ರಾಹು-ಕೇತು ಕಾಟ, ಮತ್ತು ಗ್ರಹಣ ಚಕ್ರ
ಹಿಂದಿನ ಭಾಗದಲ್ಲಿ ರಾಹು ಮತ್ತು ಕೇತು ಅನ್ನೋ ಬಿಂದುಗಳು ಹೇಗೆ ಆಗುತ್ತವೆ ಅನ್ನೋದರ ಬಗ್ಗೆ ಬರೆದಿದ್ದೆ. ಓದಿಲ್ಲದಿದ್ದವರು, ಇಲ್ಲಿ ಚಿಟಕಿಸಿ ನೋಡಿ. ಮತ್ತೆ ಹಾಗೇನೇ ಗ್ರಹಣ ಚಕ್ರ ಅನ್ನೋದರ ಬಗ್ಗೆಯೂ ಸ್ವಲ್ಪ. ಮತ್ತೆ ನವಗ್ರಹ ಸ್ತೋತ್ರದಲ್ಲಿರುವ ರಾಹುವಿನ ಸ್ತುತಿಯ ಬಗ್ಗೆಯೂ ಹೇಳಿದ್ದೆ, ಆದ್ರೆ ವಿವರಗಳನ್ನ ಕೊಟ್ಟಿರ್ಲಿಲ್ಲ. ಅದೆಲ್ಲ ಸ್ವಲ್ಪ ಬರೆದು ವಿವರಿಸೋಣ ಅನ್ನೋ ಯೋಚನೆ ಈಗ ಬಂತು.
ಭೂಮಿ ಸೂರ್ಯನ್ನ ಸುತ್ತೋ ಪಾತಳಿಚಂದ್ರಭೂಮಿಯನ್ನು ಸುತ್ತೋ ಪಾತಳಿ (plane) ಎರಡೂ ಬೇರೆ ಬೇರೆಯಾಗಿದ್ದು ಅವೆರಡೂ ಸಂದಿಸೋ ಎರಡು ಬಿಂದುಗಳನ್ನ ರಾಹು-ಕೇತು ಅಂತ ಕರೀತಾರೆ ಅಂತ ಹೇಳಿದ್ದೆ. ಅದನ್ನ ತೋರಿಸೋದಕ್ಕೆ ತಟ್ಟೆ-ನೀರು-ಬಕೆಟ್ ನ ಪ್ರಯೋಗ ಒಂದು ಹೇಳಿದ್ದೆ ಅಲ್ವಾ? ಈಗ ಈ ರಾಹು ಕೇತು ಎರಡೂ ತಟ್ಟೆಯ ಎರಡು ವಿರುದ್ಧ ದಿಕ್ಕಿನಲ್ಲಿರುತ್ತೆ ಅನ್ನೋದನ್ನ ಗಮನಿಸಿ. ಅಂದ್ರೆ ಅವರ್ರಡೂ ಆಕಾಶದಲ್ಲಿ ೧೮೦ ಡಿಗ್ರಿ ಅಂತರದಲ್ಲಿ ಇರುತ್ತವೆ. ಇದು ಗೊತ್ತಾಯ್ತಲ್ಲ?
ಈಗ, ಆ ಪ್ರಯೋಗವನ್ನೇ ಮುಂದುವರಿಸೋಣ. ನೀವು ಇಟ್ಕೊಂಡಿರೋ ತಟ್ಟೇನ ಇದ್ದಹಾಗೆ ಅದರ ಸುತ್ತ ಅದನ್ನೇ ತಿರುಗಿಸ್ತಾ ಇರಿ. ಇದು ಚಂದ್ರನ ಚಲನೆಯನ್ನ ಸೂಚಿಸುತ್ತೆ. ಆದ್ರೆ ಒಂದು ತಮಾಷಿ ವಿಷಯ ಏನಂದ್ರೆ, ಈ ಚಂದ್ರನ ಹಾದಿಯ ಪಾತಳಿ ಬಿಟ್ಟೂಬಿಡದೆ (continuously), ನಿದಾನವಾಗಿ, ಭೂಮಿ-ಸೂರ್ಯನ ಪಾತಳಿಗೆ ಹೋಲಿಸಿದರೆ ತಿರುಗ್ತಾ ಇರುತ್ತೆ.ಓಹೋ! ಇದ್ಯಾಕೋ ಕಷ್ಟಕ್ಕಿಟ್ಕೋತೂ ಅಂದ್ರಾ?
