ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?

ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?

ಬರಹ

ನಾವೇಕೆ ಹೀಗೆ?

‘ಧಾರವಾಡ ಬಳಿಯ ಸುತಗಟ್ಟಿಯ ‘ಡಾನ್ ಬಾಸ್ಕೋ’ ಅಕಾಡೆಮಿಗೆ ಮಕ್ಕಳನ್ನು ಹೊತ್ತು ತರುತ್ತಿದ್ದ ಶಾಲಾ ಬಸ್ಸನ್ನು ಬೆನ್ನಟ್ಟಿ ಬಂದ ಪ್ರತಿಭಟನಾಕಾರರು ಎಡೆಬಿಡದೆ ಕಲ್ಲು ತೂರಿ ಎಲ್ಲ ಗಾಜು ಪುಡಿಗೊಳಿಸಿ, ಬಸ್ ಜಖಂಮಾಡಿದ್ದರೆ. ಬಿ.ವಿ.ಬಿ.ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ವಿ.ಟಿ.ಯು. ಸೆಮೆಸ್ಟರ ಪರೀಕ್ಷೆ ಬರೆಯಲಾಗದೇ ಸಾವಿರಾರು ವಿದ್ಯಾರ್ಥಿಗಳು ಬಾಗಿಲು ಕಾಯುತ್ತಿದ್ದಾರೆ’.

ಇದೀಗ ಬಂದ ಸುದ್ದಿ ಇದು.

ಕೊಲೆ ಮಾಡಿದವನ ಕೃತ್ಯದ ಹಿಂದಿನ ಉದ್ದೇಶವನ್ನು ಸಹ ನ್ಯಾಯಾಲಯ ಕೇಳದೇ ಶಿಕ್ಷೆ ವಿಧಿಸುವುದಿಲ್ಲ. ಆದರೆ ಪ್ರತಿಭಟನಾಕಾರರ ಉದ್ದೇಶ ವಿಚಾರಿಸುವವರ ಯಾರು? ಇವರು ಮಾಡಿದ್ದನ್ನೆಲ್ಲ ಪುರಸ್ಕರಿಸಬೇಕೆ? ಬಂದ್ ಕರೆ ನೀಡಿದವರಿಗೆ, ಸಂಘಟನೆಗಳ ತಲೆಗೆ ಆ ಜವಾಬ್ದಾರಿ ಕಟ್ಟುವ ಕೆಲಸ ಮೊದಲಾಗಬೇಕು. ಶಿಕ್ಷೆ ಸಹ ವಿಧಿಸುವಂತಾಗಬೇಕು. ಆಗ ಬಂದ್ ಗಳಿಗೆ ಮೌಲ್ಯ ಬಂದರೂ ಬರಬಹುದು.

ಇಲ್ಲದಿದ್ದರೆ,

ಬಡ ಕೂಲಿಕಾರರನ್ನು ಉಪವಾಸಕ್ಕೆ ತಳ್ಳಿ, ರೈತ ಮಹಿಳೆಯರನ್ನು ಅವರ ‘ಜೀವಾಂಮೃತ’ ಕಾಯಿಪಲ್ಲೆ ಸಮೇತ ಇಕ್ಕಟ್ಟಿನಲ್ಲಿ ಸಿಕ್ಕಿಸಿ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಪೀಕಲಾಟಕ್ಕೆ ಇಳಿಸಿ, ಪರೀಕ್ಷೆ ನಡೆಸ ಬೇಕಿರುವ ಪ್ರಾಧ್ಯಾಪಕರನ್ನು ದ್ವಂದ್ವದಲ್ಲಿ ಕೆಡವಿ, ರಸ್ತೆ ಬದಿಯ ಸಣ್ಣ-ಪುಟ್ಟ ವ್ಯಾಪಾರಸ್ಥರ ಹಾಗು ಅವರ ಮನೆಯವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಸಿ, ಅಂದೇ ದುಡಿದು ಉಣ್ಣ ಬೇಕಿರುವ ರಟ್ಟೆಯ ಬಲದ ಕಾಯಕವೇ ಕೈಲಾಸ ಮಾಡಿಕೊಂಡಿರುವವರಿಗೆ ನರಕದ ದರ್ಶನ ಮಾಡಿಸಿ, ನನ್ನಂತಹ ದಿನಗೂಲಿ ಪ್ರಾಧ್ಯಾಪಕರ ನೌಕರಿಗೆ ಕುತ್ತು ತಂದು, ಜಮ್ಮು-ಕಾಶ್ಮೀರದ ಮುಖ್ಯ ಮಂತ್ರಿಗೆ ಇಲ್ಲಿಂದ ಚುರುಕು ಮುಟ್ಟಿಸುವ ಹೆಬ್ಬಯಕೆಯ ಜಾಣರಿಗೆ ಏನೆನ್ನುವುದು?

