ರಾಷ್ಟ್ರಪತಿ ಹುದ್ದೆಗೆ ಘನತೆ ತಂದವರು

ರಾಷ್ಟ್ರಪತಿ ಹುದ್ದೆಗೆ ಘನತೆ ತಂದವರು

ಬರಹ

1950ರ ಜನವರಿ 26ರಂದು ಭಾರತ ಬ್ರಿಟನ್‌ನೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡು ಗಣರಾಜ್ಯವಾಯಿತು. ಡಾ.ರಾಜೇಂದ್ರ ಪ್ರಸಾದ್, ಸ್ವತಂತ್ರ ಭಾರತದ ಮೊತ್ತ ಮೊದಲ ರಾಷ್ಟ್ರಪತಿಯಾದರು.

ಆಗ ಎಂತಹ ವಾತಾವರಣ ಇತ್ತೆಂದರೆ, ದೇಶದ ಮೊದಲ ಪ್ರಧಾನ ಮಂತ್ರಿಯಾದ ಪಂಡಿತ್ ಜವಾಹರ್ ಲಾಲ್ ನೆಹರೂರ ಲಿಬರಲ್, ಸಮಾಜವಾದಿ ಧೋರಣೆ ಒಂದೆಡೆ. ಸಂಪ್ರದಾಯವಾದಿ ಬಾಬು ರಾಜೇಂದ್ರ ಪ್ರಸಾದ್ ಮತ್ತೊಂದೆಡೆ. ಇಬ್ಬರೂ ದಿಗ್ಗಜರ ನಡುವೆ ಏನೇ ಭಿನ್ನಾಭಿಪ್ರಾಯಗಳು, ಮನಸ್ತಾಪಗಳು ಇದ್ದರೂ, ಪ್ರಸಾದ್ ಎರಡನೇ ಅವಧಿಗೂ ರಾಷ್ಟ್ರಪತಿಯಾಗಿ ಮುಂದುವರಿದದ್ದನ್ನು ಪ್ರಜಾಪ್ರಭುತ್ವದ ಆದರ್ಶ ದ್ಯೋತಕ ಎನ್ನಬೇಕೇ ಅಥವಾ ವೈಚಿತ್ರ್ಯ ಎನ್ನಬೇಕೇ ಎನ್ನುವುದು ತಿಳಿಯದ ಸಂಗತಿ.

2007ರ ಜುಲೈ 19ರಂದು ಹನ್ನೆರಡನೇ ರಾಷ್ಟ್ರಪತಿ ಚುನಾವಣೆ ನಡೆದು 21ರಂದು ಫಲಿತಾಂಶ ಹೊರಬಿದ್ದು, ನಿರೀಕ್ಷೆಯಂತೆ ಆಡಳಿತ ಯುಪಿಎ ಮೈತ್ರಿಕೂಟ ಹಾಗೂ ಎಡಪಕ್ಷಗಳ ಅಭ್ಯರ್ಥಿ ಪ್ರತಿಭಾ ಪಾಟೀಲ್ ರಾಷ್ಟ್ರದ ಮೊತ್ತಮೊದಲ ಮಹಿಳಾ ರಾಷ್ಟ್ರಾಧ್ಯಕ್ಷೆಯಾಗಿ ಚುನಾಯಿತರಾದ ಸಂದರ್ಭದಲ್ಲಿ ದೇಶದ ಪ್ರತಿಷ್ಟಿತ ಸಾಪ್ತಾಹಿಕಗಳಲ್ಲೊಂದಾದ 'ಇಂಡಿಯಾ ಟುಡೇ' ಸಂಪಾದಕರು ಇದುವರೆಗೆ ಆಗಿಹೋದ ರಾಷ್ಟ್ರಪತಿಗಳ ಪಟ್ಟಿ ಮಾಡಿದ್ದು, ಅವರುಗಳಿಗೆ ಶ್ರೇಯಾಂಕವನ್ನು ನೀಡಿತ್ತು. ಅದರಲ್ಲಿ ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್‌ಗೆ ಎರಡನೇ ಸ್ಥಾನ.

