ಅಗಸ ಮತ್ತವನ ಮೂರ್ಖ ಕತ್ತೇ ಕತೆಯ ರೀಮೇಕ್

ಅಗಸ ಮತ್ತವನ ಮೂರ್ಖ ಕತ್ತೇ ಕತೆಯ ರೀಮೇಕ್

ಒರಿಜಿನಲ್ ವರ್ಸನ್ನು:

ಒಂದಾನೊಂದ್ ಕಾಲ್ದಾಗೇ ಒಬ್ಬ ಅಗಸಪ್ಪ ಮತ್ತವ್ನ ಜತೆ ಒಂದು ಕತ್ತೆ ಹಾಗೂ ನಾಯಿ ವಾಸವಾಗಿದ್ವಂತೆ. ಒಂದು ರಾತ್ರಿ ಇಡೀ ಪರ್ಪಂಚಾನೇ ಮಲ್ಕಂಡಿದ್ದಾಗ, ಕಳ್ಳ ಒಬ್ಬ ಅಗಸಪ್ಪನ ಮನೆಗೆ ಕದಿಯಾಕೇ ಬಂದ್ನಂತೆ. ಸಾಮಾನ್ಯವಾಗಿ ಯಥಾಪರ್ಕಾರ ಕತೇಗುಳಲ್ಲಿ ನಡೆಯೋ ಅಂಗೆ ಅಗಸಪ್ಪ ಮಲ್ಕಂಡಿದ್ದ. ನಾಯಿನೂ, ಕತ್ತೇನೂವೆ ಎದ್ದಿದ್ವು. ಸಾಮಾನ್ಯವಾಗಿ ನಡೆಯೋ ಅಂಗೆ ಈ ನಾಯಿ ಬೊಗುಳ್ಳಿಲ್ಲ. ಯಾಕಪ್ಪಾ ಅಂತಂದ್ರೆ, ಅದಕ್ಕೇ ತನ್ನ ಒಡೆಯನ್ ಮ್ಯಾಗೆ ಜಿದ್ದು. ಅವ ತನ್ನ ಸರಿಯಾಗಿ ನೋಡ್ಕಾತಿರ್ಲಿಲ್ಲ ಅಂತ. ಅದ್ಕೆ ಅವಂಗೆ ಪಾಟ ಕಲ್ಸಾಕೆ ಇದೇ ಸರ್ಯಾದ ಟೇಂ ಅನ್ಕಂದು ಗಪ್ಚುಪ್ ಅನ್ಕಂದು ಸುಮ್ಗೆ ಕುಂತ್ಕಂದ್ಬುಡ್ತಂತೆ. ಆದ್ರೆ ಯಾಕೋ ಇದು ಕತ್ತಗೆ ಇದು ಸರಿ ಅನ್ನುಸ್ಲಿಲ್ವಂತೆ. ಅದ್ಕೇ ಅದು ನಾಯೀಗೆ "ನೀ ಬೊಗಳ್ನಿಲ್ಲಾ ಅಂದ್ರೆ ನಾನೇ ಏನಾರಾ ಮಾಡ್ಬೇಕಾಯ್ತದೆ" ಅಂತ ಹೇಳುದ್ರೂ ನಾಯಿ ಸುಮ್ಕೇ ಕುಂತ್ಕತಂತೆ. ಸರಿ ಇನ್ನೇನು ಮಾಡಾಕಾಯ್ತದೆ ಅಂದ್ಕಂದು ಕತ್ತೇ ಹಿಮೇಶ್ ರೇಶಮಿಯನ್ ಸ್ಟೇಲ್ನಾಗೆ ಹಾಡೇಳಾಕೆ ಸುರು ಅಚ್ಕಂಡಿದ್ದೇ ಬಂತು ಅದ್ಕೆ ಗ್ರಾಚಾರ. ಕಳ್ನೇನೋ ನಂಗ ನಿನ್ ಹಾಡಾ ಕೇಳೋಕಾಯ್ತಾ ಇಲ್ಲಾ ಸಿವ್ನೇ ಅಂದ್ಬುಟ್ಟು ಅದ್ಕೇ ಕೈ ಮುಗುದ್ಬುಟ್ಟು ಓಡ್ಬುಟ್ನಂತೆ. ಇತ್ತಾ ಕಡೆ ಅಗಸಪ್ಪ ಎದ್ದವ್ನೆ ನಡುರಾತ್ರಿನಾಗೇ ಕಾರಣಾ ಇಲ್ಡೇ ಕತ್ತೇ ಕೂಗ್ದಂಗೆ ಕೂಗ್ತವ್ನಲ್ಲಾ ಅಂದ್ಕಂಡಿದ್ದೇ ಕತ್ತಗೆ ಕತ್ತ್ಗ್ ಒದ್ದಂಗೆ ಒದ್ನಂತೆ.

