ಹೊಗೆಯಾಗುಳಿದಿರುವ ನೆನಪುಗಳು

ಹೊಗೆಯಾಗುಳಿದಿರುವ ನೆನಪುಗಳು

ನನಗಿನ್ನೂ ಅದರ (ಸು)ವಾಸನೆ ಕೈಯಲ್ಲೇ ಇದೆ ಅನ್ನಿಸ್ತಿರುತ್ತೆ. ಒಂಥರಾ ಚೆನ್ನಾಗೆ ಇರುತ್ತೆ. ಅದರ "ಬಟ್" ವಾಸನೆ ಮಾತ್ರ ನನಗೆ ಅಇಷ್ಟ. ಅ ತೀರ ಒಂದೊಂದ್ಸಲ ಬೇಕು ಅನ್ನಿಸುತ್ತದೆ. ಆದ್ರೂ ಬಿಟ್ಟಾಗಿದೆ ಮತ್ತೆ ಬೇಡ..... ಮುಟ್ಟಿ ಆಗಲೇ ೨ ವರ್ಶಗಳಾಗಿವೆ. ಸಿಗರೇಟಿನಿಂದ ದೂರವಾಗುವ ವಿಶಯದಲ್ಲಿ ನನ್ನ ನಿಲುವು ಒಂದೇ, Out of Sight is Out of Mind.

ನಾನು ಏಳನೆ ಕ್ಲಾಸಲ್ಲಿ ಇದ್ದಾಗ, ನಮ್ಮನೆಗೆ ಬಣ್ಣ ಹಚ್ಚಲು ಸ್ವಲ್ಪ ವಯಸ್ಸಾದ ಸಾಬಿ ಪೇಂಟರ್, ಅವ್ನ ನಾಲ್ಕೈದು ಹುಡುಗರ ಜೊತೆಗೆ ಬಂದಿದ್ದ. ಅವನ ಸೈಕಲ್ ಚೈನ್-ಕವರ್ ಮೇಲೆ "ಅಮಿರ್ ಕಾನ್" ಅಂತ ದೊಡ್ಡದಾಗಿ ಬಿಳಿ ಬಣ್ಣದಲ್ಲಿ ಬರೆದಿತ್ತು. ಆವಾಗ ಬರೀ ’ರಂಗೀಲಾ ಅಮೀರ್ ಖಾನ್’ ;) ಗೊತ್ತಿದ್ದ ನನಗೆ, "ಅರೀ, ನಿಮ್ಮ ಹೆಸುರ್ ಏನ್ರಿ..?" ಅಂತ ಎರಡೆರಡು ಸಲ ಕೇಳಿದ್ದೆ. ಅವನು ತನ್ನ ವಿಶಿಷ್ಟ ಭಂಗಿಯಲ್ಲಿ ಕೈಯನ್ನು ಪೈಪಿನ ತರಹ ಮುಟಿಗೆ ಮಾಡಿ ತೋರು-ನಡು ಬೆರಳುಗಳ ನಡುವಿದ್ದ, ಇತ್ತಲಾಗ ಬೀಡಿನೂ ಅಲ್ಲ, ಅತ್ಲಾಗ ಸಿಗರೇಟ್ ಹಂಗೂ ಅಲ್ಲ ಅಂತದನ್ನ ಸುಯ್-ಸುಯ್-ಸುಯ್ ಅಂತ ಕಣ್ಣು-ಮುಚ್ಚಿ ಏಳದು, "ಆಮೀರ್ ಖಾಂ" ಅಂತ ಹೇಳಿ, ಒಂದು ಸಲ ಕೆಮ್ಮಿದ್ದ. ಅಷ್ಟಕ್ಕೆ ಬಿಡದ ನಾನು, "ನಿಮ್ ಹೆಸರು ಖರೇನ ಅಮೀರ್-ಕಾನೇನ್ರಿ..?" ಅಂತ ಕೇಳಿದ್ದೆ(ನನಗ್ಯಾಕೋ ಅನುಮಾನ), ಮೂಗು-ಬಾಯಿಂದ ಹೊಗೆ ಬಿಡುತ್ತ ತಲೆ ಅಲ್ಲಾಡಿಸಿದ್ದ. ಅವ್ನ ಬಿಡುತ್ತಿದ್ದ ಹೊಗೆ ವಾಸನೆ ಕುಡಿದು ನನಗೆ ತಲೆನೋವು-ವಾಕರಿಕೆ ಬರುತಿತ್ತು :( . ನಾಲ್ಕು ದಿನ ಅವನು ಸೇದಿ-ಸೇದಿ, ಕೆಮ್ಮಿ-ಕೆಮ್ಮಿ, ಹೊಗೆ ಹಾಕಿದ್ದರ flavour ನನ್ನ ತಲೇಲೆಲ್ಲೋ store ಆಗಿಬಿಟ್ಟಿತ್ತು. ಸ್ವಲ್ಪ ವರ್ಶಗಳಾದ ಮೇಲೆ ಗೊತ್ತಾಗಿದ್ದು, ಅವನು ಸೇದುತ್ತಿದ್ದಿದ್ದು ಗಾಂಜಾ ಅಂತ.

