ಒಂದಷ್ಟು ಗೀಚಿದ್ದು

ಒಂದಷ್ಟು ಗೀಚಿದ್ದು

ಒಂದಷ್ಟು ಗೀಚಿದ್ದು

ಏನಾದರೂ ಸೀರಿಯಸ್ ಆಗಿ ಬರೆಯೋಣವೆಂದರೆ ಸಮಯವಿಲ್ಲ. ಸಮಯವಿದ್ದಾಗ ಟೈಪ್ ಮಾಡೋಕ್ಕೆ ಸೋಮಾರಿತನ - ಬೇರೆ ಕೆಲಸಕ್ಕೆ ನೆಗೆದು ಬಿಡುವ ಮನಸ್ಸು. ಬರೆದದ್ದು ಕೆಲವು ಅರ್ಧಕ್ಕೇ ನಿಂತು ಕಂಪ್ಯೂಟರಿನಲ್ಲಿ ಹಾಯಾಗಿ ಮಲಗಿವೆ. ಭಾಷಾ ಜ್ಞಾನವೂ ಈ ನಿಟ್ಟಿನಲ್ಲಿ ಒಂದಷ್ಟು ತೊಡಕು - ಬರೆಯಲು ಹೋದರೆ ಪದಗಳೇ ಹೊಳೆಯದು. ಕೊನೆಗೆ ಹಲವು ಬಾರಿ ಬರೆಯೋ 'ಮೂಡು' ಇಲ್ಲದೆ ಏನೂ ಬರೆಯದೆ ಮನಸ್ಸಿನಲ್ಲಿದ್ದದ್ದನ್ನು ನುಂಗಿಕೊಂಡುಬಿಟ್ಟದ್ದೂ ಉಂಟು. ಈ ನಡುವೆ ಒಂದಷ್ಟು randomಆಗಿ ಗೀಚಿದ್ದು (ಅಲ್ಲ, ಕುಟ್ಟಿದ್ದು, ಟೈಪ್ ಮಾಡಿದ್ದು) ಕೆಳಗಿದೆ:

*******

'ಅಮಿತಾಭ್ ನಟಿಸಿದ' ಕನ್ನಡದ ಚಿತ್ರ

ಮೊನ್ನೆ ಹಾಗೆಯೇ ಇಂಟರ್ನೆಟ್ಟಿನಲ್ಲಿ ಕಳೆದುಹೋಗಿದ್ದಾಗ ಇದು ಓದಲು ಸಿಕ್ಕಿತು. "Amitabh´s Kannada (Debut) Film Celebrates Silver Jubilee" ಎಂಬುದು ಆ ಲೇಖನದ ಶೀರ್ಷಿಕೆ. ಹಾಗಂದರೇನಾಯಿತು? ಅಮಿತಾಭ್ ನಟಿಸಿದ್ದರಿಂದ ಇದು ಸಿಲ್ವರ್ ಜುಬಿಲಿಯ ಜಯಭೇರಿ ಬಾರಿಸಿತು ಎಂಬಂತೆಯೋ? ಎಷ್ಟು ತಮಾಷೆ ಮತ್ತು ವಿಡಂಬನೆ ನೋಡಿ. :)

*******

'ನಾರ್ನಿಯ'

