ನಮ್ಮ ಬದುಕಿನಲ್ಲಿ ಸಂಬಂಧಗಳನ್ನು ಬಿಟ್ಟು ಮತ್ತೇನಿದೆ?
ಹೋಯ್ ಬಜಾರಿ
ನೀ ಪತ್ರ ಓದಲು ಒಲ್ಲೆ ಅಂದಮೇಲೆ ನಂಗೂ ಪತ್ರ ಬರೆಯಲು ಒಲ್ಲೆ ಅನ್ನಿಸುತ್ತಿದೆ! ನೀನು ಹೇಳಿದ ಹಾಗೇ ಬದುಕಿನ ಎಲ್ಲಾ ಘಟ್ಟಗಳು ಒಂದು ಕ್ರ್ಎಜು ಅಷ್ಟೆ. ಅವುಗಳಲ್ಲಿ ಈ ಲವ್ವು ಫೀಲುಗಳು ಒಂದು. ಒಂದು ವಯಸ್ಸಿನಲ್ಲಿ ಪ್ರತಿಯೊಬ್ಬನೂ ತನ್ನ ಚಿಂತನೆ, ಆಲೋಚನೆಗಳ ಮೇಲೆ ಬದುಕು ಕಟ್ಟಿಕೊಳ್ಳುವುದನ್ನು ಕಲಿಯುತ್ತಾನೆ. ಅಪ್ಪ, ಅಮ್ಮ, ಗೆಳೆಯ ಎಲ್ಲಾ ಐಡೆಂಟಿಗಳನ್ನು ಕಳಚಿಕೊಂಡು ಬದುಕಲು ಪ್ರಯತ್ನಿಸುತ್ತಾನೆ. ಒಂದಿಷ್ಟು ದಿನ ಬದುಕಿಯೂ ಬದುಕುತ್ತಾನೆ! ಆ ಮೇಲೆ ಅವನಿಗೆ ತಾನು ಒಂಟಿ ಎಂಬ ಭಾವನೆ ಕಾಡಲು ಶುರುವಿಡತ್ತೆ. ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಸಂಗಾತಿ ಬೇಕು ಅನ್ನಿಸತ್ತೆ. ಹಾಗೇ ಶುರುವಾಗುವುದು ಈ ಲವ್ವು, ಫೀಲು. "ಹೆಣ್ಣು ಬಂದು ಮೂರು ದಿನ ಎಮ್ಮೆ ಬಂದು ಆರು ದಿನ’ ಅನ್ನೋ ತರಹದ್ದು ಇದರ ಟೇಸ್ಟು. ಒಂದಷ್ಟು ದಿನಕ್ಕೆ ಹೆಚ್ಚಿನವರಿಗೆ ತಾವು ಆರಿಸಿಕೊಂಡ ಜೀವನದ ಸಂಗಾತಿ ಕೂಡ ಬೋರ್ ಅನ್ನಿಸಿ ಬಿಡುತ್ತಾಳೆ. ಹಾಗಾಗಿಯೇ ಇರಬೇಕು ಕಣೇ ಕೆಲವರು ೬೦ ದಾಟಿದರೂ ೨೦ರ ಕೂಸುಗಳ ಜೊತೆ ಸುತ್ತಲು ಹಾತೊರೆಯುವುದು!
ಇದೊಂದು ತರಹ ವಿಚಿತ್ರ ಸಮಾಜ ಅಲ್ವಾ? ಎಲ್ಲಿ ನೋಡಿದರೂ ಗಂಡು, ಹೆಣ್ಣುಗಳ ಸಂಬಂಧ. ಕೆಲವು ನೈತಿಕವಂತೆ, ಇನ್ನೂ ಕೆಲವು ಅನೈತಿಕವಂತೆ! ಹುಡುಗ, ಹುಡುಗಿ ಒಟ್ಟಿಗೆ ಇದ್ದರು ಅಂದ್ರೆ ಅವರ ನಡುವೆ ಯಾವುದಾದರೂ ಒಂದು ಸಂಬಂಧ ಕಟ್ಟದೇ ಇದ್ದರೆ ನಮಗೆ ಸಮಾಧಾನವೇ ಇಲ್ಲ! ಇನ್ನೂ ನಮ್ಮ ಹಳ್ಳಿಯ ಮನೆಯ ಮಂದಿಗಳು ಇವತ್ತಿಗೂ ಬದುಕು ಅಂದ್ರೆ ಸಂಬಂಧ ಬೆಳೆಸುವುದು, ಮದ್ವೆ, ಸಂಸಾರ...ಇಷ್ಟೆ ಅನ್ನೋ ಜಾಡ್ಯದಲ್ಲೇ ಮುಳುಗಿ ಹೋಗಿದ್ದಾರೆ. ಒಂತರಹ ನಿನ್ನ ಅಪ್ಪ, ಅಮ್ಮಂದಿರಂತೆ! ಆದ್ರೆ ನಮಗೆಲ್ಲಾ ಅವುಗಳಿಗಿಂತ ಭಿನ್ನವಾದದ್ದು ಏನಿದೆ ಎಂದು ಆಲೋಚಿಸುವುದೇ ಒಂದು ಬದುಕು!
