ಗಂಗೆ ಅಂತರ್ಧಾನಳಾದಾಳೇ... !?
(ಈ ಲೇಖನ ನಿನ್ನೆ [:http://kannada.indiawaterportal.org|ಕನ್ನಡ ವಾಟರ್ ಪೋರ್ಟಲ್ ನಲ್ಲಿ] ಪ್ರಕಟವಾಗಿತ್ತು.)
ಒಲೆ ಹತ್ತಿ ಉರಿದಡೆ ನಿಲಲುಬಹುದು, ಧರೆ ಹತ್ತಿ ಉರಿದೊಡೆ ನಿಲಬಹುದೇ,
ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ತಂದೆ ಕೂಡಲಸಂಗಮದೇವ?
--ಈ ವಿಪರ್ಯಾಸಗಳ ಸರಣಿಗೆ ಮತ್ತೊಂದು ಸೇರ್ಪಡೆ ಗಂಗೆ ಅಂತರ್ದಾನವಾದೊಡೆ...?!
--ಇದು ಯಾವುದೋ ಪುರಾಣದಲ್ಲಿನ ಪ್ರಸ್ತಾಪ ಅಲ್ಲ. ಗಂಗೆ ಪಾತ್ರ ಬಯಲಾದೀತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಹೌದು, ಗಂಗೆಯ ಮಡಿಲಲ್ಲಿ ಕೈಗೆತ್ತಿಕೊಂಡಿರುವ ಜಲ ವಿದ್ಯುತ್ ಯೋಜನೆ ಹಾಗೂ ಆಣೆಕಟ್ಟುಗಳಿಂದಾಗಿ 50 ಕಿಮೀಗೂ ಹೆಚ್ಚು ದೂರ ಗಂಗೆ ಗುಪ್ತಗಾಮಿನಿಯಾಗಿ ಹೋಗುವ ಆತಂಕ ಪರಿಸರ ಪ್ರಿಯರಲ್ಲಿ ಮಡುಗಟ್ಟಿದೆ.
ಇಂಥದೊಂದು ಆತಂಕವನ್ನು ಹೊರ ಹಾಕಿರುವ ಪ್ರೊ|ಜಿ.ಡಿ. ಅಗರ್ ವಾಲ್ ಸಾಮಾನ್ಯ ವ್ಯಕ್ತಿಯಲ್ಲ. ಇವರು ಖ್ಯಾತ ಪರಿಸರ ವಿಜ್ಞಾನಿ, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರದಲ್ಲಿ ಡೀನ್ ಆಗಿದ್ದವರು. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಥಮ ಸದಸ್ಯ ಕಾರ್ಯದರ್ಶಿಯಾಗಿದ್ದವರು.
ಗಂಗೋತ್ರಿಯ ಹಿಮಗಡ್ಡೆಗಳು ಹಾಗೂ ಉತ್ತರಕಾಶಿ ನಡುವೆ ಆರು ಜಲ ವಿದ್ಯುತ್ ಯೋಜನೆಗಳಿಂದಾಗಿ ಸುಮಾರು 50 ಕಿಮೀಗಳಷ್ಟು ಉದ್ದ ಗಂಗಾ ನದಿ ಬತ್ತಿ ಹೋಗಬಹುದು ಎಂಬ ಆತಂಕ ಅವರದ್ದು. ಅವರಷ್ಟೇ ಅಲ್ಲ, ಅವರಂತೆಯೇ ಯೋಚಿಸುವ ಸಾವಿರಾರು ಜನರದ್ದು.
ಈ ಯೋಜನೆಗಳನ್ನು ಪ್ರತಿಭಟಿಸಿ ಅಗರ್ ವಾಲ್ ಅವರು ಇದೇ ಜೂನ್ 13ರಿಂದ ಆಮರಣಾಂತ ಉಪವಾಸ ಆರಂಭಿಸಿದ್ದಾರೆ. ಇದು ಹತ್ತನೇ ದಿನ. ಗಂಗೆಯ ಒಡಲಿಗೆ ನೀರು ತಂದು, ಹರಿವು ಹೆಚ್ಚಲು ಕಾರಣವಾಗುವ ಭಾಗೀರಥಿ ಹಾಗೂ ಭಿಲಂಗಣ ನದಿಗಳು ಈಗಾಗಲೇ ಒಣಗುತ್ತಿವೆ. ಗಂಗೆಯ ಹರಿವಿಗೆ ಅವುಗಳ ಕೊಡುಗೆ ನಗಣ್ಯವಾಗುತ್ತಿದೆ. ಮಾತ್ರವಲ್ಲ, ಗಂಗೆಯ ಒಡಲು ಸೇರುವ ಸಾವಿರಾರು ತೊರೆಗಳ ಒರತೆ ಬತ್ತುತ್ತಿದೆ.
ಭಾಗೀರತಿ ನದಿಯು ಚಛಾಮ್ ಎಂಬಲ್ಲಿ 8 ಕಿಮೀ (ಧಿರಾಸು ಜಲಾಶಯದಿಂದ 12 ಕಿಮೀ ಕೆಳ ಹರಿವಿನಲ್ಲಿ) ಉದ್ದದಷ್ಟು ಒಣಗಿರುವುದನ್ನು ಈ ವರ್ಷದ ಗೂಗಲ್ ಅರ್ಥ್ ಚಿತ್ರಗಳು ಬೆಳಕಿಗೆ ತಂದಿವೆ.