ಮೊದಲನೇ ಸ್ಥಾನವನ್ನು ಆಕ್ಸ್‌ಫರ್ಡ್ ಪದವೀಧರ, ಮೈಸೂರಿನ ಪ್ರತಿಷ್ಟಿತ ಮಹಾರಾಜ ಕಾಲೇಜಿನ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದ, ದೇಶದ ಅತ್ಯುನ್ನತ ಹುದ್ದೆಗೆ ಘನತೆ ತಂದುಕೊಟ್ಟ ಡಾ.ಎಸ್.ರಾಧಾಕೃಷ್ಣನ್‌ಗೆ ನೀಡಲಾಗಿದ್ದರೆ, ರಾಜಕೀಯ ಕಾರಣಗಳಿಂದಾಗಿ ಎರಡನೇ ಅವಧಿಗೆ ಮುಂದುವರಿಯುವುದರಿಂದ ವಂಚಿತರಾಗಿ ಅಧಿಕಾರದಿಂದ ನಿರ್ಗಮಿಸಿದ, "ಜನತೆಯ ರಾಷ್ಟ್ರಪತಿ" ಎಂದೇ ಖ್ಯಾತರಾದ ಎ ಪಿ ಜೆ ಅಬ್ದುಲ್ ಕಲಾಂಗೆ ನಾಲ್ಕನೇ ಸ್ಥಾನ.

ಜಾಕೀರ್ ಹುಸೇನ್ ಮೂರನೇ ಸ್ಥಾನವನ್ನು ಅಲಂಕರಿಸಿದ್ದರೆ, ಐದನೇ ಸ್ಥಾನದಿಂದ ಹತ್ತನೇ ಸ್ಥಾನದಲ್ಲಿ ಗ್ಯಾನಿ ಜೇಲ್ ಸಿಂಗ್, ಶಂಕರ್ ದಯಾಳ್ ಶರ್ಮ, ಆರ್ ವೆಂಕಟರಾಮನ್, ಕೆ ಆರ್ ನಾರಾಯಣನ್, ಎನ್ ಸಂಜೀವ ರೆಡ್ಡಿ, ವಿ ವಿ ಗಿರಿ ಹಾಗೂ ಫಕ್ರುದ್ದೀನ್ ಆಲಿ ಅಹ್ಮದ್ ಪಟ್ಟಿಯಲ್ಲಿದ್ದರು.

ಮಾಜಿ ರಾಷ್ಟ್ರಪತಿ ಆರ್ ವೆಂಕಟರಾಮನ್ ಒಂದೆಡೆ ರಾಷ್ಟ್ರಾಧ್ಯಕ್ಷ ಪದವಿಯ ಬಗ್ಗೆ ಹೇಳುತ್ತ, ರಾಷ್ಟ್ರಪತಿ ಹುದ್ದೆಯನ್ನು "ತುರ್ತು ದೀಪ"ಕ್ಕೆ ಹೋಲಿಸುತ್ತ, ಆ ದೀಪ ಅಧಿಕಾರ ವೈಫಲ್ಯವಾದಾಗ ಬೆಳಕು ತೋರಿಸಬೇಕು. ಅದೇ ರೀತಿ, ರಾಷ್ಟ್ರಾಧ್ಯಕ್ಷರ ಪಾತ್ರವು ಕೇಂದ್ರ ಅಥವಾ ರಾಜ್ಯಗಳಲ್ಲಿ ಒಂದರಲ್ಲಿ ಬಿಕ್ಕಟ್ಟು ಉಂಟಾದಾಗ ಮಾತ್ರ ಅವರ ಪಾತ್ರ ಪ್ರವೇಶಿಸುತ್ತದೆ ಎನ್ನುವ ಮಾತನ್ನು ನುಡಿದಿದ್ದಾರೆ.

ಸ್ವತಃ ವೆಂಕಟರಾಮನ್ ಅವರೇ 1989ರಲ್ಲಿ ದೇಶದ ಮೊತ್ತ ಮೊದಲ ಅತಂತ್ರ ಸಂಸತ್ತನ್ನು ನಿಭಾಯಿಸಿದವರಾಗಿದ್ದು, ಮತಪ್ರಾಬಲ್ಯವಿಲ್ಲದ ಸಂಸತ್ತನ್ನು ಹೇಗೆ ನಿರ್ವಹಿಸಬೇಕು ಎಂಬುದಕ್ಕೆ ನಿಯಮಗಳನ್ನು ಹಾಕಿಕೊಟ್ಟವರಾಗಿದ್ದಾರೆ.