ಪರ್ವಾಗಿಲ್ಲ.ಒಂದೊಂದಾಗಿ ಹೆಜ್ಜೆ ಇಟ್ರೆ ಸುಲಭ ಆಗತ್ತೆ. ಈಗ ನಿಮ್ಮ ಪ್ರಯೋಗದಲ್ಲಿ, ಮೊದಲು ನೀವು ತಟ್ಟೆ ನೀರಿನಿಂದ ಅತಿ ಎತ್ತರದಲ್ಲಿರೋ ತುದಿ ಬಕೆಟ್ ನ ಹಿಡಿಕೆಯ ಒಂದು ಬದಿಯಲ್ಲಿರುತ್ತೆ ಅಂದ್ಕೊಳಿ. ಈ ಬದಿಯನ್ನ ’ಎ’ (ಎತ್ತರ ಬಿಂದು) ಅಂತ ಕರೆಯಣ. ಹಾಗಾದ್ರೆ, ತಟ್ಟೆಯ ಅತಿ ಕೆಳಭಾಗ ನೀರಿನಡಿಯಲ್ಲಿರೋದು, ಬಕೆಟ್ಟಿನ ಹಿಡಿಕೆಯ ಇನ್ನೊಂದು ಭಾಗದಲ್ಲಿರಬೇಕಲ್ಲ? ಈ ತುದಿಯನ್ನ ’ತ’ (ತಗ್ಗು ಬಿಂದು) ಅಂತ ಕರೆಯಣ.
ಈಗ ನಿಮ್ಮ ತಟ್ಟೆಯನ್ನ, ತನ್ನ ಸುತ್ತ ತಾನೇ ತಿರುಗ್ತಾ ಇರುವಾಗಲೇ, ನಿದಾನವಾಗಿ ’ಎ’ ನಲ್ಲಿರುವ ತಟ್ಟೆಯ ಮೇಲಿನ ತುದಿಯನ್ನ ಅದಿರುವ ಜಾಗದಿಂದ ಅಲುಗಿಸುತ್ತಾ, ನಿದಾನವಾಗಿ ಅದರ ವಿರುದ್ಧ ದಿಕ್ಕಿಗೆ ತೊಗೊಂಡು ಹೋಗೋದಕ್ಕೆ ಶುರು ಮಾಡಿ. ಹೀಗೆ ಮಾಡುವಾಗ, ತಟ್ಟೆ, ನೀರಿನ ಜೊತೆ ಮಾಡ್ತಾ ಇರೋ ಕೋನ (angle) ಬದಲಾಗ್ದಿರೋ ಹಾಗೆ ನೋಡ್ಕೊಳಿ.
ನೋಡ್ತಾ ನೋಡ್ತಾ ಏನಾಗತ್ತೆ? ಅತೀ ಎತ್ತರದ ತುದಿ ’ಎ’ ಇಂದ ’ತ’ ಕಡೆಗೆ ಹೋಗ್ತಾ ಇರತ್ತೆ. ಆಮೇಲೆ ಒಂದ್ಸಲ ’ಎ’ ಕಡೆಯಲ್ಲಿ, ತಟ್ಟೆಯ ನೀರಿನ ಅತಿ ತಗ್ಗಿನ ಬದಿಯೂ, ’ತ’ ಕಡೆಯಲ್ಲಿ ತಟ್ಟೆ ನೀರಿನ ಮೇಲಿರೋ ಅತೀ ಮೇಲಿನ ತುದಿಯೂ ಇರತ್ತೆ! ಇದು ನಾವು ಹೊರಟ ಸ್ಥಿತಿಗೆ ತದ್ವಿರುದ್ಧ ಅಲ್ವೇ? ಆದ್ರೆ, ನೀವು ಮಾಡ್ತಾ ಇರೋದನ್ನೇ ಮುಂದ್ವರಿಸ್ತಾ ಹೋದ್ರೆ ಏನಾಗತ್ತೆ? ಮತ್ತೆ ತಗ್ಗಿನ ಬದಿ ’ತ’ ಬಿಂದುವನ್ನೂ, ಎತ್ತರದ ಬದಿ ’ಎ’ ಬಿಂದುವನ್ನೂ ಸೇರತ್ತೆ. ಅಲ್ವಾ?
