ಭಾರತೀಯ ಕ್ರಿಕೆಟ್ ಇತಿಹಾಸದ ಸುವರ್ಣ ದಿನ ಸ್ಮರಣೆ

ಭಾರತೀಯ ಕ್ರಿಕೆಟ್ ಇತಿಹಾಸದ ಸುವರ್ಣ ದಿನ ಸ್ಮರಣೆ

ಜೂನ್ 25, 1983, ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಇತಿಹಾಸದ ಸುವರ್ಣ ದಿನ.

ಇಂದು ಅಂದರೆ, ಜೂನ್ 25, 2008, ಭಾರತ ತನ್ನ ಚೊಚ್ಚಲ ಹಾಗೂ ಇಲ್ಲಿಯವರೆಗಿನ ಏಕೈಕ ವಿಶ್ವಕಪ್ ಗಳಿಸಿ 25 ವರ್ಷಗಳು ಕಳೆದಿವೆ. 25 ವರ್ಷಗಳ ಹಿಂದೆ ಇತಿಹಾಸ ಸೃಷ್ಟಿಸಲಾದ ಇಂದಿಗೂ ಕ್ರಿಕೆಟ್ ಕಾಶಿ' ಎಂದೇ ಖ್ಯಾತವಾದ ಇಂಗ್ಲೆಂಡ್‌‍ನ ಲಾರ್ಡ್ಸ್ ನಲ್ಲಿ ಅಂದಿನ ಭಾರತ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್ ಮತ್ತವರ ತಂಡ ಬೆಳ್ಳಿ ಹಬ್ಬದ ಸಂಭ್ರಮಾಚರಣೆಗಾಗಿ ಸೇರಲಿದ್ದಾರೆ. ಈ ಆಚರಣೆಯ ಸೂತ್ರಧಾರಿ ವಿಶ್ವಕಪ್ ವಿಜೇತ ತಂಡದ ಪ್ರಮುಖ ಸದಸ್ಯರಾಗಿದ್ದ 'ಲಿಟ್ಲ್ ಮಾಸ್ಟರ್' ಸುನೀಲ್ ಗವಾಸ್ಕರ್.

ಅಂದು UNDERDOGS ಭಾರತ ಗೆದ್ದದ್ದಾದರೂ ಹೇಗೆ?
------------------------------------------------
1983ರ ಜೂನ್ 25. ಟಾಸ್ ಗೆದ್ದ ಭಾರತ ಮೊದಲು ಬ್ಯಾಟ್ ಮಾಡಿತು. ರಾಬರ್ಟ್ಸ್, ಮಾರ್ಶಲ್, ಗಾರ್ನರ್, ಹೋಲ್ಡಿಂಗ್‌ರ ಬೆಂಕಿಯುಗುಳುವ ಬೌಲಿಂಗ್ ದಾಳಿಯನ್ನು ಎದುರಿಸಿದ ಭಾರತ, ನಿಗದಿತ 60 ಓವರ್‌ಗಳನ್ನು ಪೂರ್ಣಗೊಳಿಸಲಾಗದೆ, 54.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು, ಬೃಹತ್ ಎನ್ನಲಾಗದಿದ್ದರೂ, ಪ್ರತಿರೋಧ ಒಡ್ಡಬಹುದಾದ 183 ರನ್ ಮೊತ್ತವನ್ನು ಕಲೆ ಹಾಕಿತು. ಮೊಹಿಂದರ್ ಅಮರ್‌ನಾಥ್ 80 ಎಸೆತಗಳನ್ನು ಎದುರಿಸಿ 26 ರನ್ ಗಳಿಸಿದರೆ, ಕೃಷ್ಣಮಾಚಾರಿ ಶ್ರೀಕಾಂತ್ 57 ಎಸೆತಗಳನ್ನು ಎದುರಿಸಿ ತಂಡದ ಅತ್ಯಧಿಕ 38 ರನ್ ಗಳಿಸಿದರು.

