ಹಾಜರಿ ತೆಗೆದುಕೊಳ್ಳಲು ಸಾಧನ
ಈಗ ಶಾಲಾ ಕಾಲೇಜುಗಳ ಕಚೇರಿಗಳಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚಾಗಿದೆ.ವಿದ್ಯಾರ್ಥಿಗಳ ವಿವರಗಳು,ಅವರ ಹಾಜರಾತಿ ಮತ್ತು ಪರೀಕ್ಷೆಯಲ್ಲಿ ಅವರ ಸಾಧನೆಯ ವಿವರಗಳು ಕಂಪ್ಯೂಟರುಗಳಲ್ಲಿ ಲಭ್ಯವಿರುವುದು ಸಹಜ. ಆದರೆ ಈ ವಿವರಗಳನ್ನು ಕಂಪ್ಯೂಟರುಗಳಲ್ಲಿ ಶೇಖರಿಸಲು ಅಧ್ಯಾಪಕರು ಸುಮಾರು ಹೊತ್ತು ವ್ಯಯ ಮಾಡಬೇಕಾಗುತ್ತದೆ.ಹಾಜರಾತಿ ವಿವರವು ಕಂಪ್ಯೂಟರಿಗೆ ನೇರವಾಗಿ ಸೇರಿಸಲು ಸ್ವಯಂಚಾಲಿ ವ್ಯವಸ್ಥೆ ಇದ್ದರೆ ಮಾತ್ರ ಕಂಪ್ಯೂಟರ್ ವ್ಯವಸ್ಥೆ ನಿಜಕ್ಕೂ ಅರ್ಥ ಪಡೆಯುತ್ತದೆ.
ಕಾಲೇಜಿನಲ್ಲಿ ಕಂಪ್ಯೂಟರ್ ಜಾಲ ಇದ್ದರೆ ಅಥವ ನಿಸ್ತಂತು ವ್ಯವಸ್ಥೆಯಿದ್ದರೆ,ಶಿಕ್ಷಕರ ಕೆಲಸ ಹಗುರವಾಗುತ್ತದೆ.ತರಗತಿಗೆ ಲ್ಯಾಪ್‌ಟಾಪ್ ಹಿಡಿದುಕೊಂಡು ಹೋದರೆ,ಕಾಲೇಜಿನ ಹಾಜರಾತಿ ತಂತ್ರಾಂಶವನ್ನು ತೆರೆದು,ವಿದ್ಯಾರ್ಥಿಗಳ ಹೆಸರು ಹಿಡಿದು ಕರೆದು,ಅವರು ಹಾಜರಿದ್ದರೆ,ಅದನ್ನು ದಾಖಲಿಸುವುದರ ಮುಖಾಂತರ ಕಂಪ್ಯೂಟರಿನಲ್ಲಿ ಹಾಜರಾತಿ ವಿವರಗಳನ್ನು ಶೇಖರಿಸಬಹುದು.ಆದರೆ ತರಗತಿಯಲ್ಲಿ ಹಾಜರಿದ್ದವರ ವಿವರಗಳನ್ನು ದಾಖಲಿಸುವ ಬದಲಿಗೆ,ಹಾಜರಿಲ್ಲದವರ ಬಗೆಗಿನ ವಿವರಗಳನ್ನು ದಾಖಲಿಸುವುದು ಸಾಮಾನ್ಯವಾಗಿ ಕಡಿಮೆ ತ್ರಾಸದಾಯಕ.ಆದರೆ ಇಂತಹ ವ್ಯವಸ್ಥೆಗೆ ಶಿಕ್ಷಕರು ಲ್ಯಾಪ್‌ಟಾಪ್ ತರಗತಿಗೆ ಒಯ್ಯುವುದು ಅನಿವಾರ್ಯ. ಜತೆಗೆ ಕಂಪ್ಯೂಟರ್ ಜಾಲ ಕೆಟ್ಟಿದ್ದರೆ,ನಿಸ್ತಂತು ವ್ಯವಸ್ಥೆ ಕೈಕೊಟ್ಟರೆ,ಹಾಜರು ದಾಖಲಿಸುವ ಕೆಲಸ ಸಾಧ್ಯವಾಗದು.