ಈಗ ನಾವು ಏನು ಮಾಡಿದ್ವಿ? ಚಂದ್ರ ಭೂಮಿ ಸುತ್ತೋ ಪಾತಳೀ (ಅಂದ್ರೆ ತಟ್ಟೆ), ಭೂಮಿ ಸೂರ್ಯನ ಸುತ್ತೋ ಪಾತಳಿಯಿಂದ (ಅಂದ್ರೆ ನೀರಿನ) ನೋಡಿದ್ರೆ, ನಿದಾನವಾಗಿ ತನ್ನ ಸಮತಲವನ್ನ ಬದ್ಲಾಯ್ಸ್ತಾ ಇರೋದು, ಆದ್ರೆ ಅದೇ ವೇಳೆಯಲ್ಲಿ, ಅವರಡರ ನಡುವಿನ ಕೋನ ಬದ್ಲಾಗ್ದೇ ಇರೋದು ಹೇಗೆ ಅನ್ನೋದನ್ನ ನಮಗ್ನಾವೇ ತೋರ್ಸಿಕೊಂಡ್ವಿ :)
ಸರಿ. ಇದು ಗೊತ್ತಾದಮೇಲೆ, ನೀವು ತಟ್ಟೆಯ ಅಂಚು ನೀರನ್ನ ಮುಟ್ತಿರೋ ಜಾಗದಲ್ಲಿರೋ ಬಿಂದುಗಳಿಗೆ ಏನಾಗತ್ತೆ ಅಂತ ಗಮನಿಸೋಣ. ಯಾಕಂದ್ರೆ, ಅವು ತಾನೇ ರಾಹು- ಕೇತು ಬಿಂದುಗಳು?
ಈಗ ಮಾಡಿದ ಪ್ರಯೋಗವನ್ನೇ (ತಟ್ಟೆಯನ್ನ ತಿರುಗಿಸೋದು) ಇನ್ನೊಂದ್ಸಲ ಮಾಡಿ. ಆದ್ರೆ ನಮ್ಮ ಈ ಬಿಂದುಗಳ ಮೇಲೆ ಒಂದು ಕಣ್ಣಿಡಿ. ಏನಾಯ್ತು ನೋಡಿ? ಆ ಬಿಂದುಗಳೂ ನಿದಾನವಾಗಿ ತಮ್ಮ ಜಾಗ ಬಿಟ್ಟು ಹೋಗಿ, ಬಕೆಟ್ಟಿನ ಬದಿಯ ಬೇರೆಬೇರೆ ಬಿಂದುಗಳಿಗೆ ಸನಿಹವಾಗುತ್ತಾ, ಕಡೆಗೆ ಮೊದಲಿದ್ದೆಡೆಗೇ ಮರಳುತ್ತವೆ. ಅಲ್ವಾ?
ಆಕಾಶದಲ್ಲಿ ಆಗೋದೂ ಅಷ್ಟೇ. ರಾಹು-ಕೇತು ಬಿಂದುಗಳು ಕಣ್ಣಿಗೆ ಕಾಣಿಸ್ದೇ ಇದ್ರೂ, ಅವು ಆಕಾಶದ ಸುತ್ತಾ ತಿರುಗುತ್ತಾ ಮತ್ತೆ ಮತ್ತೆ ಹೊರಟಲ್ಲಿಗೇ ಮರಳುತ್ತವೆ!
ಅದೇ ಕಾರಣಕ್ಕೇ ಅವನ್ನೂ ನಮ್ಮ ಹಿಂದಿನವರು ಗ್ರಹಗಳು ಅಂದಿದ್ದು! ಅಷ್ಟೇ. ಆಮೇಲೆ, ಇನ್ನೊಂದು ವಿಷ್ಯ ಏನಪ್ಪ ಅಂದ್ರೆ, ಬೇರೆ ಗ್ರಹಗಳೆಲ್ಲ ನಮಗೆ ಪಶ್ಚಿಮದಿಂದ ಪೂರ್ವಕ್ಕೆ ಹೋಗೋಹಾಗೆ ಕಾಣತ್ವೆ. ಅಂದ್ರೆ ಗುರುಗ್ರಹ, ಉದಾಹರಣೆಗೆ ಈಗ ಮಿಥುನ ರಾಶಿಯಲ್ಲಿ ಇದೆ ಅಂದ್ಕೊಳಿ. ಮುಂದಿನ ವರ್ಷ ಅದು ಕಟಕದಲ್ಲಿರುತ್ತೆ. ಅದರ ಮುಂದಿನ ವರ್ಷ ಸಿಂಹ. ಹೀಗೇ ಹೋಗ್ತಿರತ್ತೆ.