ಸಾಂವಿಧಾನಿಕವಾಗಿ ಹಾಗೂ ನ್ಯಾಯಸಮ್ಮತವಾಗಿ ಹೇಳುವುದಾದರೆ, ಭಾರತದ ಪ್ರಧಾನ ಮಂತ್ರಿ ಜನತೆಯ ಧ್ವನಿಯಾಗಿ ನಿಲ್ಲಬೇಕು. ರಾಷ್ಟ್ರಪತಿ ದೇಶದ ಪ್ರಥಮ ಪ್ರಜೆಯಾದರೂ, ವಾಸ್ತವವಾಗಿ ಆತನಿಗೆ ಕಾರ್ಯಾಂಗದಲ್ಲಿ ಮಿತವಾದ ಅಧಿಕಾರವಿದ್ದು, ಪ್ರಧಾನ ಮಂತ್ರಿ ಅಧಿಕಾರದ ಮುಂದೆ ಕುಬ್ಜವೆನಿಸುವುದು ಸಾಮಾನ್ಯ. ಏಕೆಂದರೆ, ಸಂಸತ್ತಿನ ಸದಸ್ಯ ಜನರ ಪ್ರತಿನಿಧಿಯಾಗಿ ಆಯ್ಕೆಯಾದವನು. ಆದರೆ, ವಿಚಿತ್ರವೆಂಬಂತೆ 'ರಾಷ್ಟ್ರಪತಿ' ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಜನತೆಯ ಪ್ರತಿನಿಧಿಯಾಗಿ ಕಾಣಿಸಿಕೊಂಡದ್ದು ದೇಶದ ಇತಿಹಾಸದಲ್ಲಿ ಮೊತ್ತ ಮೊದಲನೆಯದು ಎಂದರೆ ತಪ್ಪಾಗಲಾರದು.

ಹಾಗಾಗಿ, ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿಯವರಿಂದ "ಜನತೆಯ ಪ್ರೀತಿ ಪಾತ್ರರಾದ, ಅತ್ಯಂತ ಗೌರಾವನ್ವಿತ ರಾಷ್ಟ್ರಪತಿಗಳಲ್ಲಿ ಒಬ್ಬರು ಎಂಬ ಅಭಿಮಾನಕ್ಕೆ ಪಾತ್ರರಾದ ಕಲಾಂ, ಸ್ವಾತಂತ್ರ್ಯೋತ್ತರ ಭಾರತದ ಅದರಲ್ಲೂ ಇತಿಹಾಸ ಹಾಗೂ ರಾಜಕೀಯ ಸ್ಮೃತಿಯನ್ನೇ ಹೊಂದಿರದ ಅತ್ಯಾಧುನಿಕ ಪೀಳಿಗೆಯ ಯುವಜನತೆಯಲ್ಲೂ ಅವಿಸ್ಮರಣೀಯರಾಗಿ ಉಳಿಯುತ್ತಾರೆ.

ಕಲಾಂರ ಸಾಧನೆಯನ್ನು ಸಂಕ್ಷಿಪ್ತವಾಗಿ ವಿವರಿಸುವುದಾದರೆ, ಗ್ರಾಮೀಣ ಮತ್ತು ನಗರಗಳ ನಡುವಿನ ಅಂತರವನ್ನು ಸರಿದೂಗಿಸಲು ಗ್ರಾಮೀಣ ಪ್ರದೇಶಗಳಲ್ಲಿ ನಗರ ಸೌಕರ್ಯವನ್ನು ಒದಗಿಸುವ .ಯೋಜನೆಯ ಪ್ರಸ್ತಾವನೆಯನ್ನು ಪ್ರಚುರಪಡಿಸಿದ್ದು ಮಹತ್ವದ ಸಾಧನೆ.