'ನಾರ್ನಿಯ ಕ್ರಾನಿಕಲ್ಸ್' ಬಗ್ಗೆ ಇತ್ತೀಚೆಗೆ ತಿಳಿದುಬಂತು. ಹ್ಯಾರಿ ಪಾಟರ್, ಲಾರ್ಡ್ ಆಫ್ ದ ರಿಂಗ್ಸ್ ನಂತೆ ಇವೂ ಕೂಡ. ಓದಲು ಚೆನ್ನಾಗಿದೆ.  ಆದರೂ ಬ್ರಿಟಿಷರಂತೆ ಆಲೋಚಿಸದವರಿಗೆ ಕೆಲವೊಂದು ಅಂಶಗಳು ತಮಾಷೆಯಾಗಿಯೂ, ಕೆಲವೊಂದು ಬಾರಿ ಅಸಹ್ಯವಾಗಿಯೂ ಕಾಣಸಿಗುತ್ತದೆ. ಉದಾಹರಣೆಗೆ ರಾಣಿಗೆ, knightsಗಳಿಗೆ ಕೊಡುವ ಪ್ರಾಮುಖ್ಯತೆ ;) ಹುಡುಗನೊಬ್ಬನಿಗೆ "ನಿನ್ನನ್ನು knight ಮಾಡಲಾಗಿದೆ, Sir ಅಬಕಡ!" ಎಂದು ಅದರಲ್ಲಿರುವ ಸಿಂಹರಾಜ ಅಸ್ಲನ್ ಹೇಳುವಾಗ ಗೊಳ್ಳೆಂದು ನಗು ಬರುತ್ತದೆ. "ತಗೋ ಅತ್ಲಾಗೆ, ಪ್ರಾಣೀನೂ ಈಗ knighthood ಕೊಡೋಕ್ ಪ್ರಾರಂಭಿಸಿಬಿಡ್ತು" ಎಂದನಿಸಿಬಿಡಬಹುದು. ಕಥೆಯಲ್ಲಿ ಬರುವ ಮಕ್ಕಳನ್ನು (intelligent designಗೆ ಹೋರಾಡಿದವರಂತೆ) ಆಡಮ್ ಮತ್ತು ಈವ್ ಮಕ್ಕಳು ಎಂದು ಕರೆದಾಗ ನಿಮಗೆ ಸಹ್ಯವಾಗದೇ ಹೋಗಬಹುದು. (ನನಗೆ ಮನುಷ್ಯರು ಮನುವಿನ ಮಕ್ಕಳೆನ್ನುವುದರಲ್ಲೂ ವಿಶ್ವಾಸವಿಲ್ಲ).
ನಾರ್ನಿಯವನ್ನು ಎಷ್ಟೊಂದು perspectiveಗಳಲ್ಲಿ ನೋಡಬಹುದು. ಪಾಶ್ಚಿಮಾತ್ಯ ಓದುಗರಿಗೆ ತುಂಬಾ ಅಪೀಲಿಂಗ್ ಆಗಿರುವ fiction ಇದು.

*******

ಬೆಂಗಳೂರಿಗೆ ಉಬುಂಟು ಸ್ಥಾಪಕ

ಉಬುಂಟು ಲಿನಕ್ಸ್ ಸ್ಥಾಪಕ ಮಾರ್ಕ್ ಶಟ್ಟಲ್ ವರ್ಥ್ ಬೆಂಗಳೂರಿಗೆ ಇದೇ ತಿಂಗಳ ೧೯, ೨೦ರಂದು ಬರುವವನಿದ್ದಾನೆ. ಅವ ಇಲ್ಲಿ ಕೆಲವು ಕಂಪೆನಿಗಳವರನ್ನು ಮೀಟ್ ಮಾಡುವವನಿದ್ದಾನೆ. ಬ್ಲಗ್ (ಬೆಂಗಳೂರು ಲಿನಕ್ಸ್ ಗ್ರೂಪು) ಉದ್ದೇಶಿಸಿ ಕೂಡ ಮಾತನಾಡುವವನಿದ್ದಾನಂತೆ.

*******

ಕಡ್ಡಾಯ ಕನ್ನಡ

ಇತ್ತೀಚೆಗೆ ಕೆಲವರು ನನಗೆ ಇಂಗ್ಲಿಷಿನಲ್ಲಿ ಇ-ಮೇಯ್ಲ್ ಮಾಡುವಾಗ "ಆಂಗ್ಲದಲ್ಲಿದೆ, ಕ್ಷಮಿಸಿ" ಎಂದು ಬರೆಯುವುದನ್ನು ಪ್ರಾರಂಭಿಸಿಬಿಟ್ಟಿದ್ದಾರೆ. ಇದು ಹೇಗೆ, ಎಂದಿನಿಂದ ನನಗೆ ಇ-ಮೇಯ್ಲ್ ಮಾಡುವವರಲ್ಲಿ convention ಆಯಿತೆಂಬುದು ನನಗೆ ತಿಳಿಯದು. ನಾನೇನೂ ಕನ್ನಡ activist ಅಲ್ಲ. ನೀವು ಇಂಗ್ಲಿಷಿನಲ್ಲಿ ಬರೆದರೆ ನನ್ನ ಅಭ್ಯಂತರವೇನೂ ಇಲ್ಲ, ಸಿಟ್ಟು ಬರೋ ಪ್ರಶ್ನೇನೆ ಇಲ್ಲ. ಇಂಗ್ಲಿಷ್ ನಲ್ಲಿ ಬರೆದರೆ ಇಂಗ್ಲಿಷಿನಲ್ಲಿ ಉತ್ತರ ಕೊಡುವೆ. ಕನ್ನಡದಲ್ಲಿ ಬರೆದರೆ ಕನ್ನಡದಲ್ಲಿ ಉತ್ತರ ಕೊಡುವೆ, ಅಷ್ಟೆ. ಆದರೆ ಕನ್ನಡಕ್ಕೆ ರೋಮನ್ ಲಿಪಿ ಬಳಸಿ ಮಾತ್ರ ನನಗೆ ಇ-ಮೇಯ್ಲ್ ಮಾಡಬೇಡಿ... ನನಗದು punishment ಕೊಟ್ಟಂತೆ - ಓದಲು ಹರಸಾಹಸ ಮಾಡ್ಬೇಕು.