ಕಾಲೇಜು ಸೇರಿದಾಗಲೇ ನಾನಿದನ್ನ ಮುಟ್ಟಿದ್ದು(ಬಹಳ ಲೇಟೂ ಅಂತೀರಾ :) ). ಇದನ್ನು ಆಗ ತಾನೇ ಕಲಿತ ನಾನು ಮತ್ತು ಇಂತ ವಿದ್ಯೆಗಳನ್ನು ನನಗಿಂತ ಹೆಚ್ಚು ಬಲ್ಲ, ನನ್ನ ಓರಗೆಯ ಅಣ್ಣ(ಕಸಿನ್) ’ಏಮ’, ನಮ್ಮಜ್ಜ-ಅಜ್ಜಿ ಊರಿಗೆ ರಜೆಯಲ್ಲಿ ಹೋಗಿದ್ವಿ. ಮೊದಲೇ ಸಣ್ಣ ಊರು. ಮನೆ ಹೊರಗೆ ಕಾಲಿಟ್ಟರೆ ಸಾಕು,"ನೀವಿಬ್ರೂ ಮಾಂತ್ಯಾನ ಅಳ್ಯಿಯಾರು ಹೊದಲ್ಲ..? ಎಲ್-ಹೊಂಟಿರ್ರಲೇ..?" ಅಂತ ನಮ್ಮ ದೊಡ್ಡ ಮಾಮನ ಗೆಳೆಯರು ಗಲ್ಲಿಗೊಬ್ಬಬ್ರು ಸಿಗ್ತಿದ್ರು. ಅಲ್ಲಿ ಸಿಗರೇಟ್ ಸೇದೋಣವೆಂದರೆ, ಭಾರಿ ರಿಸ್ಕಿನ ಕೆಲಸ. ಆಗ ಮಟ-ಮಟ ಮಧ್ಯಾಹ್ನ, ನಮ್ಮ ಸಣ್ಣ-ಮಾಮನ ಬೈಕ್ ಹತ್ತಿ, ಊರ ಹೊರಗಿನ ಬೀಡಿ ಅಂಗಡಿಯಲ್ಲಿ ಒಂದು ’ಕಿಂಗು’ ನನಗೆ - ಒಂದು ’ಸ್ಮಾಲು’ ಏಮಂಗೆ ಅಂತ ತಗಂಡು ಏಳೆಂಟು ಕಿಲೋಮೀಟರ್ ಊರಾಚೆ ತೋಟಗಳ ಹತ್ರ ಹೋಗಿ ಸೇದುತ್ತಿದ್ದಿವಿ. ಒಂದ್ಸಲ ಹೀಗೆ ಸಿಗರೇಟಿನ ಗುಂಗಲ್ಲಿ match-box ಮರೆತುಬಿಟ್ಟಿದ್ದೆವು. ಆಗ ಬೈಕಿನ spark-plug ನಿಂದ ಸಿಗರೇಟ್ ’ಚಾಲೂ’ ಮಾಡಿದ್ದೆವು ;) . ಇನ್ನು ಸಿಗರೇಟಿಗೂ - ಸಂಡಾಸಿಗೂ ಬಿಡಿಸಲಾಗದ ನಂಟು. ಹಿಂಗೆ ಒಂದ್ಸಲ ’ಧಮ್’ ಹಚ್ಚಿ ಇನ್ನೇನು ಎರಡು ಸಲ ಎಳೆದಿಲ್ಲ, ಕೆಳಗೆ pressure ಶುರುವಾಯಿತು(ಮಧ್ಯಾಹ್ನದ ಭಾರೀ ಊಟದ ಹಿಕಮತ್ತೂ ಇತ್ತು). ಏಮಂಗೆ ನನ್ನ ಕಷ್ಟ ಹೇಳಿದ್ರೆ, "ಇಲ್ಲೇ ಗಿಡದ ಸಂದ್ಯಾಗ ಹೋಗಲೆ, ಯಾರರ ಬಂದ್ರ ನಾ ಹೇಳ್ತನಿ", ಅಂತ ಪಕ್ಕದಲ್ಲಿರು ಹೊಲ ತೋರಿಸಿದ. "ಆಮ್ಯಾಲ ನೀರ ಬೇಕಲಲೇ" ಅಂತ ಕೇಳಿದರೆ, "ಯಾದರ ಯಲಿ-ಪಲಿ ತಗಂಡು ವರಸ್ಕ್ಯಾರಲೆ.." ಅಂದ. ನನಗೆ ಒಂಥರಾ ಮುಜುಗರ ಆಗಿ ’ತಡಕಂಡು’, ಹೌದೋ - ಅಲ್ವೋ ಅಂತ ’ಧಂ’ ಎಳೆಯತೊಡಗಿದೆ. ದೇವರ ದಯದಿಂದ :) , ನನ್ನ pressure ಏಮಂಗೆ transfer ಆಯ್ತು :) . "ಇಲ್ಲೇ ಇರು ಬರ್ತನಿ" ಅಂತ ಹೋದವನು, ಒಂದೇ ನಿಮಿಷದಲ್ಲಿ ಪ್ಯಾಂಟ್ ಏರಿಸಿಕೊಳ್ಳುತ್ತ, "ಗಾಡಿ ಚಲೂ ಮಾಡಲೇ, ನಡಿ-ನಡೀಯಲೇ" ಅಂತ ಕೂಗಿಕೊಂಡು ಓಡಿಬರತೊಡಗಿದ. "ನನ್ನ ಹೊಲ ಅಂದ್ರ ಏನ ಹೇಲ-ತಿಪ್ಪಿ ಮಾಡ್ಕ್ಯಂಡಿರೇನಲೇ, ಭಾಡ್ಯಾಗಳ, ಇನ್ನೊಮ್ಮೆ ಈಕಡಿಗ ಬರ್ರಿ ಮಾಡ್ತನಿ" ಅಂತ ಅವನ ಹಿಂದೆ ಹೊಲದವ ಕೋಲು ಹಿಡಿದು ಓಡಿ ಬರುತ್ತಿದ್ದ. ಅಲ್ಲಿಂದ ತಪ್ಪಿಸಿಕೊಂಡ ಸೀದಾ ಮನೆಯೊಳಗೆ ಬಂದು, ಎಲ್ಲೀಯು ಹೋಗದಿರುವವರ ಹಾಗೆ ಕೂತವಿ.
ಕಾಲೇಜ್-ಹಾಸ್ಟಲಲ್ಲಿ ಗೆಳೆಯರ ರೂಮಿಗೆ ಮೊದಲ ಸಲ ಹೋದಾಗ, ನನ್ನ ಗೆಳೆಯನೊಬ್ಬ ಅವಸರದಲ್ಲಿ ಪ್ಯಾಂಟ್ ಇಳಿಸಿ - ಟವೆಲ್ ಸುತ್ತಿಕೊಂಡು, ಎಡಗೈಲಿ ಇನ್ನೂ ಹಚ್ಚದ ಸಿಗರೇಟ್ ಹಿಡಿದು, ಬಲಗೈಲಿ ಬಟ್ಟೆ - ತಡಿ - ದಿಂಬು - ಬುಕ್ಕು ಎಲ್ಲಾ ಸಂದಿಗಳಲ್ಲಿ ಹುಡುಕಿ match-boxನ್ನು ಹೆಕ್ಕಿ ತೆಗೆದು, toilet ಕಡೆಗೆ ಓಡಿಹೋದದ್ದನ್ನ ನೋಡಿ, ಒಂದ್ಸಲ ಸಿಗರೇಟ್ ಜೊತೆ ಸಂಡಾಸ್ ಮಾಡಿ ನೋಡುವ ಅಂತ try ಮಾಡಿದೆ. ಅಬ್ಬಾ.., ಅದೆಂತ "ಸುಖ", ವರ್ಣಿಸಲಸಾಧ್ಯ. ಅನುಭವಿಸಿಯೇ ನೋಡಬೇಕು. ;) ಆವಾಗ ಸಿಗರೇಟ್ ಇಲ್ದೆ, ಸಂಡಾಸ್ ಅಪೂರ್ಣ ಅನ್ನೋ "ನಂಬಿಕೆ" ನಮ್ಮೆಲ್ಲರದ್ದಾಗಿತ್ತು.