ಈ ಕತೆ ನೀತಿ ಏನೂಪ್ಪಾ ಅಂತಂದ್ರೆ:
ಯಾರೂನೂವೇ ತನ್ ಕೆಲ್ಸಾ ಬಿಟ್ಟು ಬ್ಯಾರೇವ್ರು ಕೆಲ್ಸಕ್ಕೆ ಕೈ ಹಾಕ್ಬಾರ್ದು. ಅವರವ್ರು ಅವರವ್ರ್ ಕೆಲ್ಸಾನೇ ಮಾಡ್ಬೇಕು ಅಂತ.

ರೀಮೇಕ್ :

ಲಾಂಡ್ರಿಯವರ ಜಾತಿಗೆ ಹುಟ್ಟಿದ ಕತೆಯ ನಾಯಕ ದೇಶದ ಪ್ರಸಿದ್ಧ ಮ್ಯಾನೇಜ್‌ಮೆಂಟ್ ಸಂಸ್ಥೆಯಿಂದ ಪದವಿ ಪಡೆದಿರುತ್ತಾರೆ. ಹಾಗಾಗಿಯೇ ಅವರು ಚೌಕಟ್ಟಿನಿಂದಾಚೆ(thinking out of the box) ಯೋಚಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆ ರಾತ್ರಿ ಕತ್ತೆ ಅರಚಿದ್ದಕ್ಕೆ ಏನೋ ಕಾರಣವಿರಬೇಕು ಅಂದುಕೊಂಡು ವಸ್ತುಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಕತ್ತೆ ಬೊಗಳಿದ್ದಕ್ಕೆ ಕಾರಣ ತನ್ನ ಮನೆಗೆ ಕನ್ನ ಹಾಕಲಿಕ್ಕೆ ಕಳ್ಳ ಬಂದಿದ್ದನೆಂಬುದು ಹಾಗೂ ಈ ಕುರಿತು ತನ್ನನ್ನು ಎಚ್ಚರಿಸಲು ಕತ್ತೆ ಹಾಗೆ ಅರಚಿದ್ದು ತಿಳಿಯಿತಂತೆ. ಆ ತಕ್ಷಣ ಕರ್ತವ್ಯದ ಕರೆದಿಂದಾಚೆಗೂ ಹೋಗುವ (going beyond the call of the duty) ಕತ್ತೆಯ ಹೆಚ್ಚಿನ ಪ್ರಯತ್ನ (extra initiative) ವನ್ನು ಪರಿಗಣಿಸಿ ಸಾಕಷ್ಟು ಮನ್ನಣೆ ನೀಡಲಾಯಿತಲ್ಲದೆ, ಹೆಚ್ಚಿನ ಸೌಕರ್ಯ ಹಾಗೂ ಹೆಚ್ಚುವರಿ ಭತ್ಯೆಗಳನ್ನು ನೀಡಲಾಯಿತು.