ವೆಸ್ಟ್ ಇಂಡೀಸ್‌ನ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಹೋಲಿಸಿದಲ್ಲಿ ಸಾಧಾರಣ ಎನ್ನಬಹುದಾದ ಭಾರತದ ಮೊತ್ತವನ್ನು ಬೆನ್ನತ್ತಿ ಆಶ್ಚರ್ಯಕರ ರೀತಿಯಲ್ಲಿ 140 ರನ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 43 ರನ್‌ಗಳ ಹೀನಾಯ ಸೋಲನ್ನು ಕಾಣುವುದರೊಂದಿಗೆ ತನ್ನ ಹ್ಯಾಟ್ರಿಕ್ ಕನಸನ್ನು ಭಗ್ನಗೊಳಿಸಿಕೊಂಡರೆ, ಭಾರತ ತನ್ನ ಚೊಚ್ಚಲ 'ವಿಶ್ವಕಪ್' ಪಡೆದು ವಿಶ್ವ ಚಾಂಪಿಯನ್ ಗರಿಯನ್ನು ಮುಕುಟಕ್ಕೇರಿಸಿಕೊಂಡಿತು.

7 ಓವರ್‌ಗಳಿಂದ ಕೇವಲ 12 ರನ್ ನೀಡಿ 3 ವಿಕೆಟ್ ಗಳಿಸಿದ 'ಜಿಮ್ಮಿ' ಮೊಹಿಂದರ್ ಅಮರ್‌ನಾಥ್ ನಿರೀಕ್ಷೆಯಂತೆ 'ಪಂದ್ಯಶ್ರೇಷ್ಟ'ರಾದರು. ಇವರಿಗೆ ಉತ್ತಮ ಸಾಥ್ ನೀಡಿದ ರೋಜರ್ ಬಿನ್ನಿ 31 ರನ್ ನೀಡಿ 3 ವಿಕೆಟ್ ಗಳಿಸಿ ವೆಸ್ಟ್ ಇಂಡೀಸ್ ಸರ್ವಪತನಕ್ಕೆ ಕಾರಣಕರ್ತರಾದರು. ಆಗ ಈಗಿನಂತೆ 'ಪಂದ್ಯ ಪುರುಷೋತ್ತಮ' ಪ್ರಶಸ್ತಿ ಇದ್ದಿದ್ದಲ್ಲಿ ನಿಸ್ಸಂದೇಹವಾಗಿ ಜಿಮ್ಮಿ ಅದನ್ನು ಪಡೆದಿರುತ್ತಿದ್ದರು.

ಇನ್ನು ಪಂದ್ಯದ 'ಹೈಲೈಟ್' ಹಾಗೂ 'ಟರ್ನಿಂಗ್ ಪಾಯಿಂಟ್' ಎಂದರೆ, ಕೇವಲ 28 ಎಸೆತಗಳನ್ನು ಎದುರಿಸಿ 33 ರನ್ ಕಲೆ ಹಾಕಿ ವೆಸ್ಟ್ ಇಂಡೀಸ್‌ನ್ನು ಗೆಲುವಿನ ಅಂಚಿಗೆ ಕರೆದೊಯ್ದು ಬಿಡುತ್ತಾರೇನೋ ಎಂದು ಭಾರತದ ಪಾಳಯದಲ್ಲಿ ಆತಂಕ ಮೂಡಿಸಿದ್ದ ದೈತ್ಯ ವಿವಿಯನ್ ರಿಚರ್ಡ್ಸ್, ಟಾಪ್ ಎಜ್ ಮಾಡಿ ಮಿಡ್ ವಿಕೆಟ್‌ಗೆ ಆಕಾಶದಲ್ಲಿ ಹೊಡೆದ ಚೆಂಡನ್ನು ಭಾರತ ತಂಡದ ನಾಯಕ ಕಪಿಲ್ ಗಾವುದ ದೂರ ಬೆನ್ನತ್ತಿ ಹಿಡಿದದ್ದು. ನಿಸ್ಸಂಶಯವಾಗಿ ಅದು ಭಾರತದ ಗೆಲುವಿಗೆ ಮುನ್ನುಡಿ ಹಾಡಿದ ಚಾರಿತ್ರಿಕ ಘಟನೆ.