ಈ ಆತಂಕಕಾರಿ ಬೆಳವಣಿಗೆಗೆ ಕಾರಣ ಮನೇರಿ ಭಾಲಿ ಎರಡನೇ ಹಂತದ ಯೋಜನೆ ಇದೇ ಜನವರಿಯಿಂದ ಆರಂಭವಾಗಿದ್ದು. ಮನೇರಿ ಭಾಲಿ ಒಂದನೇ ಹಂತ, ಭೈರೋನ್ ಘಾಟಿ ಒಂದು ಮತ್ತು ಎರಡನೇ ಹಂತ ಹಾಗೂ ಲೋಹರಿನಾಗ್ ಪಾಲ ಮತ್ತು ಪಾಲಿ ಮನೇರಿ ಜಲ ವಿದ್ಯುತ್ ಯೋಜನೆಗಳೇ ಕಾರಣ ಎಂಬು ಪ್ರೊ| ಅಗರವಾಲ್ ಅಂಬೋಣ.
ಮನೇರಿ ಬಾಲಿ ಒಂದೇ ಹಂತವು 1988ರಲ್ಲಿ ಕಾರ್ಯರಂಭಗೊಂಡರೂ, ಈವರೆಗೂ ತನ್ನ ಸಂಪೂರ್ಣ ಸಾಮರ್ಥ್ಯದಷ್ಟು ವಿದ್ಯುತ್ ಉತ್ಪಾದಿಸಿಲ್ಲ. ಮಳೆಗಾಲದಲ್ಲಿ ನೀರಿನ ಪ್ರವಾಹದೊಂದಿಗೆ ಬರುವ ಹಲವಾರು ಖನಿಜ ಹಾಗೂ ಶಿಲಾ ಕಣಗಳು ಟರ್ಬೈನಿನ ಬ್ಲೇಡುಗಳಿಗೆ ಪದೇ ಪದೇ ಹಾನಿಯುಂಟು ಮಾಡುವುದರಿಂದ ದುರಸ್ತಿಗಾಗಿ ಉತ್ಪಾದನೆ ಸ್ಥಗಿತಗೊಳಿಸಲೇಬೇಕು. ಬೇಸಿಗೆ ಕಾಲದಲ್ಲಿ ಭಾಗೀರತಿ ಹಾಗೂ ಭಿಲಂಗಣ ನದಿಗಳಲ್ಲಿನ ಬಹುತೇಕ ನೀರು ಭೂಮಿಯಲ್ಲಿಯೇ ಇಂಗಿ ಒಣಗುವುದರಿಂದ ತೆಹ್ರಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಪ್ರಮಾಣ ಕನಿಷ್ಠ ಮಟ್ಟಕ್ಕಿಂತಲೂ ಕೆಳಕ್ಕೆ ಕುಸಿಯುತ್ತದ. ಹೀಗಾಗಿ ಸಂಪೂರ್ಣ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಈ ಬೇಸಿಗೆಯಲ್ಲಿ ಮುಳುಗಡೆಯಾಗಿದ್ದ ತೆಹ್ರಿ ಪಟ್ಟಣವೂ ಕಾಣಿಸುತ್ತಿತ್ತು ಎಂಬುದು ಸ್ಥಳೀಕರ ಅಂಬೋಣ. ಹೌದು, ಅಬಿವೃದ್ಧಿ, ಯೋಜನೆಗಳ ಹೆಸರಿನಲ್ಲಿ ಪರಿಸರದೊಂದಿಗೆ ನಡೆಯುತ್ತಿರುವ ಈ ಆಟ ಎಷ್ಟು ಕಾಲ ನಡೆಯಲು ಸಾಧ್ಯ...? ಪ್ರಕೃತಿ ಮುನಿಸನ್ನು ಎದುರಿಸಲು ಹುಲು ಮಾನವನಿಗೆ ಸಾಧ್ಯವಾ ಎಂಬುದು ಪ್ರಜ್ಞಾವಂತರ ಪ್ರಶ್ನೆ.
ಮಳೆಗಾಲದಲ್ಲಿ ಭಾರೀ ಮಳೆಯ ನೀರಿನಿಂದ, ಬೇಸಿಗೆಯಲ್ಲಿ ಕರಗಿದ ಹಿಮಗಡ್ಡೆಗಳ ನೀರಿನಿಂದ ಸದಾ ಪ್ರವಹಿಸುತ್ತಲೇ ಇರುವ ನದಿ ಎಂದು ಎಂದೋ ಓದಿದ್ದ ನೆನಪಿಗೆ, ತಿಳಿವಳಿಕೆಗೆ ತಿದ್ದುಪಡಿ ತರಬೇಕಾಗಿದೆ. ನೆನಪಿನ ಭಾವ ಕೋಶಗಳಲ್ಲಾದರೂ ಗಂಗೆ ಪ್ರವಹಿಸುತ್ತಲೇ ಇರುತ್ತದೆ ನಿಜ. ಆದರೆ, ನದಿ ಬರೀ ನೆನಪಾಗಿಯೇ ಉಳಿದು ಬಿಟ್ಟರೆ....
(ಫೋಟೋ ಕೃಪೆ, Photo courtesy: http://watercommunity.blogspot.com)