ಸಿಗರೇಟನ್ನ ನಾವು ”ಕೆಲ” ಗೆಳೆಯರು serious ಆಗಿ ತೆಗೆದುಕೊಂಡಿದ್ದು ಕಾಲೇಜಿಗೆ ಬಂದ ಮೇಲೆ. ಆಗ ಊರೆಲ್ಲ ಸುತ್ತಿ-ಸುತ್ತಿ ಸಿಗರೇಟ್ ಸೇದೋದೇ ನಮ್ಮ ಸಕಲ-ಧ್ಯೇಯವೂ ಆಗಿತ್ತು. ಕಾಲೇಜ್ ಕ್ಯಾಂಟೀನ್, ಢಾಬಾ, ಹೈ-ವೇ, ಬೆಟ್ಟ, ರೈಲ್ವೇ-ಸ್ಟೇಶನ್, ಬಸ್-ಸ್ಟ್ಯಾಂಡ್, ಸ್ನೂಕು, ಕೇರಮ್ಮು, ಕ್ರಿಕೆಟ್ಟು ಗ್ರೌಂಡು, ಎಲ್ಲಾ ಕಡೆ ಹೊಗೆಯುಗುಳಿ ಬರ್ತಿದ್ದೆವು. ಸಿಗರೇಟ್ ಸೇದುತ್ತಾ, ಪಕ್ಕದ ಮನೆ uncle ಗಳು ನನ್ನ ನೋಡಿದ್ದ್ರು. ಏನೂ ಆಗಲಿಲ್ಲ. ಯಾರೂ ಏನೂ ಮಾಡ್ಕತ್ತಾರೆ ಅನ್ನೋ ಭಾವನೆ ಆಗಲೆ ಬಂದಿತ್ತು. ಕಾಲೇಜಿನ ಎದುರಿನ ಶೆಟ್ಟಿಯ ಬೀಡಿ ಅಂಗಡಿಯಲ್ಲಿ, ನಮಗೆ ಸಾಲದ-ಸಿಗರೇಟ್ ಸಿಗುತ್ತಿತ್ತು. ಅಲ್ಲಿ ನಮ್ಮ credit-accountಗಳಿದ್ದವು. ಚಟ ಮಾಡಬೇಕೆಂದರೆ ಧೈರ್ಯ ಒಂದಿದ್ರೆ ಸಾಕು, ಆಮೇಲೆ ’ಉಳಿದ-ಎಲ್ಲಾ’ ತಂತಾನೆ ಬರ್ತವೆ ಅನಿಸ್ತು. ಆ ಶೆಟ್ಟಿ match-box ಮಾತ್ರ ನಮಗೆ ಕೊಡುತ್ತಿರಲಿಲ್ಲ, ಅವನೇ ಹಚ್ಚುತ್ತಿದ್ದ. "ಒಂದು ಸಿಗರೇಟ್ ಹಚ್ಚಕೆ ಮೂರು-ನಾಲ್ಕು ಕಡ್ಡೀ..... ಎಕ್ಕಡುಂಟುಂದ್ದಪ್ಪಾ ಲಾಬಮು...?" ಅಂತ್ತಿದ್ದ.