*******

VTUನ ಕನ್ನಡ ತಾಂತ್ರಿಕ ಕಾಲೇಜು

VTU ಮೊನ್ನೆ ಮೊನ್ನೆ 'ಕನ್ನಡದಲ್ಲಿ ಪಾಠ ಹೇಳುವ ತಾಂತ್ರಿಕ ಕಾಲೇಜು ಸ್ಥಾಪಿಸುತ್ತೇವೆ' ಎಂದು ಅನೌನ್ಸ್ ಮಾಡಿದೆಯಂತೆ. ಕನ್ನಡ ಚಳುವಳಿಗಾರರು ಈಗ ಸ್ವಲ್ಪ ಸಂತಸ ಪಡಬಹುದು. ಆದರೆ ನನಗೆ, VTU ಕೆಳಗೇ ಓದಿದವನಿಗೆ ಇದು ಯಾಕೋ ಇನ್ನಷ್ಟು ತೊಡಕು ತಂದೊಡ್ಡುವುದು ಎಂದನಿಸುತ್ತದೆ. ಕನ್ನಡದ ಬೀಡಾದ (ಬೀಡಾಗಿದ್ದ?) ಮೈಸೂರು ವಿಶ್ವವಿದ್ಯಾಲಯದಲ್ಲೋ, ಇನ್ನೂ ಕನ್ನಡದ ಬಗ್ಗೆ ಒಂದಷ್ಟಾದರೂ ಕಾಳಜಿ ಇರುವ ಇತರ ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲೋ ಇದು ಮಾಡಿದ್ದಿದ್ದರೆ ಹೆಚ್ಚು ಸರಿಯಾಗಿರುತ್ತಿತ್ತೋ ಏನೋ. ತಪ್ಪು ತಪ್ಪಾಗಿ ಪಠ್ಯಗಳನ್ನು ತಯಾರಿಸಿ ಹೇಳಿಕೊಟ್ಟರೆ ಅದರಿಂದ ಹೊರಬರುವ ಇಂಜಿನೀಯರುಗಳದ್ದು ಏನು ಗತಿ? ಅಲ್ಲೂ ಇಲ್ಲ, ಇಲ್ಲೂ‌ ಇಲ್ಲವೆಂಬ ತ್ರಿಶಂಖುಗೆ ಸೇರಿಬಿಡುತ್ತಾರೆ.
ಅಷ್ಟೇ ಅಲ್ಲ, ಬೇಸಿಕ್ಸ್ ನಿಂದ ಹಿಡಿದು ಕನ್ನಡದಲ್ಲಿ ತರುತ್ತಾ ಹೋಗಿ ಆದಮೇಲೆ ತಾಂತ್ರಿಕ ಶಿಕ್ಷಣದಲ್ಲೂ ಕನ್ನಡ ಪ್ರಯೋಗ ಮಾಡಿದ್ದಿದ್ದರೆ ಸರಿಯಿರುತ್ತಿತ್ತೋ ಏನೋ. ತಿಳಿದವರು ಬೆಳಕು ಚೆಲ್ಲಬೇಕು. ಇನ್ನೂ ಸರಿಯಾಗಿ ತಾಂತ್ರಿಕ ಪಠ್ಯಗಳನ್ನು ರೂಪಿಸಿರದ ಕನ್ನಡ ಮಾಧ್ಯಮದಲ್ಲಿ ಓದಿದವರೆಂದು, ಸರಿಯಾಗಿ ಕಲಿತಿಲ್ಲವೆಂದು, ಯಾರೂ ಆ ಕಾಲೇಜಿನ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಬಾರದು.
ಅಲ್ಲದೆ, ಇಂಗ್ಲಿಷಿನಲ್ಲಿ ಮಾತುಕತೆ, ಅರಿವು ಕೂಡ ಈಗಿನ ಸನ್ನಿವೇಶದಲ್ಲಿ ಪ್ರಧಾನವಾದುದೆಂಬುದನ್ನು ಅವರು ಮರೆತರೋ ಹೇಗೆ? ಆಂಗ್ಲ ಮಾಧ್ಯಮದಲ್ಲಿ ಓದಿದ ನಾನೇ ಬೆಂಗಳೂರಿಗೆ ಬಂದ ಹೊಸತರಲ್ಲಿ ಇಂಗ್ಲಿಷಿನಲ್ಲಿ 'ಟಸ್ ಪುಸ್' ಎಂದುಕೊಂಡು ಅಮೇರಿಕನ್ನರಂತೆ ಆಡುವವರನ್ನು ನೋಡಿ ಅರ್ಥ ಮಾಡಿಕೊಳ್ಳಲಾಗದೆ, ಅವರನ್ನು ಮಾತನಾಡಿಸಲೂ ಆಗದೆ ಕಂಗಾಲಾಗಿದ್ದೆ. ಇನ್ನು ಇಂಗ್ಲಿಷಿನಲ್ಲಿ converse ಮಾಡದೆ ಗ್ರಾಜುಯೇಶನ್ ಕೂಡ ಮಾಡಿಕೊಳ್ಳುವವರಿಗೆ ಒಂದು alien ಸಂಸ್ಕೃತಿಗೆ ಬಿಟ್ಟಹಾಗಾಗುತ್ತೆ, ಕಂಪೆನಿ ಸೇರಿದಾಗ. ಆದ್ದರಿಂದ ಇಂಗ್ಲಿಷೂ ಬೇಕು, ಕನ್ನಡವೂ ಬೇಕು ಎಂದು ಅನಂತಮೂರ್ತಿಯವರ ಥರಾ ಹೇಳಬೇಕಾಗಿ ಬರಬಹುದು.
ಇನ್ನೂ ಬಹಳಷ್ಟು ತೊಡಕುಗಳು ಮನಸ್ಸಿಗೆ ಬರುತ್ತಿವೆ. ಒಮ್ಮೆ ಇದರ ಬಗ್ಗೆ ವಿಸ್ತಾರವಾಗಿ ಬರೆದು ಚರ್ಚೆಯೂ ಮಾಡಬಹುದು.

