ಸಂತೆ ನೆನಪಿಗೆ ಹೊಂಡ

ಸಂತೆ ನೆನಪಿಗೆ ಹೊಂಡ

ಬರಹ

ಈ ಲೇಖನ ಹೋದವಾರ [:http://kannada.indiawaterportal.org/|ಇಂಡಿಯ ವಾಟರ್ ಪೋರ್ಟಲ್ ನಲ್ಲಿ] ಪ್ರಕಟವಾಗಿತ್ತು.

ನಾಡಿನ ವಿಖ್ಯಾತವಾದ ಹಾಗೂ ಅಷ್ಟೇ ವಿಶಿಷ್ಟವಾದ ಜಲಾಗಾರಗಳ ಪೈಕಿ ಪ್ರಮುಖವಾದುದು ಎಂದರೆ ಸಂತೆ ಹೊಂಡ. ಹೆಸರು ಈಚಿನದಾದರೂ, ಹೊಂಡ ಹಳೆಯದೇ. ಐತಿಹಾಸಿಕವಾದುದು.

ದುರ್ಗದ ಊರ ನಡುವಿರುವ ಈ ಹೊಂಡವನ್ನು ಕಟ್ಟಿಸಿದ್ದು ಬಿಚ್ಚುಗತ್ತಿ ಭರಮಣ್ಣ ನಾಯಕರು, ಕ್ರಿಸ್ತ ಶಕ 1693ರಲ್ಲಿ ಎಂದು ದಾಖಲೆಗಳು ಹೇಳುತ್ತವೆ. ದುರ್ಗದ ಐತಿಹಾಸಿಕ ಕೋಟೆಯಿಂದ ಸುಮಾರು ಒಂದು ಮೈಲಿ ದೂರದಲ್ಲಿರುವ ಈ ಹೊಂಡದ ಸುತ್ತಲೂ ಸೈನ್ಯ ಬೀಡ ಬಿಟ್ಟಿರುತ್ತಿತ್ತು. ಸೈನ್ಯದ ಬಳಕೆಗೂ ಆಯಿತು. ನಾಗರಿಕರೂ, ದಾರಿಹೋಕರ ದಾಹಕ್ಕೂ ಆಗುತ್ತಿತ್ತು. ಕಾಲಾಂತರದಲ್ಲಿ ಈ ಹೊಂಡದ ಸುತ್ತ ಸಂತೆ ನೆರೆಯಲು ಆರಂಭಿಸಿದ್ದರಿಂದ, ಇದಕ್ಕೆ ಸಂತೆ ಹೊಂಡ ಹೆಸರು ಬಂತು.

ದುರ್ಗದ ಪ್ರಖ್ಯಾತ ಪಾಳೆಗಾರರಾಗಿದ್ದ ಭರಮಣ್ಣನಾಯಕರು ಶೌರ್ಯ, ಪರಾಕ್ರಮಕ್ಕೆ ಹೆಸರಾಗಿದ್ದರಿಂದ ಅವರಿಗೆ ಬಿಚ್ಚುಗತ್ತಿ ಎಂಬ ಅಭಿದಾನ ಬಂದಿತ್ತು. ಬರೀ ಶೌರ್ಯ, ಪರಾಕ್ರಮಗಳ ಕುರಿತು ಐತಿಹಾಸಿಕ ದಾಖಲೆಗಳು, ಜಾನಪದ ಕತೆಗಳೂ ಉಂಟು. ಆದರೆ, ಅವರ ವ್ಯಕ್ತಿತ್ವದ ಮತ್ತೊಂದು ಮಹತ್ವದ ಮಗ್ಗುಲಿಗೆ ಸಾಕಷ್ಟು ಸಾಕ್ಷ್ಯಗಳು ಇನ್ನೂ ಕಣ್ಣೆದುರೇ ಇವೆ. ನೀರುಣಿಸಲು ಜಲಾಗಾರಗಳ ನಿರ್ಮಾಣದಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕರ ಕೊಡುಗೆ ಅತಿ ಮಹತ್ವದ್ದು. ದುರ್ಗದ ಸಂತೆ ಹೊಂಡವೂ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಹೊಂಡಗಳನ್ನು ನಿರ್ಮಿಸಿದ್ದರು ಎಂದು ಇತಿಹಾಸ ಹೇಳುತ್ತದೆ.

ನೆಲ ಬಗೆದು ಹೊಂಡ ಎಂದು ಹೇಳುವುದು ಅವರ ಜಾಯಮಾನವಾಗಿರಲಿಲ್ಲ. ಅಂತ ಹೊಂಡ ಕಲಾತ್ಮಕವಾಗಿಯೂ, ಉಪಯುಕ್ತಕಾರಕವಾಗಿಯೂ ಇರುವಂತೆ ನೋಡಿಕೊಳ್ಳುತ್ತಿದ್ದರು. ಉದಾಹರಣೆಗೆ ಸಂತೆ ಹೊಂಡವನ್ನೇ ನೋಡಿ. ಇದು ನಿಜಕ್ಕೂ ಒಂದು ಇಂಜಿನಿಯರಿಂಗ ಮಾರ್ವಲ್. ಸುಮಾರು 80 ಅಡಿ ಆಳವಿರುವ ಈ ಹೊಂಡ ಆಯಾತಕಾರವಾಗಿದೆ. ಆಯತದ ನಾಲ್ಕೂ ಭುಜಗಳಿಗೂ ಗ್ರಾನೈಟ್ ಕಲ್ಲುಗಳಿಂದ ಮೆಟ್ಟಿಲುಗಳನ್ನು ಜೋಡಿಸಲಾಗಿದೆ. ಸುಮಾರು 120 ಮೆಟ್ಟಿಲುಗಳು ತಳವನ್ನೂ ತಲುಪುತ್ತವೆ. ಆದರೆ, ಯಾವುದಕ್ಕೂ ಲೈನಿಂಗ್ ಇಲ್ಲ. ಹೀಗಾಗಿ ಇಲ್ಲಿ ಸಂಗ್ರಹವಾಗುವ ನೀರು ಪರಿಶುದ್ಧವೇ. ಕಟ್ಟಿಸಿ ಸುಮಾರು 312 ವರ್ಷಗಳಾದರೂ, ಒಂದೇ ಒಂದು ಕಲ್ಲೂ ಕದಲಿಲ್ಲ. ಅಂದ ಹಾಳಾಗಿಲ್ಲ.

