ಚೆನ್ನವೀರ ಕಣವಿ:೮೧ ಸಾಹಿತ್ಯಾಭಿನಂದನ

ಚೆನ್ನವೀರ ಕಣವಿ:೮೧ ಸಾಹಿತ್ಯಾಭಿನಂದನ

ಎಷ್ಟು ಹಣತೆಗಳಿಂದ ಕತ್ತಲೆಯು ಕರಗುವುದು?
ಎಷ್ಟು ಕವಿತೆಗೆ ಜಗದ ಕಣ್ಣು ತೆರೆಯುವುದು?
ಒಂದಿದ್ದರೂ ಸಾಕು ಮನೆಗೆ ಬೆಳಕಾಗುವುದು.
ಒಂದು ಕವಿತೆಗೂ ಕೂಡ ಮನ ಕರಗಬಹುದು.
-(ಒಂದು ಹಲವು- ಜೀನಿಯಾ)

ಬದುಕಿದಂತೆ ಬರೆದವರು ನಮ್ಮ ಮುಂದಿದ್ದಾರೆ. ಬರೆದಂತೆ ಬದುಕಿದವರು ಸಹ ಕೆಲವರು. ನಮ್ಮ ದಾರಿಗೂ ಬೆಳಕಾಗಿದ್ದಾರೆ ಅವರಲ್ಲಿ ಕೆಲವರು. ಅಂಥವರಲ್ಲಿ ಚೆಂಬೆಳಕಿನ ಕವಿ ನಾಡಿನ ಚೇತನ ಚೆನ್ನವೀರ ಕಣವಿ ಅಗ್ರಗಣ್ಯರು. ಬಹುಶ: ಅವರು ಬರೆದಿರುವ ಎಲ್ಲ ಕವನ, ಸುನೀತಗಳಿಗೆ ಕನ್ನಡಿಗರ ಮನ ಕರಗಿದೆ. ಅಕ್ಕರೆ ಮೊಳಕೆಯೊಡದಿದೆ. ಈ ಸಾಂಸ್ಕೃತಿಕ ರಾಯಭಾರಿಯ ನೆನೆದು ಮನ ಹಿಗ್ಗಿದೆ. ಬದುಕುವ ಉತ್ಸಾಹ ಇಮ್ಮಡಿಗೊಂಡಿದೆ. ಮನದಲ್ಲಿ ಆಕಾಶ ಬುಟ್ಟಿ ಬೆಳಗಿದೆ.

ಹೂವು ಹೊರಳುವವು
ಸೂರ್ಯನ ಕಡೆಗೆ
ನಮ್ಮದಾರಿ ಬರಿ
ಚಂದ್ರನವರೆಗೆ!

ಭಾವಜೀವಿಯಲ್ಲಿ ಕವಿ ನಿವೇದಿಸಿಕೊಂಡಂತೆ..

ಧಾರವಾಡದ ನೇರ ಗುಣವೇನೋ!
ಕವಿಗಾಳಿ ಸವಿಗಾಳಿ ತೀಡುತಿಹುದು.
ಧಾರವಾಡದ ತಾಯ ಮಡಿಲಲ್ಲಿ ಮೊರೆಯಿಟ್ಟ
ದತ್ತವಾಣಿಗೆ ಎದೆಯು ಕೋಡುತಿಹುದು.

ನಾಡಿನ ಡಾ.ಜಿ.ಎಸ್.ಶಿವರುದ್ರಪ್ಪ ಮತ್ತು ಡಾ.ಚೆನ್ನವೀರ ಕಣವಿ ಅಂದಿನ ಪ್ರಾಥಮಿಕ ಶಾಲೆಯ ಬಡ ಶಾಲಾ ಮಾಸ್ತರ ಮಕ್ಕಳಾಗಿ, ಫ್ರೀ ಬೋರ್ಡಿಂಗ್ ಮೊರೆಹೊಕ್ಕು, ತುಂಬ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಉಚ್ಚ ಶಿಕ್ಷಣ ಪಡೆದಿದ್ದೇ ಒಂದು ಸಾಹಸ. ಜೊತೆಗೆ ಕಾವ್ಯ ಕೃಷಿಗೆ ತೊಡಗಿದ್ದು ಅವರ ಪ್ರತಿಭಾ ವಿಶೇಷ. ಕುವೆಂಪು ಹಾಗು ಬೇಂದ್ರೆ ತರುವಾಯು ಕನ್ನಡ ಕಾವ್ಯದ ನಿಜವಾದ ವಾರಸುದಾರರಾಗಿ ಅರ್ಧಶತಮಾನದ ಕಾಲ ಅವರು ಕಾವ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ನಮ್ಮ ಸಾಹಿತ್ಯ ಚರಿತ್ರೆಯ ಭಾಗ.
ಬನ್ನಿ, ಇದೇ ರವಿವಾರ ೬ನೇ ಜುಲೈ, ೨೦೦೮ ರಂದು ಬೆಳಿಗ್ಗೆ ೯.೩೦ಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕಣವಿ ಅವರಿಗೆ ಸಾಹಿತ್ಯಾಭಿನಂದನೆ ಜರುಗಲಿದೆ. ನೀವು ಬನ್ನಿ. ಗೆಳೆಯರನ್ನು ಕರೆತನ್ನಿ. ಮನೆ ಮಂದಿಯನ್ನು ಬರ ಹೇಳಿ. ಇಡೀ ದಿನ ಡಾ.ಜಿ.ಎಂ.ಹೆಗ್ಗಡೆ, ಡಾ.ಶ್ಯಾಮಸುಂದರ ಬಿದರಕುಂದಿ, ಶ್ರೀ ಮೋಹನ ನಾಗಮ್ಮನವರ, ಪ್ರೊ.ಬಿ.ವಿ.ಗುಂಜೆಟ್ಟಿ ಟೊಂಕ ಕಟ್ಟಿ ನಿಂತಿದ್ದಾರೆ.

ಬನ್ನಿ...