ಮಲಯ್ ಮಾದಪ್ಪ, ಕವಿರಾಜಮಾರ್ಗ ಮತ್ತು ಕನ್ನಡತನ
ಈ ಹಿಂದೆ ಕವಿರಾಜಮಾರ್ಗ ಮತ್ತು ಕಂಸಾಳೆ ಇವುಗಳ ಬಗ್ಗೆ ಇಲ್ಲಿ ಬ್ಲಾಗಿದ್ದೆ.
ನಮ್ಮ ಮಯ್ಸೂರು,ಮಂಡ್ಯ, ಚಾಮರಾಜನಗರ, ರಾಮನಗರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಹೆಚ್ಚು ಮಂದಿಗಳಿಂದ ಪೂಜಿಸಿಕೊಳ್ಳುವ, ಜನಪದರ ಒಲುಮೆಯ ದೇವ ಈ ಮಾದಪ್ಪ. ಒಕ್ಕಲಿಗರು, ಲಿಂಗಾಯಿತರು, ಉಪ್ಪಾಲಿಗರು, ಕುರುಬರು,ಹಾಲುಮತದವರು ಮತ್ತು ದಲಿತರು ಹೀಗೆ ಎಲ್ಲ ಜಾತಿಗಳ ಜನರು ಈ ಮಾದಪ್ಪನ ಒಕ್ಕಲು. ಬೆಂಗಳೂರಿನಿಂದ ಮದ್ದೂರು, ಮಳವಳ್ಳಿ,ಕೊಳ್ಳೆಗಾಲ, ಹನೂರುಗಾಣೆ ಹೋಗಿ ಮಲಯ್ ಮಾದಪ್ಪನ ಬೆಟ್ಟವನ್ನ ತಲುಪಬಹುದು. ಕವಿರಾಜಮಾರ್ಗದಲ್ಲಿ ಹೇಳಿರುವಂತೆ ಕನ್ನಡಿಗರು 'ಕಾವ್ಯ ಪ್ರಯೋಗ ಪರಿಣಿತಮತಿಗಳ್' ಎನ್ನುವುದು ಅಕ್ಕರಕ್ಕರವೂ ದಿಟ ಅನ್ನುವುದು ಮಾದಪ್ಪನ ಮೇಲೆ ಕಟ್ಟಿರುವ ಜನಪದ ಹಾಡುಗಳು(ಕಂಸಾಳೆ ಹಾಡುಗಳು) ಕೇಳಿದರೆ ನಮಗೆ ಅರಿವಾಗುತ್ತದೆ. ಯಾಕಂದ್ರೆ ಈ ಪದಗಳನ್ನು ಕಟ್ಟಿರುವವರು ಹೆಚ್ಚೇನು ಓದಿದವರಲ್ಲ ಅತವ ಬೇರೆ ಹಳೆಗನ್ನಡ/ನಡುಗನ್ನಡ ಕಬ್ಬಿಗರಂತೆ ಸಕ್ಕದ, ಪಾಗದಗಳನ್ನು ಕಲಿತವರೂ ಅಲ್ಲ. ಹಾಗಾಗಿ ಈ ಜನಪದ ಹಾಡುಗಳಲ್ಲಿ ನಮಗೆ ದಿಟವಾದ ಕನ್ನಡದ ಸೊಗಡು ಕಾಣಲು ಸಿಗ್ತದೆ.
ಡಾ. ಕೇಶವನ್ ಪ್ರಸಾದ್ ಎಂಬುವರು ಸಂಪಾದಿಸಿರುವ 'ಮಲಯ್ ಮಾದೇಶ್ವರ'ಎಂಬ ಹೊತ್ತಿಗೆಯ ಮುನ್ನುಡಿಯಲ್ಲಿ ಡಾ.ಚಂದ್ರಶೇಕರ ಕಂಬಾರರು
"ಮಾದೇಶ್ವರ ಕಾವ್ಯವನ್ನು ಬುಡಕಟ್ಟು ಕಬ್ಬಕ್ಕೆ ಸೇರಿಸಿ ಅದರಿಂದ ಕನ್ನಡ ನಡಾವಳಿ/ಸಂಸ್ಕ್ರುತಿಯನ್ನು ಹುಡುಕುವ ಕೆಲಸಕ್ಕೆ ನಾವು ಕಯ್ ಹಾಕಿದ್ದೇವೆ. ಕಾಡು ಮತ್ತು ನಾಡಿನ ಹತ್ತಾರು ಜನವರ್ಗಗಳು ಪೂಜಿಸುವ ದೇವರು ಮತ್ತು ಆ ದೇವರ ಮೇಲೆ ಕಟ್ಟಿರುವ ಪದಗಳು ನೂರಾರು. ಇದುವರಗೆ ಕಡೆಣಿಕೆಗೆ ಗುರಿಯಾದ ಈ ಬುಡಕಟ್ಟಿನ ಸಂಸ್ಕ್ರುತಿ ಕೂಡ ಸಿರಿವಂತ ಎಂಬುದನ್ನು, ಮತ್ತು ಅದು ನಮ್ಮ ಹಿರಿಯರ ನುಡಿಯನ್ನು,ಅರಿವನ್ನು ಮತ್ತು ಪರಂಪರೆಯನ್ನು ಕಾಪಾಡಿಕೊಂಡು ಬಂದಿವೆ ಎಂಬುದನ್ನು ನಾವು ತಿಳಿಯುತ್ತೇವೆ." ಎಂದಿದ್ದಾರೆ.