ಆದ್ರೆ, ರಾಹು-ಕೇತು ಹಾಗಲ್ಲ. ಈಗ ರಾಹು ಮೇಷದಲ್ಲಿ, ಕೇತು ತುಲಾದಲ್ಲಿ ಇತ್ತು ಅಂದ್ಕೊಳಿ (ಇವೆರಡರ ಮಧ್ಯೆ ಆರು ರಾಶಿ ಅಂತರ ಇರ್ಬೇಕು. ಯಾಕೆ ? ಸ್ವಲ್ಪ ಯೋಚಿಸಿ :) ) ಇನ್ನೊಂದು ಸ್ವಲ್ಪ ಕಾಲದ ನಂತರ, ರಾಹು ಮೀನದಲ್ಲೂ, ಕೇತು ಕನ್ಯಾದಲ್ಲೂ ಇರ್ತಾನೆ. ಇದೇ "ಮೇರುಂ ಅಪ್ರದಕ್ಷಿಣೇ ಕುರ್ವಾಣಂ" ಅಂತ ರಾಹು ಸ್ತೋತ್ರ ಹೇಳೋದರ ಒಳಗುಟ್ಟು!
ಅದ್ಸರಿ. ಗುರುವೇನೋ ಕಣ್ಣಿಗೆ ಕಾಣತ್ತೆ. ಹಾಗಾಗಿ ಅದು ಸಿಂಹದಲ್ಲೋ, ಕನ್ಯಾದಲ್ಲೋ ಎಲ್ಲಿರತ್ತೆ ಅಂತ ಕಾಣತ್ತೆ - ರಾಹು ಕೇತು ಹೇಗೆ ಗೊತ್ತಾಗತ್ತೆ ಅಂದ್ರಾ?
ಈಗ ನೋಡಿ. ರಾಹು ಕೇತು ಎಲ್ಲಿದೆ ಅಂತ ಹೇಗೆ ಗೊತ್ತಾಗತ್ತೆ? ಅವು ಇರೋಕಡೆಗೆ ಸೂರ್ಯ ಚಂದ್ರ ಬಂದಾಗ ಗ್ರಹಣ ಆಗತ್ತೆ. ಅಲ್ವಾ? ಅಂದ್ರೆ, ರಾಹು- ಕೇತುಗಳನ್ನ ನೋಡ್ದಿದ್ರೂ, ಅವುಗಳ ಪರಿಣಾಮ ನಮಗೆ ಕಾಣತ್ತೆ.
ಹಿಂದಿನವರು ಇದನ್ನ ಗಮನಿಸಿದ್ರು. ಯಾರೋ ಒಬ್ಬನ ಹತ್ತನೇ ಹುಟ್ಟಿದ ಹಬ್ಬದ ದಿನ (ಚಾಂದ್ರಮಾನದಲ್ಲಿ) - ಮಾಘ ಮಾಸದ ಅಮಾವಾಸ್ಯೆ, ಅವನೂರಲ್ಲಿ ಒಂದು ಸೂರ್ಯ ಗ್ರಹಣ ಆಗಿತ್ತು ಅಂದ್ಕೊಳಿ- ಆಗ, ಇನ್ನು ಐವತ್ನಾಕು ವರ್ಷದ ಮೇಲೊಂದು ತಿಂಗಳು ಕಳೆದ ದಿನ - ಅಂದ್ರೆ, ಅವನ ಅರವತ್ನಾಕನೇ ಹುಟ್ಟು ಹಬ್ಬವಾದಮೇಲೆ ಬರೋ ಮೊದಲಮಾವಾಸ್ಯೆಯಲ್ಲಿ, ಅಂದ್ರೆ ಆ ವರ್ಷದ ಫಾಲ್ಗುಣ ಅಮಾವಾಸ್ಯೆಯ ದಿವಸ ಇನ್ನೊಂದು ಸೂರ್ಯ ಗ್ರಹಣ ಆಗಿರ್ತಿತ್ತು! ಇವುಗಳನ್ನೇ ಕೆಲವು ಶತಮಾನಗಳ ಕಾಲ ಗಮನಿಸಿದವರಿಗೆ ಏನು ಗೊತ್ತಾಯ್ತು?