ಹೌದಲ್ವಾ ನಮ್ಮ ಬದುಕಿನಲ್ಲಿ ಸಂಬಂಧಗಳನ್ನು ಬಿಟ್ಟು ಮತ್ತೇನಿದೆ? ನನಗಂತೂ ಗೊತ್ತಿಲ್ಲ. ನನ್ನ ಮಟ್ಟಿಗೆ ಬದುಕೆಂಬುದೊಂದು ಮೂಕಜ್ಜಿಯ ಕನಸೇ ಸರಿ. ಹೋಗ್ಲಿ ಬಿಡು ಕೆಲವಷ್ಟು ವಿಚಾರಗಳ ಕುರಿತಾಗಿ ಜಾಸ್ತಿ ಆಲೋಚಿಸಬಾರದಂತೆ. ಹಾಗೆ ಆಲೋಚಿಸಿದರೆ ನಾವು ಹುಚ್ಚರಾಗುತ್ತೇವಂತೆ ಹೊರತು ಸಮಾಜ ಬದಲಾಗದಂತೆ. ಮತ್ತೆ ನಿನ್ನ ಮದ್ವೆ ವಿಚಾರ ಎಲ್ಲಿಯವರೆಗೆ ಬಂತು? ನನ್ನ ಜೀವನದ ಗೆಳತಿಯಾದ ನೀನು ಬೇರೆಯವರ ಮನೆ ಸೇರುತ್ತೀಯಾ, ನಾನು ನಿನ್ನನ್ನು ಕಳೆದುಕೊಳ್ಳುತ್ತೀನಿ ಅನ್ನೋ ಭಯ ಕಾಡಲು ಶುರುವಿಟ್ಟಿದ್ದೆ ಕಣೇ. ಅಂದಹಾಗೆ ಈ ಬದುಕಿನಲ್ಲಿ ನಾವು ಎಲ್ಲವನ್ನು ಕಳೆದುಕೊಳ್ಳುವುದೇ ಹೊರತು ಗಳಿಸುವುದೇನನ್ನು ಇಲ್ಲ. ಯಾಕಂದ್ರೆ ನಾವು ಬರುವಾಗ ಏನನ್ನು ತರುವುದಿಲ್ಲ. ಹೋಗುವಾಗ ಏನನ್ನು ತೆಗೆದುಕೊಂಡು ಹೋಗುವುದಿಲ್ಲ ಎಂಬುದು ನನ್ನ ನಿಲುವು. ಹಾಗಾಗಿಯೇ ನಾನು ನಿನಗೆ ಆವತ್ತೇ ಹೇಳಿದ್ದು, ನೀನು ನನ್ನ ಗೆಳತಿ ಹೊರತು ಮತ್ತೇನೂ ಅಲ್ಲ ಅಂತಾ. ಅದನ್ನು ನೀನು ಖುಷಿಯಿಂದ ಸ್ವೀಕರಿಸಿದ್ದೆ. ಆದ್ರೂ ಜನ ನನ್ನ, ನಿನ್ನ ನೋಡಿ ಏನೇನೋ ಆಡಿಕೊಂಡರು. ನಾನು ನಿನಗೆ ಬರೆದ ಪತ್ರವನ್ನೆಲ್ಲಾ ಪ್ರೇಮ ಪತ್ರ ಅಂತಾ ಕರೆದರು! ಹೋಗ್ಲಿ ಬಿಡು ನಾವು ಬದುಕುವುದು ಆ ಜನಕ್ಕಾಗಿ ಅಲ್ಲ. ನಮಗಾಗಿ. ಮತ್ತೆ ವಿಶೇಷ. ನಂಗೂ ಈಗ ಕೆಲಸದ ಬ್ಯುಸಿ ಕಣೇ! ವರ್ಷಗಳ ನಂತರ ವೃತ್ತಿಯಲ್ಲಿ ಹೌದೋ ಅಲ್ವೋ ಅನ್ನೋ ತರಹ ನೆಲೆ ಕಂಡುಕೊಂಡಿದ್ದೇನೆ. ಪತ್ರಿಕೋದ್ಯಮ ಎಂಬ ಹಾದರದ ದಂಧೆಯಲ್ಲಿ ಬದುಕು ಕಟ್ಟಿಕೊಳ್ಳುವ ತವಕದಲ್ಲಿದ್ದೇನೆ. ಅಂದಹಾಗೆ ನಿನಗೆ ಒಂದ್ಸಾರಿ ಈ ಹಾದರ ಲೋಕದ ಕಥೆ ಹೇಳಿದ್ದೆ ಅನ್ಸತ್ತೆ ಅಲ್ವಾ? ಒಂದಿಷ್ಟು ಕಚ್ಚೆ ಹರುಕರ, ಹುಡುಗಿಯರು ಅಂದ್ರೆ ಜೊಲ್ಲು ಸುರಿಸಿ ಅವಕಾಶ ಕೊಡುವ ಒಂದಿಷ್ಟು ತೆವಲು ತೆವಲು ಚೀಫ್ಗಳ ಜೀವನ ಚರಿತ್ರೆ ವಿವರಿಸಿದ್ದೆ ಅಲ್ವಾ? ಹೌದು ಕಣೇ ಈ ಫೀಲ್ಡ್ ಹಾಗೆ. ಎಷ್ಟೋ ಪತ್ರಕರ್ತ ಮಹಾಶಯರು ಇತರರಿಗೆ ಪುಂಖಾನು ಪುಂಖವಾಗಿ ಉಪದೇಶ ಮಾಡುತ್ತಾರೆ. ತಾವು ಮಾತ್ರ ಮಾಡಬಾರದ ಹಾದರವನ್ನೆಲ್ಲಾ ಮಾಡುತ್ತಾರೆ. ಇಲ್ಲಿ ಪ್ರತಿಭೆಗೆ ಬೆಲೆಯಿಲ್ಲ. ಕ್ರಿಯೇಟಿವಿಟಿಗೆ ಅವಕಾಶವಿಲ್ಲ. ಇಲ್ಲಿ ನೆಲೆಯೂರಲು ಲಾಭಿ ಬೇಕು. ಅದಿಲ್ಲವಾದರೆ ದಷ್ಟಪುಷ್ಟವಾದ ಮೊಲೆ ಬೇಕು. ನನಗಂತೂ ಇಲ್ಲಿನ ಬದುಕು ಸಾಕು ಸಾಕೆನಿಸಿದೆ. ಆದ್ರೂ ಒಂದು ಹುಂಬು!
ಯಾವ ರಾಜಕಾರಣಿಗೂ, ಯಾವ ರೌಡಿಗೂ, ಯಾವ ಲೋಪರ್ಗಳಿಗೂ ಕಮ್ಮಿಯಿಲ್ಲದ ಪತ್ರಕರ್ತರು ಅಲ್ಲಲ್ಲ ಪುತ್ರಕರ್ತರು ಇಲ್ಲಿದಾರೆ. ಅವರ ಬಗ್ಗೆ ನಾವೆಲ್ಲಾ ಮಾತಾಡೋದು ಮಹಾಪರಾಧವಾಗತ್ತೆ! ಹಾಗಾಗಿ ನನ್ನ ಮಾತನ್ನು ಇಲ್ಲಿಗೆ ನಿಲ್ಲಿಸುತ್ತೇನೆ. ಗೊತ್ತು ಗುರಿಯಿಲ್ಲದ ನಮ್ಮ ಬದುಕನ್ನೆಲ್ಲಾ ನೆನಸಿಕೊಂಡರೇನೆ ಮೈ ಜುಂ ಅನ್ನತ್ತೆ. ಎನಿ ವೇ ನೀನು ಮದ್ವೆಯಾಗಿ ಲೈಫಲ್ಲಿ ಬೇಗ ಸೆಟ್ಲ ಆಗಿ ಬಿಡು! ಮದ್ವೆ ಫಿಕ್ಸ್ ಆದರೆ ಕರೆಯೋಕೆ ಮರಿಬ್ಯಾಡ.
ನಿನ್ನ ಮದ್ವೆ ಊಟಕ್ಕೆ ಕಾಯುವವ...