ಶೋಷಣೆ ?

ಶೋಷಣೆ ?

ಅದೊಂದು ದೊಡ್ಡ ಮಾಲ್ . ದಿನಸಿಯಿಂದ ಹಿಡಿದು ಎಲ್ಲಾ ರೀತಿಯ ಸಾಮಾಗ್ರಿ ಗಳೂ ಅಲ್ಲಿ ಸಿಗುತ್ತಿದ್ದವು.
ಜನ ನಿರಂತರವಾಗಿ ಬಂದು ಹೋಗಿ ಮಾಡುತಿದ್ದರು. ತುಂಬಾ ಜನ

ಆಕೆಯೂ ಆ ಮಾಲ್‌ಗೆ ಬಂದಳು . ಅವಳುಟ್ಟಿದ್ದ ಸುಮಾರಾದ ಸೀರೆ ಅವಳ ಅಂತಸ್ತನ್ನು ವಿವರಿಸುತ್ತಿತ್ತು.
ಸೆಕ್ಯೂರಿಟಿ ತಡೆದು ಏನೆಂದು ಕೇಳಿದ

ತರಕಾರಿಗಾಗಿ ಬಂದೆನೆಂದು ಹೇಳಿದ ನಂತರ ಒಳಗೆ ಪ್ರವೇಶ ಸಿಕ್ಕಿತು ಅವಳಿಗೆ

ಯಾರೂ ತನ್ನನ್ನು ಗಮನಿಸುತ್ತಿಲ್ಲವೆಂದು ಕಂಡುಕೊಂಡ ಮೇಲೆ ಅಲ್ಲಿಂದ ಬಿಸ್ಕಟ್ ಪ್ಯಾಕೆಟ್ ಹಾಗು ಬನ್ ಪ್ಯಾಕೆಟ್ಗಳನ್ನು ಜೋಳಿಗೆಯೊಂದಕ್ಕೆ ಸೇರಿಸಿದಳು ಆದರೆ ಅಲ್ಲಿಟ್ಟ ಅಡಗು ಕ್ಯಾಮೆರಾ ಅವಳ ಚಟುವಟಿಕೆಗಳನ್ನು ಸೆರೆ ಹಿಡಿದಿದ್ದು ಅವಳಿಗೆ ತಿಳಿಯಲಿಲ್ಲ. ತುಂಬಿಸಿಕೊಂಡು ಬೇಗ ಬೇಗ ಬಾಗಿಲ ಹೆಜ್ಜೆ ಹಾಕುತ್ತಿದ್ದಂತೆ

ಅಷ್ಟರಲ್ಲೇ ಕಳ್ಳಿ ಹಿಡೀರಿ ಅವಳನ್ನ ಎಂದು ಇವಳ ಚಲನವಲನವನ್ನು ಗಮನಿಸುತ್ತಿದ್ದವ ಕೂಗಿದ .

ಜನರೆಲ್ಲರೂಅವಳ ಸುತ್ತಾ ಸೇರಿದರು.

"ಇಂತಹವರನ್ನ್ ಯಾಕ್ರಿ ಇಲ್ಲಿ ಸೇರಿಸ್ತೀರಾ ನಮ್ ಥರದವರು ಇಲ್ಲಿಗೆ ಬರೋಕೆ ಹೆದರಿಕೆ ಆಗುತ್ತೆ . "

ಒಬ್ಬ ಮಹಿಳಾ ಮಣಿ ಅರಚುತ್ತಿದ್ದಳು

"ಇಂತಹವರೀರೋದಕ್ಕೆ ಹೆಂಗಸರಿಗೆ ಕೆಟ್ಟ ಹೆಸರು"

ಎಲ್ರೂ "ಏನೇನೂ ತಗೊಂಡಿದಾಳೆ ನೋಡೋಣಾ ತೆಗೀರಿ ಅವಳ ಆ ಜೋಳಿಗೆ ಯನ್ನ " ಎಂದು ಕಿರುಚುತ್ತಿದ್ದರು

ಯಾರೋ ಜೋಳಿಗೆಯನ್ನ ಕಿತುಕೊಂಡು ಬಿಚ್ಚಿದ

ದಂಗಾಗಿ ಹೋದ. ಮಾತ್ರವಲ್ಲ ಸುತ್ತಮುತ್ತಲಿದ್ದವರೆಲ್ಲಾ ಮಾತು ಬಾರದೆ ಮೂಕರಾಗಿದ್ದರು

ಅಲ್ಲಿ ಒಂದು ಮುದ್ದಾದ ಮಗು ಮಾಸಿದ ಬಟ್ಟೆಯ ಮೇಲೆ ಮಲಗಿತ್ತು. ಮುಗ್ದ ಮುಖ ನೋಡುತ್ತಿದ್ದಂತೆ ಕರಗಿ ಹೋದರು

"ಮಗು ನೆನ್ನೆ ಇಂದ ಏನೂ ತಿಂದಿಲ್ಲ ಅದಕ್ಕೆ ಕೊಡೋಣ ಅಂದ್ರೆ ಕೈನಾಗೆ ಕಾಸಿಲ್ಲ ಅದಕ್ಕೆ ಇಂಗೆ ಮಾಡಿದೆ " ಅವಳು ಗೊಳೋ ಎಂದು ಅತ್ತಾಗ

ಅಪರಾಧಿ ಪ್ರಜ್ನೆ ಎಲ್ಲರಲ್ಲೂ ಕಾಡತೊಡಗಿತು.

