ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!
ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳ ಇಂದು ಹರತಾಳಗಳ ನಾಡಾಗಿ ಬದಲಾಗುತ್ತಿದೆ. ದಿನದಿಂದ ದಿನಕ್ಕೆ ಇಲ್ಲಿನ ರಾಜಕೀಯ ಪಕ್ಷಗಳು ಘೋಷಿಸುವ ಹರತಾಳದ ತಾಳಕ್ಕೆ ಕುಣಿದು ಕುಣಿದು ಜನರು ಸುಸ್ತಾಗಿದ್ದಾರೆ. ಸಾಮಾನ್ಯ ಹಬ್ಬಗಳನ್ನು ಆಚರಿಸುವ ಹಾಗೆ ಇಲ್ಲಿ ಹರತಾಳವೂ ಒಂದು ಆಚರಣೆ. ಶಾಲೆ ಕಾಲೇಜು, ಕಚೇರಿಗಳಿಗೆ ರಜೆ ಆದ ಕಾರಣ ಮನೆಯಲ್ಲಿ ಹಬ್ಬದ ವಾತಾವರಣ. ಮನೆಮಂದಿಯೆಲ್ಲಾ ಹೊರಗಿಳಿಯದೆ ಮನೆಯಲ್ಲಿ ಒಟ್ಟು ಸೇರಿರುವಾಗ 'ಹರತಾಳ' ಎಂಬುದು ಹಬ್ಬದ ಕಳೆಯನ್ನು ತರುತ್ತದೆ. ಈ ಮೊದಲು ಬಂದ್‌ಗಳಿಂದ ಜನರು ಕಂಗಾಲಾಗಿದ್ದಾಗ ನ್ಯಾಯಾಲಯವು ಬಂದ್‌ಗೆ ನಿಷೇಧ ಹೇರಿತ್ತು. ಆದರೆ ಕ್ರಮೇಣ ಬಂದ್ ಹರತಾಳವಾಗಿ ಲಗ್ಗೆಯಿಡತೊಡಗಿತು.
ಹರತಾಳ ಎಂದ ಕೂಡಲೇ ಹಳ್ಳಿ ನಗರವೆಂಬ ಭೇದವಿಲ್ಲದೆ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚುತ್ತಾರೆ. ವಾಹನಗಳನ್ನು ರಸ್ತೆಗಿಳಿಸುವ ಭಯದಿಂದ ವಾಹನ ಮಾಲೀಕರು ಕೈ ಕಟ್ಟಿ ಕುಳಿತುಕೊಳ್ಳುತ್ತಾರೆ. ಒಂದು ವೇಳೆ ಸಾಹಸದಿಂದ ವಾಹನಗಳು ರಸ್ತೆಗಿಳಿಸಿದರೆ ಕಲ್ಲು ತೂರಾಟ ತಪ್ಪಿದ್ದಲ್ಲ. ಹರತಾಳದ ವೇಳೆ ಹೊರಗಿಳಿಯಲು ಹೆದರುವ ಜನ..ಯಾವಾಗ ಯಾರ "ಮಂಡೆ"ಗೆ ಕಲ್ಲು ಬೀಳುತ್ತದೋ ಎಂದು ಹೆದರಿ ಬಾಗಿಲು ಮುಚ್ಚಿ ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ!
ಅದೇ ವೇಳೆ ಕೇವಲ ಸಣ್ಣಪುಟ್ಟ ಕಾರಣಗಳಿಗೂ ಹರತಾಳ ಘೋಷಣೆ ನಡೆಸುವ ರಾಜಕೀಯ ಪಕ್ಷಗಳಿಂದ ಲಾಭವಾದರೂ ಏನು? ಶಾಲೆ, ಕಚೇರಿಗಳಿಗೆ ಅಘೋಷಿತ ರಜೆ, ಒಂದು (ಕೆಲಸ) ದಿನ ನಷ್ಟ ಇದು ಮಾತ್ರವೇ ಹರತಾಳದಿಂದಾಗುವ ಪ್ರಯೋಜನ!
ಇನ್ನು, ಹರತಾಳದ ದಿನವು ಆಕ್ರಮಣ ಪ್ರತ್ಯಾಕ್ರಮಣಗಳ ಬಗ್ಗೆ ಹೇಳುವುದೇ ಬೇಡ. ಕೇಸರಿ, ಕೆಂಪು, ಹಸುರು ಪಕ್ಷಗಳು ಒಂದಕ್ಕೊಂದು ಏಟು ಪ್ರತಿಯೇಟು ನೀಡುತ್ತಿರುವಾಗ ಮಾಲೆ ಪಟಾಕಿಗೆ ಬೆಂಕಿ ಕೊಟ್ಟಂತೆ ಪ್ರತೀ ಪಕ್ಷಗಳ ಹರತಾಳಗಳು ಸಿಡಿಯುತ್ತಿರುತ್ತವೆ.
