ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
ಮೊನ್ನೆ, ಪಲ್ಲವಿಯವರ ಲೇಖನಕ್ಕೆ ಪ್ರತಿಕ್ರಿಯೆ ನೀಡಿದಾಗ ಮೂಡಿದ ಪ್ರಶ್ನೆ ಇದು.
ಪಲ್ಲವಿಯವರು ಹೇಳಿದ್ದು, ಮಹಿಳಾ ಲೇಖಕಿಯರು ಅಡುಗೆ ಮತ್ತು ಕುಟುಂಬದ ಬಗ್ಗೆ ಹೆಚ್ಚಾಗಿ ಬರೆದಿರುವುದರಿಂದ, ಇವು ತೆಳು ವಿಷಯಗಳಾದವು. ಅವರು ಇವುಗಳಿಗೆ ತಮ್ಮ ಲೇಖನ ಸಾಮರ್ಥ್ಯವನ್ನು ಸೀಮಿತಗೊಳಿಸದೆ, ರಾಜಕೀಯ ಇತ್ಯಾದಿಯ ಬಗ್ಗೆ ಬರೆದು, ಸಮಾಜವು ಮಹಿಳಾ ಲೇಖಕಿಯರನ್ನು ನೋಡುವ ದೃಷ್ಟಿಕೋನವನ್ನು ಬದಲಿಸಬೇಕೆಂದು.
ನನಗೆ ಹಲವು ಬಗೆಗಳಲ್ಲಿ ಇದು ತಪ್ಪು ಎನ್ನಿಸಿತು.
ಒಂದು, ಸಮಾಜದಲ್ಲಿ ಸಾಮಾನ್ಯ ಗೃಹಿಣಿಗೆ ಈ ನಡುವೆ ಬೆಲೆ ಬಹಳ ಕಡಿಮೆಯಾಗಿದೆ. ಅಡುಗೆ ಮಾಡಿಕೊಂಡು, ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿರುತ್ತಾಳೆಂದರೆ, ಅಯ್ಯೊ, ಅಷ್ಟೇನಾ? ಎಂದು ಹೆಂಗಸರೇ ಅವಳನ್ನು ಅಲ್ಲಗೆಳೆಯುತ್ತಾರೆ! ಒಂದು ಕುಟುಂಬವನ್ನು ಸರಿಯಾಗಿ ಪೋಷಿಸಬೇಕಾದರೆ ಒಬ್ಬ ಗೃಹಿಣಿ ಪಡುವ ಶ್ರಮವನ್ನು ದುಡ್ಡಿನಲ್ಲಿ ಅಳೆಯಲು ಸಾಧ್ಯವಿಲ್ಲ, ಅವಳಿಗೆ ದುಡ್ಡೂ ಸಿಗುವುದಿಲ್ಲ! ಇಲ್ಲಿ ತಾಯಿಯ ಆರೈಕೆಯಲ್ಲಿ ಬೆಳೆದ ಯಾರ್ಯಾರಿದ್ದೀರೋ ಒಂದು ಕ್ಷಣ ನಿಮ್ಮ ಚಿಕ್ಕಂದಿನಲ್ಲಿ ತಾಯಿ ಮನೆಯಲ್ಲಿ ಇಲ್ಲದಿದ್ದರೆ ಹೇಗಿರುತ್ತಿತ್ತೆಂದು ನೆನೆಸಿಕೊಳ್ಳಿ. ಆಗ ಮನೆಯಲ್ಲಿರುವ ತಾಯಿಯ ಮಹಿಮೆ ಅರ್ಥವಾಗುತ್ತೆ. ಹೀಗಿರುವಾಗ, ಗೃಹಿಣಿಯ ಹಿರಿಮೆಯನ್ನು ಎತ್ತಿ ಹಿಡಿಯುವುದನ್ನು ಬಿಟ್ಟು, ಅಡುಗೆ, ಕುಟುಂಬದ ಬಗ್ಗೆ ಬರೆಯುವುದೂ ಸಹ ಕೀಳೆಂದರೆ ಹೇಗೆ?
ಎರಡು, ಮಹಿಳೆಗ್ಯಾಕೆ ತಾನು ಗಂಡಸರಿಗೆ ಸಮ ಎಂದು ತೋರಿಸುವ ಉತ್ಕಟ ಆಸೆ? ಪುರುಷರು ರಾಜಕೀಯ ಇತ್ಯಾದಿಗಳ ಬಗ್ಗೆ ಹೆಚ್ಚಾಗಿ ಬರೆಯುತ್ತಾರೆ. ಹಾಗಂತ, ಅವರು ಅವು ತೆಳು ವಿಷಯಗಳು, ನಾವು ಅಡುಗೆಯ ಬಗ್ಗೆ ಬರೆಯಬೇಕು. ಹೆಂಗಸರಿಗೆ ಸಮ ಆಗಬೇಕು. ಇಲ್ಲದಿದ್ದರೆ, ನಾವು ಸಮಾಜದಲ್ಲಿ ಮುಖ ತೋರಿಸಲು ಲಾಯಕ್ಕಿಲ್ಲ ಎಂದೇನು ಎಣಿಸುವುದಿಲ್ಲ ಬದಲಿಗೆ, ಹೆಂಗಸರಿಗೂ ಅಡುಗೆ, ಸಂಸಾರ ವಿಷಯಗಳು ತೂಕದ್ದಲ್ಲ ಎನ್ನುವ ಭಾವನೆ ಬರಿಸುತ್ತಾರೆ! ಹೆಂಗಸರು, ಸಮಾಜದ ದೃಷ್ಟಿಕೋನದಲ್ಲಿರುವ ಡೊಂಕು ತಿದ್ದದೆ, ತಮ್ಮನ್ನು ತಾವು ಬದಲಿಸಿಕೊಳ್ಳಲು ಹೋಗುತ್ತಾರೆ. ಇದು ನೋಡಿ, ವಿಪರ್ಯಾಸ.
ಮೂರು, ಎರಡನೆಯ ಪಾಯಿಂಟನ್ನೆ ವಿಸ್ತರಿಸುತ್ತ, ಮಹಿಳೆ ತಾನು ಗಂಡಸಾಗಬೇಕೆಂದು ಬಯಸದೆ, ತನ್ನ ಹೆಣ್ತನಕ್ಕೆ ಗೌರವ ಕೊಡುವುದನ್ನು ಸಮಾಜಕ್ಕೆ ಕಲಿಸಬೇಕು. ಅಂದರೆ, ಪ್ರಕೃತಿ ಅವಳನ್ನು ಯಾವುದಕ್ಕಾಗಿ ಸೃಷ್ಟಿಸಿದೆಯೋ ಅದನ್ನು ಸಮಾಜ ಗುರುತಿಸಿ ಅದಕ್ಕೆ ಬೆಲೆ ಕೊಡುವಂತೆ ಕೇಳಬೇಕು. ಅದು ಬಿಟ್ಟು, ತಾನೂ ಗಂಡಸು ಮಾಡುವುದೆಲ್ಲವನ್ನೂ ಮಾಡಿದರೆ ತನಗೆ ಬೆಲೆ ಸಿಗುತ್ತೆಂಬ ಭ್ರಮೆಯ ಹಿಂದೆ ಹೋಗಬಾರದು. ಇದು ಉಪದೇಶದ ಹಾಗೆ ಅನ್ನಿಸಿದರೂ, ಸ್ವಲ್ಪ ವಿಶ್ಲೇಷಿಸಿದರೆ, ನಿಜದ ಅರಿವಾಗುತ್ತೆ.