‘ಹಿಂದಿನ’ ವಿಶ್ವ ಹಿಂದು ಪರಿಷತ್ ನ ‘ಇಂದಿನ’ ಸಂಪೂರ್ಣ ಬಂದ್ ಕರೆ ಅದೆಷ್ಟು ಜನರ ರೊಟ್ಟಿ ಕಸಿಯಲಿಕ್ಕಿಲ್ಲ. ಭವಿಷ್ಯವನ್ನು ಅಂಧಕಾರಕ್ಕೆ ತಳ್ಳಲಿಕ್ಕಿಲ್ಲ. ಬೆಲೆ ಏರಿಕೆಯಿಂದ ಮೊದಲೇ ತತ್ತರಿಸಿರುವ ಮಧ್ಯಮ ವರ್ಗದ ನನ್ನಂತಹ ಲಕ್ಷಾಂತರ ಜನರ ಗಾಯಗಳ ಮೇಲೆ ಇದು ಅಕ್ಶರಶ: ಬರೆ. ಇದು ಸಾಂಕೇತಿಕವಾಗಿದ್ದರೆ ಗತ್ಯಂತರವಿಲ್ಲ. ನನ್ನ ಅಭ್ಯಂತರವೂ ಇಲ್ಲ. ಮಾಧ್ಯಮಗಳಲ್ಲಿ ಕೆಲವರು ಸುದ್ದಿಯಾಗಬೇಕು. ರಾಜ್ಯವ್ಯಾಪಿ, ರಾಷ್ಟ್ರವ್ಯಾಪಿ. ವಿದ್ಯುನ್ಮಾನ ಮಾಧ್ಯಮಗಳ ‘ಟಿಆರ್ ಪಿ’ ಕೂಡ ಹೆಚ್ಚಬೇಕು ಇಂತಹವರ ಪ್ರತಿಭಟನೆಗಳಿಂದ!ಸಂತೋಷ. ಸುದ್ದಿ ಮನೆಗಳಿಗೂ ಮುಖಪುಟ ತುಂಬಿಸಲು ಇಂತಹ ಸುದ್ದಿ-ಓದುಗನಿಗೆ ಗುದ್ದು ಇರಲೇಬೇಕು. ಇದರಿಂದ ಸಮಸ್ಯೆಗೆ ಪರಿಹಾರ ದೊರಕುವಂತಿದ್ದರೆ ಸುಂದರ. ಕೇವಲ ತೀಟೆ ತೀರಿಸಿಕೊಂಡಂತಾದರೆ.

