಬೇರೆ, ತಮ್ಮದೇ ವಿಶಿಷ್ಟ ಮೌನದಲ್ಲಿ ಪ್ರತಿಯೊಬ್ಬ ಓದುಗನೂ ಓದಿಕೊಳ್ಳಬಹುದಾದ ಕಥೆಗಳೇ ಬೇರೆ.
ಒಂದು ಉದಾಹರಣೆ ಕೊಡುತ್ತೇನೆ, ರಣರಣ ಬಿಸಿಲು ಸುಡುತಿತ್ತು ಎಂದು ಓದುವಾಗ ನನ್ನ ಮನಸ್ಸಿನಲ್ಲಿ ರೂಪುಗೊಳ್ಳುವ ಒಂದು ಬಿಂಬ ಕೇವಲ ಬಿಸಿಲಿನದ್ದಾಗಿರುವುದಿಲ್ಲ. ಯಾವುದೋ ಟಾರು ರಸ್ತೆಯಲ್ಲಿ ನೆರಳಿಗೆ ಒಂದೂ ಮರವಿಲ್ಲದ ಸ್ಥಿತಿಯಲ್ಲಿ ನಾನು ಎಲ್ಲಿಗೋ ಹೋಗುತ್ತಿದ್ದಾಗ ಅನುಭವಿಸಿದ ಬಿಸಿಲು ನನ್ನ ಮನಸ್ಸಿಗೆ ಬರುವುದು. ಅದರೊಂದಿಗೇ ವಿಪರೀತ ಬಾಯಾರಿದ್ದ ನೆನಪು, ಬೆವರು ಸುರಿಯುತ್ತಿದ್ದ ನೆನಪು, ಕಣ್ಣುಗಳು ಬಳಲಿ ಉರಿಯುತ್ತಿದ್ದ ನೆನಪು...ಇತ್ಯಾದಿ. ಓದಿದ ರಣರಣ ಬಿಸಿಲಿಗೂ ಈ ಎಲ್ಲ ವಿವರಗಳಿಗೂ ಸಂಬಂಧವಿಲ್ಲ. ಹಾಗೆಯೇ ಇದನ್ನು ನಾನು ಎಲ್ಲಿ ಓದಿದೆ ಎನ್ನುವ ಸಂಗತಿ. ಈದಿನಗಳ ಧೋ ಎಂದು ಸುರಿಯುತ್ತಿರುವ ಮಳೆಯ ಮುಂಜಾನೆಯೋ, ಮುಸ್ಸಂಜೆಯೋ ಮನೆಯಲ್ಲಿ ಬೆಚ್ಚಗೆ ಕೂತು ಕಿಟಕಿಯಲ್ಲಿ ಹೊರ ನೋಡುತ್ತ, ಕುರುಕುರು ತಿಂಡಿ ತಿನ್ನುತ್ತ ಓದುವ ರಣರಣ ಬಿಸಿಲು, ಬಸ್ಸಿನಲ್ಲಿ ಅಕ್ಷರಗಳನ್ನು ಅಲುಗದಂತೆ ಹಿಡಿಯಲು ಒದ್ದಾಡುತ್ತ ಓದುವ ರಣರಣ ಬಿಸಿಲು, ಬಾಸ್ ಎಲ್ಲಿ ಬಂದುಬಿಡುತ್ತಾರೋ ಎಂಬ ಆತಂಕದಲ್ಲೇ ಆಫೀಸಿನಲ್ಲಿ ಕದ್ದು ಮುಚ್ಚಿ ಓದಿದ ರಣರಣ ಬಿಸಿಲು, ಎಸಿ ರೂಮಿನಲ್ಲಿ ಕೂತು ಓದುವ ರಣರಣ ಬಿಸಿಲು, ರಾತ್ರಿ ಮಲಗುವ ಮುನ್ನ ಹಾಸುಗೆಯಲ್ಲಿ ಬಿದ್ದುಕೊಂಡು ಓದುವ ರಣರಣ ಬಿಸಿಲು ಎಲ್ಲ ಬೇರೆ ಬೇರೆಯಾಗಿರುತ್ತದೆ. ಈ ಸನ್ನಿವೇಶಗಳು ಸಹಿತ ನಿಮ್ಮ ಸ್ಮೃತಿಯಲ್ಲಿ ಹುಟ್ಟಿಸುವ ಚಿತ್ರಗಳೇ ಬೇರೆ!