53 ದೇಶಗಳನ್ನು ಸೇರಿಸುವ ಪಾನ್ ಆಫ್ರಿಕನ್ ಇ-ನೆಟ್‌ವರ್ಕ್ ಯೋಜನೆ, ಅಧಿಕಾರಾವಧಿಯಲ್ಲಿ 16 ದೇಶಗಳಿಗೆ ಭೇಟಿ ನೀಡಿದ್ದು, ದೇಶದ ಸೇನಾಪಡೆಗಳ ಮೊದಲ ಸರ್ವೋಚ್ಛ ಕಮಾಂಡರ್ ಆಗಿ ಸಿಯಾಚಿನ್ ಹಿಮಭೂಮಿಗೆ ಕಾಲಿಟ್ಟಿದ್ದು, ಸಬ್‌ಮೆರಿನ್‌ನಲ್ಲಿ ಕಡಲತಳ ಮುಟ್ಟಿ ಬಂದದ್ದು, ಸೂಪರ್‌ಸೋನಿಕ್ ಯುದ್ಧ ವಿಮಾನ-ಸುಖೊಯ್-30 ಎಂಕೆಐಯಲ್ಲಿ ಬಾನಲ್ಲಿ ಹಾರಿದ್ದು, ಇದುವರೆಗಿನ ಬಹುಶಃ ಮುಂದೆಯೂ ಯಾವ ರಾಷ್ಟ್ರಪತಿಯೂ ಮಾಡಲಾಗದ ಸಾಧನೆಗಳಾಗಿವೆ.

ಮತ್ತೊಂದು ಅವಿಸ್ಮರಣೀಯ ಸಂದರ್ಭವೆಂದರೆ, 2005ರಲ್ಲಿ ಜ್ಯೂರಿಚ್‌ಗೆ ಭೇಟಿ ನೀಡಿದ್ದಾಗ ಅವರ ಭಾಷಣ ಕೇಳಲು 12 ಜನ ನೊಬಲ್ ಪುರಸ್ಕೃತರು ಉಪಸ್ಥಿತರಿದ್ದದ್ದು, ಅವರ ಆಗಮನದಿಂದ ಉತ್ತೇಜಿತವಾದ ಸ್ವಿಸ್ ಸರಕಾರ ಅವರು ಆ ದೇಶಕ್ಕೆ ಭೇಟಿ ನೀಡಿದ ದಿನವಾದ ಮೇ 26ನ್ನು 'ರಾಷ್ಟ್ರೀಯ ವಿಜ್ಞಾನ ದಿನ'ವನ್ನಾಗಿ ಆಚರಿಸುವುದಾಗಿ ಘೋಷಿಸಿದ್ದು, ಯಾವೊಬ್ಬ ರಾಷ್ಟ್ರಪತಿಯು ಪಡೆಯದ ಗೌರವವಾಗಿದೆ.

ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡುತ್ತಿರುವ ಈಗಿನ ಯುವಜನತೆಯನ್ನು ಬಹುವಾಗಿ ಆಕರ್ಷಿಸಿದ್ದು, ಅವರ 'ರೋಲ್ ಮಾಡೆಲ್'' ಆಗಿ ಹೊರ ಹೊಮ್ಮಿದ್ದು, ಕಲಾಂರ ಸಾಧನೆಗಳಲ್ಲೇ ದೊಡ್ಡದು ಎಂದರೆ ತಪ್ಪಲ್ಲ.