ಈ ಚಾರಿತ್ರಿಕ ಘಟನೆಗೆ ತಂಡದ ಪ್ರತಿಯೊಬ್ಬ ಆಟಗಾರ ಕಾರಣವಾದರೂ, ಕಪಿಲ್ ತನ್ನ ನಾಯಕತ್ವ ಹಾಗೂ ಕ್ರೀಡಾ ಮನೋಭಾವ ಹಾಗೂ ವೈಯುಕ್ತಿಕ ಪ್ರದರ್ಶನದ ಮೂಲಕ ತಂಡದ ಇನ್ನಿತರ ಸದಸ್ಯರಿಗೆ ಮಾದರಿಯಾಗುವುದರೊಂದಿಗೆ 'ಅಸಾಧ್ಯವನ್ನು ಸಾಧ್ಯವಾಗಿಸಿದ್ದು'. ಇದಕ್ಕೆ ಅತ್ಯುತ್ತಮ ಉದಾಹರಣೆ ಜಿಂಬಾಬ್ವೆ ವಿರುದ್ಧದ ನಿರ್ಣಾಯಕ ಪಂದ್ಯವೊಂದರಲ್ಲಿ ಭಾರತ 17 ರನ್ ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದಾಗ ನಾಯಕ ಕಪಿಲ್ ಹೆಬ್ಬಂಡೆಯಂತೆ ನಿಂತು ಬಾರಿಸಿದ ಅಜೇಯ 175 ರನ್. ಈ ಮ್ಯಾರಥಾನ್ ಓಟ ಸುಮಾರು ವರ್ಷಗಳ ಕಾಲ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಬ್ಯಾಟ್ಸ್ ಮನ್ ಒಬ್ಬ ಗಳಿಸಿದ ಗರಿಷ್ಟ ಮೊತ್ತವಾಗಿತ್ತು. ದುರದೃಷ್ಟವಶಾತ್ ಅಂದು ಬಿಬಿಸಿ ಮುಷ್ಕರ ಹೂಡಿದ್ದರಿಂದಾಗಿ ಆ ಪಂದ್ಯದ ಯಾವುದೇ ವಿಡಿಯೋ ದಾಖಲೆಗಳು ಇಲ್ಲವಾದ ಕಾರಣ ನಮಗಾರಿಗೂ ಕಪಿಲ್ ವೀರಾವೇಶ ನೋಡುವ ಭಾಗ್ಯವಿಲ್ಲ.

ಇಂದು ಅಂದರೆ, ಜೂನ್ 25, 2008ರಂದು ಭಾರತೀಯ ಕ್ರಿಕೆಟ್ ಬೆಳ್ಳಿಹಬ್ಬವನ್ನು ಆಚರಿಸಲು, ರಾಷ್ಟ್ರೀಯ ಕ್ರೀಡೆ ಹಾಕಿಯ ಬದಲು ಕ್ರಿಕೆಟ್ ದೇಶದ ಧರ್ಮವಾಗಿ ರಾರಾಜಿಸುವಂತಾಗಲು 1983 ಪ್ರುಡೆನ್ಶಿಯಲ್ ವಿಶ್ವಕಪ್ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ವಿಸ್ಮಯಗಳ ಕಣಜ 1983 ಪ್ರುಡೆನ್ಶಿಯಲ್ ವಿಶ್ವಕಪ್
----------------------------------------
ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್‌ನಿಂದ ಬೇಸತ್ತಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆ ನೀಡುವ ಸಲುವಾಗಿ ಹುಟ್ಟಿಕೊಂಡ ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್, ತನ್ನ ಮೊತ್ತ ಮೊದಲ ವಿಶ್ವಕಪ್ ಕಂಡದ್ದು 1975ರಲ್ಲಿ.