ಪುಸ್ತಕದ ಪುಟದಲ್ಲಿ ಮೂಡಿದ ಅಕ್ಷರಗಳಿಗೆ ತನ್ನದೇ ಸಂಗೀತ ಸಂಯೋಜನೆ ಮಾಡಿ ಓದುಗ ತನ್ನದೇ ಮೌನದಲ್ಲಿ ಅದನ್ನು ಓದುವ ಸುಖವೇ ಬೇರೆ. ಎಲ್ಲಿ ನಿಲ್ಲಿಸಬೇಕು, ಎಲ್ಲಿ ಸೀದಾ ಓದಬೇಕು, ಎಲ್ಲಿ ಸಿಟ್ಟು, ಎಲ್ಲಿ ದುಃಖ, ಎಲ್ಲಿ ಹಾಸ್ಯ, ಎಲ್ಲಿ ಮೌನ ಎಲ್ಲವನ್ನೂ ಅವನದೇ ಓದಿನ ಶೈಲಿ ನಿರ್ಧರಿಸುತ್ತದೆ. ಆ ಮಾತುಗಳು ಅವನ ಮನಸ್ಸಿನಲ್ಲಿ ಮೂಡಿಸುವ ಅವನು ಕಂಡ ವ್ಯಕ್ತಿಯ ಮುಖ ಚಹರೆ, ಅಂಗಿ, ನಿಲುವು, ವ್ಯಕ್ತಿತ್ವ ಕೂಡ ಅವನ ವೈಯಕ್ತಿಕ ಟಚ್ ಹೊಂದಿರುತ್ತದೆ. `ತಾಯಿಯ ಮಡಿಲಲ್ಲಿ ತಲೆಯಿಟ್ಟು ....' - ಇಷ್ಟು ಸಾಕು. ಆ ತಾಯಿ ಕುಳಿತ ಜಾಗ, ಅವಳು ಒರಗಿದ್ದು ಗೋಡೆಯೋ, ಮರವೋ, ಇನ್ನೊಂದು ಕಾಲು ಮಡಚಿದ್ದಳೋ, ಕಾಲು ಚಾಚಿ ಕೂತಿದ್ದಳೋ, ಅವಳ ಕೈ ಅವನ(ಅವಳ) ತಲೆ ನೇವರಿಸುತ್ತಿತ್ತೋ, ಅವಳ ನೋಟ ಎಲ್ಲಿತ್ತೋ ಯಾವುದನ್ನೂ ಹೇಳುವುದು ಬೇಡ, ನಿಮ್ಮ ಕಲ್ಪನೆಯ ಚಿತ್ರ ಆಗಲೇ ಮೂಡಿ ಮರೆಯಾಗಿದೆ ಮತ್ತು ನೆನಪು ಮಾಡಿ ಹೇಳುವುದಾದರೆ ಈ ಎಲ್ಲ ವಿವರಗಳನ್ನು ನೀವೇ ತುಂಬಿದ್ದೀರಿ! ಲೇಖಕ ಅದನ್ನೆಲ್ಲ ಹೇಳಿಯೇ ಇಲ್ಲ. ಇದು ಮೌನದ ಓದಿನ ಜೊತೆ ಸಂತುಲಿತವಾಗಿ ಸಾಗುವ ನಮ್ಮ ಮನಸ್ಸಿನ ಮಾಯಕ ಶಕ್ತಿ. ಒಬ್ಬ ಬರಹಗಾರ ಓದುಗನ ಚಿತ್ತ ಬಿಂಬದಲ್ಲಿ ಸೃಷ್ಟಿಸ ಬಯಸುವ ಕವಿ-ಭಾವ-ಪ್ರತಿಮಾ-ಪುನರ್ ಸೃಷ್ಟಿಗೆ ಸಂಬಂಧಿಸಿದ್ದು ಇವೆಲ್ಲ.