ಒಂದೇ ಜಾಗದಲ್ಲಿ ಐವತ್ನಾಕು ವರ್ಷ, ಒಂದು ತಿಂಗಳಿಗೆ ಮತ್ತೊಂದು ಗ್ರಹಣ ಆಗತ್ತೆ!
ಅಂದ್ರೆ, ಇದನ್ನ ಗ್ರಹಣ ಯಾವ ದಿವಸ ಆಗತ್ತೆ ಅನ್ನೋದಕ್ಕೆ ಬಳಸ್ಕೋಬಹುದು ಅಲ್ವಾ?
ಹೌದು. ಅದನ್ನೇ ಬಳಸ್ಕೊಂಡ್ರು ಅವರು :)
ಇದಕ್ಕೆ ಉದಾಹರಣೆಯಾಗಿ, ಮೂರು ಗ್ರಹಣ ಗಳ ಚಿತ್ರವನ್ನು ಹಾಕುವೆ (ನಾಸಾ ಗ್ರಹಣ ಪುಟದವರ ದಯದಿಂದ)
೧೯೨೬ ಜನವರಿ ೧೬ ರಂದು ಕರ್ನಾಟಕದಲ್ಲಿ ಕಂಡ ಸೂರ್ಯಗ್ರಹಣ
೧೯೮೦ ಫೆಬ್ರವರಿ ೧೬ರಂದು ಕರ್ನಾಟಕದಲ್ಲಿ ಕಂಡ ಸೂರ್ಯಗ್ರಹಣ
೨೦೩೪ ಮಾರ್ಚ್ ಮಾರ್ಚ್ ೨೦ರಂದು ಕರ್ನಾಟಕದಲ್ಲಿ ಕಾಣಲಿರುವ ಸೂರ್ಯಗ್ರಹಣ
ಈ ಮೂರೂ, ದಿವಸಗಳಲ್ಲಿ ಕರ್ನಾಟಕದ ಯಾವುದೇ ಊರಿನಿಂದಲೂ ಗ್ರಹಣ ಕಂಡಿತ್ತು. ಇದೇ ರೀತಿಯ ಮರಳುವಿಕೆಗಳೇ ಹಿಂದಿನವರು ಆಕಾಶದ ರಹಸ್ಯಗಳನ್ನ ಅರಿಯುವುದಕ್ಕೆ ಸಹಾಯವಾದದ್ದು!
ಮತ್ತೆ, ಇನ್ನೊಂದ್ವಿಷಯ ಗಮನಿಸಿ. ಪ್ರತಿ ವರ್ಷದ ಯಾವುದೋ ಒಂದು ತಿಂಗಳು ತೊಗೊಂಡ್ರೆ, ಸೂರ್ಯ ಆಕಾಶದ ನಕ್ಷತ್ರಗಳ ಹಿನ್ನಲೆಯಲ್ಲಿ ನೋಡಿದ್ರೆ ಒಂದೇ ಜಾಗದಲ್ಲೇ ಇರ್ತಾನೆ.
ಅಂದ್ರೆ, ಮಾಘ ಅಮಾವಾಸ್ಯೆಯಲ್ಲಿ, ಪ್ರತೀ ವರ್ಷ ಸೂರ್ಯ ಕುಂಭ ರಾಶಿಯಲ್ಲೇ ಇರ್ತಾನೆ. ಹಾಗಾದ್ರೆ, ಐವತ್ನಾಕು ವರ್ಷ ಕಳೆದ ಮೇಲೂ, ಮಾಘ ಅಮಾವಾಸ್ಯೆಯ ದಿನ ಸೂರ್ಯ ಕುಂಭದಲ್ಲೇ ಇರ್ತಾನೆ ಅಂತ ತಿಳ್ಕೋಬಹುದು. ಅಲ್ವಾ?
ಆದ್ರೆ, ನಮ್ಮ ಮೇಲಿನ ಉದಾಹರಣೇಲಿ, ಮಾಘ ಮಾಸದ ಅಮಾವಾಸ್ಯೆ ದಿನ ಗ್ರಹಣ ಆಗ್ಲಿಲ್ಲ. ಬದಲಿಗೆ, ಇನ್ನೊಂದು ತಿಂಗಳು ಬಿಟ್ಟು, ಅಂದ್ರೆ, ಫಾಲ್ಗುಣ ಅಮಾವಾಸ್ಯೆ ದಿನ ಗ್ರಹಣ ಆಯ್ತು.