ಹೆಚ್ಚಿನೆಡೆ ಈ ತರ ಮಾಡುವುದರ ಬದಲಿಗೆ,ಹಾಜರು ಪುಸ್ತಕ ಹಿಡಿದು ತರಗತಿಗೆ ಹೋಗಿ,ಪುಸ್ತಕದಲ್ಲಿ ಮಾಮೂಲಿನಂತೆ ವಿವರಗಳನು ದಾಖಲಿಸಿ,ನಂತರ ಕಂಪ್ಯೂಟರಿನ ಮುಂದೆ ಕುಳಿತು ವಾರಕ್ಕೊಮ್ಮೆಯೋ ಅಥವ ನಿಗದಿತ ದಿನಗಳಿಗೊಮ್ಮೆ ಹಾಜರಿಯ ವಿವರಗಳನು ಕಂಪ್ಯೂಟರಿಗೆ ಉಣಿಸುವ ವಿಧಾನ ಅನುಸರಿಸುವುದು ಸಾಮಾನ್ಯವಾಗಿದೆ.ಹೀಗೆ ಮಾಡಿದರೆ,ಎರಡೆರಡು ಕೆಲಸ ಅನಿವಾರ್ಯ.ಜತೆಗೆ ಕಂಪ್ಯೂಟರಿನಲ್ಲಿ ದಾಖಲಿಸುವ ಕೆಲಸ ಬಾಕಿಯಾಗುವ ಸಂದರ್ಭಗಳು ಅಪರೂಪವೇನಲ್ಲ.ಅಲ್ಲದೆ ಇಂತಹ ವಿಧಾನದಲ್ಲಿ ದಕ್ಷತೆಯೂ ಕಡಿಮೆ.
ಇದಕ್ಕೇನು ಪರಿಹಾರ?ಹಾಜರಾತಿ ದಾಖಲಿಸಲು ಸಾಧನವೊಂದನ್ನು ಅಭಿವೃದ್ಧಿ ಪಡಿಸುವುದು ಒಂದು ಪರಿಹಾರ.ಈ ಸಾಧನ ಅಂಗೈ ಅಗಲದ ಸಾಧನವಾಗಿದ್ದರೆ ಒಳಿತು.ಹೆಸರು ಹಿಡಿದು ಕರೆಯುವಂತಹ ಸಮಯ ವ್ಯಯ ಮಾಡುವ ಪ್ರಕ್ರಿಯೆ ಇಲ್ಲದಿದ್ದರೆ ಒಳಿತು.ಸಾಧನ ದುಬಾರಿಯೂ ಆಗಬಾರದು.ಮೊಬೈಲ್ ಹ್ಯಾಂಡ್‌ಸೆಟ್ ಅಂತಹ ಸಾಧನವಾದರೆ ಒಳಿತು,ಜತೆಗೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಬಳಸುವಷ್ಟು ಅಗ್ಗದಲ್ಲಿ ಸಿಕ್ಕಬೇಕು.ಹೀಗೆ ಯೋಚಿಸಿದ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಸ್ಟಿಫಾನ್ ವಡಕ್ಕನ್ ಯೋಜನೆಯೊಂದನ್ನು ಸಿದ್ಧ ಪಡಿಸಿದ್ದಾರೆ.ಈ ಯೋಜಿತ ಸಾಧನ ಬೆರಳಚ್ಚು ದಾಖಲಿಸುವ ಸೌಲಭ್ಯ ಹೊಂದಿರುತ್ತದೆ.ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಮತ್ತು ಆತನ ಬೆರಳಚ್ಚನ್ನು ಈ ಸಾಧನದಲ್ಲಿ ಶೇಖರಿಸಿಡಬೇಕು.ಅದಕ್ಕೆ ಅಗತ್ಯವಾದ ಸ್ಮರಣಕೋಶ ಮತ್ತು ಬೆರಳಚ್ಚನ್ನು ತಾಳೆ ಹಾಕಿ,ವಿದ್ಯಾರ್ಥಿಯು ಹಾಜರಿದ್ದಾನೆಯೇ ಇಲ್ಲವೇ ಎನ್ನುವುದನ್ನು ದಾಖಲಿಸಿಕೊಳ್ಳಲು ಅಗತ್ಯ ತಂತ್ರಾಂಶವನ್ನು ಸಾಧನ ಹೊಂದಿರಬೇಕು,ಜತೆಗೆ ಈ ತಂತ್ರಾಂಶವನ್ನು ಸಂಸ್ಕರಿಸಲು ಅಗತ್ಯವಾದಷ್ಟು ಶಕ್ತಿ ಇರುವ ಸಂಸ್ಕಾರಕ ಇದರಲ್ಲಿರಬೇಕು.ಕೆಲವು ದಿನಗಳ ಹಾಜರಾತಿ ವಿವರ ಶೇಖರಿಸಲು ಇದರಲ್ಲಿ ಅನುಕೂಲ ಕಲ್ಪಿಸುವುದು ಒಳಿತು.