ಗಟ್ಟಿಯಾದ ಸ್ವರ ತೆಗೆದು ನನ್ನದೇ ಧ್ವನಿಯಲ್ಲಿ ನಾನು ಕಥೆ ಓದತೊಡಗಿದಂತೆಲ್ಲ ಈ ಸಾಧ್ಯತೆಗಳೆಲ್ಲ ಮಾಯವಾಗಿ ಬಿಡುತ್ತವೆ. ನನ್ನ ಓದಿನ ಪಿಚ್, ರಾಗ, ಲಯ ಏನೆನ್ನುತ್ತೀರಿ, ಅದರಲ್ಲೇ ಆ ಕಥೆಯನ್ನು ಕೇಳುಗರೂ ಸ್ವೀಕರಿಸುವುದು ಎಂದರೆ ಕತೆಗೆ ಕೆಲವು ಮಿತಿಗಳು ಬಂದು ಬಿಡುತ್ತವೆ. ಹಾಗೆಯೇ ಕೆಲವು ಹೊಸ ಸಾಧ್ಯತೆಗಳೂ ತೆರೆದುಕೊಳ್ಳುತ್ತವೆ, ಇಲ್ಲವೆಂದಲ್ಲ. ಆದರೂ ಇಲ್ಲಿ ಶಬ್ದವಾಗದ ಏನನ್ನೂ ಕೇಳುಗನಿಗೆ ತಲುಪಿಸುವುದು ಒಂದು ಸವಾಲು. ಓದಿನಲ್ಲಿ ಸುಲಭವಾಗಿ ದಕ್ಕುವ ಕೆಲವು ಲಿಂಕ್‌ಗಳು ಇಲ್ಲಿ ಸಶಬ್ದವಾಗಿ ಅಂದರೆ ವಾಚ್ಯವಾಗಿ ಬರುವುದು ಅನಿವಾರ್ಯ. ಎಷ್ಟೆಂದರೆ ಸಂಭಾಷಣೆಯನ್ನು "ಎಂದ", "ಹೇಳಿದಳು" ಎಂದೆಲ್ಲ ಮುಗಿಸದಿದ್ದರೆ ಮಾತು ಎಲ್ಲಿ ಮುಗಿಯಿತು ವಿವರ ಎಲ್ಲಿ ತೊಡಗಿತು ಎಂಬುದು ಕೂಡ ಗೊಂದಲವಾಗುವ ಸ್ಥಿತಿ. ಇಲ್ಲೆಲ್ಲ ಓದಿನ ರಾಗ ಸಹಾಯಕ್ಕೆ ಬರಬೇಕಾಗುತ್ತದೆ. ನಾಟಕದ ಮಾತುಗಳಂತೆ ಇದನ್ನು ಓದುವಾಗ ನಿಮ್ಮ ಆಳದಲ್ಲಿ ಕಲಕಬೇಕಾದ ಎಷ್ಟೋ ಸಂಗತಿಗಳು ನಿಮ್ಮ ಮೌನದ ಸಹಾಯವಿಲ್ಲದೆ ನನ್ನ ಧ್ವನಿಯನ್ನೇ ನೆಚ್ಚಿ ಹೊರಡಬೇಕಾಗುತ್ತದೆ.
ವಿಚಿತ್ರ ನೋಡಿ, ಪುಸ್ತಕದ ಅಕ್ಷರಗಳಿಗೆ ಅಕ್ಷರಗಳಾಗಿಯೇ ನಿಮ್ಮ ಕಣ್ಣುಗಳನ್ನು ತಲುಪುವ ಪ್ರಾಥಮಿಕ ಸಾಧ್ಯತೆಯೊಂದೇ ಇರುವುದು. ಹಾಗಿದ್ದೂ ಅದು ನಿಮ್ಮ ಪಂಚೇಂದ್ರಿಯಗಳನ್ನೂ ತಲುಪುವ ಸಾಹಸಯಾತ್ರೆ ಕೈಗೊಳ್ಳುತ್ತಿರುತ್ತದೆ. ಚಿತ್ರವಿಲ್ಲದ, ವಾಸನೆಯಿಲ್ಲದ, ಸ್ಪರ್ಷವಿಲ್ಲದ, ರುಚಿಯಿಲ್ಲದ, ಧ್ವನಿಯಿಲ್ಲದ ಅಕ್ಷರಗಳ ವಿಚಿತ್ರ ಶಕ್ತಿ ಅಚ್ಚರಿ ಹುಟ್ಟಿಸುವುದಿಲ್ಲವೆ? ಇದನ್ನು ಬಳಸಿಕೊಂಡು ಬರೆಯುವ ಬರಹಗಾರ ಆದಷ್ಟೂ ಆಳವಾಗಿ ತಲುಪುವ ಎಲ್ಲ ಪ್ರಯತ್ನ ಮಾಡಿಯೇ ಮಾಡುತ್ತಾನೆ. ಆದರೆ ಅದು ಒಂದು ಧ್ವನಿಯಾದಂತೆಲ್ಲ, ಧ್ವನಿ ಸಹಿತ ಚಿತ್ರವಾದಂತೆಲ್ಲ ಕೆಲವನ್ನು ಕಳೆದುಕೊಳ್ಳುತ್ತದೆ! ಇನ್ನೇನೋ ಒಂದಿಷ್ಟು ದಕ್ಕುತ್ತದೆ. ಹೃದಯದಾಳದ ಭಾವಕ್ಕೆ ಭಾಷೆಯ ಹಂಗಿಲ್ಲ, ಶಬ್ದದ ಸೂತಕವಿಲ್ಲ. ಆದರೂ ಒಂದು ಚಿತ್ರಗೀತೆ ಇದನ್ನೆಲ್ಲ ನಾದವಾಗಿಸಿ, ಪದ್ಯವಾಗಿಸಿ, ದೃಶ್ಯವಾಗಿಸಿ, ಕುಣಿತವಾಗಿಸಿ...