ಈಗ ಮತ್ತೆ ಗ್ರಹಣ ಆಗೋದು ಸೂರ್ಯ-ಚಂದ್ರ ರಾಹು-ಕೇತು ಬಿಂದುವಿನ ಸಮೀಪ ಇದ್ದಾಗ ಅನ್ನೋದನ್ನ ನೆನಪಿಸ್ಕೊಳೋಣ.ಮತ್ತೆ ನಮ್ಮ ಪ್ರಯೋಗದಲ್ಲಿ ರಾಹು-ಕೇತು ತಿರುಗ್ತಾ ಇದ್ದಿದ್ದನ್ನೂ ನೆನಪಿಸ್ಕೊಳೋಣ,.
ಅಂದ್ರೆ, ಐವತ್ನಾಕು ವರ್ಷ-ಒಂದು ತಿಂಗಳ ಅವಧಿ ಕಳೆದಾಗ, ಸೂರ್ಯ-ಚಂದ್ರ -ರಾಹು-ಕೇತು ಗಳ ಸ್ಥಾನಗಳು ಆ ಅವಧಿಯ ಆರಂಭವಾದಾಗ ಎಲ್ಲಿದ್ವೋ ಅಲ್ಲೇ ಇರತ್ತಾ! ಇಲ್ದೇ ಇದ್ರೆ ಗ್ರಹಣ ಆಗ್ತಿರ್ಲಿಲ್ಲ ಅಲ್ವಾ?
ಹುರ್ರೇ! ಹಾಗಾರೆ, ರಾಹು ಕೇತು ಬಿಂದುಗಳು ಆಕಾಶವನ್ನ ಐವತ್ನಾಕು ವರ್ಷ - ಒಂದು ತಿಂಗಳಲ್ಲಿ ಸುತ್ತುತ್ತವಾ?
ಈಗ ಒಂದು ವಿಷಯ ಗಮನಿಸಿ. ಒಂದು ಹೆಚ್ಹುವರಿ ತಿಂಗಳಲ್ಲಿ, ಚಂದ್ರ ಆಕಾಶದ ಸುತ್ತ ಒಂದು ಸುತ್ತ ತಿರುಗಿ (೩೬೦ ಡಿಗ್ರಿ), ಮತ್ತೆ ಇನ್ನೊಂದು ಮೂವತ್ತು ಡಿಗ್ರಿಯಷ್ಟುಮುಂದೆ ಹೋಗಿರ್ತಾನೆ. ಹಾಗೇ ಸೂರ್ಯನೂ ಮೂವತ್ತು ಡಿಗ್ರಿಯಷ್ಟು ಮುಂದೆ ಹೋಗಿರ್ತಾನೆ.
ಹಾಗಾದ್ರೆ ಏನಾಯ್ತು? ರಾಹು ಕೇತು ಬಿಂದುಗಳು ಕೂಡ ಮೂವತ್ತು ಡಿಗ್ರಿ ಮುಂದೆ ಹೋಗಿರ್ಬೇಕು. ಅಂದ್ರೆ, ರಾಹು-ಕೇತು ಬಿಂದು ಸುತ್ತೋ ಅವಧಿ ಇದಲ್ಲ.
ಮತ್ತಿನ್ನೇನು?
ಈಗ ಹಿಂದಿನವರು ಸೂರ್ಯಗ್ರಹಣಗಳ ಹಾಗೇ ಚಂದ್ರಗ್ರಹಣಗಳನ್ನೂ ಗಮನಿಸ್ತಿದ್ರು. ಎಷ್ಟೋ ಸಲ ಚಂದ್ರ ಗ್ರಹಣಗಳು ಹದಿನೆಂಟು ವರ್ಷ ಹತ್ತು ಅಥವಾ ಹನ್ನೊಂದು ದಿನಗಳಲ್ಲಿ ಮರುಕಳಿಸಿದ್ದಿದ್ದು ಅವರ ಗಮನಕ್ಕೆ ಬಂದಿತ್ತು.