ತರಗತಿಗೆ ಹೋದ ಬಳಿಕ ಶಿಕ್ಷಕ ಅನುಕೂಲಕರ ಸಮಯದಲ್ಲಿ ಸಾಧನವನ್ನು ವಿದ್ಯಾರ್ಥಿಗಳ ಕೈಗಿತ್ತರೆ ಸಾಕು.ಅವರು ತಮ್ಮ ಬೆರಳನ್ನು ಬೆರಳಚ್ಚು ಸೆರೆ ಹಿಡಿವ ರೀಡರ್‌ನ ಮೇಲೆ ಇಟ್ಟರಾಯಿತು.ವಿದ್ಯಾರ್ಥಿಯ ಬೆರಳಚ್ಚು,ವಿದ್ಯಾರ್ಥಿಗಳ ಬೆರಳಚ್ಚಿನ ದತ್ತಾಂಶದ ಯಾವುದಾದರೂ ಬೆರಳಚ್ಚಿಗೆ ಸರಿಹೊಂದಿದರೆ,ಆತನ ನೋಂದಣಿ ಸಂಖ್ಯೆ ಸಾಧನದ ತೆರೆಯಲ್ಲಿ ಮೂಡುತ್ತದೆ.ಜತೆಗೆ ಧನ್ಯವಾದಗಳು ಎಂಬ ಉಲಿತವನ್ನೂ ಕೇಳಿಸಬಹುದು.ಇಲ್ಲವಾದರೆ ಪುನ: ಬೆರಳನ್ನು ಸರಿಯಾಗಿ ಹಿಡಿಯಲು ನಿರ್ದೇಶನ ಬರುತ್ತದೆ. ಹೀಗೆ ಎಲ್ಲ ವಿದ್ಯಾರ್ಥಿಗಳೂ ಬೆರಳು ತೋರಿಸಿದಾಗ ಹಾಜರಾತಿ ತೆಗೆದುಕೊಳ್ಳುವ ಕೆಲಸ ಕೆಲ ನಿಮಿಷಗಳಲ್ಲೇ ಮುಗಿಯುತ್ತದೆ.ನಕಲಿ ಹಾಜರಾತಿ ನೀಡುವುದು ಅಸಾಧ್ಯ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ?ತರಗತಿಯ ನಂತರ ಸಾಧನವನ್ನು ಕಂಪ್ಯೂಟರಿಗೆ ಸಂಪರ್ಕಿಸಿ,ಅದರಲಿರುವ ಹಾಜರಾತಿ ವಿವರಗಳನ್ನು ಕಂಪ್ಯೂಟರಿಗೆ ವರ್ಗಾಯಿಸಬಹುದು.ಅಧಿಕ ಸಂಖ್ಯೆಯಲ್ಲಿ ಸಾಧನವನ್ನು ತಯಾರಿಸಿದರೆ,ಅದನ್ನು ಕಡಿಮೆ ಬೆಲೆಯಲ್ಲಿ ಒದಗಿಸಲು ಕಷ್ಟವಾಗದು.ಎಲ್ಲ ಶಾಲಾ-ಕಾಲೇಜುಗಳಲ್ಲಿ ಬಳಕೆಯಾಗುವ ಸಂಭವ ಇರುವುದರಿಂದ ಇಂತಹ ಸಾಧನ ಕ್ಕೆ ಹೆಚ್ಚಿನ ಬೇಡಿಕೆ ಬರುವುದು ಖಂಡಿತ.ಆದರೆ,ಆರಂಭಿಕ ಬಂಡವಾಳ ತೊಡಗಿಸಿ,ಸಾಧನವನ್ನು ಮಾರುಕಟ್ಟೆಯಲ್ಲಿ ಮಾರುವ ವ್ಯವಸ್ಥೆ ಮಾಡುವ ಎದೆಗಾರಿಕೆ ಇರುವ ಕಂಪೆನಿ ಅಥವ ಸಂಸ್ಥೆಗಾಗಿ ವಡಕ್ಕನ್ ಹುಡುಕಾಟ ನಡೆಸಿದ್ದಾರೆ.