ಇತ್ತ ನಾಯಿಯ ಬದುಕು ಯಥಾಪ್ರಕಾರ ಸಾಗುತ್ತಿತ್ತು. ಕತ್ತೆಗೆ ಹೆಚ್ಚಿನ ಪ್ರೇರೇಪಣೆ(motivation) ನೀಡಿ ನಾಯಿಯ ಕೆಲಸವನ್ನೂ ಮಾಡಿಸಲಾಗುತ್ತಿತ್ತು. ಹೀಗೇ ಕಾಲ ಕಳೆಯುತ್ತಾ ವಾರ್ಷಿಕ ಮೌಲ್ಯಮಾಪನ(annual appraisal)ದ ಸಮಯ ಬಂದಿತು. ಆಗ ನಾಯ ತನ್ನ ಪಾಲಿನ ಕರ್ತವ್ಯವನ್ನು ಪೂರೈಸುತ್ತಿರುವುದಾಗೆ ತೀರ್ಮಾನಿಸಲಾಯಿತು. ಆಗ ನಾಯಿಗೆ ತನ್ನ ಪಾಲಿನ ಕೆಲಸವನ್ನು ಕತ್ತೆಯೆ ಮಾಡುತ್ತಿರುವುದು ತಿಳಿದು ತಾನಿನ್ನು ನಿಶ್ಚಿಂತೆಯಿಂದ ಅತ್ತಿಂದಿತ್ತ ಅಡ್ಡಾಡುತ್ತಾ, ಬೇಕೆಂದಾಗ ನಿದ್ದೆ ಮಾಡುತ್ತಾ ಕಾಲಹರಣ ಮಾಡಬಹುದಲ್ಲ ಎಂದು ತಿಳಿದು ಭಡ್ತಿ ನೀಡಿದಷ್ಟೆ ಸಂತೋಷವಾಯಿತು.

ಕತ್ತೆ "ಅದ್ಭುತ ಕೆಲಸಗಾರ" (star performer -ತಾರಾ ಪ್ರದರ್ಶಕ) ಎಂಬ ಅಭಿದಾನಕ್ಕೆ ಪಾತ್ರವಾಯಿತು. ಇದರಿಂದಾಗಿ ಕತ್ತೆಯ ಜವಾಬ್ದಾರಿ ಮತ್ತಷ್ಟು ಹೆಚ್ಚಿ ತಾನು ಈಗಾಗಲೇ ತೋರಿಸಿರುವ ಅದ್ಭುತ ಪ್ರದರ್ಶನವನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಹೆಗಲ ಮೇಲೆ ಬಿತ್ತು.

ಆನಂತರ, ನಿರೀಕ್ಷೆಯಂತೆ ಕತ್ತೆಯ ಮೇಲೆ ಯಾವಾಗಲೂ ಕೆಲಸದ ಹೊರೆ ಹೆಚ್ಚುತ್ತಿತ್ತು. ಸದಾ ಕಾಲ ಇರುವ ಈ ಕೆಲಸದೊತ್ತಡವನ್ನು ತಾಳಲಾರದೆ ಕತ್ತೆ ಈಗ ಬೇರೆ ಕೆಲಸದ ಶೋಧದಲ್ಲಿದೆ.....

ವಿ.ಸೂ.:
ಈ ಕತೆಯಲ್ಲಿ ಬರುವ ಪಾತ್ರಗಳು ಕಾಲ್ಪನಿಕವಲ್ಲ. ಈ ಕತೆಯಲ್ಲಿನ ಪಾತ್ರಗಳು ಮೃತ(ಮೃತರಾಗುತ್ತಿರುವ) ಹಾಗೂ ಜೀವಂತ ವ್ಯಕ್ತಿಗಳನ್ನು ಹೋಲಿದಲ್ಲಿ ಅದು ಕೇವಲ ಉದ್ದೇಶಪೂರ್ವಕ.

Rating
No votes yet

Comments