ಪ್ರಸ್ತುತ ಕಳೆದ ಜೂನ್ ತಿಂಗಳಲ್ಲಿ ಮಾತ್ರ ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಐದು ಹರತಾಳಗಳನ್ನು ಇದೀಗ ಕೇರಳದಲ್ಲಿ ಆಚರಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವುಗಳು ಸಣ್ಣ ಪುಟ್ಟ ಕಾರಣಗಳಿಗಾಗಿ ನಡೆದವುಗಳು ಎಂಬುದು ಗಮನಿಸಬೇಕಾದ ಸಂಗತಿ.
ಜೂನ್ 4: ಕಟ್ಟಪ್ಪನ ಎಂಬಲ್ಲಿ ಕಾರ್ಯಕರ್ತರ ಮೇಲೆ ಆಕ್ರಮಣ ನಡೆಸಿದುದಕ್ಕಾಗಿ ಇಡುಕ್ಕಿ ಜಿಲ್ಲೆಯಲ್ಲಿ ಯುಡಿಎಫ್ ಹರತಾಳ
ಜೂನ್ 5: ತೈಲ ಬೆಲೆ ಏರಿಕೆಯನ್ನು ಪ್ರತಿಭಟಿಸಿ ಎಡರಂಗ ಹಾಗೂ ಬಿಜೆಪಿ ಆಹ್ವಾನಿತ ಹರತಾಳ
ಜೂನ್ 20: ಕೆಎಸ್‌ಯು ಕಾರ್ಯಕರ್ತರನ್ನು ಹಾಗೂ ಟಿ.ಎನ್ ಪ್ರತಾಪನ್ ಎಂಎಲ್ಎ ಅವರ ಮೇಲೆ ಪೊಲೀಸರು ಪ್ರಹಾರ ನಡೆಸಿದ ಕಾರಣಕ್ಕಾಗಿ ತ್ರಿಶ್ಶೂರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಹರತಾಳ
ಜೂನ್ 27: ಡಿವೈಎಫ್‌ಐ ಆಕ್ರಮಣ ಹಾಗೂ ಪೊಲೀಸರ ನೀತಿಯನ್ನು ಪ್ರತಿಭಟಿಸಿ ತಿರುವನಂತಪುರಂ ಜಿಲ್ಲೆಯಲ್ಲಿ ಬಿಜೆಪಿ ವತಿಯಿಂದ 12 ಗಂಟೆಗಳ ಕಾಲ ಹರತಾಳ
ಜೂನ್ 30: ಇಡುಕ್ಕಿ- ಕಟ್ಟಪ್ಪನ ಸರ್ವೀಸ್ ಸಹಕಾರಿ ಬ್ಯಾಂಕ್ ಚುನಾವಣೆಯ ಸಂದರ್ಭದಲ್ಲಿ ಸಿಪಿಎಂ ಆಕ್ರಮಣದಲ್ಲಿ ಯುಡಿಎಫ್ ಕಾರ್ಯಕರ್ತರು ಗಾಯಗೊಂಡ ಹಿನ್ನೆಲೆಯಲ್ಲಿ ಯುಡಿಎಫ್ ಹರತಾಳ
ಇದು ಮಾತ್ರವಲ್ಲದೆ ಜೂನ್ ತಿಂಗಳಲ್ಲಿ ತಾಲೂಕು ಮಟ್ಟದಲ್ಲಿ ಹಾಗೂ ಪಂಚಾಯತು ಮಟ್ಟದಲ್ಲಿಯೂ ಅನೇಕ ಹರತಾಳಗಳು ತಾಂಡವವಾಡಿವೆ.
ಪ್ರಸಕ್ತ ಜುಲೈ ತಿಂಗಳು ಕಾಲಿಟ್ಟ ಕ್ಷಣದಲ್ಲಿಯೇ ಮತ್ತೆ ಬಂದಿದೆ ಹರತಾಳ ರಜಾ ದಿನಗಳು!