ಪುಸ್ತಕಗಳ ಇ-ಪ್ರತಿಯನ್ನು ಲಭ್ಯವಾಗಿಸುವುದು ಲಾಭ ತರುತ್ತದೆಯೇ?
ಪುಸ್ತಕಗಳ ಪಿಡಿಎಫ್ ಪ್ರತಿಯನ್ನು ಅಂತರ್ಜಾಲದಲ್ಲಿ ಲಭ್ಯವಾಗಿಸಬೇಕೇ ಎನ್ನುವ ಚರ್ಚೆ ಬಹುಕಾಲದಿಂದ ನಡೆದಿದೆ.ಹಾಗೆಂದು ಜ್ಞಾನವನ್ನು ಹಂಚಿಕೊಳ್ಳುವುದೇ ತಮ್ಮ ಉದ್ದೇಶವಾಗಿಟ್ಟುಕೊಂಡವರು ತಮ್ಮ ಪುಸ್ತಕವನ್ನು ಉಚಿತವಾಗಿ ಅಂತರ್ಜಾಲದ ಮೂಲಕ ಒದಗಿಸಲು ಹಿಂದೆ ಮುಂದೆ ನೋಡರು.ಉದಾಹರಣೆಗೆ http://www.nitte.ac.in/downloads/Conv-LTI.pdf ಕೊಂಡಿ ನೋಡಿ. ಪ್ರತಿಗಳನ್ನು ಉಚಿತವಾಗಿ ಲಭ್ಯವಾಗಿಸುವ ಬದಲಿಗೆ,ಮುದ್ರಿತ ಪ್ರತಿಗಿಂತ ಕಡಿಮೆ ದರದಲ್ಲಿ ಲಭ್ಯವಾಗಿಸುವ ಆಯ್ಕೆ ಪ್ರಕಾಶಕರಿಗಿದೆ. ಆದರೆ ಒಮ್ಮೆ ಹಣ ತೆತ್ತು ಪಿಡಿಎಫ್ ಪ್ರತಿ ಖರೀದಿಸಿದವರು,ತಮ್ಮ ಪ್ರತಿಯನ್ನು ತಮ್ಮ ಗೆಳೆಯರ ಜತೆ ಹಂಚಿಕೊಂಡರೆ,ಸಮಸ್ಯೆ ತಲೆದೋರುತ್ತದೆ.ಇ-ಪ್ರತಿಯನ್ನು ನಕಲು ಮಾಡಲು ಯಾವ ಖರ್ಚೂ ಬರದು. ಹೀಗೆ ಇ-ಪ್ರತಿ ಲಭ್ಯವಿದ್ದರೆ,ಮುದ್ರಿತ ಪ್ರತಿಯನ್ನು ಕೊಳ್ಳುವವರು ಯಾರು ಎನ್ನುವುದು ಪ್ರಕಾಶಕರ ಪ್ರಶ್ನೆ.ಹಾಗೇನಿಲ್ಲ-ಕಂಪ್ಯೂಟರಿನಲ್ಲಿ "ಪುಸ್ತಕ"ದ ಓದು ಕಷ್ಟಕರ.ಎಲ್ಲಿಗೂ ಒಯ್ಯಬಹುದಾದ ಮುದ್ರಿತ ಪ್ರತಿಗೆ ಬೇಡಿಕೆ ಇದ್ದೇ ಇದೆ.ಇ-ಪ್ರತಿಯ ಮೂಲಕ ಪುಸ್ತಕವನ್ನು ಮೆಚ್ಚಿಕೊಂಡವರು ಮುದ್ರಿತ ಪ್ರತಿ ಖರೀದಿಸದೆ ಬಿಡರು ಎಂದು ವಾದಿಸುವ ಪುಸ್ತಕ ಪ್ರೇಮಿಗಳೂ ಇದ್ದಾರೆ.ಆದರೆ,ಪಿಡಿಎಫ್ ಪ್ರತಿ ಲಭ್ಯವಾಗಿಸಿ,ತಮ್ಮ ಪುಸ್ತಕದ ಮುದ್ರಿತ ಪ್ರತಿಯನ್ನು ಮಾರಲಾಗದೆ ಕೈಸುಟ್ಟುಕೊಂಡವರ ಸಂಖ್ಯೆ ಧಾರಾಳವಾಗಿದೆ.