ಪ್ರಬಲ ವೆಸ್ಟ್ ಇಂಡೀಸ್ ಚೊಚ್ಚಲ ವಿಶ್ವಕಪ್‌ನ್ನು ತನ್ನ ಮಡಿಲಿಗೆ ಹಾಕಿಕೊಂಡಿತಲ್ಲದೆ, 1979ರಲ್ಲಿ ನಡೆದ ಎರಡನೇ ವಿಶ್ವಕಪ್‌ನ್ನು ಕೂಡ ತನ್ನದಾಗಿಸಿಕೊಳ್ಳುವುದರೊಂದಿಗೆ UNBEATABLE ಆಗಿ ಉಳಿಯಿತಲ್ಲದೆ, ಹ್ಯಾಟ್ರಿಕ್‌ ಗಳಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿತ್ತು.

ಮೂರನೇ ವಿಶ್ವಕಪ್ 1983ರ ಜೂನ್ 9ರಂದು ಇಂಗ್ಲೆಂಡ್‌ನಲ್ಲಿ ಆರಂಭವಾಯಿತು. ಜೂನ್ 25ರವರೆಗೆ ನಡೆದ ಆ ಪಂದ್ಯಾವಳಿಯಲ್ಲಿ ಒಟ್ಟು ವಿಶ್ವದ 8 ದೇಶಗಳು ಭಾಗವಹಿಸಿದ್ದವು. ಈಗಿನಂತೆ ಬಣ್ಣಬಣ್ಣದ ಬಟ್ಟೆ, ಬಿಳಿಯ ಚೆಂಡು ಇರದ ಕಾಲ ಅದು. ಟೆಸ್ಟ್, ಒನ್ ಡೇ ಮ್ಯಾಚ್‌ಗಳೆರಡರಲ್ಲೂ ಬಿಳಿಯ ಬಟ್ಟೆಯನ್ನೇ ಧರಿಸಬೇಕಿತ್ತು, ಎರಡೂ ಪಂದ್ಯಗಳನ್ನು ಕೆಂಪು ಚೆಂಡಿನಲ್ಲೇ ಆಡಬೇಕಿತ್ತು. ಇನ್ನು ಪಂದ್ಯವು ಈಗಿನಂತೆ 50 ಓವರ್ ಆಗಿರದೆ, 60 ಓವರ್‌ಗಳ ಸುದೀರ್ಘ ಪಂದ್ಯವಾಗಿರುತ್ತಿತ್ತು.

ಇನ್ನು ವಿಶ್ವಕಪ್ ಪಂದ್ಯಾವಳಿಗೆ ಹಿಂದಿರುಗುವುದಾದರೆ, ಈ ಮೊದಲೇ ಹೇಳಿದ ಹಾಗೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಇಂಗ್ಲೆಂಡ್, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಸೇರಿದಂತೆ ವಿಶ್ವದ 8 ದೇಶಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. 8 ದೇಶಗಳ ತಂಡಗಳನ್ನು ಎ ಮತ್ತು ಬಿ ಎಂದು ಒಂದು ಗುಂಪಿನಲ್ಲಿ 4 ತಂಡಗಳಂತೆ 2 ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು.

ಪ್ರತಿ ತಂಡ ತನ್ನದೇ ಗುಂಪಿನ ಇತರ ತಂಡಗಳೊಂದಿಗೆ ಎರಡೆರಡು ಪಂದ್ಯಗಳನ್ನು ಆಡಬೇಕಿತ್ತು. ಎರಡೂ ಗುಂಪಿನಿಂದ ಎರಡೆರಡು ಅಗ್ರ ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತಿದ್ದವು. ಸೆಮಿಫೈನಲ್‌ನಲ್ಲಿ ವಿಜೇತವಾದ ಎರಡು ತಂಡಗಳು ಫೈನಲ್‌ನಲ್ಲಿ ಸೆಣಸುತ್ತಿದ್ದವು.

