ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?

ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?

ನೀವೆಲ್ಲ ’ಬ್ಲ್ಯಾಕ್’ ಸಿನಿಮಾ ನೋಡಿದ್ದೀರಿ ಅಂತ ಅಂದುಕೊಂಡಿದ್ದೇನೆ. ವಿಶಿಷ್ಠಚೇತನ ಮಕ್ಕಳು ಹುಟ್ಟಿದಾಗ ತಂದೆತಾಯಿಗಳು ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಅವರು ಬಡವರಿರಲಿ, ಶ್ರೀಮಂತರಿರಲಿ, ಓದಿದವರಿರಲಿ, ಅನಕ್ಷರಸ್ಥರಿರಲಿ- ಪ್ರತಿಕ್ರಿಯೆ ಒಂದೇ. ದೇವರು ನಮಗೆ ಹೀಗೇಕೆ ಮಾಡಿದ? ಎಂದು ದುಃಖಿಸುತ್ತಾರೆ.

ಇಲ್ಲಿಂದ ಶುರುವಾಗುವ ನೋವು ಒಮ್ಮೊಮ್ಮೆ ಜೀವನ ಪರ್ಯಂತ ಮುಂದುವರೆಯುತ್ತದೆ. ಮಗುವನ್ನು ಸಹಜ ಮಗುವಂತಾಗಿಸಲು ಒಬ್ಬೊಬ್ಬರ ಪ್ರಯತ್ನವೂ ಒಂದೊಂದು ಥರ. ಡಿಗ್ರಿ ಮುಗಿದ ಕೂಡಲೇ ಮದುವೆಯಾದ, ಅದಾಗಿ ಒಂದು ವರ್ಷದಲ್ಲಿ ಹೆಣ್ಣು ಮಗುವಿನ ತಾಯಿಯಾದ ನನಗೆ, ಹುಟ್ಟಿದ ಮಗು ಸಹಜವಾಗಿಲ್ಲ ಎಂದು ಅನ್ನಿಸಿದಾಗ ಉಂಟಾದ ನೋವು ಅಷ್ಟಿಷ್ಟಲ್ಲ. ಕಳೆದ ಆರು ವರ್ಷಗಳಲ್ಲಿ ನನ್ನ ಮಗಳು ಗೌರಿ, ಹೊಸ ಜಗತ್ತನ್ನು ನಮಗೆ ತೋರಿಸಿಕೊಟ್ಟಿದ್ದಾಳೆ. ಈಗಲೂ ನಾವು ಹೊಸದನ್ನು ಕಲಿಯುತ್ತಲೇ ಇದ್ದೇವೆ. ಇದೊಂದು ನಿರಂತರ ಕಲಿಕೆ.

ಆದರೆ, ಪ್ರಾರಂಭದ ನೋವನ್ನು ನಾವು ಮರೆತಿಲ್ಲ. ನನ್ನಂಥ ಲಕ್ಷಾಂತರ ತಾಯಂದಿರಿದ್ದಾರೆ. ಅವರೆಲ್ಲರ ಪ್ರಶ್ನೆಗಳು ಒಂದೇ. ಏಕೆಂದರೆ ಸಮಸ್ಯೆಯೂ ಒಂದೇ. ಇಂತಹ ಮಕ್ಕಳನ್ನು ಸಾಕುವುದು ಹೇಗೆ? ಅವರಿಗೆ ಜಗತ್ತಿನ ರೀತಿಯನ್ನು, ನಿತ್ಯದ ಕೆಲಸಗಳನ್ನು ಮಾಡಿಕೊಳ್ಳುವುದನ್ನು ಕಲಿಸುವುದು ಹೇಗೆ? ಇಂತಹ ಪ್ರಶ್ನೆಗಳ ಜೊತೆಗೆ, ಸಮಾಜ ಇಂತಹ ಮಕ್ಕಳನ್ನು ನೋಡುವ ರೀತಿಯನ್ನೂ ಜೀರ್ಣಿಸಿಕೊಂಡು ನಾವು ವಿಶಿಷ್ಠಚೇತನ ಮಗುವನ್ನು ಬೆಳೆಸಬೇಕು.

ಇಂತಹ ಮಕ್ಕಳೆಡೆಗೆ ಸಮಾಜದ ಭಾವನೆಯನ್ನು ತಕ್ಕಮಟ್ಟಿಗೆ ಬದಲಾಯಿಸಲು ಯತ್ನಿಸಿದ ’ಬ್ಲ್ಯಾಕ್‌’ ಸಿನಿಮಾದ ನಿರ್ದೇಶಕರಿಗೆ (ಅವರ ಹೆಸರು ನನಗೆ ಗೊತ್ತಿಲ್ಲ) ಹಾಗೂ ’ತಾರೆ ಝಮೀನ್‌ ಪರ್‌’ ಸಿನಿಮಾ ತೆಗೆದ ನಟ ಆಮೀರ್‌ ಖಾನ್‌ ಅವರಿಗೆ ನನ್ನ ಬ್ಲಾಗ್‌ನ ಈ ಮೊದಲ ಬರಹವನ್ನು ಅತ್ಯಂತ ಕೃತಜ್ಞತೆಯಿಂದ ಅರ್ಪಿಸುತ್ತಿದ್ದೇನೆ.

ದೇವರು ಇಂತಹ ವ್ಯಕ್ತಿಗಳ ಸಂಖ್ಯೆಯನ್ನು ವೃದ್ಧಿಸಲಿ. ಎಲ್ಲರಲ್ಲೂ ನೆಮ್ಮದಿ ಮೂಡಿಸುವ ಜೀವಗಳ ಸಂತತಿ ಸಾವಿರವಾಗಲಿ.

- ರೇಖಾ ಚಾಮರಾಜ

Rating
No votes yet

Comments