ಇ-ಪ್ರತಿಯನ್ನು ಮುಕ್ತವಾಗಿ ಒದಗಿಸದೆ,ಬೆಲೆ ನಿಗದಿ ಪಡಿಸಿದರೂ,ಅದನ್ನು ಅಧಿಕೃತ ಮೂಲದಿಂದ ಪಡೆಯದೆ,ನಕಲಿ ಪ್ರತಿಯನ್ನು ಇಳಿಸಿಕೊಳ್ಳುವವರೇ ಅಧಿಕ.
ಇದಕ್ಕೇನು ಪರಿಹಾರ?ಡೇವಿಡ್ ಪೋಗ್ ಅನ್ನುವ ಲೇಖಕ ಮಹಾಶಯ ತನ್ನ ಮುಂದಿನ ಪುಸ್ತಕ”Windows Vista: The Missing Manual” ಮುದ್ರಿತ ಪ್ರತಿಯ ಜತೆಗೇ,ಅದರ ಇ-ಪ್ರತಿಯನು ತುಸು ಕಡಿಮೆ ಬೆಲೆಗೆ ಮಾರಲು ನಿರ್ಧರಿಸಿದ್ದಾರೆ.ಇ-ಪ್ರತಿಯ ವಿನಿಮಯ ನಡೆದು ತಮ್ಮ ಇ-ಪ್ರತಿಗೆ ಬೇಡಿಕೆ ಕುಸಿಯದಂತೆ ಮಾಡಲು ಅವರು ಮಾಡಿರುವ ಉಪಾಯವೇನು ಗೊತ್ತೇ?ಇ-ಪ್ರತಿಯನ್ನು ಖರೀದಿಸಿದಾಗ ಲಭ್ಯವಾಗುವ ಪಿಡಿಎಫ್ ಅಥವಾ ಇತರ ರೀತಿಯ ಕಡತವನ್ನು ತೆರೆದಾಗ ಪುಟದ ಕೆಳಗೆ ಖರೀದಿಸಿದವರ ಮಿಂಚಂಚೆ ವಿಳಾಸ ಕಾಣಿಸಿಕೊಳ್ಳುವ ವ್ಯವಸ್ಥೆಯನ್ನವರು ಮಾಡಲಿದ್ದಾರೆ.ಇದರಿಂದ ಇ-ಪ್ರತಿಯನ್ನು ಖರೀದಿಸಿದವರು ಇತರರಿಗೆ ಒದಗಿಸಿದಾಗ,ತಮ್ಮ ಮಿಂಚಂಚೆ ವಿಳಾಸದ ಜತೆಗೇ ನೀಡುವ ಅನಿವಾರ್ಯತೆ ಉಂಟಾಗುವುದರಿಂದ ಅವರು ಕಾಪಿ ರೈಟ್ ಕಾಯಿದೆ ಉಲ್ಲಂಘಿಸಿದವರ ಜಾಡು ಸಿಗುತ್ತದೆ.ಇದರಿಂದ ಪುಸ್ತಕದ ಅನಧಿಕೃತ ಹಬ್ಬುವಿಕೆಗೆ ಕಡಿವಾಣ ಬೀಳಲಿದೆ ಎನ್ನುವುದು ಡೇವಿಡ್ ಅವರ ಎಣಿಕೆ.ನಿಜಕ್ಕೂ ಹಾಗಾಗಲಿದೆಯೇ ಎನ್ನುವುದು ಜುಲೈ ವೇಳೆಗೆ ತಿಳಿದೀತು-ಯಾಕೆಂದರೆ,ಆ ವೇಳೆಗೆ ಅವರ ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಫೈರ್‌ಫಾಕ್ಸ್ ೩ ಗಿನೆಸ್ ದಾಖಲೆ?