ಇನ್ನು ಹೊಂಡಕ್ಕೆ ನೀರು ತುಂಬಿಸುವ ಬಾಬ್ತು. ಈ ಹೊಂಡ ಅಂತರ್ಜಲ ಮೂಲ ಕೊಂಚ ಕಡಿಮೆ ಯೆಂದೇ ಹೇಳಬೇಕು. ಇದನ್ನು ಮನಗಂಡಿದ್ದ ನಿರ್ಮಾರ್ತೃಗಳು, ಈ ಭಾರೀ ಹೊಂಡಕ್ಕೆ ಒಳಕಾಲುವೆಗಳ ಮೂಲಕ ಹೆಚ್ಚುವರಿ ಮಳೆ ನೀರನ್ನು ತರುತ್ತಿದ್ದರು. ಅದಕ್ಕಾಗಿ ಪ್ರತ್ಯೇಕ ಒಳಸುರಿ ಮೋರಿಯೂ ಉಂಟು. ಅಂದವಾದ ಮಂಟಪಗಳೂ ಇದ್ದ ಕುರುಹುಗಳಿವೆ.

ಈ ಐತಿಹಾಸಿಕ ಹೊಂಡ ಮೊದಲು ವೈಭವೋಪೇತ ತೆಪ್ಪೋತ್ಸವಕ್ಕೆ ಹೆಸರಾಗಿತ್ತು. ಅದರ ಮೆಟ್ಟಿಲ ಮೇಲೆ ಸಾಹಿತ್ಯ ಚಟುವಟಿಕೆಗಳು, ಗಾನ ಗೋಷ್ಠಿ-ಕವಿಗೋಷ್ಠಿಗಳೂ ನಡೆಯುತ್ತಿದ್ದವಂತೆ. ಆದರೆ, ದುರ್ದೆಶೆ ಆರಂಭವಾಗಿದ್ದು 1996ರಲ್ಲಿ. ಆ ಒಂದು ದಿನ ಕಾಂಪೌಂಡು ಇಲ್ಲದ ಈ ಹೊಂಡಕ್ಕೆ ರಿವರ್ಸ್ ಗೇರಿನಲ್ಲಿದ್ದ ಬಸ್ಸೊಂದು ಬಿದ್ದು, ಸುಮಾರು 64ಕ್ಕೂ ಹೆಚ್ಚು ಅಮಾಯಕರನ್ನು ಬಲಿ ತೆಗೆದುಕೊಂಡಿತು. ಆಗ ಹೊಂಡದ ನೀರನ್ನು ರಾತ್ರೋ ರಾತ್ರಿ ಖಾಲಿ ಮಾಡಲಾಗಿತ್ತು. ಬರಿದಾದ ಭೂಮಿಯ ಬೋಗೋಣಿ ತುಂಬಲು ಮತ್ತೆ ಮಳೆ ಬರಲೇ ಇಲ್ಲ. ಅಷ್ಟರಲ್ಲಿ ಹೂಳು ಹೇರಳವಾಗಿ ತುಂಬಿತ್ತು. ಕೊಳ್ಳೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬಂತೆ ತಡವಾಗಿ ಎಚ್ಚೆತ್ತುಕೊಂಡ ಅಧಿಕಾರಿಶಾಹಿ, ಹೊಂಡದ ಸುತ್ತಲು ಕಾಂಪೌಂಡು ಕಟ್ಟಿಸಿ, ಕಬ್ಬಿಣದ ಬಾಗಿಲು ಇಟ್ಟು ಬೀಗ ಜಡಿದರು. ಸದಾ ಪಕ್ಕದವರ ಕಾಂಪೌಂಡಿನೊಳಗೆ ಕಸ ಸುರಿಯುವ ಮಂದಿಗೆ, ಸುವರ್ಣಾವಕಾಶ. ಭರ್ಜರಿ ಬೀಗ ಜಡಿದ್ದರಿಂದ ಜನ ಹೋಗೋದು ನಿಲ್ಲಿಸಿದರು. ಕಸದ ರಾಶಿ ದುರ್ಗದ ಬೆಟ್ಟಕ್ಕೆ ಪ್ರತಿಸ್ಪರ್ಧಿಯಾಗಿ ಬೆಳೆಯತೊಡಗಿತು. ನಿಧಾನಕ್ಕೆ ಸಂತೆ ಹೊಂಡ ಸಾವಿನಂಚಿಗೆ ಬಂದು ನಿಂತಿತ್ತು.

ಅದರಲ್ಲಿ ಜೀವ ಜಲ ತಂದ ಭಗೀರಥ ಯತ್ನದ್ದೇ ಮತ್ತೊಂದು ಕತೆ.