ಅದರ ಜಾಡು ಹಿಡಿದು ಹೊಸದೇ ಆದ ಒಂದು ಕತೆ ಬರೆದೆ. ಮತ್ತೆ ಹನ್ನೆರಡು ನಿಮಿಷಗಳಿಗಾಗಿ ಮನಸ್ಸಿಲ್ಲದಿದ್ದರೂ ಬಹಳಷ್ಟನ್ನು ಕತ್ತರಿಸುತ್ತ ಹೋಗಬೇಕಾಯಿತು. ಕೊನೆಗೆ ಒಂದೆರಡು ನಿಮಿಷದ ಹೊಂದಾಣಿಕೆಯಂತೂ ಸ್ವಲ್ಪವೂ ಮನಸ್ಸಿಲ್ಲದೆ ಮಾಡಿದ್ದು. ವಿಪರ್ಯಾಸ ನೋಡಿ, ಕತೆ ಬರೆದು ಅದನ್ನು ಆಕಾಶವಾಣಿಗೆ ಪೋಸ್ಟ್ ಮಾಡಿದಾಗ ಇದ್ದ ಪರಿಸ್ಥಿತಿ ಮೊನ್ನೆ ಹದಿನಾರರಂದು ಆಕಾಶವಾಣಿಗೆ ಹೋಗಿ ಕತೆಯನ್ನು ಓದುವ ಹೊತ್ತಿಗೆ ಎಷ್ಟು ಕೆಟ್ಟಿತ್ತೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಸಂಗಾತಿ ಕಾಣೆಯಾಗುವ ವಸ್ತುವುಳ್ಳ ಇಂಥ ಕತೆಯನ್ನು ಓದಬೇಕೆ ಅನಿಸುವಂತಿತ್ತು. ಡಯಾನಾ ಸಾವು, ಶಂಕರ್ ನಾಗ್ ಸಾವು, ಪದ್ಮಪ್ರಿಯಾ ಸಾವು ಯಾರದೋ ಸಾವು ಆಗಿರಲೇ ಇಲ್ಲ ನಮಗೆಲ್ಲ. ನಮ್ಮದೇ ಒಂದು ಅಂಶ ನಾಶವಾದಂತೆ ನಾವೆಲ್ಲ ದಿನಗಟ್ಟಲೆ ಪ್ಯಾರಲೈಸ್ ಆಗಿದ್ದೆವು, ಅಲ್ಲವೆ? ಆವತ್ತೆಲ್ಲ ಮನಸ್ಸು ಕೆಟ್ಟಿತ್ತು.
ಅಂತೂ ಕತೆಯನ್ನು `ಆಕಾಶ' "ವಾಣಿ"ಯಲ್ಲಿ ಓದಿದೆ! ಸ್ವರ ತೆಗೆದು ಓದುವ ಕತೆಯನ್ನು, ಮೌನವಾಗಿ ಓದದೇ, ಕಿವಿಯಿಂದ ಕೇಳುವ ಕತೆಯನ್ನು ಹಾಗೆ ಕೇಳದೆ ನಮ್ಮದೇ ಮೌನದಲ್ಲಿ ಓದಿಕೊಳ್ಳುವುದು ಹೇಗಿರುತ್ತದೆ? ಕತೆಯನ್ನು ಮುಂದಿನವಾರ ನಿಮಗೂ ಓದಿಸುತ್ತೇನೆ. podcast ಮಾಡಿ ಕೇಳಿಸಬೇಕಿತ್ತೇ, ನನಗೂ ಗೊಂದಲ!
Comments
ಉ: ನಾನು ಆಕಾಶವಾಣಿಯಲ್ಲಿ ಓದಿದ ಕತೆಯ ಕತೆ...
In reply to ಉ: ನಾನು ಆಕಾಶವಾಣಿಯಲ್ಲಿ ಓದಿದ ಕತೆಯ ಕತೆ... by pallavi.dharwad
ಉ: ನಾನು ಆಕಾಶವಾಣಿಯಲ್ಲಿ ಓದಿದ ಕತೆಯ ಕತೆ...
ಉ: ನಾನು ಆಕಾಶವಾಣಿಯಲ್ಲಿ ಓದಿದ ಕತೆಯ ಕತೆ...
ಉ: ನಾನು ಆಕಾಶವಾಣಿಯಲ್ಲಿ ಓದಿದ ಕತೆಯ ಕತೆ...