ಮನೆಗೆ ಬಾ ಮಲ್ಲಿಗೆಯೆ
----1---------
ಇರುವುದಿದೊಂದೇ ಹೂ
ಬಾಡದಂತಿರಲಿ.
ಕುಲಕ್ಕೊಬ್ಬಳೇ ಮಗಳವಳು
ಎಂದೂ ನಗುತಿರಲಿ
ಕಿರಿಯವಳು ನಿಮಗೆ
ಅರಿಯದಾ ಹುಡುಗಿ.
ತಪ್ಪ ಮಾಡಿದರೆ ಮರೆತು
ಬಿಡಿ ಅಳಿಯರೇ...
------2------
ಅರಮನೆಯು ನನಗಿಲ್ಲ
ಿರುವ ಗುಡಿಸಲಿಗೆ ಇವಳೆ ರಾಣಿ.
ಹೂ ಇವಳು ನಿಮಗೆ
ಅರಸಿ ಎನಗೆ....
ತಪ್ಪಿರಲಿ, ಒಪ್ಪಿರಲಿ
ಒಪ್ಪುವೆನು ನಾನು.
ಕಣ್ಣರೆಪ್ಪೆಯಲಿಟ್ಟು
ಇವಳ ಕಾಯುವೆನು...
ನೀರು ಬರದಿರಲಿ
ನಿಮ್ಮ ಕಣ್ಣುಗಳೊಳಗೆ.
ನಾವು ಹೊರಡುವ ಹೊತ್ತು
ನಮ್ಮ ಮನೆಗೆ....
ನಗು-ನಗುತ ಕಳುಹಿಸಿ
ಅಳುವುದನು ನಿಲ್ಲಿಸಿ.
ಮಕ್ಕಳಾಟವಿದಲ್ಲ
ಮದುವೆಯಾಟವಿದು...
-------3---------
ಹತ್ತು ಮಾತಿಗೆ ತಾ
ಮುತ್ತನೊಂದಾಡುವಳು.
ಅವರ ಬಳ್ಳಿಯಲಿ
ಒಂದೇ ಹೂವಾಗಿ ಅರಳಿದವಳು...
ಕಾಡಿದೆನು, ಬೇಡಿದೆನು
ಅವರಪ್ಪ ಅವ್ವರನು.
ಚೆಲುವೆ ಅವಳು
ಅವಳನ್ನು ಪಡೆಯಲು...
--------4--------
ಇದೇ ನನ್ನ ಮನೆಯು
ನಮಗಿನ್ನು ಅರಮನೆಯು.
ಬಲಗಾಲ ಒಳಗಿಟ್ಟು
ಬಾ ನನ್ನ ಮಲ್ಲಿಗೆಯೇ...
ಮನೆಯ ಅಂಗಣದಿ
ಅರಳಿರುವ ಹೂಗಳಿಗೆ
ನಿನ್ನಪ್ಪ ಅವ್ವರು ಇಟ್ಟ
ಹೆಸರನೊಮ್ಮೆ ಉಸಿರು...
ಬಾಗಿಲ ಬಳಿಯೆ
ಬಾಗಿಹವು ಬಾಳೆಗಳು
ತೂಗುತಿಹವು ತೆಂಗು-ಕಂಗು
ಅವರೇ ಇನ್ನ ಮೇಲೆ ನಿನ್ನ ಬಂಧುಗಳು.
ಜಯಪ್ರಕಾಶ ನೇ ಶಿವಕವಿ.