ಉದಾಹರಣೆಗೆ ನಮ್ಮ ಧಾರವಾಡದಲ್ಲಿ ಪ್ರತಿಭಟನೆಗಳನ್ನೆ ವೃತ್ತಿಯನ್ನಾಗಿ ಸ್ವೀಕರಿಸಿದವರ ದೊಡ್ಡ ಮಿಲಿಟರಿ ಇದೆ. ಕೆಲವೊಮ್ಮೆ ಮಾಧ್ಯಮದವರ ಮಾರ್ಗದರ್ಶನವೂ ಅವರಿಗೆ ಲಭ್ಯ ಎನ್ನುವುದು ಈಗ ಗೌಪ್ಯವಾಗಿ ಉಳಿದಿಲ್ಲ! ಉದಾಹರಣೆಗೆ- ಧಾರವಾಡದ ಆಲೂರು ವೆಂಕಟರಾವ್ ವೃತ್ತ, ಕರ್ನಾಟಕದ ಕುಲಪುರೋಹಿತರ ಹೆಸರಿರುವ ಈ ‘ಜ್ಯುಬಿಲಿ ಸರ್ಕಲ್’ ಸದಾ ಧರಣಿ ಮಂಡಲ ಮಧ್ಯದೊಳಗೆ ಕಂಗೊಳಿಸಿತ್ತಿರುತ್ತದೆ! ಕಾರಣಗಳು ಸಾವಿರಾರು. ನೆಪಗಳು ನೂರಾರು. ಪರಿಣಾಮ ಸೊನ್ನೆ! ಶ್ರೀ ಸಾಮಾನ್ಯ ಅನುಭವಿಸಿದ್ದು ಅಯ್ಯೋ ನರಕ ಯಾತನೆ. ಇತ್ತೀಚಿನ ಹೊಸ ಬೆಳವಣಿಗೆ ಎಂದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗಿನ ಪ್ರತಿಭಟನಾಕಾರರಿಗಾಗಿಯೇ ಮೀಸಲಿರುವ ಖಾಯಂ ‘ಟೆಂಟ್’! ಸೋಮವಾರದಿಂದ ಭಾನುವಾರದ ವರೆಗೆ ಸರದಿಯ ಮೇಲೆ ಈ ಟೆಂಟ್. ಬಹುಶ: ಬಾಡಿಗೇಗೂ ಲಭ್ಯವಿದೆ ಎಂದು ಸುದ್ದಿ. ಆ ಟೆಂಟ್ ಮಾಲೀಕ ಕಳೆದ ತಿಂಗಳು ಕಾರು ಖರೀದಿಸಿದ್ದಾನೆ ಎಂಬುದು ಅನ್ ಆಫಿಸಿಯಲ್!

ಒಟ್ಟಾರೆ ಹೋರಾಟದ ಉದ್ದೇಶಗಳೇನು? ಪಾಲ್ಗೊಂಡ ಕೆಲವರಿಗಾದರೂ ಉದ್ದೇಶ ತಿಳಿದಿದ್ದರೆ ಪುಣ್ಯ. ಸುಖಾ ಸುಮ್ಮನೆ ಮಕ್ಕ್ಳನ್ನು, ಅವರ ಪಾಲಕರನ್ನು ಪೀಕಲಾಟಕ್ಕೆ ತಳ್ಳಿ, ರಾಜ್ಯ ವ್ಯಾಪಿ, ರಾಷ್ಟ್ರವ್ಯಾಪಿ ಸುದ್ದಿಯಾಗಿಸಲು, ಬಸ್ಸಿಗೆ ಬೆಂಕಿ ಹಚ್ಚಿ, ಪೊಲೀಸರನ್ನು ಪ್ರಚೋದಿಸಿ ದಾರಿಹೋವುಕನನ್ನು ಬಲಿಯಾಗಿಸಿ, ಅಮಾಯಕ ಸತ್ತು, ಜಾತಿ, ಅಧಿಕಾರ, ಹಿತಾಸಕ್ತಿಗಳನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರಿಗೆ ಇದರಿಂದ ಲಾಭವಿದೆ ಹೊರತು ಸಾರ್ವಜನಿಕ ಹಿತ ಸಾಧನೆ ಎಲ್ಲಿದೆ ಹೇಳಿ?