ಇದು 'ಪಿನ್ ಲಾಂಡಿನ ಬಾಯಿಗಬ್ಬದಶ್ಟೆ ದೊಡ್ಡದು' ಎಂಬುದು ಹಾ.ಮಾ.ನಾಯಕರ ಮಾತು. " ಈ ಹಿರಿಗಬ್ಬದಲ್ಲಿ ಬರುವ ಒಳ್ಳೆ ವಿಶಯಗಳು ಎಲ್ಲ ಕಾಲಕ್ಕೂ ಒಪ್ಪುವಂತದು ಹಾಗು ಅಲ್ಲಿನ ಪರಿಸರದ ಬಗ್ಗೆ ಅರಿವು, ಸಾಮಾಜಿಕ ತಿಳುವಳಿಕೆ ಹಾಗು ಮನಸ್ಸಿನ ಹರಹುಗಳು ಇಂದಿಗೂ ಒಪ್ಪುವಂತವು. ಓರ್ವ, ಕೆಟ್ಟ ವೆವಸ್ತೆಯನ್ನು ಇದಿರಿಸಿ ಒಟ್ಟಾರೆ ಸಾಮಾಜಿಕ ಅರಿವನ್ನು ತೋರಿಸಿ ವಸ್ತು-ಸ್ತಿತಿಯ ಅರಿವುಂಟು ಮಾಡುತ್ತಾನೆ' ಎನ್ನುತ್ತಾರೆ ಕೇಶವನ್ ಪ್ರಸಾದ್ ಅವರು.
ಇಲ್ಲಿ ಇನ್ನೊಂದು ಮುಕ್ಯವಾದ ಅಂಶ. ಮಾದೇಶ್ವರ, ಜುಂಜಪ್ಪ, ಮಯ್ಲಾರ ಮತ್ತು ಮಂಟೇಸಾಮಿಯಂತ ಶರಣರು ಕೆಳವರ್ಗದವರ ಇರುವಿಕೆಯನ್ನು ಮತ್ತೆ ಬಲಪಡಿಸುವ ಮತ್ತು ತಮ್ಮದೇ ಆದ ಸಂಸ್ಕ್ರುತಿಯನ್ನು ಕಟ್ಟುವ ಉದ್ದೇಶ ಇವರದಾಗಿತ್ತು ಅನ್ನಿಸ್ತದೆ. ಬೇಡರು, ಕಾಡು ಕುರುಬರು, ಸೋಲಿಗರೆಂಬ ಬುಡಕಟ್ಟು ಮಂದಿಯೆ ಮಾದಪ್ಪನ ಸೇವಕರು. ಅವರ ಉದ್ದೇಶಕ್ಕೆ ದುಡಿದವ ಮಾದೇಶ್ವರ.ಮಲಯ್ ಮಾದೇಶ್ವರ ನ ಮೇಲೆ ಕಟ್ಟಿರುವ ಪದಗಳನ್ನೆಲ್ಲ ಕೂಡಿಸಿದರೆ ಅದು ರಾಮಾಯಣ, ಮಾಬಾರತದಂತೆ ಒಂದು ಹಿರಿಗಬ್ಬ ಎನಿಸಿಕೊಳ್ಳುವದರಲ್ಲಿ ಎರಡು ಮಾತಿಲ್ಲ. ಅದನ್ನು oral epic ಎಂದೇ ಅರಯ್ಯುಗಾರರು ಹೇಳುತ್ತಾರೆ.