ಅಂದ್ರೆ, ಸೂರ್ಯ-ಚಂದ್ರ-ರಾಹು-ಕೇತುಗಳ alignment ಹದ್ನೆಂಟುವರ್ಷ ಹತ್ತು/ಹನ್ನೊಂದು ದಿವಸಕ್ಕೆ ಇದ್ದಲ್ಲಿಗೇ ಮರಳುತ್ತಾ? ಅಂದ್ರೆ ಮೂವತ್ತಾರು ವರ್ಶ ಇಪ್ಪತ್ತು ದಿವಸಕ್ಕೂ ಮರಳಬೇಕಲ್ವಾ? ಅದೇ ತರಹ ಐವತ್ನಾಕು ವರ್ಷ ಮೂವತ್ತು ದಿವಸಕ್ಕೂ ಮರಳತ್ತಾ?
ಹೌದು ಸ್ವಾಮೀ! ಅದನ್ನೇ ಅವರು ಗಮನಿಸಿ ಆಗಿತ್ತಲ್ವಾ? ಐವತ್ನಾಕು ವರ್ಷ ಕಳೆದು ತಿಂಗಳಿಗೆ ಮತ್ತೆ ಸೂರ್ಯ ಗ್ರಹಣ ಆಗತ್ತೆ ಅಂತ!
ಈ ಹದಿನೆಂಟು ವರ್ಷ ಹತ್ತು/ಹನ್ನೊಂದು ದಿನದ ಚಕ್ರವನ್ನೇ ಗ್ರಹಣ ಚಕ್ರ ( Saros cycle) ಅನ್ನೋದು.
ಆದ್ರೆ, ರಾಹು-ಕೇತುಗಳ ಅಪ್ರದಕ್ಷಿಣ ಅವಧಿ ಮಾತ್ರ ಇದೇ ಅಲ್ಲ - ಯಾಕಂದ್ರೆ, ಸೂರ್ಯ ಹದಿನೆಂಟು ವರ್ಷ ಕಳೆದು ಹತ್ತು ಹನ್ನೊಂದು ದಿನದಲ್ಲಿ ಹತ್ತು ಹನ್ನೊಂದು ಡಿಗ್ರಿ ಮುಂದಿರ್ತಾನೆ. ಅಲ್ವಾ? ಆದ್ರೂ ಆ ಅವಧಿಯ ಲೆಕ್ಕಾಚಾರ ಮಾಡಿಟ್ಟಿದಾರೆ. ಅದು ಸುಮಾರು ೧೮.೬ವರ್ಷವಂತೆ. ಸದ್ಯಕ್ಕೆ ಅದ್ಕ್ಕ್ಕಿಂತ ಹೆಚ್ಗೆ ವಿವರಣೆಗೆ ಹೋಗ್ಲಾರೆ.
ಇನ್ನು ಕೊನೇ ಭಾಗದಲ್ಲಿ, ಮಹಾಭಾರತದಲ್ಲಿ ಕೃಷ್ಣ ಒಬ್ಬ ಜ್ಯೋತಿಷಿ ಆಗಿದ್ನೇ? ಅನ್ನೋ ವಿಷಯವನ್ನೂ, ಅದಗ್ಗೂ ಗ್ರಹಣಗಳಿಗೂ ಇರೋ ನಂಟನ್ನೂ ಹೇಳಿಬಿಟ್ಟು, ಆಮೇಲೆ - ರಾಹು-ಕೇತು ಉಪಾಖ್ಯಾನ ಮುಗಿಸ್ತೀನಿ :)
-ಹಂಸಾನಂದಿ
Comments
ಉ: ರಾಹು-ಕೇತು ಕಾಟ, ಮತ್ತು ಗ್ರಹಣ ಚಕ್ರ
In reply to ಉ: ರಾಹು-ಕೇತು ಕಾಟ, ಮತ್ತು ಗ್ರಹಣ ಚಕ್ರ by keerthi2kiran
ಉ: ರಾಹು-ಕೇತು ಕಾಟ, ಮತ್ತು ಗ್ರಹಣ ಚಕ್ರ
In reply to ಉ: ರಾಹು-ಕೇತು ಕಾಟ, ಮತ್ತು ಗ್ರಹಣ ಚಕ್ರ by hamsanandi
ಉ: ರಾಹು-ಕೇತು ಕಾಟ, ಮತ್ತು ಗ್ರಹಣ ಚಕ್ರ
In reply to ಉ: ರಾಹು-ಕೇತು ಕಾಟ, ಮತ್ತು ಗ್ರಹಣ ಚಕ್ರ by ಗಣೇಶ
ಉ: ರಾಹು-ಕೇತು ಕಾಟ, ಮತ್ತು ಗ್ರಹಣ ಚಕ್ರ