"ಅಲ್ಲಮ್ಮ ಮಗೂಗೆ ಬೇಕು ಅಂತಿದ್ರೆ ಕೇಳಮ್ಮ . ಕಳ್ಳತನ ಯಾಕೆ ಮಾಡ್ತೀಯಾ?" ಒಬ್ಬ ಹೇಳಿ ಹತ್ತರ ನೋಟು ಹಣ ಕೊಟ್ಟ

ಅಲ್ಲಿದ್ದ ಇನ್ನಿತರರೂ ಅದೇ ಮಾರ್ಗವನ್ನು ಅನುಸರಿಸಿದರು. ಕೆಲವರು ಹತ್ತರ ನೋಟು , ಇಪ್ಪತ್ತರ ನೋಟು, ಐದು ಹೀಗೆ ತಮ್ಮ ಮನಸಿಗೆ ಬಂದಷ್ಟು ಕೊಟ್ಟು ಮಗುವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿ ಹೋದರು.
ಯಾಕಪ್ಪ ದೇವರು ಜನರಿಗೆ ಕಷ್ಟ ಕೊಡ್ತರೆ ಅಂತ ಇನ್ನೊಬ್ಬ ಬಹಳ ಮರುಗಿ ನೂರರ ನೋಟ್ನನ್ನು ಕೊಟ್ಟು ಹೋದ.
ಇದನ್ನೆಲ್ಲಾ ನೋಡಿದ ಅಂಗಡಿಯ ಸಿಬ್ಬಂದಿಗಳು ತಮ್ಮ ಕೈಲಾದ್ದುದ್ದನ್ನ ಕೊಟ್ಟು ಜನ್ಮ ಪಾವನಿಸಿಕೊಂಡರು.
ಅವಳು " ನಿಮ್ಮ ಬಾಳು ಬಂಗಾರ ಆಗ್ಲಿ " ಎಂದು ಹರಸಿ ಹೊರಗೆ ಬಂದಳು.

ಸ್ವಲ್ಪ ದೂರ ಬಂದ ಮೇಲೆ ಮೊದಲು ಹತ್ತರ ನೋಟು ಕೊಟ್ಟವ ಸಿಕ್ಕಿದ

"ಏನು ಸಂಪಾದ್ನೆ ತುಂಬಾ ಚೆಂದಾಗೆ ಆಗಿದೆ "

"ಪರವಾಗಿಲ್ಲ ಒಳ್ಳೆ ಮಗೂನೆ ಎತ್ಕೊಂಡು ಬಂದಿದೀಯಾ , ಮಗು ಮುಖಾ ನೋಡಿ ಜನ ನಾ ಮುಂದೆ ತಾ ಮುಂದೆ ಅಂತ ದುಡ್ಡು ಕೊಟ್ಟಿದ್ದೇ ಕೊಟ್ಟಿದ್ದು, ಸರಿ ಆ ಮಗು ಹೆತ್ತಮ್ಮಂಗೆ ಈ ಐವತ್ತು ರುಪಾಯಿ ಕೊಟ್ಭಿಡು, ಅಂಗೆ ನೀನು ಐವತ್ತು ರೂಪಾಯಿ ಇಟ್ಕೊ"
"ಅಯ್ಯೋ ಇದರ ಹೆತ್ತಮ್ಮ ಎಲ್ಲಿದಾಳೆ ಯಾರಿಗೆ ಗೊತ್ತು. ನಿಂಗೆ ಮಗು ಬೇಕಾದ್ರೆ ಇಟ್ಕೋ"

"ಅಯ್ಯೊ ಯಾರಿಟ್ಕೊಂತಾರೆ ಕೆಲ್ಸ ಮುಗೀತು ನಾಳಿಕೆ ಮತ್ತೆ ತಗೊಂಬಾ"

" ನಾಳೆ ಎಲ್ಲಿಗಮ್ಮಿ ?"

" ನಾಳೆ ಮಲ್ಲೇಶ್ವರಮ್ನಲ್ಲಿ ಡ್ರಾಮ"

"ಮಗೂ ಏನೂ ಎಚ್ಚರ ಆಗ್ಲಿಲ್ವಾ? "

"ಅಯ್ಯೋ ಅದಕ್ಕೆ ಚೆನ್ನಾಗಿ ಬ್ರಾಂದಿ ಕುಡ್ಸಿದೀನಿ ತೆಪ್ಪಗೆ ಮಲ್ಕೊಂಡೈತೆ"

ಆತ ಹಾಗೆ ಮಾತಾಡಿಕೊಳ್ಳುತ್ತಾ ಮಗುವನ್ನು ಬ್ಯಾಗಿನಲ್ಲಿ ಹಾಕ್ಕೊಂಡು ತನ್ನ ಮನೆಗೆ ಹೋದ

ಮಗು ಇದೇನೂ ತಿಳಿಯದೆ ತೆಪ್ಪಗೆ ಮಲಗಿತ್ತು.

-------------------------------------

Rating
No votes yet

Comments