ಕಾಲೇಜು ಮುಗಿಸಿ, ನವುಕರಿ ಹುಡುಕಿಕೊಂಡು, ಬೆಂಗಳೂರಿಗೆ ಬಂದಾಗ, ಇಲ್ಲಿ ಗಾಳಿಯಲ್ಲೇ ಹೊಗೆ ಕುಡಿದು ತಲೆ ಕೆಡುತ್ತಿತ್ತು. ನಾವೆಲ್ಲ ಗೆಳೆಯರು (ಧಂ)ಇನ್ನು ಸಾಕು ಮಾಡೋಣವೆಂದು ’ಹಂಗೆ-ಹಂಗೆ’ ಅಂದುಕೊಂಡವಿ. ಸ್ವಲ್ಪ ಜನ ಪಾಲಿಸಿದಿವಿ. ನನ್ನ ಗೆಳೆಯನ್ನೊಬ್ಬ ಸಾಕು ಮಾಡಲೇ ಇಲ್ಲ. ಇನ್ನು ಜಾಸ್ತಿ ಮಾಡುತ್ತಲಿದ್ದ. ಸಿಗರೇಟಿನಲ್ಲಿ ನಮ್ಮೆಲ್ಲರಿಗಿಂತ ದೊಡ್ಡ "Lungs" ಇದ್ದವ. ನಾವೆಲ್ಲ ಅವನನ್ನ ಮಬ್ಬು-ಸಿದ್ದ, ಹೊಗೆ-ಸಿದ್ದ ಅಂತಿದ್ವಿ. ಸಿಗರೇಟ್ ಅನ್ನು ಒಂಥರಾ ಆಸ್ಥೆಯಿಂದ ಸೇದುತ್ತಿದ್ದ. ತಾನಾಯ್ತು, ತನ್ನ ಸಿಗರೇಟ್ ಆಯ್ತು. ಬೆಂಗಳೂರಿಗೆ ಬಂದು ಎಲ್ಲಾರು change ಆದಂಗೆ, ಇವನೂ ಆಗ್ತಾನೆ ಅಂದುಕೊಂಡಿದ್ವಿ. ಕೊನೆ-ಕೊನೆಗೆ ೭ - ೮ ಪ್ಯಾಕಿನ ಲೆಕ್ಕಕ್ಕೆ ಹೋಗಿದ್ದ ಸಿದ್ದ, ನಮಗೆ ಗೊತ್ತಿಲ್ದೇನೆ ಎರಡು attempt ಮಾಡಿದ್ದ. ಮೂರನೇದ್ರಲ್ಲಿ success ಆಗಿ ಎರಡು ತಿಂಗಳಾಯ್ತು. ಸಿದ್ದ ಯಾಕೆ ಹಾಗೆ ಮಾಡಿದ ಅಂತ ನಮಗ್ಯಾರಿಗೂ ಗೊತ್ತಿಲ್ಲ. ಗೆಳೆಯರಿರೋದೇ ನೋವು ಹೇಳಿಕೊಳ್ಲಲ್ಲಿಕ್ಕೆ ಅಂತ ಸಿದ್ದನಿಗೆ ಗೊತ್ತಿರಲಿಲ್ವೇನೋ.....

ಇದೆಲ್ಲಾ ಯಾಕೆ ನೆನಪಾಯಿತೆಂದರೆ, ನಿನ್ನೆ ನಾನು ನನ್ನ ಕಲೀಗು ೨-೩ ಘಂಟೆ ಕೂತು ಒಂದು issue resolve ಮಾಡಿದಿವಿ. "ಒಂದು ಧಂ ಹೋಡ್ಕಂಬರನ ಬಾ.." ಅಂದ ಅವನು, ’ನಾ ಬರಲ್ಲ ನೀ ಹೋಗು’ ಅಂತ ನಾ ಹೇಳುವುದನ್ನ ಕೇಳಿಸಿಕೊಳ್ಳದೆ Smoking Zoneಗೆ ಆಗಲೇ ಓಡಿದ್ದ......

Rating
No votes yet

Comments