ಎ ಗುಂಪಿನಲ್ಲಿ ಇಂಗ್ಲೆಂಡ್, ಪಾಕಿಸ್ತಾನ, ನ್ಯೂಜಿಲ್ಯಾಂಡ್ ಹಾಗೂ ಶ್ರೀಲಂಕಾ ತಂಡಗಳಿದ್ದರೆ, ಬಿ ಗುಂಪಿನಲ್ಲಿ ವೆಸ್ಟ್ ಇಂಡೀಸ್, ಭಾರತ, ಆಸ್ಟ್ರೇಲಿಯ ಹಾಗೂ ಜಿಂಬಾಬ್ವೆ ತಂಡಗಳಿದ್ದವು.

ಈ ವಿಶ್ವಕಪ್‌ನ ಅತ್ಯಂತ ಅಚ್ಚರಿಯ ಸಂಗತಿಯೆಂದರೆ, ಈ ಪಂದ್ಯಾವಳಿಯ ಆರಂಭದಲ್ಲಿ UNDERDOGS ಎಂದೇ ಪರಿಗಣಿಸಲಾಗಿದ್ದ ಭಾರತ ಮತ್ತು ಜಿಂಬಾಬ್ವೆ, ಹಾಟ್ ಫೇವರಿಟ್ಸ್ ಎಂದು ಪರಿಗಣಿಸಲಾಗಿದ್ದ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯ ತಂಡಗಳನ್ನು ಸೋಲಿಸುವುದರೊಂದಿಗೆ ಈ ವಿಶ್ವಕಪ್ ನಿರೀಕ್ಷಿತ ಫಲಿತಾಂಶ ನೀಡದೆ, ಅಚ್ಚರಿಯ ಫಲಿತಾಂಶ ನೀಡುವ ಮುನ್ಸೂಚನೆ ನೀಡಿದ್ದವು. ಆದರೂ, ಕ್ಲೈವ್ ಲಾಯ್ಡ್, ಗಾರ್ಡನ್ ಗ್ರೀನಿಜ್, ವಿವಿಯನ್ ರಿಚರ್ಡ್ಸ್ ರಂತಹ ಬ್ಯಾಟಿಂಗ್ ದೈತ್ಯರು ಹಾಗೂ ರಾಬರ್ಟ್ಸ್, ಮಾರ್ಶಲ್, ಗಾರ್ನರ್, ಹೋಲ್ಡಿಂಗ್‌ರಂತಹ ಬೌಲಿಂಗ್ ದೈತ್ಯರನ್ನು ಒಳಗೊಂಡಿದ್ದ ಕ್ಲೈವ್ ಲಾಯ್ಡ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡವನ್ನು ಯಾವ ತಂಡವೂ ಸೋಲಿಸಲಾರದು. ಮಾತ್ರವಲ್ಲ, ಈಗಾಗಲೇ ಮೊದಲೆರಡು ವಿಶ್ವಕಪ್‌ನ್ನು ತನ್ನ ಮುಡಿಗೇರಿಸಿಕೊಂಡಿರುವ ಈ ತಂಡ ಈ ಬಾರಿಯೂ ಗೆಲ್ಲುವುದರೊಂದಿಗೆ ಹ್ಯಾಟ್ರಿಕ್ ಸಾಧಿಸದೆ ಇರಲಾರದು ಎಂದೇ ಭಾವಿಸಿದ್ದರು.