ಅಂತರ್ಜಾಲವನ್ನು ಜಾಲಾಡಲು ಕಂಪ್ಯೂಟರಿನಲ್ಲಿ ಬಳಕೆಯಾಗುವ ತಂತ್ರಾಂಶವನ್ನು ಬ್ರೌಸರ್ ಎನ್ನುತ್ತಾರೆನ್ನುವುದು ಎಲ್ಲರಿಗೂ ಗೊತ್ತು.ವಿಂಡೋಸ್ ತಂತ್ರಾಂಶ ಬಳಸುವವರ ಪೈಕಿ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ತಂತ್ರಾಂಶ ಬಲು ಜನಪ್ರಿಯ.ಈ ಜನಪ್ರಿಯತೆಯ ಕಾರಣ,ಹೆಚ್ಚಿನ ಜಾಲತಾಣಗಳೂ ಈ ಬ್ರೌಸರಿನಲ್ಲಿ ಸರಿಯಾಗಿ ಕಾಣಿಸಿಕೊಳ್ಳುವಂತೆ ವಿನ್ಯಾಸವಾಗಿರುವುದೂ ಇದೆ. ಇದಕ್ಕೆ ಸ್ಪರ್ಧೆ ನೀಡುತ್ತಿರುವ ಇನ್ನೊಂದು ಬ್ರೌಸರ್ ಎಂದರೆ,ಮೊಜಿಲ್ಲಾ ಫೈರ್‌ಫಾಕ್ಸ್.ಇದು ಬಹಳ ವೇಗವಾಗಿ ಕಾರ್ಯನಿರ್ವಹಿಸಿ,ಕಂಪ್ಯೂಟರಿನ ಮೇಲೆ ಕಡಿಮೆ ಒತ್ತಡವನ್ನು ಬೀರುವಂತೆ ರಚಿತವಾಗಿದೆ.ಇದನ್ನು ಮುಕ್ತವಾಗಿ ಇಳಿಸಿಕೊಂಡು,ಅನುಸ್ಥಾಪಿಸಿ ಬಳಸಬಹುದು. ಇದೀಗ ತಂತ್ರಾಂಶದ ಮೂರನೇಯ ಸುಧಾರಿತ ಆವೃತ್ತಿ ಬಿಡುಗಡೆಯಾಗಿದೆ. ಈ ಆವೃತ್ತಿಯು ಮೊದಲನೇ ದಿನವೇ ಎಂಟು ದಶಲಕ್ಷ ಬಾರಿ ಡೌನ್‌ಲೋಡ್ ಮಾಡಲ್ಪಟ್ಟು ಇತಿಹಾಸ ನಿರ್ಮಿಸಿದೆ.ಒಂದೇ ದಿನದಲ್ಲಿ ಇಷ್ಟು ಬಾರಿ ಡೌನ್‌ಲೋಡ್ ಆದ ಮೊದಲ ತಂತ್ರಾಂಶ ಇದಾಗಿರಬಹುದು ಎನ್ನುವ ಅನುಮಾನ ಇದೆ. ಗಿನೆಸ್ ದಾಖಲೆಯಲ್ಲಿ ಇದನ್ನು ದಾಖಲಿಸ ಬೇಕೆಂಬ ಮನವಿ ಈಗಾಗಲೇ ಗಿನೆಸ್ ದಾಖಲೆಗಳ ಕಚೇರಿ ತಲುಪಿದೆ.
(ಇ-ಲೋಕ-80)(23/6/2008)
*ಅಶೋಕ್‌ಕುಮಾರ್ ಎ