ಇನ್ನೊಂದು ನಿಬ್ಬರದ ಸಂಗತಿಯಂದರೆ ಈ ಮಾದಪ್ಪನ ಬೆಟ್ಟಕ್ಕೆ ಗಡಿಯಲ್ಲಿರುವ ತಮಿಳುನಾಡಿನ ಮಂದಿಯೂ ಬರುತ್ತಾರೆ. ಆದರೆ ತಮಿಳಿನಲ್ಲಿ ಮಾದಪ್ಪನ ಬಗ್ಗೆ ಪದಗಳು/ಕಬ್ಬಗಳು ಸಿಕ್ಕಿರುವುದು ತೀರ ಕಡಿಮೆ. ಹಾಗಾದರೆ ಮಾದಪ್ಪನ ಬೆಟ್ಟಕ್ಕೆ ಈಗಲು ತಮಿಳುನಾಡಿನಿಂದ ಬರುವವರು ಒಂದಾನೊಂದು ಕಾಲದಲ್ಲಿ ಕನ್ನಡದವರೇ ಆಗಿರಬೇಕು. ಹಾಗಾಗಿ ಕನ್ನಡ ಜನರು ಮತ್ತು ಕನ್ನಡ ನಾಡು ಕಾವೇರಿಯಿಂದ ಆಚೆಗೂ ಹರಡಿದ್ದಿರಬಹುದು(ಕವಿರಾಜಮಾರ್ಗಕಾರನು ಕನ್ನಡ ನಾಡಿನ ತೆಂಕಣದ ಎಲ್ಲೆಯನ್ನು ಸರಿಯಾಗಿ ಗುರುತ್ಸಿಲ್ಲ ಎಂಬ ವಾದಕ್ಕೆ ಇನ್ನಶ್ಟು ಬಲ ಬರುತ್ತದೆ - ಈ ವಾದದ ಬಗ್ಗೆ ಒಂದು ಹೊತ್ತಿಗೆಯನ್ನು ನಾನು 'ಅಂಕಿತ'ದಲ್ಲಿ ನೋಡಿದೆ).
ಡಿಎಲ್ ಅಯ್ ನಲ್ಲಿ ಮಾದಪ್ಪನ ಬಗ್ಗೆ ಹೊತ್ತಿಗೆಯಿದೆ.
http://www.new.dli.ernet.in/scripts/FullindexDefault.htm?path1=/data/upload/0028/112&first=1&last=395&barcode=2040100028107
ಈ ಹೊತ್ತಿಗೆಯ ಪುಟ ೧೨ ರಲ್ಲಿ ಹೀಗಿದೆ.
"..ಸೇಲಂ ಜಿಲ್ಲೆಯ ಕೆಲವು ಊರುಗಳನ್ನು ಸುತ್ತಿ ಕೇಳಲಾಗಿ ಮಾದಪ್ಪನ ಬಗ್ಗೆ ಕತೆ ಹೇಳುವವರು ಯಾರೂ ಇಲ್ಲ ಎಂಬ ಉತ್ತರ ದೊರೆಯಿತು. ಆದರೆ ದರ್ಮಪುರಿಯ ಕೆಲವು ಪ್ರದೇಶಗಳಲ್ಲಿ ಮಾದಪ್ಪನ ಹಾಡು ಹಾಡುವ ಕೆಲವು ಬಕುತರಿದ್ದಾರೆ ಎಂಬುದು ತಿಳಿಯಿತು. ಉಡುಕು ವಾದ್ಯವನ್ನು ಬಳಸಿಕೊಂಡು ಕನ್ನಡದವರೇ ತಮಿಳು ನಾಡಿಗೆ ಸೇರಿಕೊಂಡು ತಮಿಳಿನಲ್ಲಿ ಪದ್ಯ ಕಟ್ಟಿ ತಮ್ಮದೇ ಆದ ದಾಟಿಯಲ್ಲಿ ಹಾಡುವರೆಂದೆನಿಸುತ್ತದೆ. ಏನೇ ಇರಲಿ ತಮಿಳಿನ ಜನಪದ ಸಾಹಿತ್ಯದಲ್ಲಿ ಮಾದೇಶ್ವರರ ಕತೆಗಳಿಲ್ಲ ಎಂಬುದು ನಿಕ್ಕುವವಾಯಿತು...".
ಕೊ.ಕೊ: ಈಗ 'ಸಯ್ಕೊ' ಸಿನಿಮಾದ ರಗು ದೀಕ್ಸಿತ್ ರವರ ಹಾಡು 'ನಿನ್ನ ಪೂಜೆಗೆ ಬಂದೆ ಮಾದೇಸ್ವರ, ಇವರ ಕರುಣದಿ ಕಾಯೋ ಮಾದೇಸ್ವರ' ಸಿಕ್ಕಾಪಟ್ಟೆ ಹಿಟ್ ಆಗಿದೆ.