ಜುಲೈ 2: ಎಐವೈಎಫ್ ರಾಜ್ಯ ಕಾರ್ಯದರ್ಶಿ ಪಿಎಸ್ ಸುಪಾಲ್ ಎಂಬವರ ಬಂಧನವನ್ನು ಪ್ರತಿಭಟಿಸಿ ಪತ್ತನಾಪುರದಲ್ಲಿ ಸಿಪಿಐ ಹಾಗೂ ಪುನಲೂರಿನಲ್ಲಿ ಕಾಂಗ್ರೆಸ್ ಹರತಾಳ
ಜುಲೈ 3: ಅಮರ್ ನಾಥ ವಿವಾದದಲ್ಲಿ ಬಿಜೆಪಿ ದೇಶೀಯ ಸಮಿತಿ ಆಹ್ವಾನಿಸಿದ ಹರತಾಳಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಕೇರಳದಾದ್ಯಂತ ಬಿಜೆಪಿ ಹರತಾಳ. ಅದೇ ವೇಳೆ ಕೊಡಂಗಲ್ಲೂರಿನಲ್ಲಿ ಡಿವೈಎಫ್‌ಐ ನೇತಾರ ಬಿಜು ಎಂಬವರು ತಲೆಗೆ ಗಾಯಗಳಾಗಿ ಮರಣಹೊಂದಿದ ಹಿನ್ನಲೆಯಲ್ಲಿ ಡಿವೈಎಫ್ಐ ನೇತೃತ್ವದ ಹರತಾಳ
ಹರತಾಳಗಳೆಂದೂ ಇಲ್ಲಿ ಶಾಂತ ರೀತಿಯಲ್ಲಿರುವುದಿಲ್ಲ. ಕೊಲೆ, ಆಕ್ರಮಣ ಪ್ರತ್ಯಾಕ್ರಮಣಗಳು ನಡೆದೇ ನಡೆಯುತ್ತವೆ. ಅಂಗಡಿ, ಮನೆ ಮಹಲು ಧ್ವಂಸದೊಂದಿಗೆ ಯುವತಿಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ಘಟನೆಯೂ ಕೊಡಂಗಲ್ಲೂರಿನಿಂದ ವರದಿಯಾಗಿದೆ. ವಾಹನಗಳ ಮೇಲೆ ಕಲ್ಲೆಸತ, ಹೆಚ್ಚಾಗಿ ಕೆಎಸ್‍ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತದೆ. ಸರಕಾರಿ ವಾಹನ, ಪೊಲೀಸ್ ವಾಹನಗಳು ಭಸ್ಮವಾಗುತ್ತವೆ. ಪತ್ರಿಕಾ ಕಛೇರಿಗಳ ಮೇಲೆಯೂ ಆಕ್ರಮಣ ನಡೆಸುವುದು ಎಲ್ಲಾ ಸರ್ವೇ ಸಾಮಾನ್ಯವೆಂದೇ ಹೇಳಬಹುದು.
ಇಷ್ಟಾದರೂ ಕೇರಳದ ಜನರು ಹಬ್ಬಗಳಂತೆ ಹರತಾಳವನ್ನೂ ಪ್ರೀತಿಸುತ್ತಾರೆ. ಶಾಲೆ ಕಾಲೇಜು ಕಚೇರಿಗಳಿಗೆ ರಜೆ ಎಂದು ಗಡದ್ದಾಗಿ ನಿದ್ದೆ ಹೊಡೆಯುವವರು ಒಂದೆಡೆಯಾದರೆ, ಹರತಾಳದಂದು ಇತರರಿಗೆ ಉಪದ್ರವ ನೀಡಲೆಂದೇ ಸಜ್ಜಾದ ಉಪದ್ರವಿ ಜೀವಿಗಳೂ ಇಲ್ಲಿದ್ದಾರೆ.
ಏನೇ ಇರಲಿ ಹರತಾಳ ಎಂದು ಘೋಷಣೆಯಾದ ಕೂಡಲೇ ಅಗತ್ಯ ಸಾಮಾನುಗಳ ಪೂರೈಕೆ ಮತ್ತು ಸಂಗ್ರಹಕ್ಕೆ ಜನ ಅಣಿಯಾಗುತ್ತಾರೆ. ರಜಾ ದಿನವಾದುದುದರಿಂದ ಚಿಕನ್, ಮಟನ್ ಮಾರುಕಟ್ಟೆಗಳಲ್ಲಿ ಹರತಾಳದ ಮುಂದಿನ ದಿನ ಎಂದಿಗಿಂತ ಜನ ಹೆಚ್ಚಿರುತ್ತಾರೆ. ಇದು ಮಾತ್ರವಲ್ಲದೆ ಹರತಾಳ ಎಂದ ಕೂಡಲೇ ರಾಜ್ಯದ ಮದ್ಯದಂಗಡಿಯ ಮುಂದೆ ದೊಡ್ಡ ಕ್ಯೂ ಕಂಡುಬರುತ್ತದೆ. ಅಂತೂ ಒಟ್ಟಿನಲ್ಲಿ ಹರತಾಳವನ್ನು ಕ್ಯಾಲೆಂಡರ್‌ಗಳಲ್ಲಿ ಸೇರಿಸಿ ಕೆಂಪುಗುರುತು ಮಾಡಿ ಬಿಟ್ಟರೆ ಉತ್ತಮ ಅನಿಸುತ್ತಿದೆ. ಬೇಕಾದರೆ ಹರತಾಳಕ್ಕಾಗಿ "Wish u a very Happy Hartaal" ಎಂದು ಗ್ರೀಟಿಂಗ್ಸ್ ಕಳುಹಿಸಬಹುದು!