ದೇಶದ ಮೊತ್ತ ಮೊದಲ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರೂ, ಮಕ್ಕಳನ್ನು ಪ್ರೀತಿಸುವುದಕ್ಕೇ ಹೆಸರಾಗಿ ಅವರಿಂದ 'ಚಾಚಾ ನೆಹರೂ' ಎಂದು ಕರೆಸಿಕೊಂಡರು ಮಾತ್ರವಲ್ಲದೆ, ಅವರ ಜನ್ಮದಿನವಾದ ನವೆಂಬರ್ 14ನ್ನು ರಾಷ್ಟ್ರ ಮಕ್ಕಳ ದಿನವನ್ನಾಗಿ ಆಚರಿಸುವುದು ಅವರ ಮಕ್ಕಳ ಮೇಲಿನ ಪ್ರೀತಿಗೆ ಸಾಕ್ಷಿಯಾಗಿರುವಂತೆ, ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಈ ಪರಿಯಾಗಿ ಆಕರ್ಷಿಸಿದ ರಾಷ್ಟ್ರಮಟ್ಟದ ವ್ಯಕ್ತಿತ್ವವೆಂದರೆ, ಅದು ಕಲಾಂ ಮಾತ್ರ. ಕಲಾಂ ಇದ್ದೆಡೆ ಮಕ್ಕಳ ಜಾತ್ರೆಯೇ ನೆರೆದಿತ್ತು.

ಕಲಾಂ ಬದುಕಿನ ಒಂದು ಸ್ವಾರಸ್ಯಕರ ಪ್ರಸಂಗವನ್ನು ಇಲ್ಲಿ ಹೇಳಲೇಬೇಕು. ಏಕೆಂದರೆ, ಕಲಾಂ ಬ್ರಹ್ಮಚಾರಿಯಾಗಿ ಉಳಿಯಲು ದೃಢನಿರ್ಧಾರ ಕೈಗೊಳ್ಳುವಂತೆ ಮಾಡಿದ ಘಟನೆ ಇದು. ಕಲಾಂರಿಗೆ ನಿಶ್ಚಿತಾರ್ಥವಾಗಬೇಕಿದ್ದ ದಿನ ಅನಿವಾರ್ಯ ಕಾರಣಗಳಿಂದಾಗಿ ತಮ್ಮ ವೈಜ್ಞಾನಿಕ ಕಾರ್ಯದಲ್ಲಿ ತೊಡಗಿಕೊಳ್ಳಬೇಕಾದ ಕಲಾಂ, ಸರಿಯಾದ ವೇಳೆಗೆ ಮನೆಗೆ ತೆರಳುವುದನ್ನೇ ಮರೆತರಂತೆ. ಅವರಿಗೆ ತಮ್ಮ ನಿಶ್ಚಿತಾರ್ಥವಾಗಬೇಕಿದ್ದ ವಿಚಾರ ನೆನಪಾದಾಗ ಆ ದಿನವೇ ಮುಗಿದಿತ್ತಂತೆ. ಅಂದು ಕಲಾಂ ತಾವು ಮದುವೆಯಾದರೂ ತಮಗೆ ಸಂಸಾರದ ಕಡೆ ಅಷ್ಟಾಗಿ ಗಮನ ಹರಿಸಲಾಗುವುದಿಲ್ಲವೆಂದು ನಿರ್ಧರಿಸಿ 'ಬ್ರಹ್ಮಚಾರಿ'ಯಾಗಿ ಉಳಿಯಲು ನಿರ್ಧರಿಸಿದರಂತೆ. ಅವರು ಅಂದು ಕೈಗೊಂಡ ಆ ನಿರ್ಧಾರ ದೇಶಕ್ಕೆ ವರದಾನವಾಯಿತು. ಈ ಪ್ರಸಂಗ ಕಲಾಂರ ಕಾರ್ಯಕ್ಷಮತೆ ಹಾಗೂ ಅರ್ಪಣಾ ಮನೋಭಾವಕ್ಕೆ ಒಂದು ಉದಾಹರಣೆಯಷ್ಟೆ.

'ಪ್ರೊಫೆಸರ್ ಕಲಾಂ' ಎಂದೇ ಕರೆಸಿಕೊಳ್ಳಲು ಇಚ್ಛಿಸುವ ಎ ಪಿ ಜೆ ಅಬ್ದುಲ್ ಕಲಾಂ, ಸದ್ಯ ಐದು ವಿಶ್ವವಿದ್ಯಾಲಯಗಳಲ್ಲಿ ತಮ್ಮ ಸಂಶೋಧನಾ ಕಾರ್ಯವನ್ನು ಮುಂದುವರಿಸಲಿದ್ದು, ಈಗಾಗಲೇ 'ವಿಂಗ್ಸ್ ಆಫ್ ಫೈಯರ್', 'ಇಗ್ನೈಟೆಡ್ ಮೈಂಡ್ಸ್‌', ಕೃತಿಗಳನ್ನು ರಚಿಸಿದ್ದು ಸಾಲದೆಂಬಂತೆ ಮತ್ತೆ ಮೂರು ಕೃತಿ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಿಡುವಿಲ್ಲದ ಯುವಕನಂತೆ ದುಡಿಯುತ್ತಿದ್ದಾರೆ.