ಆದರೆ, ಇತ್ತೀಚೆಗೆ ತಾನೆ ಮುಗಿದ ಐಪಿಎಲ್‌ನ ಚೊಚ್ಚಲ ಪಂದ್ಯಾವಳಿಯ ಆರಂಭದಲ್ಲಿ UNDERDOGS ಎಂದು ಪರಿಗಣಿಸಲಾಗಿದ್ದ 'ರಾಜಸ್ತಾನ್ ರಾಯಲ್ಸ್' ಬೃಹತ್ ಮೊತ್ತದ ಕಪ್‌ನ್ನು ತನ್ನದಾಗಿಸಿಕೊಂಡ ಹಾಗೆ ಇಲ್ಲೂ ಕೂಡ ಇತಿಹಾಸ ಘಟಿಸಿಹೋಯಿತು!

ಎ ಗುಂಪಿನಿಂದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್ ಪ್ರವೇಶಿಸಿದರೆ, ಬಿ ಗುಂಪಿನಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಪ್ರವೇಶಿಸಿದವು.

ಸೆಮಿಫೈನಲ್ ಹಣಾಹಣಿ
---------------------------
ಜೂನ್ 22ರಂದೇ ಎರಡೂ ಸೆಮಿಫೈನಲ್ ಪಂದ್ಯಗಳು ನಡೆದವು. ಮೊದಲನೆಯ ಪಂದ್ಯ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಇಂಗ್ಲೆಂಡ್ ಮತ್ತು ಭಾರತದ ನಡುವೆ ನಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 213 ರನ್‌ಗಳ ಆಗಿನ ಕಾಲಕ್ಕೆ ಸವಾಲೆಸೆವ ಮೊತ್ತವನ್ನೇ ನೀಡಿತಾದರೂ, ಈ ಮೊದಲೇ ಬಲಿಷ್ಟ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಆತ್ಮವಿಶ್ವಾಸ ಕುದುರಿಸಿಕೊಂಡಿದ್ದ ಭಾರತ, ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರುವುದರೊಂದಿಗೆ ಮೊತ್ತಮೊದಲ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿತು. ಈ ಗೆಲುವಿಗೆ 11 ಓವರ್‌ಗಳಲ್ಲಿ 35 ರನ್ ನೀಡಿ 3 ವಿಕೆಟ್ ಕಬಳಿಸಿದ ನಾಯಕ ಕಪಿಲ್ ದೇವ್, ಬ್ಯಾಟಿಂಗ್‌ನಲ್ಲಿ 61 ರನ್ ಗಳಿಸಿದ ಯಶ್‌ಪಾಲ್ ಶರ್ಮ ಹಾಗೂ 32 ಎಸೆತಗಳಲ್ಲಿ ಸಂದೀಪ್ ಪಾಟೀಲ್‌ ಬಾರಿಸಿದ ಬಿರುಸಿನ 51 ರನ್, ಬೌಲಿಂಗ್‌ನಲ್ಲಿ 2 ವಿಕೆಟ್ ಗಳಿಸಿದ್ದಲ್ಲದೆ, ಬ್ಯಾಂಟಿಗ್‌ನಲ್ಲಿಯೂ ಮಿಂಚಿ 42 ರನ್ ಬಾರಿಸಿ 'ಪಂದ್ಯಶ್ರೇಷ್ಟ' ಪ್ರಶಸ್ತಿಗೆ ಭಾಜನರಾದ 'ಜಿಮ್ಮಿ' ಮೊಹಿಂದರ್ ಅಮರ್‌ನಾಥ್‌‌ರ ಆಲ್‌ರೌಂಡ್ ಪ್ರದರ್ಶನ ಕಾರಣವಾಯಿತು. ಮೊದಲೆರಡು ವಿಶ್ವಕಪ್‌ಗಳಿಂದ ಕೇವಲ ಒಂದು ಪಂದ್ಯವನ್ನಷ್ಟೆ ಗೆದ್ದಿದ್ದ ಭಾರತ, 3 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಹೊಸ ಅಧ್ಯಾಯ ಬರೆಯಿತು.