ಪ್ರತಿಭಟನೆ ಸಂವಿಧಾನಾತ್ಮಕವಾಗಿರಬೇಕು. ನ್ಯಾಯಯುತವಾಗಿರಬೇಕು. ಶಾಂತ ರೀತಿಯಿಂದ ನಡೆಯಬೇಕು. ಪ್ರಜಾಪ್ರಭುತ್ವ ಮಾದರಿಯಲ್ಲಿರಬೇಕು. ಸಾಂಕೇತಿಕವಾಗಿರಬೇಕು. ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ, ವಯೋ ವೃಧ್ಧರಿಗೆ, ಜ್ನಾನವೃಧ್ಧರಿಗೆ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನಮ್ಮಿಂದ ತೊಂದರೆಯಾಗಬಾರದು. ಸಾರ್ವಜನಿಕ ಆಸ್ತಿ-ಪಾಸ್ತಿಗೆ ಧಕ್ಕೆಯಾಗಬಾರದು. ಶಾಲಾ ಮಕ್ಕಳು ಭಯಭೀತರಾಗಿ ಅಪಾಯಕ್ಕೆ ಒಡ್ಡಿಕೊಳ್ಳುವಂತಾಗಬಾರದು. ಮೇಲಾಗಿ ಪ್ರತಿಭಟನೆ ನಡೆಸುವವರು ನಾಗರಿಕ ಸಮಿತಿಗಳ ಮುಂದೆ ವಿಷಯಗಳನ್ನು ಪ್ರಸ್ತಾಪಿಸಿ ಸಮುದಾಯದ ಬಲ, ಪರವಾನಿಗೆ ಪಡೆಯುವಂತಾಗಬೇಕು. ಸಾರ್ವಜನಿಕರ ಸಹಭಾಗಿತ್ವವಿಲ್ಲದೇ, ಜನಾಂದೋಲನವಾಗಿ ರೂಪುಗೊಳ್ಳದೇ, ಸ್ಫಷ್ಟ ರೂಪು-ರೇಷೆಗಳು ಸಿದ್ಧಗೊಳ್ಳದೇ ಪ್ರತಿಭಟನೆಗಳು ನಿಷ್ಚಿತ ಗುರಿ ತಲುಪಲು ಸಾಧ್ಯವಿಲ್ಲ. ಹೋರಾಟದ ನೇತೃತ್ವ ವಹಿಸುವ ಮುಂದಾಳುಗಳು ಸಾಮಾಜಿಕ ಜವಾಬ್ದಾರಿ ಹೊತ್ತು, ನೈತಿಕವಾಗಿ ಪ್ರಶ್ನಾತೀತರಾಗಿ ಮುನ್ನಡೆಸಬೇಕು.

ಇಲ್ಲದ್ದಿದ್ದರೆ.. ಎಲ್ಲವನ್ನೂ ಸಹಿಸಿರುವ, ಸಹಿಸುತ್ತಿರುವ..೬ಕ್ಕೆ ಏರದೇ ೩ಕ್ಕೆ ಇಳಿಯದೇ ಒದ್ದಾಡುತ್ತಿರುವ ಮಧ್ಯಮ ವರ್ಗದ ನನ್ನಂತಹ ‘ಸೆಕೆಂಡ್ ಕ್ಲಾಸ್ ಸಿಟಿಜನ್’ ನೀಯತ್ತಿನಿಂದ ದುಡಿದು ದೇಶದಲ್ಲಿ ಚಾಲ್ತಿಇರುವ ಎಲ್ಲ ‘ಟ್ಯಾಕ್ಸ್’ ಕಟ್ಟಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡರೆ..ಬಹುಶ: ಯಡಿಯೂರಪ್ಪನವರ ಸರಕಾರ, ಸರಕಾರಿ/ಅರೆ ಸರಕಾರಿ/ಖಾಸಗಿ/ಅನುದಾನಿತ/ಅನುದಾನ ರಹಿತ/ಶಾಶ್ವತ ಅನುದಾನರಹಿತ/ದಿನಗೂಲಿ/ಖಾಯಂ/ ಇತ್ಯಾದಿ..ಘೋಷಿತ/ಅಘೋಷಿತ ನೌಕರರಿಗೆ ಪರಿಹಾರ ಘೋಷಿಸಬೇಕಾದೀತು!