ಪದ್ಯ

ಪದ್ಯ

ಕೆಲವು ಸಂಗತಿಗಳು ಮತ್ತೆ ಮತ್ತೆ ಸ್ಫೂರ್ತಿ ತರುತ್ತವೆ
ವಸಂತ, ಮೊಗ್ಗು ಮತ್ತೆ ಹುಣ್ಣಿಮೆಯ ಚಂದ್ರ
ಅಲೆ, ಮೋಡ ಮತ್ತೆ ಮಧ್ಯಾಹ್ನದ ಮಳೆ

ಒಮ್ಮೊಮ್ಮೆ ಅನ್ನಿಸುತ್ತದೆ...
ನಾನು ಇನ್ನೂ ಬದುಕಿದ್ದೇನೆ
ಸುತ್ತಲಿನ ಸೌಂದರ್ಯವನ್ನು ನೋಡುತ್ತಿದ್ದೇನೆ
ನನ್ನಜ್ಜನ ಪಿಸುಮಾತನ್ನು ಈಗಲೂ ಕೇಳಬಲ್ಲೆ
'ಸುಮ್ಮನೆ ನೋಡದಿರು, ಕಂದಾ... ಅನುಭವಿಸು..'
ಬಹಳ ಪ್ರಯತ್ನಿಸಿದ್ದೇನೆ ನಾನು
ನೋಡದ್ದನ್ನೂ ಅನುಭವಿಸಲು
ಆದರೆ ಒಂದನ್ನು ಗಮನಿಸಿ.. ಇದಕ್ಕೆ ಕಾರಣ ನಾನಲ್ಲ...
ಇಂಥ ಅಸೂಕ್ಷ್ಮ ಆಟಗಳನ್ನು ಆಡುವುದು ಕಾಲ.

ಬೇರೆ ಸಂಗತಿಗಳೂ ಸ್ಫೂರ್ತಿ ತರುತ್ತವೆ
ಏಕೆಂದರೆ ನಾನು ವಿಮುಖರಾಗುವವರ ಪೈಕಿ ಅಲ್ಲ
ಮಣ್ಣಲ್ಲಾಡುವ ಆ ಬೆತ್ತಲೆ 'ಪ್ರೇಮ ದೇವತೆ'ಗಳನ್ನು ನೋಡಿದ್ದೇನೆ.
ಹುಟ್ಟಿನಿಂದಲೇ ಮುರಿದಿವೆ ಅವುಗಳ ಬಿಲ್ಲುಗಳು
ಬಾಣಗಳಂತೂ ಗಾಳಿಯಲ್ಲೇಲ್ಲೋ ಕರಗಿವೆ
ಕೆಲವು ಕಡ್ಡಿಯೊಂದನ್ನು ಕೈಯಲ್ಲಿ ಧರಿಸಿವೆ.. ಉಳಿದವು.. ಶೂನ್ಯವನ್ನು..!
ಅವರನ್ನು ಕರುಣೆಯಿಂದ ನಿರುಕಿಸುತ್ತ ವಿಚಾರ ಮಾಡುತ್ತೇನೆ
ಉರಿಯುವ ಕಣ್ಣುಗಳನ್ನು ಮುಚ್ಚಿ ಬೇಗುದಿಯನ್ನು ಶಪಿಸುವ ಮುನ್ನ

ಯಾವಾಗಲೂ ಕಾಡುವ ಸಂಗತಿಗಳೂ ಇಲ್ಲವೆಂದಲ್ಲ
ನಾನು ವ್ಯವಸ್ಥೆಯ ತಾಳಕ್ಕೆ ಕುಣಿಯುವವನಲ್ಲ
ತಪ್ಪು ಜಾಗಗಳಲ್ಲಿ ಕೇಳಿಸುವ ಗಂಟೆಗಳು
ತಮಂಧವನು ಹುಡುಕುವ ಬಿದಿಗೆ ಚಂದ್ರಮ
ಎಲ್ಲೆಡೆಯೂ ನುಸುಳುವ ಕಾರಭಾರಿ ಶಿಲುಬೆ
ಇವೆಲ್ಲ ದುರುಗುಟ್ಟಿ ನನ್ನನ್ನು ಅಣಕಿಸುವಾಗ
ಹುಬ್ಬುಗಂಟಿಕುತ್ತೇನೆ... ಬಿಗಿದ ಮುಷ್ಠಿ ಎತ್ತುತ್ತೇನೆ
.. ಆದರೆ... ತಡೆಯಿರಿ.. ದೇವದೂಷಣೆಗೆ ನಾನು ತೀರ ಸಣ್ಣವನಲ್ಲವೆ?

ತೀವ್ರ ಹುಡುಕಾಟದ ಗಳಿಗೆಗಳೂ ಒದಗುತ್ತವೆ
ಏಕೆಂದರೆ ನನ್ನಲ್ಲೂ ಹಪಹಪಿಸುವ ಆತ್ಮವಿದೆ
ನಿನ್ನ ದಟ್ಟ ನೀಲಿ ಕಣ್ಣುಗಳನ್ನು ನೋಡಿದಾಗ
ಅಲೆಗಳನು ಮೋಡಗಳನು ಅಂಗೈಯಲ್ಲಿ ಕಾಣುತ್ತೇನೆ
ಅಂದುಕೊಂಡಿದ್ದೇನೆ.. ಹಾರಬಹುದೇನೋ ಅನಂತ, ಕಾಣದ ನೆಲಗಳಿಗೆ
ಹೆಕ್ಕಿ ತೆಗೆಯಬಹುದೇನೋ ಒಂದು ಶಂಖ ಆಳದಾಚೆಯಿಂದ
ಆದರೆ.. ತಡವರಿಸುತ್ತೇನೆ.. ಹುಮ್ಮಸ್ಸು ತಡೆಯುತ್ತೇನೆ.
ಯಾರಿಗೆ ಗೊತ್ತು.. ನನ್ನಂತೆ ನಿನ್ನ ಕಣ್ಣುಗಳಿಗೂ ಆಳವೇ ಇರಲಿಕ್ಕಿಲ್ಲ..!!

Rating
No votes yet