ಎರಡನೇ ಸೆಮಿಫೈನಲ್‌ ಅದೇ ದಿನ ಲಂಡನ್‌ನ ಓರಲ್‌ನಲ್ಲಿ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆಯಿತು. ಟಾಸ್ ಗೆದ್ದ ವೆಸ್ಟ್ ಇಂಡೀಸ್, ಪಾಕಿಸ್ತಾನಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ವೇಗ ದೈತ್ಯರಾದ ಮಾಲ್ಕಂ ಮಾರ್ಶಲ್ ಹಾಗೂ ಆಂಡಿ ರಾಬರ್ಟ್ಸ್ 23 ರನ್ ನೀಡಿ ತಲಾ 2 ವಿಕೆಟ್ ಗಳಿಸುವುದರೊಂದಿಗೆ ಪಾಕ್ ನಿಯಂತ್ರಣಕ್ಕೆ ಕಾರಣರಾದರು. ಪಾಕ್ ಪರ ಮೊಹ್ಸಿನ್ ಖಾನ್ ಮಾತ್ರ ವೆಸ್ಟ್ ಇಂಡೀಸ್ ಬೌಲಿಂಗ್ ದೈತ್ಯರ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿ 176 ಎಸೆತಗಳಲ್ಲಿ 70 ರನ್ ಗಳಿಸಿ ಗೌರವ ಮೊತ್ತ ಕಲೆ ಹಾಕಲು ಕಾರಣರಾದರು. ಪಾಕಿಸ್ತಾನ 8 ವಿಕೆಟ್ ಕಳೆದುಕೊಂಡು ಗಳಿಸಿದ್ದ 184ರನ್‌ಗಳ ಸಾಧಾರಣ ಮೊತ್ತವನ್ನು ದೈತ್ಯ ವೆಸ್ಟ್ಇಂಡೀಸ್ ನಿರಾಯಾಸವಾಗಿ ಕೇವಲ 4 ವಿಕೆಟ್ ಕಳೆದುಕೊಂಡು ಗಳಿಸಿತು. 96 ಎಸೆತಗಳನ್ನು ಎದುರಿಸಿ 11 ಬೌಂಡರಿ, 1 ಸಿಕ್ಸರ್ ಗಳಿಸಿದ ವಿವಿಯನ್ ರಿಚರ್ಡ್ಸ್ ಆಕ್ರಮಣಕಾರಿ 80 ರನ್‌ ಸಿಡಿಸಿ ತಮ್ಮ ತಂಡಕ್ಕೆ ನಿರಾಯಾಸ ಗೆಲುವನ್ನು ತಂದಿತ್ತು 'ಪಂದ್ಯಶ್ರೇಷ್ಟ'ರಾದರು.

ಈ ಮೂಲಕ ಲೀಗ್ ಹಂತದಲ್ಲಿ ತನ್ನನ್ನು ಈ ಸೋಲಿಸಿದ್ದ ಭಾರತವನ್ನು ಮಣಿಸುವುದರೊಂದಿಗೆ ತನ್ನ ಜಿದ್ದನ್ನು ತೀರಿಸಿಕೊಳ್ಳುವುದು ಮಾತ್ರವಲ್ಲದೆ, ಹ್ಯಾಟ್ರಿಕ್ ಸಾಧನೆ ಮಾಡುವ ಹಂಬಲ ಹೊತ್ತ ವೆಸ್ಟ್ಇಂಡೀಸ್ ಸತತ ಮೂರನೇ ಬಾರಿ ಫೈನಲ್‌ಗೆ ಮುನ್ನಡೆಯಿತು.

ಅಲ್ಲಿಗೆ ಫೈನಲ್‌ನಲ್ಲಿ ಭಾರತ-ವೆಸ್ಟ್ಇಂಡೀಸ್‌ ಮುಖಾಮುಖಿಗೆ ಕಣ ಸಜ್ಜಾಯಿತು. ಆನಂತರ ನಡೆದದ್ದೆಲ್ಲವೂ ಇತಿಹಾಸ.

Rating
No votes yet