ಕಲಾಂ ಕೇವಲ ಒಬ್ಬ ತಂತ್ರಜ್ಞಾನಿಯಾಗಿ, ಪ್ರಾಧ್ಯಾಪಕರಾಗಿ, ರಾಷ್ಟ್ರಪತಿಯಾಗಿ ಮಾತ್ರವಲ್ಲದೆ ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್ ಸ್ಮರಿಸುವಂತೆ, ಕಲಾಂ ಜಾತ್ಯತೀತತೆಗೆ ಹೊಸ ಅರ್ಥವನ್ನು ತಂದುಕೊಟ್ಟವರು. ತ್ಯಾಗರಾಜರ ಕೃತಿಯನ್ನು ಹಾಡಿ, ವೀಣೆಯನ್ನು ನುಡಿಸಿ, ಭಗವದ್ಗೀತವನ್ನು ಪಠಿಸಿ, ಕೊರಾನ್‌ನ್ನು ಕೂಡ ಸಮಾನ ಶೃತಿಯಲ್ಲಿ ಹೇಳುವ ಅಪ್ಪಟ ಭಾರತೀಯ ಆಗಿದ್ದಾರೆ. ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಹೆಸರಿಸಲಾಗಿರುವ ನಾಲ್ಕು ಪ್ರಮುಖ ತತ್ವಗಳಲ್ಲಿ ಒಂದಾದ 'ಸೆಕ್ಯುಲರ್' ಮನೋಧರ್ಮಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿ ಇಂದು ಕಲಾಂ ನಮ್ಮೊಂದಿಗಿದ್ದಾರೆ.

ಕಲಾಂ ರಾಷ್ಟ್ರಪತಿ ಹುದ್ದೆಗೆ ಹಿರಿಮೆ ತಂದುಕೊಟ್ಟು, ತಮ್ಮ ಸ್ಫೂರ್ತಿದಾಯಕ ನಾಯಕತ್ವದಿಂದ ನೆಹರೂರವರು ರಾಷ್ಟ್ರಪತಿಯಾಗುವವರಲ್ಲಿ ಬಯಸಿದ್ದ 'ಘನತೆ'ಯನ್ನು ಸಾಕಾರಗೊಳಿಸುವಲ್ಲಿ ಸಾಧ್ಯವಾದ ಮಟ್ಟಿಗೆ ಯಶಸ್ವಿಯಾದರೆಂದೇ ಹೇಳಬಹುದು.

ಇಂತಹ ಕಲಾಂ, ಭಾರತ 60 ವರ್ಷಗಳ ಸ್ವಾತಂತ್ರ್ಯವನ್ನು ಸಂಪೂರ್ಣಗೊಳಿಸಿದ 'ಚಾರಿತ್ರಿಕ' ಘಟ್ಟದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಇಲ್ಲದೆ ಹುದ್ದೆಯಿಂದ ನಿರ್ಗಮಿಸಿದ್ದು, ಭಾರತದ ಪ್ರಜೆಗಳಾದ ನಮ್ಮೆಲ್ಲರ ದುರಾದೃಷ್ಟವೆಂದೇ ಹೇಳಬಹುದು. ಕಲಾಂ ಹೆಚ್ಚೆಚ್ಚು ಕಾಲ ಬಾಳಲಿ. ಅವರ ಸೇವೆ ಭಾರತಕ್ಕೆ ಸದಾ ಸಲ್ಲುವಂತಾಗಲಿ. ಕಲಾಂರಿಗೆ ದೇಶದೆಲ್ಲಾ ಜನತೆಯ ಪರವಾಗಿ ನಮ್ಮ ನಮಸ್ಕಾರಗಳು.