*******

ಇ-ಮೇಯ್ಲು ತಲೆನೋವು

ಇತ್ತೀಚೆಗೆ ಪ್ರತಿದಿನವೂ ಇ-ಮೇಯ್ಲುಗಳ ಮಹಾಪೂರ. "ಯುನಿಕೋಡ್ ಅಂದ್ರೇನ್ರಿ?" "ಇದನ್ನ ಹೇಗೆ enable ಮಾಡೋದ್ರಿ?" "ಅದು ಮ + ಊ ಸರಿಯಾಗಿ ಬರ್ತಿಲ್ಲವಲ್ರಿ!" - ಹೀಗೆಯೇ ಪ್ರತಿ ದಿನವೂ ಅದೇ ವಿಷಯಗಳ ಬಗ್ಗೆ ಇ-ಮೇಯ್ಲುಗಳನ್ನೋದುತ್ತ ಅವುಗಳಿಗೆ ಅದೇ ಹಳೆಯ ಉತ್ತರಗಳನ್ನು ಕಳುಹಿಸುತ್ತ ಸಿಕ್ಕಾಪಟ್ಟೆ ಬೋರು. "ಇವರುಗಳು ಯಾರೂ ಬರೆದಿರುವ ಸಹಾಯ ಪುಟಗಳನ್ನ ಓದೋದಿಲ್ಲ ಯಾಕೆ?" ಅಂತ ಬೈದುಕೊಳ್ಳಬಹುದಷ್ಟೆ. ನಾಳೆ ಮತ್ತೆ ಇಂತಹ ಇನ್ನಷ್ಟು ಇ-ಮೇಯ್ಲುಗಳು ಬರೋದಂತೂ ನಿಲ್ಲೋದಿಲ್ಲ. ಎಲ್ಲರಿಗೂ ಕಂಪ್ಯೂಟರಿನಲ್ಲಿ ಇಂಗ್ಲಿಷ್ ಬಳಸಿದಂತೆ ಕನ್ನಡ ಬಳಸುವುದರ ಬಗ್ಗೆ ತಿಳಿಯುತ್ತದೆಯಾದರೂ, ಪುಕ್ಕಟೆ ಸಪೋರ್ಟು ದೊರೆಯುತ್ತಿದೆಯಾದರೂ ವಾರಕ್ಕೆ ಕನಿಷ್ಟಪಕ್ಷ ಆರೇಳು ಗಂಟೆಗಳಾದರೂ ಇದಕ್ಕಾಗಿ ಮೀಸಲಿಡುವಂತಾಗಿಬಿಟ್ಟಿದೆ. ನೋಡೋಣ, ಸಾಧ್ಯವಾದಲ್ಲಿ ಆದಷ್ಟು ಬೇಗೆ ಇದೆಲ್ಲದರಿಂದ ಹೊರನಡೆದು ಓದಲಿಕ್ಕೆ, ಗಣಕ ವಿಜ್ಞಾನದ ನನ್ನ ಅರಿವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಎಲ್ಲಾದರೂ ಹೋಗೋಣವೆಂದುಕೊಂಡಿದ್ದೇನೆ. ಎಷ್ಟು ಬೇಗ ಕೈಗೂಡುವುದೋ ನೋಡಬೇಕು.

Rating
No votes yet