ಒಲವಿನ ಹೊಳೆ

ಒಲವಿನ ಹೊಳೆ

ಬರಹ

ಒಲವಿನ ಹೊಳೆ ಹುಟ್ಟಿ ನನ್ನೆದೆಯ ಒಳಗೆ
ಹರಿದು ಬರೊವರೆಗೂ ನಿನ್ನೆದೆಯ ಕಡೆಗೆ
ನನ್ನೊಡಲ ಕಡಲಾಗಿ ನಾ ಮಾಡಿಕೊಂಡು
ಕಾಯುವೆನಬ್ಬರಿಸದೆ ಶಾಂತಿಯಿಂದಿದ್ದುಕೊಂಡು

ಮೊದಲ ಮಳೆ ಬರುವುದನು ನೆಲವು ಕಾದಂತೆ
ಅರಳುವಾ ಹೂಗಳಿಗೆ ತುಂಬಿಗಳು ಕಾದಂತೆ
ತಿಂಗಳೊಡಮೂಡುವುದ ನೈದಿಲೆಯು ಕಾದಂತೆ
ನಿನಗಾಗಿ ಕಾಯುವೆನು ಬಾಳ ಹೊಸ್ತಿಲಲಿ ನಿಂತು

ನಾನು ನೀ ಜೊತೆಗೂಡಿ ಬಾಳ ಮನೆಯನು ಸೇರಿ
ನಮ್ಮದೇ ರಾಜ್ಯವನು ಕೈಯಾರ ಕಟ್ಟೋಣ
ಒಲವಿನ ಬುನಾದಿಯನು ಅದಕಾಗಿ ಹಾಕೋಣ
ಅರಸ ಅರಸಿಯರಂತೆ ನಾವಲ್ಲಿ ಬಾಳೋಣ

ಹಗೆಯನ್ನು ಬಗೆಯಿಂದ ಆಚೆಗೆ ನೂಕಿ
ಕತ್ತಿ-ಕಟಾರಿಗಳನು ಹಾಳು ಬಾವಿಗೆ ಹಾಕಿ
ಒಲವಿನಿಂದೊಂದಲೇ ರಾಜ್ಯಗಳ ಗೆದ್ದು
ಕೂಡಿ ಬಾಳುವ ನಾವು ದುರಾಸೆಗೆ ಬೀಳದಿದ್ದು

ಜಯಪ್ರಕಾಶ ನೇ ಶಿವಕವಿ.